ಸಾರಾಂಶ
ಹೊಳಲ್ಕೆರೆ ತಾಲೂಕು ಕಚೇರಿಯಲ್ಲಿ ನಡೆದ ಡಾ.ಬಾಬು ಜಗಜೀವನರಾಂರವರ 118ನೇ ಜಯಂತಿಯಲ್ಲಿ ಭಾವಚಿತ್ರಕ್ಕೆ ಪುಷ್ಪಾರ್ಚನೆ ಸಲ್ಲಿಸಿ ಶಾಸಕ ಡಾ.ಎಂ.ಚಂದ್ರಪ್ಪ ಮಾತನಾಡಿದರು.
118ನೇ ಜಯಂತಿ ಕಾರ್ಯಕ್ರಮದಲ್ಲಿ ಶಾಸಕ ಚಂದ್ರಪ್ಪ ಹೇಳಿಕೆ
ಕನ್ನಡಪ್ರಭ ವಾರ್ತೆ ಹೊಳಲ್ಕೆರೆದೇಶಕ್ಕೆ ಅನ್ನ ನೀಡಿದ ಅನ್ನದಾತ ಡಾ.ಬಾಬು ಜಗಜೀವನರಾಂ ರವರ ಆದರ್ಶ, ತತ್ವ, ಸಿದ್ಧಾಂತಗಳನ್ನು ಮೈಗೂಡಿಸಿಕೊಂಡು ಅವರು ಹಾಕಿಕೊಟ್ಟ ಮಾರ್ಗ ದರ್ಶನದಲ್ಲಿ ಪ್ರತಿಯೊಬ್ಬರು ನಡೆಯಬೇಕಿದೆ ಎಂದು ಶಾಸಕ ಡಾ.ಎಂ.ಚಂದ್ರಪ್ಪ ಕರೆ ನೀಡಿದರು.
ಪಟ್ಟಣದ ತಾಲೂಕು ಕಚೇರಿ ಸಭಾಂಗಣದಲ್ಲಿ ಶನಿವಾರ ನಡೆದ ಡಾ.ಬಾಬು ಜಗಜೀವನರಾಂರವರ 118ನೇ ಜಯಂತಿಯಲ್ಲಿ ಭಾವಚಿತ್ರಕ್ಕೆ ಪುಷ್ಪಾರ್ಚನೆ ಸಲ್ಲಿಸಿ ಅವರು ಮಾತನಾಡಿದರು.ಹಸಿರು ಕ್ರಾಂತಿಯ ಹರಿಕಾರ ಡಾ.ಬಾಬು ಜಗಜೀವನರಾಂ ತುರ್ತು ಪರಿಸ್ಥಿತಿಯಲ್ಲಿ ಅಧಿಕಾರವನ್ನು ತ್ಯಜಿಸಿದರು. ದೇಶದ ಪ್ರಧಾನಿಯಾಗುವ ಅವಕಾಶ ಕೈತಪ್ಪಿತು. 1975-76ರಲ್ಲಿ ಬರಗಾಲ ಎದುರಾದಾಗ ನಮ್ಮ ದೇಶದ ಪ್ರಧಾನಿಯಾಗಿದ್ದ ಇಂದಿರಾಗಾಂಧಿ ಹೊರ ದೇಶದಿಂದ ಕೆಂಪು ಜೋಳ ತರಿಸಿ ಹಸಿವು ನೀಗಿಸಿದರು. ಅದೇ ರೀತಿ ಡಾ.ಬಾಬು ಜಗಜೀವನರಾಂ ವಿಶ್ವದ ಬೇರೆ ಬೇರೆ ದೇಶಗಳಲ್ಲಿ ಸುತ್ತಾಡಿ ಅತ್ಯುತ್ತಮ ತಳಿಯ ಬೀಜಗಳನ್ನು ತಂದು ಒಂದು ಎಕರೆಗೆ ಇಪ್ಪತ್ತರಿಂದ ಮೂವತ್ತು ಕ್ವಿಂಟಾಲ್ ಭತ್ತ, ಜೋಳ ಬೆಳೆಯುವಲ್ಲಿ ನೆರೆವಾದರು ಎಂದು ಗುಣಗಾನ ಮಾಡಿದರು.
ಭಾರತ ಇಂದು ಬೇರೆ ದೇಶಗಳಿಗೆ ಆಹಾರ ಪದಾರ್ಥಗಳನ್ನು ಕಳಿಸುವಷ್ಟು ಶಕ್ತಿಶಾಲಿಯಾಗಿದೆ ಎಂದರೆ ಅದಕ್ಕೆ ಡಾ.ಬಾಬು ಜಗಜೀವನರಾಂ ಕಾರಣ. ಅಂತಹ ಮಹಾತ್ಮನ ಹಾದಿಯಲ್ಲಿ ಎಲ್ಲರೂ ಸಾಗೋಣ ಎಂದು ಶಾಸಕ ಡಾ.ಎಂ.ಚಂದ್ರಪ್ಪ ಹೇಳಿದರು.ದಲಿತ ಸಂಘರ್ಷ ಸಮಿತಿ ರಾಜ್ಯಸಂಚಾಲಕರು ಇವರು ಡಾ.ಬಾಬು ಜಗಜೀವನರಾಂ ಕುರಿತು ಮಾತನಾಡಿದರು.
ತಾಪಂ ಕಾರ್ಯ ನಿರ್ವಹಣಾಧಿಕಾರಿ ವಿಶ್ವನಾಥ, ಪುರಸಭೆ ಉಪಾಧ್ಯಕ್ಷೆ ನಾಗರತ್ನ ವೇದಮೂರ್ತಿ, ಸುರೇಶ್ ಪಾಡಿಗಟ್ಟೆ. ಕೆ.ಎಂ.ಶಿವಕುಮಾರ್, ಕೆಂಗಂಟೆ ಜಯ್ಯಣ್ಣ, ದಲಿತ ಮುಂಖಡರು, ದಲಿತ ಸಂಘರ್ಷ ಸಮಿತಿ ಪದಾಧಿಕಾರಿಗಳು, ತಾಲೂಕು ಮಟ್ಟದ ಅಧಿಕಾರಿಗಳು ಜಯಂತಿಯಲ್ಲಿ ಭಾಗವಹಿಸಿದ್ದರು.