ಸ್ವಾತಂತ್ರ್ಯಾನಂತರ ಭಾರತಕ್ಕೆ ಅತ್ಯಂತ ಸಮಗ್ರ ಮತ್ತು ಪ್ರಗತಿಪರ ಸಂವಿಧಾನವನ್ನು ನೀಡಿದ ಮಹಾನ್ ವ್ಯಕ್ತಿ ಡಾ. ಅಂಬೇಡ್ಕರ್ ಆಗಿದ್ದಾರೆ.

ಕನ್ನಡಪ್ರಭ ವಾರ್ತೆ ಭಟ್ಕಳ

ತಾಲೂಕು ಆಡಳಿತ, ತಾಪಂ, ನಗರಸಭೆ ಭಟ್ಕಳ, ಜಾಲಿ ಪಪಂ ಹಾಗೂ ಸಮಾಜ ಕಲ್ಯಾಣ ಇಲಾಖೆ ಇವರ ಸಹಯೋಗದಲ್ಲಿ ಸಂವಿಧಾನ ಶಿಲ್ಪಿ ಡಾ. ಬಿ.ಆರ್. ಅಂಬೇಡ್ಕರ್ ಅವರ 135ನೇ ಹಾಗೂ ಹಸಿರು ಕ್ರಾಂತಿಯ ಹರಿಕಾರ ಡಾ. ಬಾಬು ಜಗಜೀವನರಾಂ ಅವರ 119ನೇ ಜನ್ಮ ದಿನಾಚರಣೆ ಇಲ್ಲಿನ ಅರ್ಬನ್ ಬ್ಯಾಂಕ್ ಸಭಾಭವನದಲ್ಲಿ ಜರುಗಿತು.

ಕಾರ್ಯಕ್ರಮ ಉದ್ಘಾಟಿಸಿದ ಡಿವೈಎಸ್ಪಿ ಬಿ. ಗಿರೀಶ್ ಮಾತನಾಡಿ, ಸ್ವಾತಂತ್ರ್ಯಾನಂತರ ಭಾರತಕ್ಕೆ ಅತ್ಯಂತ ಸಮಗ್ರ ಮತ್ತು ಪ್ರಗತಿಪರ ಸಂವಿಧಾನವನ್ನು ನೀಡಿದ ಮಹಾನ್ ವ್ಯಕ್ತಿ ಡಾ. ಅಂಬೇಡ್ಕರ್ ಆಗಿದ್ದಾರೆ. ಅಪಾರ ವಿದ್ಯಾಭ್ಯಾಸದ ಮೂಲಕ ಹಲವು ಪದವಿಗಳನ್ನು ಪಡೆದ ಅವರು ದೇಶದ ಭವಿಷ್ಯವನ್ನು ಮನನ ಮಾಡಿ ಸಂವಿಧಾನ ರೂಪಿಸಿದ್ದು, ಅದರಲ್ಲಿ ಸಮಾನತೆ, ಸ್ವಾತಂತ್ರ್ಯ ಮತ್ತು ನ್ಯಾಯತತ್ವಗಳನ್ನು ಪ್ರತಿಪಾದಿಸಲಾಗಿದೆ ಎಂದರು.

ಭಾರತೀಯ ಸಂವಿಧಾನದ 14ನೇ ವಿಧಿ ಸಮಾನತೆ ಖಚಿತಪಡಿಸಿದರೆ, 19ರಿಂದ 21ನೇ ವಿಧಿಗಳು ವ್ಯಕ್ತಿಯ ಸ್ವಾತಂತ್ರ್ಯ ಮತ್ತು ಜೀವ ಹಕ್ಕುಗಳನ್ನು ರಕ್ಷಿಸುತ್ತವೆ. ಆದಾಗ್ಯೂ, ಕೆಲವು ಗ್ರಾಮೀಣ ಪ್ರದೇಶಗಳಲ್ಲಿ ಜಾತಿ ಆಧಾರಿತ ಭೇದಭಾವ ಇನ್ನೂ ಮುಂದುವರಿಯುತ್ತಿರುವುದು ವಿಷಾದಕರ ಸಂಗತಿ ಎಂದ ಅವರು, ಸಂವಿಧಾನದ ಮೌಲ್ಯಗಳನ್ನು ಜೀವನದಲ್ಲಿ ಅಳವಡಿಸಿಕೊಂಡಾಗ ಮಾತ್ರ ಸಮಾನತೆಯ ಸಮಾಜ ನಿರ್ಮಾಣ ಸಾಧ್ಯ ಎಂದು ಅಭಿಪ್ರಾಯಪಟ್ಟರು.ಅಧ್ಯಕ್ಷತೆ ವಹಿಸಿದ್ದ ತಹಶೀಲ್ದಾರ ನಾಗೇಂದ್ರ ಕೋಳಶೆಟ್ಟಿ ಮಾತನಾಡಿದರು.

ಈ ಸಂದರ್ಭದಲ್ಲಿ ಅಂತರ ಜಾತಿ ವಿವಾಹವಾದವರಿಗೆ ಪ್ರೋತ್ಸಾಹ ಧನದ ಠೇವಣಿ ಪ್ರಮಾಣ ಪತ್ರ ವಿತರಿಸಲಾಯಿತು.

ಕಾರ್ಯಕ್ರಮದಲ್ಲಿ ಶಿಕ್ಷಕ ಗುಡ್ಡಪ್ಪ ಹರಿಜನ ಡಾ. ಅಂಬೇಡ್ಕರ್ ಕುರಿತು ಉಪನ್ಯಾಸ ನೀಡಿದರೆ, ಸರ್ಕಾರಿ ಡಿಗ್ರಿ ಕಾಲೇಜಿನ ಪ್ರಾಂಶುಪಾಲ ನಾಗೇಶ್ ಶೆಟ್ಟಿ ಡಾ. ಜಗಜೀವನರಾಂ ಕುರಿತು ಉಪನ್ಯಾಸ ನೀಡಿದರು.

ನಗರಸಭೆ ಪೌರಾಯುಕ್ತ ಬಾಬಾಸಾಹೇಬ್ ಮಾನೆ, ತಾಪಂ ಪ್ರಭಾರೆ ಕಾರ್ಯನಿರ್ವಾಹಕ ಅಧಿಕಾರಿ ರಾಜೇಶ್ ಮಹಾಲೆ, ಗ್ರಾಮೀಣ ಪೊಲೀಸ್ ಠಾಣೆ ಸಿಪಿಐ ವೆಂಕಟೇಶ್ ಎಸ್. ಮುರ್ನಾಲ್, ಜಾಲಿ ಪಪಂ ಮುಖ್ಯಾಧಿಕಾರಿ ಮಂಜಪ್ಪ ಎನ್., ಸಮಾಜ ಕಲ್ಯಾಣ ಇಲಾಖೆ ಸಹಾಯಕ ನಿರ್ದೇಶಕಿ ಗೀತಾ ಜಿ. ಹೆಗಡೆ, ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಎಂ.ಎನ್. ನಾಯ್ಕ ಮುಂತಾದವರಿದ್ದರು.

2024-25ನೇ ಸಾಲಿನ ಎಸ್‌ಎಸ್‌ಎಲ್‌ಸಿ ಹಾಗೂ ದ್ವಿತೀಯ ಪಿಯುಸಿ ಪರೀಕ್ಷೆಯಲ್ಲಿ ಹೆಚ್ಚು ಅಂಕ ಗಳಿಸಿದ ಪರಿಶಿಷ್ಟ ಜಾತಿಯ ವಿದ್ಯಾರ್ಥಿಗಳನ್ನು ಸನ್ಮಾನಿಸಲಾಯಿತು. ದ್ವಿತೀಯ ಪಿಯುಸಿ ಪರೀಕ್ಷೆಯಲ್ಲಿ ಜಿಲ್ಲೆಯ ಕಲಾ, ವಾಣಿಜ್ಯ ಮತ್ತು ವಿಜ್ಞಾನ ವಿಭಾಗಗಳಲ್ಲಿ ಉನ್ನತ ಸಾಧನೆ ಮಾಡಿದ ತಾಲೂಕಿನ ವಿದ್ಯಾರ್ಥಿಗಳಿಗೆ ತಾಲೂಕು ಆಡಳಿತದಿಂದ ಗೌರವ ನೀಡಲಾಯಿತು.