ಭೇರ್ಯ ಪ್ರಾಥಮಿಕ ಆರೋಗ್ಯ ಕೇಂದ್ರದಿಂದ ತುರ್ತು ವಾಹನ ಲೋಕಾರ್ಪಣೆ

| Published : Jan 30 2024, 02:02 AM IST

ಭೇರ್ಯ ಪ್ರಾಥಮಿಕ ಆರೋಗ್ಯ ಕೇಂದ್ರದಿಂದ ತುರ್ತು ವಾಹನ ಲೋಕಾರ್ಪಣೆ
Share this Article
  • FB
  • TW
  • Linkdin
  • Email

ಸಾರಾಂಶ

ಸಾಲಿಗ್ರಾಮ ಪಟ್ಟಣದ ಆಸ್ಪತ್ರೆ ತಾಲೂಕು ಆಸ್ಪತ್ರೆಯಾಗಿ ಪರಿವರ್ತನೆ ಆದ ಕೂಡಲೇ ಭೇರ್ಯ ಗ್ರಾಮದ ಆರೋಗ್ಯ ಕೇಂದ್ರವನ್ನು ಮೇಲ್ದರ್ಜೆಗೆರಿಸಿ ಸಮುದಾಯ ಆರೋಗ್ಯ ಕೇಂದ್ರ ಮಾಡಲು ಈಗಾಗಲೇ ಮುಖ್ಯಮಂತ್ರಿಗಳಿಗೆ ಹಾಗೂ ಆರೋಗ್ಯ ಸಚಿವರಿಗೆ ಪತ್ರ ಬರೆದು ಮನವಿ ಮಾಡಲಾಗಿದೆ. ಕೂಡಲೇ ಮಂಜೂರು ಮಾಡುವಂತೆ ನಮ್ಮ ನಾಯಕರಾದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಒತ್ತಾಯಿಸಲಾಗುವುದು.

ಕನ್ನಡಪ್ರಭ ವಾರ್ತೆ ಭೇರ್ಯಭೇರ್ಯ ಪ್ರಾಥಮಿಕ ಆರೋಗ್ಯ ಮತ್ತು ಕ್ಷೇಮ ಕೇಂದ್ರಕ್ಕೆ ನೂತನ ತುರ್ತು ವಾಹನವನ್ನು (ಆ್ಯಂಬುಲೆನ್ಸ್) ಡಿ.ರವಿಶಂಕರ್ ಸೋಮವಾರ ಲೋಕಾರ್ಪಣೆ ಮಾಡಿದರು.

ಬಳಿಕ ಮಾತನಾಡಿದ ಅವರು ಭೇರ್ಯ ಗ್ರಾಮವು ರಾಷ್ಟ್ರೀಯ ಹೆದ್ದಾರಿಯಲ್ಲಿದೆ. ಈ ಆಸ್ಪತ್ರೆಗೆ ಅಕ್ಕಪಕ್ಕದ ಎರಡು ತಾಲೂಕಿನ ಸಂಪರ್ಕವಿದ್ದು ಚಿಕಿತ್ಸೆಗಾಗಿ ಹೆಚ್ಷಿನ ಜನರು ಇಲ್ಲಿಗೆ ಬರುತ್ತಾರೆ ಎಂದರು.

ಪ್ರತಿಯೊಂದು ಜೀವಗಳು ಅಮೂಲ್ಯವಾಗಿದ್ದು, ಅಪಘಾತ ಸಂಭವಿಸಿದ ಮೊದಲ ಒಂದು ಗಂಟೆ ಅತೀ ಮುಖ್ಯವಾಗಿದೆ. ಕೂಡಲೇ ಆ್ಯಂಬುಲೆನ್ಸ್ ಸೇವೆ ಲಭ್ಯವಾದರೆ ಆಸ್ಪತ್ರೆಗೆ ದಾಖಲಿಸಿ ಜೀವ ಉಳಿಸಲು ಸಾಧ್ಯವಾಗುತ್ತದೆ. ಏಕೆಂದರೆ ಕಳೆದ ತಿಂಗಳು ಮಹಿಳೆಯೊಬ್ಬರಿಗೆ ಹೃದಯಘಾತವಾಗಿ ಮೃತಪಟ್ಟರು. ಸರಿಯಾದ ಸಮಯಕ್ಕೆ ಆ್ಯಂಬುಲೆನ್ಸ್ ಬಂದಿದ್ದರೆ ಆ ಮಹಿಳೆ ಸಾಯುತ್ತಿರಲಿಲ್ಲ. ಕುಟುಂಬದವರು ಹಾಗೂ ಯುವಕರು ಆಸ್ಪತ್ರೆಯ ಮುಂದೆ ಪ್ರತಿಭಟಿಸಿದ್ದರು. ಇದನ್ನೆಲ್ಲ ಮನಗಂಡು ಜಿಲ್ಲಾಧಿಕಾರಿ ಡಾ.ಕೆ.ವಿ. ರಾಜೇಂದ್ರ ಮತ್ತು ಡಿಎಚ್ಒ ಅವರೊಡನೆ ಚರ್ಚಿಸಿ ಭೇರ್ಯ ಗ್ರಾಮದ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ನೂತನ ಆಂಬ್ಯುಲೆನ್ಸ್ ಕೊಡಿಸಿರುವುದಾಗಿ ಅವರು ಹೇಳಿದರು.

ಸಾಲಿಗ್ರಾಮ ಪಟ್ಟಣದ ಆಸ್ಪತ್ರೆ ತಾಲೂಕು ಆಸ್ಪತ್ರೆಯಾಗಿ ಪರಿವರ್ತನೆ ಆದ ಕೂಡಲೇ ಭೇರ್ಯ ಗ್ರಾಮದ ಆರೋಗ್ಯ ಕೇಂದ್ರವನ್ನು ಮೇಲ್ದರ್ಜೆಗೆರಿಸಿ ಸಮುದಾಯ ಆರೋಗ್ಯ ಕೇಂದ್ರ ಮಾಡಲು ಈಗಾಗಲೇ ಮುಖ್ಯಮಂತ್ರಿಗಳಿಗೆ ಹಾಗೂ ಆರೋಗ್ಯ ಸಚಿವರಿಗೆ ಪತ್ರ ಬರೆದು ಮನವಿ ಮಾಡಲಾಗಿದೆ. ಕೂಡಲೇ ಮಂಜೂರು ಮಾಡುವಂತೆ ನಮ್ಮ ನಾಯಕರಾದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಒತ್ತಾಯಿಸುವುದಾಗಿ ತಿಳಿಸಿದರು.

ಬಳಿಕ ಟಿಎಚ್ಒ ಡಾ.ಡಿ. ನಟರಾಜು ಮಾತನಾಡಿ, ಭೇರ್ಯ ಆರೋಗ್ಯ ಕೇಂದ್ರದಲ್ಲಿ ಅಪಘಾತ, ವಿಷಸೇವನೆ ಸೇರಿದಂತೆ ಅನೇಕ ಅವಘಡಗಳು ಸಂಭವಿಸಿದ್ದರೂ ಆಂಬ್ಯುಲೆನ್ಸ್ ಬೇರೆ ಕಡೆಯಿಂದ ಬರಬೇಕಿತ್ತು, ಅಷ್ಟರಲ್ಲಿ ಅವಘಡ ಉಂಟಾದ ರೋಗಿಗೆ ಚಿಕಿತ್ಸೆ ಲಭ್ಯವಾಗದೆ ಜೀವ ಹೋಗುವ ಪರಿಸ್ಥಿತಿ ಇತ್ತು. ಇಂತಹ ಪರಿಸ್ಥಿತಿಯ ಬಗ್ಗೆ ಶಾಸಕರ ಗಮನಕ್ಕೆ ತಂದು, ಸರ್ಕಾರದಿಂದ. ಆ್ಯಂಬುಲೆನ್ಸ್ ಕೊಡಿಸುವಂತೆ ಮನವಿ ಮಡಿದ ಹಿನ್ನೆಲೆಯಲ್ಲಿ ಶಾಸಕರು ಮನವಿಗೆ ಸ್ಪಂದಿಸಿ ವಾರದೊಳಗೆ ಆಂಬ್ಯುಲೆನ್ಸ್ ಕೊಡಿಸಿದ್ದಾರೆ. ಇಲಾಖೆಯ ಮುಖ್ಯಸ್ಥನಾಗಿ ಧನ್ಯವಾದ ಜೊತಗೆ ಅಭಿನಂದಿಸುತ್ತೇನೆ ಎಂದರು.

ಗ್ರಾಪಂ ಅಧ್ಯಕ್ಷೆ ಜಯಲಕ್ಷ್ಮೀ ಕೃಷ್ಣೇಗೌಡ, ಉಪಾಧ್ಯಕ್ಷೆ ರೂಪಾ ಹರೀಶ್, ಅರ್ಜುನಹಳ್ಳಿ ಗ್ರಾಪಂ ಅಧ್ಯಕ್ಷ ದಿಲೀಪ್, ಡಿಎಚ್ಒ ಡಾ. ಕುಮಾರಸ್ವಾಮಿ, ಆಸ್ಪತ್ರೆಯ ವೈದ್ಯಾಧಿಕಾರಿ ಡಾ. ಸೌಜನ್ಯಾ, ತಾಲೂಕು ಶರಣ ಸಾಹಿತ್ಯ ಪರಿಷತ್ ಅಧ್ಯಕ್ಷ ಸಿ.ಪಿ. ರಮೇಶ್, ಗ್ರಾಪಂ ಮಾಜಿ ಅಧ್ಯಕ್ಷ ಬಿ.ಎಚ್. ಮಹದೇವ್, ಗ್ರಾಪಂ ಸದಸ್ಯರಾದ ಮಂಜಪ್ಪ, ಬಿ.ಎಲ್. ರಾಜಶೇಖರ್, ಕೃಷ್ಣೇಗೌಡ, ಸಾಲಿಗ್ರಾಮ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಉದಯ್ ಶಂಕರ್, ಜಿಲ್ಲಾ ಯುವ ಕಾಂಗ್ರೆಸ್ ಎಸ್.ಟಿ ಘಟಕದ ಕಾರ್ಯದರ್ಶಿ ಮಹದೇವ್, ತಾಲೂಕು ಹಿರಿಯ ಆರೋಗ್ಯ ನಿರೀಕ್ಷಕ ಕೆ.ವಿ. ರಮೇಶ್, ಕಾಂಗ್ರೆಸ್ ಮುಖಂಡರಾದ ಟಿ.ಸಿ. ಮಂಜು, ಹೊಸೂರು ಕಾಂತ, ಸುದರ್ಶನ್, ಡಿ. ತಮ್ಮಯ್ಯ, ಆಸ್ಪತ್ರೆ ಸಿಬ್ಬಂದಿ, ಆಶಾ ಕಾರ್ಯಕರ್ತೆಯರು ಇದ್ದರು.