ಸಾರಾಂಶ
ಛಾಯಾ ಕುಟುಂಬ ಸಮ್ಮಿಲನ ಕಾರ್ಯಕ್ರಮದಲ್ಲಿ ಕನ್ನಡ ವಿದ್ವಾಂಸ, ವಾಗ್ಮಿ ಪ್ರೊ. ಎಂ. ಕೃಷ್ಣೇಗೌಡ ಪ್ರಧಾನ ಭಾಷಣಕಾರರಾಗಿ ಮಾತನಾಡಿದರು. ಕ್ರಿಕೆಟ್ ಮತ್ತು ಕ್ರೀಡೆಯಲ್ಲಿ ವಿಜೇತರಾದವರಿಗೆ ಬಹುಮಾನ ವಿತರಿಸಲಾಯಿತು.
ಕನ್ನಡಪ್ರಭ ವಾರ್ತೆ ಕುಶಾಲನಗರ
ದೇಹದಲ್ಲಿ ಮಾನಸಿಕ, ಭಾವನಾತ್ಮಕ, ಸಾಮಾಜಿಕ, ಆಧ್ಯಾತ್ಮಿಕ ಆರೋಗ್ಯಗಳು ಇಲ್ಲದಿದ್ದಲ್ಲಿ ಆರೋಗ್ಯವಂತ ಸಮಾಜ ಕಾಣಲು ಅಸಾಧ್ಯ ಎಂದು ಕನ್ನಡ ವಿದ್ವಾಂಸ, ವಾಗ್ಮಿ ಪ್ರೊ. ಎಂ.ಕೃಷ್ಣೇಗೌಡ ಅಭಿಪ್ರಾಯವ್ಯಕ್ತಪಡಿಸಿದರು.ಅವರು ಕುಶಾಲನಗರದಲ್ಲಿ ನಡೆದ ಕೊಡಗು ಜಿಲ್ಲಾ ಛಾಯಾಗ್ರಾಹಕರ ಕ್ಷೇಮಾಭಿವೃದ್ಧಿ ಸಂಘದ ಛಾಯಾ ಕುಟುಂಬ ಸಮ್ಮಿಲನ ಕಾರ್ಯಕ್ರಮದಲ್ಲಿ ಪ್ರಧಾನ ಭಾಷಣಕಾರರಾಗಿ ಮಾತನಾಡಿದರು.
ಛಾಯಾಗ್ರಾಹಕರು ತಾಂತ್ರಿಕತೆ ತಿಳಿಯುವ ಮೂಲಕ ವೃತ್ತಿಯಲ್ಲಿ ಉಳಿಯೋದು ಸಾಧ್ಯ. ಅವರು ತೆಗೆದಿರುವ ಫೋಟೋಗಳ ಮೂಲಕ ಇತಿಹಾಸದ ಮೆಲುಕು ಸಾಧ್ಯ. ಕ್ಷಣಗಳನ್ನು ಹಿಡಿದಿಡುವ ಶಕ್ತಿ ಛಾಯಾಗ್ರಾಹಕನಿಗೆ ಇದೆ ಎಂದರು.ಹರಿಯುವ ಕಾಲವನ್ನು ಹಿಡಿದಿಡಲು ಛಾಯಾಗ್ರಾಹಕ ಮತ್ತು ಕವಿಗಳಿಗೆ ಮಾತ್ರ ಸಾಧ್ಯ. ಕತ್ತಲು ಬೆಳಕಿನ ವಿದ್ಯಮಾನದ ನಡುವೆ ಛಾಯಾಗ್ರಾಹಕ ಕೆಲಸ ನಿರ್ವಹಿಸುತ್ತಾನೆ ಎಂದು ಹೇಳಿದರು.
ಪಶುಸಂಗೋಪನ ಮತ್ತು ರೇಷ್ಮೆ ಖಾತೆ ಸಚಿವ ಕೆ.ವೆಂಕಟೇಶ್ ಉದ್ಘಾಟಿಸಿ, ಛಾಯಾಗ್ರಾಹಕರ ವೃತ್ತಿ ಅದ್ಭುತ ಶಕ್ತಿಯಾಗಿದೆ. ಅತ್ಯಾಧುನಿಕ ತಂತ್ರಜ್ಞಾನದ ನಡುವೆ ಜನರಿಗೆ ಉತ್ತಮ ಗುಣಮಟ್ಟದ ಸೇವೆ ನೀಡಲು ಪ್ರಯತ್ನ ನಡೆಯಬೇಕು. ಹೊಸ ತಂತ್ರಜ್ಞಾನ ಬಳಕೆ ಬಗ್ಗೆ ಅರಿವು ಪಡೆಯುವ ಮೂಲಕ ತಮ್ಮ ಕಾಯಕದಲ್ಲಿ ಯಶಸ್ಸು ಗಳಿಸಬೇಕು ಎಂದು ಕರೆ ನೀಡಿದರು.ದಾನಿಗಳ ಮೂಲಕ ಸಂಘಕ್ಕೆ ಜಿಲ್ಲೆಯ ಯಾವುದೇ ಒಂದು ಭಾಗದಲ್ಲಿ ನಿವೇಶನ ಕಲ್ಪಿಸುವಂತೆ ಸಂಘದ ಪ್ರಮುಖರಾದ ಕೆ.ಎಸ್. ನಾಗೇಶ್ ಮನವಿ ಮಾಡಿದರು.
ಜಿಲ್ಲಾ ಛಾಯಾಗ್ರಾಹಕರ ಕ್ಷೇಮಾಭಿವೃದ್ಧಿ ಸಂಘ ಅಧ್ಯಕ್ಷ ಆವರ್ತಿ ಆರ್. ಮಹಾದೇವಪ್ಪ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ರಂಗಭೂಮಿ ಕಲಾವಿದ ಹಾಗೂ ಚಲನಚಿತ್ರ ನಟ ಸೀನು ಮಿತ್ರ ಅವರನ್ನು ಸನ್ಮಾನಿಸಲಾಯಿತು.ಸಭೆಯಲ್ಲಿ ಮುಖ್ಯ ಅತಿಥಿಗಳಾಗಿ ಪಾಲ್ಗೊಂಡಿದ್ದ ಕರ್ನಾಟಕ ಛಾಯಾಗ್ರಾಹಕರ ಸಂಘದ ರಾಜ್ಯಾಧ್ಯಕ್ಷ ಎಚ್.ಎಸ್. ನಾಗೇಶ್, ಉದ್ಯಮಿ ಎಸ್.ಎಲ್.ಎನ್. ವಿಶ್ವನಾಥನ್, ಗ್ಯಾರೆಂಟಿ ಅನುಷ್ಠಾನ ಸಮಿತಿಯ ತಾಲೂಕು ಅಧ್ಯಕ್ಷ ವಿ.ಪಿ. ಶಶಿಧರ್, ಉದ್ಯಮಿ ಮೊಹಮ್ಮದ್ ಸಾಧಿಕ್, ಸಂಘದ ಪ್ರಧಾನ ಕಾರ್ಯದರ್ಶಿ ಮುರಳಿ, ಉಪಾಧ್ಯಕ್ಷ ರೋಶನ್ ಮತ್ತಿತರರು ಇದ್ದರು.
ಇದೇ ಸಂದರ್ಭದಲ್ಲಿ ಗುಡ್ಡೆಮನೆ ವಿಶ್ವಕುಮಾರ್, ಕೆ.ಪಿ. ನಾಗೇಂದ್ರ ಮತ್ತಿತರರನ್ನು ಸನ್ಮಾನಿಸಲಾಯಿತು.ಕ್ರಿಕೆಟ್ ಮತ್ತು ಇತರ ಕ್ರೀಡೆಯಲ್ಲಿ ವಿಜೇತರಾದವರಿಗೆ ಬಹುಮಾನ ವಿತರಿಸಲಾಯಿತು.
ಚಿತ್ರ ಖ್ಯಾತ ವಾಗ್ಮಿ ಎಂ ಕೃಷ್ಣೇಗೌಡ ಅವರು ಮಾತನಾಡುತ್ತಿರುವುದುಸರಕಾರದ ಮೂಲಕ ಸಂಘಟನೆಗೆ ಎಲ್ಲ ರೀತಿಯ ಸಹಕಾರ ಹಾಗೂ ಪ್ರಾಮಾಣಿಕ ಪ್ರಯತ್ನ ಮಾಡಲಾಗುವುದು