ಸಾರಾಂಶ
ಕನ್ನಡಪ್ರಭ ವಾರ್ತೆ ಚಾಮರಾಜನಗರ
ಜಿಲ್ಲೆಯಲ್ಲಿ ಸಹಕಾರ ಭವನ ನಿರ್ಮಾಣ ಮಾಡಲು ಆದ್ಯತೆ ನೀಡುವ ಜೊತೆಗೆ ಈಗ ಒಕ್ಕೂಟಕ್ಕೆ ನೀಡಿರುವ ನಿವೇಶನ ಸಹಕಾರ ಇಲಾಖೆಯ ಹೆಸರಿನಲ್ಲಿದ್ದು, ಈ ಜಾಗವನ್ನು ವರ್ಗಾಯಿಸಿಕೊಂಡು ಪ್ರಸಕ್ತ ವರ್ಷದಿಂದಲೇ ಭವನ ನಿರ್ಮಾಣಕ್ಕೆ ಒತ್ತು ನೀಡಲಾಗುವುದು ಎಂದು ಜಿಲ್ಲಾ ಸಹಕಾರಿ ಒಕ್ಕೂಟದ ಅಧ್ಯಕ್ಷ ಹಾಗೂ ಚಾಮುಲ್ ನಿರ್ದೇಶಕ ಎಚ್.ಎಸ್.ನಂಜುಂಡಪ್ರಸಾದ್ ತಿಳಿಸಿದರು.ನಗರದ ಲಾಂಪ್ಸ್ ಸೊಸೈಟಿ ಸಭಾಂಗಣದಲ್ಲಿ ನಡೆದ ೨೦೨೩-೨೪ನೇ ಸಾಲಿನ ಸಂಘದ ಸರ್ವ ಸದಸ್ಯರ ವಾರ್ಷಿಕ ಮಹಾಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.ಮಾಜಿ ಸಚಿವರಾಗಿದ್ದ ದಿ.ಎಚ್.ಎಸ್.ಮಹದೇವಪ್ರಸಾದ್ ಅವರು ಜಿಲ್ಲಾ ಕೇಂದ್ರದಲ್ಲಿ ಒಂದು ಸುಸಜ್ಜಿತ ಸಹಕಾರ ಭವನ ನಿರ್ಮಾಣವಾಗಬೇಕೆಂಬ ಕನಸಿತ್ತು. ಇದಕ್ಕಾಗಿ ಯೋಜನೆ ರೂಪಿಸಿ, ಅವರು ಸಹಕಾರ ಸಚಿವರಾಗಿದ್ದಾಗ ಒಕ್ಕೂಟಕ್ಕೆ ೫ ಲಕ್ಷ ರು. ಅನುದಾನ ನೀಡಿ, ಸಂಪಿಗೆ ರಸ್ತೆಯಲ್ಲಿರುವ ಸಹಕಾರ ಇಲಾಖೆಯ ಜಾಗವನ್ನು ಕೊಡಿಸಲು ಪ್ರಯತ್ನ ಮಾಡಿದ್ದರು. ಈ ಬಗ್ಗೆ ಸಹಕಾರ ಒಕ್ಕೂಟದ ಹಿರಿಯ ನಿರ್ದೇಶಕರು ಹಾಗೂ ಅಧ್ಯಕ್ಷರು ಅನೇಕ ಬಾರಿ ಸಚಿವರನ್ನು ಭೇಟಿ ಮಾಡಿ ಚರ್ಚೆ ಮಾಡಿದ್ದರು. ಅವರ ಕನಸು ನೆನಸು ಮಾಡಲು ಈಗ ಮಹದೇವಪ್ರಸಾದ್ ಅವರ ಪುತ್ರ ಎಚ್.ಎಂ.ಗಣೇಶ್ ಪ್ರಸಾದ್ ಅವರು ಶಾಸಕರಾಗಿದ್ದಾರೆ ಎಂದರು.
ಮುಖ್ಯಮಂತ್ರಿಗಳು ಹಾಗೂ ಸಹಕಾರ ಸಚಿವರನ್ನು ಭೇಟಿ ಮಾಡಿ, ಮನವಿ ಸಲ್ಲಿಸುವ ಜೊತೆಗೆ ಇಲಾಖೆಯ ಹೆಸರಿನಲ್ಲಿರುವ ಜಾಗವನ್ನು ವರ್ಗಾಯಿಸಿಕೊಡಲು ಮನವಿ ಮಾಡಿಕೊಳ್ಳೋಣ ಎಂದು ಹೇಳಿದರು.ಸಹಕಾರ ಮಹಾಮಂಡಳದ ಅಧ್ಯಕ್ಷರಾದ ಜಿ.ಟಿ.ದೇವೇಗೌಡರು ಸಹ ಅನುದಾನ ನೀಡುವ ಘೋಷಣೆ ಮಾಡಿದ್ದಾರೆ. ಎಲ್ಲರ ಸಹಕಾರದಿಂದ ಮುಂದಿನ ದಿನಗಳಲ್ಲಿ ಸಹಕಾರ ಭವನ ನಿರ್ಮಾಣವಾಗಬೇಕಾಗಿದೆ. ನಿರ್ದೇಶಕರು ಹೆಚ್ಚಿನ ಮುತುವರ್ಜಿ ವಹಿಸಿ ಭವನ ನಿರ್ಮಾಣಕ್ಕೆ ಕಾರ್ಯಪ್ರವೃತ್ತರಾಗೋಣ ಎಂದರು. ರಾಜ್ಯ ಸಹಕಾರ ಮಹಾಮಂಡಲದ ಅಧೀನದಲ್ಲಿ ಜಿಲ್ಲಾ ಸಹಕಾರ ಒಕ್ಕೂಟ ಕಾರ್ಯನಿರ್ವಹಿಸುತ್ತಿದೆ. ಜಿಲ್ಲೆಯ ವ್ಯಾಪ್ತಿಯಲ್ಲಿರುವ ಹಾಲು ಉತ್ಪಾದಕರ ಸಹಕಾರ ಸಂಘಗಳು, ಕೃಷಿ ಪತ್ತಿನ ಸಹಕಾರ ಸಂಘಗಳು ಹಾಗೂ ಇತರೇ ಸಹಕಾರ ಸಂಘಗಳು ಸೇರಿ ೪೫೦ಕ್ಕೂ ಹೆಚ್ಚು ಸಂಘಗಳು ಸದಸ್ಯತ್ವವನ್ನು ಪಡೆದುಕೊಂಡಿದೆ. ಇನ್ನುಳಿದ ಸಂಘಗಳು ಷೇರು ಪಡೆದು ಸದಸ್ಯರಾಗುವ ಮೂಲಕ ಜಿಲ್ಲೆಯಲ್ಲಿ ಮಾದರಿ ಸಹಕಾರ ಒಕ್ಕೂಟವನ್ನು ನಿರ್ಮಾಣ ಮಾಡಲು ಎಲ್ಲರು ಕೈಜೋಡಿಸಬೇಕು ಎಂದರು. ಜಿಲ್ಲಾ ಸಹಕಾರ ಒಕ್ಕೂಟದಿಂದ ಪ್ರತಿ ವರ್ಷ ಸಹಕಾರ ಶಿಕ್ಷಣ ನಿಧಿಯನ್ನು ಪಡೆದುಕೊಳ್ಳುವ ಜೊತೆಗೆ ಮಹಾ ಮಂಡಳಿಗೆ ಪಾವತಿಸಲಾಗುತ್ತಿದೆ. ಮಹಾಮಂಡಳಿ ನೀಡುವ ಅನುದಾನದಲ್ಲಿ ಜಿಲ್ಲೆಯ ಸಹಕಾರಿಗಳಿಗೆ ಶಿಕ್ಷಣ ಕಾರ್ಯಾಗಾರ, ಸಪ್ತಾಹ ಹಾಗೂ ಸಹಕಾರಿ ಕಾಯ್ದೆಗಳ ತಿದ್ದುಪಡಿ, ಲೆಕ್ಕ ಪತ್ರ ನಿರ್ವಹಣೆ ಸೇರಿದಂತೆ ಸಹಕಾರಿ ಕ್ಷೇತ್ರದಲ್ಲಿ ಆಡಳಿತ ನಿರ್ವಹಣೆಯ ಬಗ್ಗೆ ಜಾಗೃತಿ ಮೂಡಿಸಲಾಗುತ್ತಿದೆ ಎಂದು ತಿಳಿಸಿದರು.
ಹಿರಿಯ ಸಹಕಾರಿ ನಿರ್ದೇಶಕ ಹರದನಹಳ್ಳಿ ಸುಂದ್ರಪ್ಪ ಮಾತನಾಡಿ, ಪ್ರಧಾನಿ ನರೇಂದ್ರ ಮೋದಿ ಅವರು ಕೇಂದ್ರದಲ್ಲಿ ಸಹಕಾರ ಇಲಾಖೆಯನ್ನು ಪ್ರತ್ಯೇಕ ಸಚಿವಲಾಯವನ್ನಾಗಿಸಿ ಗೃಹ ಸಚಿವರಾಗಿರುವ ಅಮಿತ್‌ಶಾ ಅವರನ್ನು ಸಹಕಾರ ಸಚಿವರನ್ನಾಗಿ ಮಾಡಿದ್ದಾರೆ. ಮುಂದಿನ ದಿನಗಳಲ್ಲಿ ಸಹಕಾರ ಕ್ಷೇತ್ರಕ್ಕೆ ಹೆಚ್ಚಿನ ಒತ್ತು ಹಾಗೂ ಉತ್ತಮ ಅವಕಾಶಗಳು ಬರಲಿವೆ. ಹೀಗಾಗಿ ಸಹಕಾರ ಸಂಘಗಳನ್ನು ಗ್ರಾಮಗಳಲ್ಲಿ ಹೆಚ್ಚು ರಚನೆ ಮಾಡಿಕೊಳ್ಳಲು ಮುಂದಾಗಬೇಕು ಎಂದರು.ಇದೇ ವೇಳೆ ಸಭೆಯಲ್ಲಿ ಒಕ್ಕೂಟದ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಮನುಜ ವಾರ್ಷಿಕ ವರದಿ ಓದಿ ಅನುಮೋದನೆ ಪಡೆದುಕೊಂಡರು. ಒಕ್ಕೂಟದ ಉಪಾಧ್ಯಕ್ಷ ರಾಯಪ್ಪ, ನಿರ್ದೇಶಕರಾದ ಪಿಎಲ್‌ಡಿ ಬ್ಯಾಂಕ್ ಅಧ್ಯಕ್ಷ ಎಚ್.ಎಂ.ಬಸವಣ್ಣ, ನಾಗರಾಜು, ಮುದ್ದಯ್ಯ, ರವಿ, ಪಿ.ಮಹದೇವಸ್ವಾಮಿ, ನಾಗಸುಂದರ್, ಮಹದೇವಪ್ರಭು, ಮಡಿವಾಳಪ್ಪ, ಎಚ್.ಎನ್.ಸುಂದರರಾಜ್, ಎಂ.ಪ್ರಭುಸ್ವಾಮಿ, ದಾಕ್ಷಾಯಿಣಿ, ಜಯಶೀಲಾ, ಮಾನೇಜರ್ ಮಲ್ಲಿಕಾರ್ಜುನ್, ಮಲ್ಲೇಶ್, ಕೆಂಡಗಣ್ಣ ಹಾಗೂ ಸರ್ವ ಸದಸ್ಯರು ಉಪಸ್ಥಿತರಿದ್ದರು.