ಸಾರಾಂಶ
ಕನ್ನಡ್ರಪ್ರಭ ವಾರ್ತೆ ಸಿದ್ದಾಪುರ
ಜಿಲ್ಲೆಯಲ್ಲಿ ಪರಿಸರ ಪೂರಕ ಪ್ರವಾಸೋದ್ಯಮಕ್ಕೆ ಆದ್ಯತೆ ನೀಡಬೇಕೆಂದು ಕೊಡಗು ಜಿಲ್ಲಾ ಹೊಟೇಲ್, ರೆಸಾರ್ಟ್ ಹಾಗೂ ಉಪಹಾರ ಗೃಹ ಸಂಘದ ಗೌರವಾಧ್ಯಕ್ಷ ನಾಗೇಂದ್ರ ಪ್ರಸಾದ್ ಸಲಹೆ ನೀಡಿದ್ದಾರೆ.ವಿರಾಜಪೇಟೆ ತಾಲೂಕು ಕಾರ್ಯನಿರತ ಪತ್ರಕರ್ತರ ಸಂಘದ ವತಿಯಿಂದ ಸಿದ್ದಾಪುರದ ರೆಸಾರ್ಟ್‌ನಲ್ಲಿ ನಡೆದ ವಿಶ್ವ ಪ್ರವಾಸೋದ್ಯಮ ದಿನಾಚರಣೆಯಲ್ಲಿ ಅವರು ಮಾತನಾಡಿದರು. ಪ್ರವಾಸಿಗರಿಗೆ ನಮ್ಮ ನಾಡಿನ ಆಚಾರ ವಿಚಾರ, ಸಂಸ್ಕೃತಿ ಹಾಗೂ ಆಹಾರ ಪದ್ಧತಿ ಪರಿಚಯಿಸುವಂತಾಗಬೇಕು. ಧಾರ್ಮಿಕ ಸ್ಥಳಗಳಲ್ಲಿ ಪ್ರವಾಸೋದ್ಯಮಕ್ಕೆ ಅನುವು ನೀಡಬಾರದು ಎಂದರು.
ಜಿಲ್ಲೆಯು ಪರಿಸರ ಪ್ರವಾಸೋದ್ಯಮದಲ್ಲಿ 7ನೇ ಸ್ಥಾನದಲ್ಲಿದ್ದು, ಜಿಲ್ಲೆಯ ಸುಮಾರು 1.25 ಲಕ್ಷ ಮಂದಿ ಪ್ರವಾಸೋದ್ಯಮ ಅವಲಂಬಿಸಿದ್ದಾರೆ. ಆದರೆ ಸರ್ಕಾರದಿಂದ ಪ್ರವಾಸೋದ್ಯಮ ಅಭಿವೃದ್ಧಿಗೆ ಸೂಕ್ತ ಬೆಂಬಲ ಸಿಗುತ್ತಿಲ್ಲ. ಜಿಲ್ಲೆಯ ರಸ್ತೆಗಳ ಅಭಿವೃದ್ಧಿ ಆಗಬೇಕು ಹಾಗೂ ಪಟ್ಟಣಗಳ ಟ್ರಾಫಿಕ್ ಸಮಸ್ಯೆ ನಿವಾರಿಸಿದರೆ ಪ್ರವಾಸಿಗರು ಹಾಗೂ ಸ್ಥಳೀಯರಿಗೆ ಕಿರಿ ಕಿರಿ ಉಂಟಾಗುವುದು ತಪ್ಪುತ್ತದೆ ಎಂದು ಅಭಿಪ್ರಾಯಪಟ್ಟರು.ಉದ್ಯಮಿ ಬಜನ್ ಬೋಪಣ್ಣ ಮಾತನಾಡಿ, ಪ್ರವಾಸೋದ್ಯಮದಿಂದಾಗಿ ಜಿಲ್ಲೆಯ ಎಲ್ಲಾ ರಂಗದ ಜನರು ಲಾಭ ಪಡೆಯುತ್ತಿದ್ದಾರೆ. ಆದರೆ ಪರಿಸರಕ್ಕೆ ಹಾನಿಯಾಗದಂತೆ ಪ್ರವಾಸೋದ್ಯಮವನ್ನು ನಡೆಸಬೇಕು. ಪ್ರವಾಸಿ ತಾಣಗಳಲ್ಲಿ ಭದ್ರತೆ ಹೆಚ್ಚಾಗಬೇಕು ಎಂದರು.
ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ಉಪಾಧ್ಯಕ್ಷ ಅಜ್ಜಮಾಡ ರಮೇಶ್ ಕುಟ್ಟಪ್ಪ ಮಾತನಾಡಿ, ಜಿಲ್ಲೆಗೆ ಕಳಂಕ ಆಗದ ರೀತಿಯಲ್ಲಿ ಮತ್ತು ಪರಿಸರ ಸ್ನೇಹಿ ಪ್ರವಾಸೋದ್ಯಮಕ್ಕೆ ಆದ್ಯತೆ ನೀಡಬೇಕು. ವಾಸೋದ್ಯಮಿಗಳೇ ಜಿಲ್ಲೆಯ ಹೆಸರು ಹಾಳಾಗದಂತೆ ಎಚ್ಚರ ವಹಿಸಬೇಕು. ಸ್ಥಳೀಯ ಜನರ ಭಾವನೆಗೆ ದಕ್ಕೆಯಾಗದಂತೆ ನೋಡಿಕೊಳ್ಳಬೇಕು. ಜಿಲ್ಲೆಯಲ್ಲಿ ಅಲ್ಲಲ್ಲಿ ಪ್ಲಾಸ್ಟಿಕ್ ಎಸೆಯುತ್ತಿದ್ದು, ಈ ಬಗ್ಗೆಯೂ ಜನಾಂದೋಲನ ಅಗತ್ಯ ಎಂದರು.ಕೊಡಗು ಎಸ್.ಎನ್.ಡಿ.ಪಿ ಅಧ್ಯಕ್ಷ ವಿ.ಕೆ ಲೊಕೇಶ್ ಮಾತನಾಡಿ, ಜಿಲ್ಲೆಯ ಪರಿಸರ ಉಳಿಸಿಕೊಂಡು, ಪ್ರವಾಸಿಗರಿಗೆ ರಕ್ಷಣೆ ಹಾಗೂ ಸೇವೆ ನೀಡಬೇಕು. ಜಿಲ್ಲೆಯಿಂದ ಹೆಚ್ಚು ತೆರಿಗೆ ಸಂಗ್ರಹವಾಗುತ್ತಿದ್ದು, ಸರ್ಕಾರ ಹಾಗೂ ಜಿಲ್ಲಾಡಳಿಯ ಪ್ರವಾಸಿ ತಾಣಗಳಲ್ಲಿ ಮೂಲಭೂತ ಸೌಕರ್ಯಗಳನ್ನು ಒದಗಿಸಬೇಕು ಎಂದರು.
ಕೊಡಗು ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಬಿ.ಆರ್ ಸವಿತಾ ರೈ, ಕೊಡಗು ಪ್ರೆಸ್ ಕ್ಲಬ್ ಅಧ್ಯಕ್ಷ ಬೊಳ್ಳಜೀರ ಅಯ್ಯಪ್ಪ, ಇವಾಲ್ವ್ ಬ್ಯಾಕ್ ರೆಸಾರ್ಟ್ ನ ಪ್ರಧಾನ ವ್ಯವಸ್ಥಾಪಕ ಥೋಮಸ್ ಪೌಲ್ ಮಾತನಾಡಿದರು.ವಿರಾಜಪೇಟೆ ತಾಲೂಕು ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ರೆಜಿತ್ ಕುಮಾರ್ ಅಧ್ಯಕ್ಷತೆ ವಹಿಸಿದ್ದರು.
ಆರ್.ಸುಬ್ರಮಣಿ ನಿರೂಪಿಸಿದರು. ಎ.ಎಸ್ ಮುಸ್ತಫ ಸ್ವಾಗತಿಸಿದರು. ಹೇಮಂತ್ ವಂದಿಸಿದರು.