ಶಿಗ್ಗಾಂವಿ: ಸ್ವಂತ ಉದ್ಯೋಗ ಮಾಡುವ ಮೂಲಕ ಗೌರವಯುತ ಜೀವನ ನಡೆಸಬೇಕು ಎನ್ನುವುದು ಅನೇಕರ ಕನಸಾಗಿರುತ್ತದೆ. ಆ ನಿಟ್ಟಿನಲ್ಲಿ ಬಡ ಕುಟುಂಬಗಳಿಗೆ ವ್ಯಾಪಾರ ಮಾಡಲು ತಳ್ಳುವ ಗಾಡಿಗಳನ್ನು ವಿತರಿಸುವ ಮೂಲಕ ಉದ್ಯೋಗ ನೀಡಲಾಗುತ್ತಿದೆ ಎಂದು ಯುವ ಬಿಜೆಪಿ ಮುಖಂಡ ಭರತ್ ಬೊಮ್ಮಾಯಿ ಹೇಳಿದರು.
ಪಟ್ಟಣದ ಪಂಚಮುಖಿ ಆಂಜನೇಯ ದೇವಸ್ಥಾನದ ಎದುರು ತಮ್ಮ ಜನ್ಮದಿನದ ಪ್ರಯುಕ್ತ ಫಲಾನುಭವಿಗಳಿಗೆ ತಳ್ಳುವ ಗಾಡಿಗಳನ್ನು ವಿತರಿಸಿ ಮಾತನಾಡಿದರು. ಕಳೆದ ೨೦ ವರ್ಷಗಳಿಂದ ಬಸವರಾಜ ಬೊಮ್ಮಾಯಿ ಅವರು ಕ್ಷೇತ್ರದ ಅಭಿವೃದ್ಧಿಯ ಜತೆಗೆ ಉದ್ಯೋಗ ಸೃಷ್ಟಿಗೆ ಆದ್ಯತೆ ನೀಡಿದ್ದಾರೆ. ತಾಲೂಕಿಗೆ ಅಂಟಿದ್ದ ''''''''''''''''ಹಿಂದುಳಿದ ತಾಲೂಕು'''''''''''''''' ಎಂಬ ಹಣೆಪಟ್ಟಿ ಅಳಿಸಿ ಹಾಕುವಲ್ಲಿ ಅವರು ಯಶಸ್ವಿಯಾಗಿದ್ದಾರೆ ಎಂದರು.ಎಸ್.ಆರ್. ಬೊಮ್ಮಾಯಿ ಮತ್ತು ಶ್ರೀಮತಿ ಗಂಗಮ್ಮ ಎಸ್. ಬೊಮ್ಮಾಯಿ ಟ್ರಸ್ಟ್ ವತಿಯಿಂದ ಹನುಮರಹಳ್ಳಿ, ಬನ್ನೂರು, ಕಬನೂರು ಮತ್ತು ಸುರಪಗಟ್ಟಿ ಗ್ರಾಮಗಳ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಗಳಿಗೆ ಸ್ಮಾರ್ಟ್‌ಕ್ಲಾಸ್ ಉಪಕರಣಗಳನ್ನು ವಿತರಿಸಿದರು. ಭರತ ಬೊಮ್ಮಾಯಿ ಅಭಿಮಾನಿ ಬಳಗದಿಂದ ಬಂಕಾಪುರದ ಶ್ರೀ ವಿಠಲ ರುಕ್ಮಿಣಿ ದೇವಸ್ಥಾನದ ಆವರಣದಲ್ಲಿ ಆಯೋಜಿಸಲಾಗಿದ್ದ ಉಚಿತ ಹೃದಯ, ಕಣ್ಣು, ಕಿವಿ, ಎಲುಬು ಮತ್ತು ಕೀಲು ತಪಾಸಣಾ ಶಿಬಿರ ಉದ್ಘಾಟಿಸಿದರು. ತಾಲೂಕಿನ ಎನ್.ಎಂ. ತಡಸ, ತಿಮ್ಮಾಪುರ, ಕಡಳ್ಳಿ ಗ್ರಾಮಗಳಲ್ಲಿ ರೈತರಿಗಾಗಿ ಆಯೋಜಿಸಲಾಗಿದ್ದ ಡ್ರೋನ್ ಸೇವಾ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು. ಪಟ್ಟಣದ ತಾಲೂಕು ಕ್ರೀಡಾಂಗಣದಲ್ಲಿ ಆಯೋಜಿಸಲಾಗಿದ್ದ ಕ್ರಿಕೆಟ್ ಪಂದ್ಯಾವಳಿಯ ಫೈನಲ್ ಪಂದ್ಯ ವೀಕ್ಷಿಸಿ ಬಹುಮಾನ ವಿತರಣೆ ಮಾಡಿದರು.
ಬಿಜೆಪಿ ಮಂಡಲದ ಅಧ್ಯಕ್ಷರು, ಪ್ರಮುಖ ಮುಖಂಡರು ಹಾಗೂ ನೂರಾರು ಬಿಜೆಪಿ ಕಾರ್ಯಕರ್ತರು ಉಪಸ್ಥಿತರಿದ್ದರು.