-
- - -ಕನ್ನಡಪ್ರಭ ವಾರ್ತೆ ದಾವಣಗೆರೆ ರಾಜ್ಯದ ಆರ್ಥಿಕ ಅಭಿವೃದ್ಧಿ, ಜನಕಲ್ಯಾಣ ಹಾಗೂ ಮೂಲಸೌಕರ್ಯ ವಿಸ್ತರಣೆಗೆ ಹೆಚ್ಚಿನ ಆದ್ಯತೆ ನೀಡುವ ಮೂಲಕ 2026-27ನೇ ಸಾಲಿನಲ್ಲಿ ರಾಜ್ಯದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಕರ್ನಾಟಕ ಬಜೆಟ್ ಮಂಡಿಸಿದ್ದಾರೆ ಎಂದು ದಾವಣಗೆರೆ ಸಂಸದೆ ಡಾ.ಪ್ರಭಾ ಮಲ್ಲಿಕಾರ್ಜುನ ಹೇಳಿದ್ದಾರೆ.
ಕರ್ನಾಟಕ ರಾಜ್ಯ ಬಜೆಟ್ ಕುರಿತು ಅಭಿಪ್ರಾಯ ವ್ಯಕ್ತಪಡಿಸಿರುವ ಅವರು, ಬಜೆಟ್‌ನಲ್ಲಿ ದಾವಣಗೆರೆ ಜಿಲ್ಲೆಗೆ ಪ್ರಮುಖ ಯೋಜನೆಗಳನ್ನು ಘೋಷಿಸಲಾಗಿರುವುದು ಸಂತಸ ತಂದಿದೆ. ದಾವಣಗೆರೆ ದಕ್ಷಿಣ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ ಪರಿಶಿಷ್ಟ ಜಾತಿ/ ಪರಿಶಿಷ್ಟ ಪಂಗಡ ಹಾಗೂ ಅಲ್ಪಸಂಖ್ಯಾತರು ಹೆಚ್ಚಿಗೆ ವಾಸಿಸುತ್ತಿರುವ ವಿವಿಧ ಭಾಗಗಳ ಮೂಲಸೌಕರ್ಯ ಅಭಿವೃದ್ಧಿಗಾಗಿ ₹100.00 ಕೋಟಿ ಅನುದಾನ, ಹೊನ್ನಾಳಿ ತಾಲೂಕಿನಲ್ಲಿ 12,000 ಮೆಟ್ರಿಕ್ ಟನ್ ಸಾಮರ್ಥ್ಯದ ಶೀತಗೃಹ ಸ್ಥಾಪನೆ, ಮಾಯಕೊಂಡ ಪ್ರಾಥಮಿಕ ಆರೋಗ್ಯ ಕೇಂದ್ರವನ್ನು ಸಮುದಾಯ ಆರೋಗ್ಯ ಕೇಂದ್ರವಾಗಿ ಮೇಲ್ದರ್ಜೆಗೇರಿಸಲಾಗಿದೆ ಎಂದು ತಿಳಿಸಿದರು.ದಾವಣಗೆರೆಯಲ್ಲಿ ಮತ್ಸ್ಯದರ್ಶಿನಿ ಮೀನು ಮಾರಾಟ ಕೇಂದ್ರ ಹಾಗೂ ಹಿಂದುಳಿದ ವರ್ಗಗಳ ಪೋಸ್ಟ್-ಮ್ಯಾಟ್ರಿಕ್ ವಿದ್ಯಾರ್ಥಿ ನಿಲಯ ನಿರ್ಮಾಣ ಮಾಡಲಾಗುತ್ತಿದೆ. ಚನ್ನಗಿರಿ ತಾಲೂಕಿನ ಕಗತೂರು ಹಳ್ಳಕ್ಕೆ ಚೆಕ್ ಡ್ಯಾಂ ನಿರ್ಮಾಣ. ದಾವಣಗೆರೆ ತಾಲೂಕಿನ ಆನಗೋಡಿನಲ್ಲಿ ಹೊಸ ಪೊಲೀಸ್ ಠಾಣೆ ಸ್ಥಾಪನೆ ಮಾಡಲಾಗುತ್ತಿದೆ. ತುಮಕೂರು-ದಾವಣಗೆರೆ ರೈಲ್ವೇ ಮಾರ್ಗಗಳಿಗೆ ಭೂಸ್ವಾಧೀನ ಹಾಗೂ ನಿರ್ಮಾಣ ಕಾಮಗಾರಿಗೆ ಅನುದಾನ ಮೀಸಲಿಡಲಾಗಿದೆ.ಚನ್ನಗಿರಿ ತಾಲ್ಲೂಕಿನ 41 ಕೆರೆಗಳನ್ನು ತುಂಬುವ ಯೋಜನೆ, ಹೊನ್ನನಾಯಕನಹಳ್ಳಿ ಕೆರೆ ಹಾಗೂ ಹಳ್ಳ ಅಭಿವೃದ್ಧಿಗೆ ಅನುಮೋದನೆ ಮಾಡಲಾಗಿದೆ ಎಂದರು.
ಉಳಿದಂತೆ 2025-26ರಲ್ಲಿ ಕರ್ನಾಟಕ ರಾಜ್ಯವು 8.1% ಆರ್ಥಿಕ ಬೆಳವಣಿಗೆ ಸಾಧಿಸಿದ್ದು, ಇದು ದೇಶದ ಸರಾಸರಿ ಬೆಳವಣಿಗೆ ದರವಾದ 7.4% ಕ್ಕಿಂತ ಹೆಚ್ಚಾಗಿದೆ. ಕ್ಷೇತ್ರವಾರು ಬೆಳವಣಿಗೆಯಲ್ಲಿ ಕೃಷಿ ಕ್ಷೇತ್ರದಲ್ಲಿ 9.1%, ಕೈಗಾರಿಕಾ ಕ್ಷೇತ್ರದಲ್ಲಿ 6.7% ಮತ್ತು ಸೇವಾ ಕ್ಷೇತ್ರದಲ್ಲಿ 8.1% ಬೆಳವಣಿಗೆ ಕಂಡುಬಂದಿದೆ. ರಾಜ್ಯವು 9.4 ಬಿಲಿಯನ್ ಡಾಲರ್ ವಿದೇಶಿ ನೇರ ಹೂಡಿಕೆ **(ಈಆI)** ಆಕರ್ಷಿಸಿದ್ದು, ಇದು ಭಾರತದ ಒಟ್ಟು ಹೂಡಿಕೆಯ 26.7% ಆಗಿದೆ ಎಂದರು.
2026-27ನೇ ಸಾಲಿನಲ್ಲಿ ಮಕ್ಕಳ ಉದ್ದೇಶಿತ ಕಾರ್ಯಕ್ರಮಗಳಿಗಾಗಿ ₹63.135 ಕೋಟಿ ಮತ್ತು ಮಹಿಳಾ ಉದ್ದೇಶಿತ ಕಾರ್ಯಕ್ರಮಗಳಿಗಾಗಿ ₹94,663 ಕೋಟಿ ಒದಗಿಸಲಾಗಿದೆ. ಮೂಲಸೌಕರ್ಯ ಮತ್ತು ಉದ್ಯೋಗಕ್ಕೆ ಉತ್ತೇಜನ ನೀಡಲಾಗಿದೆ. ರಾಜ್ಯದಲ್ಲಿ ಉದ್ಯೋಗ ಸೃಷ್ಟಿ ಹಾಗೂ ಮೂಲಸೌಕರ್ಯ ಅಭಿವೃದ್ಧಿಗೆ ಹಲವು ಕ್ರಮಗಳನ್ನು ಕೈಗೊಳ್ಳಲಾಗಿದೆ. 56,432 ಸರ್ಕಾರಿ ಹುದ್ದೆಗಳ ನೇಮಕಾತಿ ಪ್ರಕ್ರಿಯೆ ಆರಂಭಗೊಂಡಿದೆ. ಮುಖ್ಯಮಂತ್ರಿಗಳ ಮೂಲಸೌಕರ್ಯ ಅಭಿವೃದ್ಧಿ ಕಾರ್ಯಕ್ರಮದಡಿ ₹8,600 ಕೋಟಿ ಮೌಲ್ಯದ ಕಾಮಗಾರಿಗಳು ಕೈಗೊಳ್ಳಲಾಗುತ್ತಿವೆ. ಎರಡನೇ ಹಂತದಲ್ಲಿ ಹೆಚ್ಚುವರಿ ₹4,000 ಕೋಟಿ ಕಾಮಗಾರಿಗಳನ್ನು ಕೈಗೊಳ್ಳಲು ಯೋಜನೆ ರೂಪಿಸಲಾಗಿದೆ ಎಂದರು.
ಕೃಷಿ ಕ್ಷೇತ್ರಕ್ಕೆ ವಿಶೇಷ ಗಮನ ನೀಡಲಾಗಿದ್ದು ಕೃಷಿ ಮತ್ತು ಗ್ರಾಮೀಣ ಆರ್ಥಿಕತೆಯನ್ನು ಬಲಪಡಿಸಲು ** “Farm-to-Fork” ** ತಂತ್ರವನ್ನು ಸರ್ಕಾರ ಮುಂದಿಟ್ಟಿದೆ. ಇದರಡಿ ರೈತರಿಗೆ ವೈಜ್ಞಾನಿಕ ಕೃಷಿ ಮಾರ್ಗದರ್ಶನ, ಆರ್ಥಿಕ ನೆರವು, ಗುಣಮಟ್ಟದ ಕೃಷಿ ಒಳಾಂಶಗಳು ಹಾಗೂ ಮಾರುಕಟ್ಟೆ ಸಂಪರ್ಕ ವ್ಯವಸ್ಥೆ ಒದಗಿಸಲಾಗುತ್ತದೆ. ಈಗಾಗಲೇ ₹83 ಲಕ್ಷ ರೈತರಿಗೆ ₹70,000 ಕೋಟಿ ಬೆಳೆ ಸಾಲ ನೀಡಲಾಗಿದೆ ಎಂದು ತಿಳಿಸಿದರು.ಶಿಕ್ಷಣ ಕ್ಷೇತ್ರದಲ್ಲಿ 15,000 ಶಿಕ್ಷಕರ ಹುದ್ದೆಗಳ ಭರ್ತಿ, 800 ಶಾಲೆಗಳನ್ನು ಕರ್ನಾಟಕ ಪಬ್ಲಿಕ್ ಸ್ಕೂಲ್ಸ್ ಆಗಿ ಮೇಲ್ದರ್ಜೆಗೆ ತರುವ ಯೋಜನೆ ಹಾಗೂ 12.28 ಲಕ್ಷ ವಿದ್ಯಾರ್ಥಿಗಳಿಗೆ ಎಐ ಆಧಾರಿತ ಡಿಜಿಟಲ್ ಟ್ಯೂಟರ್ ವ್ಯವಸ್ಥೆ ಜಾರಿಗೊಳಿಸಲಾಗಿದೆ. ಆರೋಗ್ಯ ಕ್ಷೇತ್ರದಲ್ಲಿ ಮೂಲಸೌಕರ್ಯ ಅಭಿವೃದ್ಧಿಗೆ ₹900 ಕೋಟಿ ಮೀಸಲಿಟ್ಟು, ಆಯುಷ್ಮಾನ್ ಭಾರತ ಆರೋಗ್ಯ ಕರ್ನಾಟಕ ಯೋಜನೆಗೆ ಹೆಚ್ಚುವರಿ ₹400 ಕೋಟಿ ಅನುದಾನ ನೀಡಲಾಗಿದೆ. ಜೊತೆಗೆ ಆರೋಗ್ಯ ಇಲಾಖೆಯಲ್ಲಿ 2,500 ಹುದ್ದೆಗಳ ಭರ್ತಿಗೂ ಕ್ರಮ ಕೈಗೊಳ್ಳಲಾಗಿದೆ. ಸಾಮಾಜಿಕ ಕಲ್ಯಾಣಕ್ಕೆ ಹೆಚ್ಚಿನ ಅನುದಾನ ನೀಡಲಾಗಿದೆ ಎಂದು ತಿಳಿಸಿದರು.
ಈ ಬಜೆಟ್‌ನಲ್ಲಿ ರಾಜ್ಯ ಸರ್ಕಾರ “11ಜಿ ಆರ್ಥಿಕ ಅಭಿವೃದ್ಧಿ ಮಾದರಿ”ಯನ್ನು ಮುಂದಿಟ್ಟಿದ್ದು, ಗ್ಯಾರಂಟಿ ಆರ್ಥಿಕತೆ, ಉತ್ತಮ ಶಿಕ್ಷಣ, ಉತ್ತಮ ಆರೋಗ್ಯ, ಗ್ರಾಮೀಣ ಆರ್ಥಿಕತೆ, ಉತ್ತಮ ಆಡಳಿತ, ಗಿಗ್ ಆರ್ಥಿಕತೆ, ಭೌಗೋಳಿಕ ಸಮಾನತೆ, ಜಾಗತಿಕ ವ್ಯಾಪಾರ, ಪ್ರವಾಸೋದ್ಯಮ, ಹಸಿರು ಆರ್ಥಿಕತೆ ಹಾಗೂ ನಗರ ಆರ್ಥಿಕ ಬೆಳವಣಿಗೆಗೆ ಒತ್ತು ನೀಡಲಾಗಿದೆ ಎಂದು ಶ್ಲಾಘಿಸಿದ್ದಾರೆ.- - -
(ಬಾಕ್ಸ್) ಜಲ ಜೀವನ್ ಮಿಷನ್ ಯೋಜನೆಯಡಿ ಒಟ್ಟಾರೆ ₹69,488 ಕೋಟಿ ಮೊತ್ತದ ಕಾಮಗಾರಿಗಳು ಅನುಮೋದನೆಯಾಗಿವೆ. ಇದರಲ್ಲಿ ಕೇಂದ್ರ ಸರ್ಕಾರದ ಪಾಲು ₹30,888 ಕೋಟಿಯಾಗಿದ್ದು, ರಾಜ್ಯ ಸರ್ಕಾರದ ಪಾಲು ₹38.600 ಕೋಟಿ. ಕೇಂದ್ರ ಸರ್ಕಾರದಿಂದ ಇದುವರೆಗೆ ಕೇವಲ ₹11,786 ಕೋಟಿ ಮಾತ್ರ ಬಿಡುಗಡೆಯಾಗಿದೆ. ಇನ್ನೂ ₹19.102 ಕೋಟಿಗಳನ್ನು ಕೇಂದ್ರ ಸರ್ಕಾರ ಬಿಡುಗಡೆ ಮಾಡಬೇಕಿದೆ. ರಾಜ್ಯ ಸರ್ಕಾರದಿಂದ ಒದಗಿಸಬೇಕಾದ ಅನುದಾನದಲ್ಲಿ ಈಗಾಗಲೇ ₹27.098 ಕೋಟಿ ಬಿಡುಗಡೆ ಮಾಡಲಾಗಿದೆ. ₹11,502 ಕೋಟಿ ಮಾತ್ರ ಬಿಡುಗಡೆ ಮಾಡಬೇಕಾಗಿದೆ. ಕೇಂದ್ರ ಸರ್ಕಾರ 2025-26ನೇ ಸಾಲಿನಲ್ಲಿ ಯಾವುದೇ ಅನುದಾನ ಬಿಡುಗಡೆ ಮಾಡದಿದ್ದರೂ ಈ ಯೋಜನೆ ಹಿತದೃಷ್ಟಿಯಿಂದ ರಾಜ್ಯ ಸರ್ಕಾರದಿಂದ ಒಟ್ಟಾರೆ ₹15,500 ಕೋಟಿಗಳಷ್ಟು ಅನುದಾನ ಹೆಚ್ಚುವರಿಯಾಗಿ ಬಿಡುಗಡೆ ಮಾಡಿದೆ ಹಾಗೂ 2026-27ನೇ ಸಾಲಿನಲ್ಲಿ ಈ ಯೋಜನೆಗಾಗಿ ₹10,433 ಕೋಟಿ ಕಾಯ್ದಿರಿಸಲಾಗಿದೆ ಎಂದು ಸಂಸದೆ ಡಾ.ಪ್ರಭಾ ತಿಳಿಸಿದ್ದಾರೆ.- - -
-6ಕೆಡಿವಿಜಿ31: ಡಾ.ಪ್ರಭಾ ಮಲ್ಲಿಕಾರ್ಜುನ