ಸಾರಾಂಶ
ಕನ್ನಡಪ್ರಭ ವಾರ್ತೆ ಕೊಡೇಕಲ್
ವಿದ್ಯಾರ್ಥಿಗಳು ನಿಗದಿತ ಗುರಿ ಸಾಧನೆಗೆ ಕಠಿಣ ಹಾಗೂ ಪರಿಶ್ರಮದ ಓದಿಗೆ ಒತ್ತು ನೀಡಬೇಕು. ಶಿಸ್ತು ಸಮಯ ಪಾಲನೆಗೆ ಆದ್ಯತೆ ನೀಡಬೇಕು ಎಂದು ನಡೆದಾಡುವ ಮಾನವ ಕಂಪ್ಯೂಟರ್ ಎಂದೇ ಖ್ಯಾತರಾದ ಬಸವರಾಜ ಉಮರಾಣಿ ಹೇಳಿದರು.ಸಮೀಪದ ನಾರಾಯಣಪುರ ಗ್ರಾಮದ ಸರ್ಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ನಡೆದ ಪ್ರಥಮ ಪಿಯು ವಿದ್ಯಾರ್ಥಿಗಳ ಸ್ವಾಗತ ಸಮಾರಂಭದಲ್ಲಿ ಅವರು ಮಾತನಾಡಿ, ವಿದ್ಯಾರ್ಥಿಗಳಲ್ಲಿ ಆತ್ಮವಿಶ್ವಾಸ ಇರುವದು ಮುಖ್ಯ, ಮನಸ್ಸು ಚಂಚಲಗೊಳಿಸದೆ ಏಕಾಗ್ರತೆಯಿಂದ ಓದಿ ಮನನ ಮಾಡಿಕೊಳ್ಳಬೇಕು ಎಂದರು.
ಕಲಿಸುವ ಗುರುಗಳಿಗೆ, ಹೆತ್ತ ತಂದೆ-ತಾಯಿ, ಸಹೋದರ-ಸಹೋದರರೊಂದಿಗೆ, ಸಹಪಾಠಿಗಳೊಟ್ಟಿಗೆ ಕಷ್ಟದಲ್ಲಿರುವರಿಗೆ ಸಹಾಯ ಮಾಡುವ ಗುಣ ಬೆಳೆಸಿಕೊಳ್ಳಬೇಕು. ಪ್ರತಿಯೊಬ್ಬರು ಮಾನವೀಯ ಮೌಲ್ಯಗಳನ್ನು ಜೀವನದಲ್ಲಿ ಅಳವಡಿಸಿಕೊಳ್ಳಬೇಕು. ಆಗ ಸುಂದರ ಜೀವನ ನಿಮ್ಮದಾಗುತ್ತದೆ ಎಂದು ಹೇಳಿದರು.ಈ ಸಂದರ್ಭದಲ್ಲಿ ವಿಶೇಷ ಚೇತನ ಬಸವರಾಜ ಉಮರಾಣಿ ವಿದ್ಯಾರ್ಥಿಗಳೊಂದಿಗೆ ಸಂವಾದ ನಡೆಸಿ ಗಣಿತದ ದೊಡ್ಡ ಸಂಖ್ಯೆಗಳ ಸಂಕಲನ, ವ್ಯವಕಲನ ಮತ್ತು ಗುಣಾಕಾರ, ಭಾಗಾಕಾರ ಲೆಕ್ಕದ ಪ್ರಶ್ನೆಗಳನ್ನು ಕಿವಿಯಿಂದಲೇ ಆಲಿಸಿ ತಮ್ಮ ವಿಶೇಷ ಸ್ಮರಣ (ಜ್ಞಾಪಕ) ಶಕ್ತಿಯಿಂದ ತಕ್ಷಣವೇ ಉತ್ತರಿಸಿದ್ದು ವಿದ್ಯಾರ್ಥಿಗಳು ಸೇರಿದಂತೆ ಉಪನ್ಯಾಸಕರನ್ನು ನಿಬ್ಬೆರಗಾಗಿಸುವಂತೆ ಮಾಡಿತು.
ಒಮ್ಮೆ ಹೇಳಿದ ಮೊಬೈಲ್ ನಂಬರ ಮತ್ತು ಯಾವುದೇ ವರ್ಷದ ಹುಟ್ಟಿದ ದಿನಾಂಕ ಹೇಳಿದರೆ ತಟ್ಟನೆ ವಾರದ ದಿನವನ್ನು ಹೇಳುವ ಮೂಲಕ ಚಪ್ಪಾಳೆ ಗಿಟ್ಟಿಸಿಕೊಂಡರು. ಇದಕ್ಕೆಲ್ಲಾ ನನಗೆ "ವಾಕಿಂಗ್ ಎನ್ಸೈಕ್ಲೋಪೀಡಿಯಾ ", ಶಕುಂತಲಾ ದೇವಿ ಅವರೆ ಸ್ಫೂರ್ತಿ ಹೀಗಾಗಿ ಆದರ್ಶ ವ್ಯಕ್ತಿಗಳನ್ನು ಸ್ಪೂರ್ತಿಯಾಗಿಟ್ಟುಕೊಳ್ಳಬೇಕು ಎಂದು ವಿದ್ಯಾರ್ಥಿಗಳಿಗೆ ಸಲಹೆ ನೀಡಿದರು.ಪಾಚಾರ್ಯ ಜಿ.ಎಂ ಗಾಣಿಗೇರ, ಉಪಪ್ರಾಚಾರ್ಯ ಶಂಕರ ಲಮಾಣಿ, ಕಾಲೇಜು ಅಭಿವೃದ್ಧಿ ಸಮಿತಿಯ ಉಪಾಧ್ಯಕ್ಷ ಚಿದಂಬರ ದೇಸಾಯಿ, ಪ್ರಮುಖರಾದ ಯಮನಪ್ಪ ಜಂಜಿಗಡ್ಡಿ, ಮಾಳಪ್ಪ, ರಮೇಶ ಕೋಳುರ, ಉಪನ್ಯಾಸಕರಾದ ಎಸ್.ಬಿ. ಪಾಟೀಲ್, ಡಿ.ಎಲ್. ಕೊಡೇಕಲ್, ಬಿ. ಕಿರಣ, ಸುರೇಖಾ ಪಾಟೀಲ್, ನಿರ್ಮಲಾ, ಗದ್ದೆಮ್ಮ ಗುರಿಕಾರ ಸೇರಿದಂತೆ ವಿದ್ಯಾರ್ಥಿಗಳು ಇದ್ದರು.