ಉತ್ಪಾದನಾ ಕ್ಷೇತ್ರಕ್ಕೆ ಒತ್ತು ನೀಡಿ

| Published : Aug 11 2024, 01:39 AM IST

ಸಾರಾಂಶ

ಭಾರತೀಯರಷ್ಟು ಬುದ್ಧಿ ಶಕ್ತಿಯುಳ್ಳ ಜನರು ವಿಶ್ವದಲ್ಲಿಯೇ ಇಲ್ಲ. ಹೀಗಾಗಿ ಇದರ ಸದ್ಬಳಕೆಯೊಂದಿಗೆ ಭಾರತವನ್ನು ವಿಶ್ವದ ಚಾಂಪಿಯನ್ ಆಗಿಸುವ ನಿಟ್ಟಿನಲ್ಲಿ ಆಲೋಚಿಸಿ ಸೇವಾ ಹಾಗೂ ಉತ್ಪಾದನಾ ಕ್ಷೇತ್ರದ ದೇಶವನ್ನಾಗಿ ರೂಪಿಸಲು ನವೋದ್ಯಮಿಗಳು ಮುಂದಾಗಬೇಕಿದೆ.

ಹುಬ್ಬಳ್ಳಿ:

ಭಾರತೀಯರು ಕೇವಲ ವ್ಯಾಪಾರಿಗಳಾಗಿ ಉಳಿಯದೇ, ಉತ್ಪಾದನಾ ಕ್ಷೇತ್ರಕ್ಕೆ ಹೆಚ್ಚು ಒಲುವು ತೋರಿಸಬೇಕು ಎಂದು ಹಿಂದುಸ್ತಾನ ಕಂಪ್ಯೂಟರ್ಸ್ ಲಿ.(ಎಚ್‌ಸಿಎಲ್) ಸಹ ಸಂಸ್ಥಾಪಕ ಡಾ. ಅಜಯ ಚೌಧರಿ ಕರೆ ನೀಡಿದರು.

ಕರ್ನಾಟಕ ವಾಣಿಜ್ಯೋದ್ಯಮ ಸಂಸ್ಥೆ ವತಿಯಿಂದ ಖಾಸಗಿ ಹೊಟೇಲ್‌ನಲ್ಲಿ ಶನಿವಾರ ನಡೆದ ಸಂಸ್ಥೆಯ 96ನೇ ಸಂಸ್ಥಾಪಕರ ದಿನಾಚರಣೆ ಹಾಗೂ ವಾಣಿಜ್ಯ ರತ್ನ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಪಾಲ್ಗೊಂಡು ಮಾತನಾಡಿದರು.ಡ್ರೋನ್, ಅಂತರಿಕ್ಷ, ಇ-ವಾಹನ ಸೇರಿದಂತೆ ಹಲವಾರು ಕ್ಷೇತ್ರಗಳ ಬೆಳವಣಿಗೆಗೆ ಪೂರಕ ಅವಕಾಶಗಳು ಕರ್ನಾಟಕದಲ್ಲಿವೆ. ವಿಜ್ಞಾನ ಮತ್ತು ತಂತ್ರಜ್ಞಾನದಲ್ಲಿ ಮೊದಲಿಗರಾಗುವ ಆಶಯದೊಂದಿಗೆ ಮುನ್ನಡೆಯಬೇಕಿದೆ. ಬಂಡವಾಳ ಹೂಡಿಕೆಗೆ ಹೆಚ್ಚು ಅವಕಾಶವಿರುವ 11 ಹೊಸ ಕ್ಷೇತ್ರಗಳ ಮತ್ತು ಭವಿಷ್ಯದ ಭಾರತದ ಅಭಿವೃದ್ಧಿ ಪಥದ ಬಗ್ಗೆ ಮಿತ್ರರೊಂದಿಗೆ ಸಮಾಲೋಚನೆ ನಡೆಸಿ, ಕೇಂದ್ರ ಸರ್ಕಾರಕ್ಕೆ ಪ್ರಸ್ತಾವನೆ ಸಹ ಸಲ್ಲಿಸಲಾಗಿದೆ ಎಂದರು.

ಭಾರತೀಯರಷ್ಟು ಬುದ್ಧಿ ಶಕ್ತಿಯುಳ್ಳ ಜನರು ವಿಶ್ವದಲ್ಲಿಯೇ ಇಲ್ಲ. ಹೀಗಾಗಿ ಇದರ ಸದ್ಬಳಕೆಯೊಂದಿಗೆ ಭಾರತವನ್ನು ವಿಶ್ವದ ಚಾಂಪಿಯನ್ ಆಗಿಸುವ ನಿಟ್ಟಿನಲ್ಲಿ ಆಲೋಚಿಸಿ ಸೇವಾ ಹಾಗೂ ಉತ್ಪಾದನಾ ಕ್ಷೇತ್ರದ ದೇಶವನ್ನಾಗಿ ರೂಪಿಸಲು ನವೋದ್ಯಮಿಗಳು ಮುಂದಾಗಬೇಕಿದೆ ಎಂದು ಕರೆ ನೀಡಿದರು.

ಸಂಸ್ಥೆಯ ಮಾಜಿ ಅಧ್ಯಕ್ಷ ಶಂಕರಣ್ಣ ಮುನವಳ್ಳಿ ಮಾತನಾಡಿದರು. ಸಂಸ್ಥೆಯ ಸಂಸ್ಥಾಪಕ ಮುರುಗಯ್ಯಸ್ವಾಮಿ ಜಂಗೀನ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡಲಾಯಿತು. ಬಳಿಕ ವಾಣಿಜ್ಯ ರತ್ನ ಹಾಗೂ ನವ ಉದ್ಯಮಿ ಪ್ರಶಸ್ತಿ ನೀಡಿ ಗೌರವಿಸಲಾಯಿತು. ಸಂಸ್ಥೆಯ ಅಧ್ಯಕ್ಷ ಎಸ್.ಪಿ. ಸಂಶಿಮಠ, ಉಪಾಧ್ಯಕ್ಷ ಸಂದೀಪ ಬಿಡಸಾರಿಯ, ಸಂಸ್ಥಾಪಕರ ದಿನಾಚರಣೆ ಸಮಿತಿ ಅಧ್ಯಕ್ಷ ಶಶಿಧರ ಶೆಟ್ಟರ್, ಗೌರವ ಕಾರ್ಯದರ್ಶಿ ರವೀಂದ್ರ ಬಳಿಗಾರ, ವಿ.ಪಿ. ಲಿಂಗನಗೌಡರ, ಎಂ.ಸಿ. ಹಿರೇಮಠ, ರಮೇಶ ಪಾಟೀಲ, ವಸಂತ ಲದವಾ, ಮಹೇಂದ್ರ ಲದ್ದಡ, ವಿನಯ ಜವಳಿ, ಪ್ರವೀಣ ಅಗಡಿ, ವೀರೇಶ ಮೊಟಗಿ ಇದ್ದರು.ವಾಣಿಜ್ಯ ರತ್ನ, ನವ ಉದ್ಯಮಿ ಪ್ರಶಸ್ತಿ ಪ್ರದಾನ

ಹುಬ್ಬಳ್ಳಿಯ ಬಿಡಿಕೆ ವಾಲ್ವ್‌ಪ್ರೈ. ಲಿ. ನ ಬಿಮಲ್ ಮೆಹ್ತಾ, ವನೆಸನ್ಸ್ ಗ್ರುಪ್‌ನ ಜಯಂತಿಲಾಲ ಕಟಾರಿಯಾ, ಬ್ಯಾಡಗಿಯ ಮೆ. ಎಸ್‌ಸಿಎಂ ಚತ್ರದನ ಬಿ.ಎಂ. ಚತ್ರದ, ಮುದ್ದೆಬಿಹಾಳದ ಶ್ರೀ ಸಾಯಿನಾಥ ದಾಲ್ ಇಂಡಸ್ಟ್ರೀಸ್ ಶರಣಪ್ಪ ಸಜ್ಜನ, ಗೋಕಾಕನ ಮೆ. ನಿಬಾಜಿಯಾ ಕಾಟನ್ ಇಂಡಸ್ಟ್ರೀಸ್ ಸುನೀಲ ಶಾಹ, ಶಿವಮೊಗ್ಗದ ಎಸ್‌ಎನ್‌ಎಸ್ ಅಲಾಯ್ ಕಾಸ್ಟಿಂಗ್ಸ್ ಸಹನಾ ಇ.ವಿ. ಇವರಿಗೆ ವಾಣಿಜ್ಯ ರತ್ನ ಹಾಗೂ ಬಳ್ಳಾರಿಯ ಆದಿತ್ಯಾ ಟೆಕ್ಸ್‌ಟೈಲ್ಸ್ ಪಾರ್ಕ್ ಪ್ರೈ. ಲಿ. ಜಿ. ಮಲ್ಲಿಕಾರ್ಜುನ ಗೌಡ ಅವರಿಗೆ ನವ ಉದ್ಯಮಿ ಪ್ರಶಸ್ತಿ ನೀಡಿ ಗೌರವಿಸಲಾಯಿತು.