ಕೌಶಲ್ಯ, ತರಬೇತಿಯಿಂದ ಯುವಕರಿಗೆ ಉದ್ಯೋಗ: ಸಂಜಯ ಕೋರೆ

| Published : Jun 20 2024, 01:02 AM IST

ಕೌಶಲ್ಯ, ತರಬೇತಿಯಿಂದ ಯುವಕರಿಗೆ ಉದ್ಯೋಗ: ಸಂಜಯ ಕೋರೆ
Share this Article
  • FB
  • TW
  • Linkdin
  • Email

ಸಾರಾಂಶ

ಬ್ಯಾಡಗಿ ಪಟ್ಟಣದ ಸರ್ಕಾರಿ ಪದವಿ ಕಾಲೇಜಿನಲ್ಲಿ ಪ್ರಧಾನ ಮಂತ್ರಿ ವಿಶ್ವಕರ್ಮ ಯೋಜನೆಯಲ್ಲಿ ಕ್ಷೌರಿಕ ತರಬೇತಿ ಪಡೆದ ಫಲಾನುಭವಿಗಳಿಗೆ ಪ್ರಮಾಣ ಪತ್ರ ವಿತರಿಸಲಾಯಿತು.

ಕನ್ನಡಪ್ರಭ ವಾರ್ತೆ ಬ್ಯಾಡಗಿ

ದೇಶ್ಯಾದ್ಯಂತ ಯುವಕರಿಗೆ ಕೌಶಲ್ಯ ತರಬೇತಿ ನೀಡುವ ಮೂಲಕ ಯುವ ಸಮೂಹಕ್ಕೆ ಉದ್ಯೋಗ ನೀಡುವುದು, ತಲೆಮಾರಿನಿಂದ ಉಳಿಸಿಕೊಂಡ ಬಂದಿರುವ ವೃತ್ತಿಗಳಿಗೆ ಪ್ರೋತ್ಸಾಹಿಸುವ ಮೂಲಕ ಇನ್ನಷ್ಟು ಹೊಸ ರೂಪ ನೀಡುವ ಯತ್ನ ಯೋಜನೆ ಒಳಗೊಂಡಿದೆ ಎಂದು ಜಿಲ್ಲಾ ಕೌಶಲ್ಯಾಧಿಕಾರಿ ಸಂಜಯ ಕೋರೆ ತಿಳಿಸಿದರು.

ಪಟ್ಟಣದ ಸರ್ಕಾರಿ ಪದವಿ ಕಾಲೇಜಿನಲ್ಲಿ ಪ್ರಧಾನ ಮಂತ್ರಿ ವಿಶ್ವಕರ್ಮ ಯೋಜನೆಯಲ್ಲಿ ಕ್ಷೌರಿಕ ತರಬೇತಿ ಪಡೆದ ಫಲಾನುಭವಿಗಳಿಗೆ ಪ್ರಮಾಣ ಪತ್ರ ವಿತರಿಸಿ ಮಾತನಾಡಿದರು.ಪಿಎಂ ವಿಶ್ವಕರ್ಮ ಯೋಜನೆಯಲ್ಲಿ ಒಟ್ಟು 18 ಸಾಂಪ್ರದಾಯಿಕ ಕುಲ ಕಸುಬುಗಳನ್ನು ಸೇರ್ಪಡೆಗೊಳಿಸಿದೆ. ಮುಖ್ಯವಾಗಿ ಕಮ್ಮಾರ, ಕುಂಬಾರ, ಚಮ್ಮಾರ, ಅಕ್ಕಸಾಲಿಗ, ಬಟ್ಟೆ ಹೊಲಿಯುವವರು, ಹೂಗಾರರು, ಕ್ಷೌರಿಕರು ಸೇರಿದಂತೆ ಹತ್ತಾರು ಕಸುಬುಗಳಿಗೆ ಆಸಕ್ತರಿಗೆ ತರಬೇತಿ ನೀಡಲಾಗುತ್ತಿದೆ.

ಯುವಕ-ಯುವತಿಯರು ಹಾಗೂ ವೃತ್ತಿ ಆಸಕ್ತರಿಗೆ ಉದ್ಯೋಗ ತರಬೇತಿ, ಸಾಂಪ್ರದಾಯಿಕ ಕುಲ ಕಸುಬುಗಳಿಗೆ ಪ್ರೋತ್ಸಾಹಿಸುವ ಹಾಗೂ ಕಲಿಕೆಗೆ ಸೂಕ್ತ ಮಾರ್ಗದರ್ಶನ ನೀಡುವ ಮಹತ್ವಾಕಾಂಕ್ಷೆ ಯೋಜನೆ ಜಾರಿಗೊಂಡಿದೆ. ಯೋಜನೆ ತರಬೇತಿ ಪಡೆಯಲು ಜಿಲ್ಲೆಯ ವಿವಿಧ ಕೌಶಲ್ಯಾಸಕ್ತಿ ಹೊಂದಿದ ಅರ್ಜಿದಾರರು ಆನ್‌ಲೈನ್ ಮೂಲಕ ಅರ್ಜಿ ಸಲ್ಲಿಸಿರುವುದು ಯೋಜನೆಗೆ ಯಶಸ್ವಿಗೆ ಕಾರಣವಾಗಿದೆ. ಆಯ್ಕೆಯಾದ ಫಲಾನುಭವಿಗಳಿಗೆ ಒಂದು ವಾರಗಳ ಕಾಲ ಪ್ರತಿದಿನ 8 ತಾಸಿನಂತೆ ಒಟ್ಟು 40 ಗಂಟೆಗಳ ತರಬೇತಿ ನೀಡಲಾಗುವುದು. ಒಂದು ತರಬೇತಿ ಬ್ಯಾಚ್‌ನಲ್ಲಿ 10 ರಿಂದ 45 ಫಲಾನುಭವಿಗಳಿಗೆ ಅವಕಾಶವಿದ್ದು, ತರಬೇತಿ ಬಳಿಕ ಆಯಾ ವೃತ್ತಿಯ ಕಿಟ್ ವಿತರಣೆ ಜರುಗಲಿದೆ ಎಂದರು.

ಪ್ರಾಂಶುಪಾಲ ಡಾ. ಮಲ್ಲಿಕಾರ್ಜುನ ಕಡ್ಡಿಪುಡಿ ಮಾತನಾಡಿ, ಕೌಶಲ್ಯಾಧಾರಿತ ಶಿಕ್ಷಣ ಹಾಗೂ ಆಯಾ ವೃತ್ತಿಗಳಿಗೆ ತರಬೇತಿ ನೀಡುವುದರಿಂದ ಕಡಿಮೆ ಅವಧಿ ಹಾಗೂ ಅಲ್ಪ ಬಂಡವಾಳದಲ್ಲಿ ಉದ್ಯೋಗಗಳನ್ನು ಮುಂದುವರಿಸಿಕೊಂಡು ಹೋಗಲು ಅನುಕೂಲವಾಗಲಿದೆ. ಈ ನಿಟ್ಟಿನಲ್ಲಿ ಸರ್ಕಾರ ಸ್ವಯಂ ಉದ್ಯೋಗ ಹಾಗೂ ಸಣ್ಣಪುಟ್ಟ ಉದ್ಯೋಗಗಳಿಗೆ ಸಹಕಾರ ನೀಡುತ್ತಿದೆ. ಸರ್ಕಾರಿ ನೌಕರಿ ಗಿಟ್ಟಿಸಲು ತೀವ್ರ ಪೈಪೋಟಿಯಿದ್ದು, ಈ ಮಧ್ಯೆ ಬಹುತೇಕರು ಖಾಸಗಿ ಕೆಲಸದತ್ತ ಮುಖ ಮಾಡುತ್ತಿದ್ದಾರೆ. ದೇಶದಲ್ಲಿ ಎಲ್ಲರೂ ಒಂದಿಲ್ಲೊಂದು ಬಗೆಯ ಉದ್ಯೋಗ ಮಾಡುವುದರಿಂದ ಆರ್ಥಿಕ ಹಾಗೂ ಸಾಮಾಜಿಕವಾಗಿ ವ್ಯವಸ್ಥೆ ಅಚ್ಚುಕಟ್ಟಾಗಲಿದೆ ಎಂದರು.

ಈ ವೇಳೆ ರಾಜ್ಯ ಕರಕುಶಲ ಸಮಿತಿಗಳ ಒಕ್ಕೂಟಗಳ ಅಧ್ಯಕ್ಷ ಶಿವಾನಂದ ಹಡಪದ, ಸದಸ್ಯರಾದ ದುಂಡೆಪ್ಪ ಕಾಯಕದ, ಮಂಜುನಾಥ ಹಡಪದ, ಎಂ.ರೋಹಿಣಿ , ಗೀತಾ ಹಡಪದ, ಅಣ್ಣಪ್ಪ ಹಡಪದ, ನಾಗರಾಜ ಕಾಯಕದ ಇನ್ನಿತರರಿದ್ದರು.