ಜಿಲ್ಲೆಯ ಐದು ತಾಲೂಕುಗಳ 100 ಗ್ರಾಪಂ ವ್ಯಾಪ್ತಿಯಲ್ಲಿ ಉದ್ಯೋಗ ಸೃಷ್ಟಿಗೆ ಆದ್ಯತೆ ನೀಡಲಾಗಿದ್ದು, ಅ.15ರವರೆಗೆ ಬರೋಬ್ಬರಿ 11.03 ಲಕ್ಷ ಮಾನವ ದಿನ ಸೃಜಿಸಲಾಗಿದೆ
ಮಂಜುನಾಥ ಕೆ.ಎಂ ಬಳ್ಳಾರಿ
ಮಳೆ ಕೈಕೊಟ್ಟರೆ ಕೃಷಿಗೆ ಕುತ್ತು. ಕೃಷಿ ಕೈಕೊಟ್ಟರೆ ಕೂಲಿಗೆ ಕತ್ತರಿ. ಕೂಲಿಯಿಲ್ಲದಿದ್ದರೆ ಹೊಟ್ಟೆಪಾಡಿಗಾಗಿ ಊರು ಬಿಡುವುದು ಅನಿವಾರ್ಯ. ಇದು ಬಳ್ಳಾರಿ ಜಿಲ್ಲೆಯ ಗ್ರಾಮೀಣ ಭಾಗದ ಅನೇಕ ಕೃಷಿ ಕಾರ್ಮಿಕರ ಬದುಕಿನ ಬಹುದಿನದ ಸಂಕಟ. ಆದರೆ, ಈ ಬಾರಿ ಬರದ ಬೇಗೆಯಲ್ಲಿ ಬೆಂದಿರುವ ಗ್ರಾಮೀಣ ಕುಟುಂಬಗಳಿಗೆ ವಿಬಿ-ಜಿ ರಾಮ್ ಜಿ ಯೋಜನೆ ಆಸರೆಯಾಗಿ ನಿಂತಿದೆ.ಕೃಷಿ ಕೆಲಸಗಳಿಲ್ಲದೆ ಹೊಟ್ಟೆಪಾಡಿಗಾಗಿ ನಗರಗಳತ್ತ ಮುಖ ಮಾಡುವ ಗ್ರಾಮೀಣ ಜನರನ್ನು ತಮ್ಮೂರಿನಲ್ಲಿಯೇ ಉಳಿಸಿಕೊಳ್ಳಲು ಜಿಲ್ಲಾಡಳಿತ ಉದ್ಯೋಗ ಖಾತ್ರಿ ಕಾಮಗಾರಿಗಳಿಗೆ ವೇಗ ನೀಡಿದೆ. ಪರಿಣಾಮ, ಮಾನವ ದಿನಗಳ ಸೃಜನೆಯ ಶೇಕಡಾವಾರು ಸಾಧನೆಯಲ್ಲಿ ಬಳ್ಳಾರಿ ಜಿಲ್ಲೆ ರಾಜ್ಯದಲ್ಲೇ ಮೂರನೇ ಸ್ಥಾನ ಪಡೆದುಕೊಂಡಿದೆ.
ಜಿಲ್ಲೆಯ ಐದು ತಾಲೂಕುಗಳ 100 ಗ್ರಾಪಂ ವ್ಯಾಪ್ತಿಯಲ್ಲಿ ಉದ್ಯೋಗ ಸೃಷ್ಟಿಗೆ ಆದ್ಯತೆ ನೀಡಲಾಗಿದ್ದು, ಅ.15ರವರೆಗೆ ಬರೋಬ್ಬರಿ 11.03 ಲಕ್ಷ ಮಾನವ ದಿನ ಸೃಜಿಸಲಾಗಿದೆ. ಒಟ್ಟು 52,862 ಕುಟುಂಬಗಳಿಗೆ ಉದ್ಯೋಗ ಒದಗಿಸಲಾಗಿದೆ. ಬರ ಪರಿಸ್ಥಿತಿಯಲ್ಲಿ ಕೂಲಿಯನ್ನೇ ನಂಬಿ ಬದುಕುತ್ತಿರುವ ಕುಟುಂಬಗಳಿಗೆ ಈ ಯೋಜನೆ ಆರ್ಥಿಕ ಆಸರೆಯಾಗಿದೆ.ಗುಳೆ ತಪ್ಪಿಸಲು ಉದ್ಯೋಗದ ಮಂತ್ರ: ಬಳ್ಳಾರಿ ಜಿಲ್ಲೆಯ ಗ್ರಾಮೀಣ ಪ್ರದೇಶಗಳಲ್ಲಿ ಕೃಷಿಯೇ ಬಹುಪಾಲು ಕುಟುಂಬಗಳ ಜೀವನಾಧಾರ. ಮಳೆ ಕೊರತೆಯಾದಾಗ ಕೃಷಿ ಚಟುವಟಿಕೆ ಕುಂಠಿತಗೊಂಡು ಕೃಷಿ ಕಾರ್ಮಿಕರು ಕೆಲಸವಿಲ್ಲದೆ ಸಂಕಷ್ಟಕ್ಕೆ ಸಿಲುಕುತ್ತಾರೆ. ಇಂತಹ ಸಂದರ್ಭಗಳಲ್ಲಿ ಕುಟುಂಬ ಸಮೇತ ಬೆಂಗಳೂರು ಸೇರಿದಂತೆ ವಿವಿಧ ನಗರಗಳಿಗೆ ಉದ್ಯೋಗ ಅರಸಿ ಗುಳೆ ಹೋಗುವುದು ಸಾಮಾನ್ಯ. ಈ ಪರಿಸ್ಥಿತಿ ತಡೆಯಲು ಗ್ರಾಪಂಗಳ ಮೂಲಕ ಸ್ಥಳೀಯವಾಗಿಯೇ ಉದ್ಯೋಗ ಕಲ್ಪಿಸುವ ಪ್ರಯತ್ನ ನಡೆದಿದೆ. ಕೆರೆಗಳ ಹೂಳೆತ್ತುವುದು, ಕೃಷಿ ಹೊಂಡ ನಿರ್ಮಾಣ, ಚೆಕ್ ಡ್ಯಾಂ, ಜಲ ಸಂರಕ್ಷಣೆ ಹಾಗೂ ಗ್ರಾಮೀಣ ರಸ್ತೆ ಅಭಿವೃದ್ಧಿಯಂತಹ ಕಾಮಗಾರಿ ಕೈಗೆತ್ತಿಕೊಳ್ಳಲಾಗಿದೆ.
ಸಂಡೂರು ಮುಂಚೂಣಿ: ಜಿಲ್ಲೆಯ ಐದು ತಾಲೂಕುಗಳ ಪೈಕಿ ಉದ್ಯೋಗ ಖಾತ್ರಿ ಯೋಜನೆಯ ಸಾಧನೆಯಲ್ಲಿ ಸಂಡೂರು ತಾಲೂಕು ಮುಂಚೂಣಿಯಲ್ಲಿದೆ. ಸಿರುಗುಪ್ಪ ತಾಲೂಕಿನಲ್ಲಿ ಗರಿಷ್ಠ 13,941 ಕುಟುಂಬಗಳಿಗೆ ಉದ್ಯೋಗ ಒದಗಿಸಲಾಗಿದ್ದು, ಕುರುಗೋಡು ತಾಲೂಕಿನಲ್ಲಿ 6,863 ಕುಟುಂಬಗಳು ಯೋಜನೆಯ ಪ್ರಯೋಜನ ಪಡೆದಿವೆ. ವಿಶೇಷವೆಂದರೆ, ಜಿಲ್ಲೆಯಲ್ಲಿ ಉದ್ಯೋಗ ಪಡೆದವರ ಪೈಕಿ ಮಹಿಳೆಯರ ಪಾಲು ಶೇ.58.74ರಷ್ಟಿದೆ. ಸಂಡೂರು ತಾಲೂಕಿನಲ್ಲಿ ಶೇ.65.32ರಷ್ಟು ಮಹಿಳೆಯರು ಉದ್ಯೋಗ ಖಾತ್ರಿ ಕಾಮಗಾರಿಗಳಲ್ಲಿ ಪಾಲ್ಗೊಂಡಿದ್ದಾರೆ. ಕೃಷಿ ಕೆಲಸಗಳಿಲ್ಲದ ಸಂದರ್ಭದಲ್ಲಿ ಮನೆಯಲ್ಲಿಯೇ ಉಳಿಯಬೇಕಾಗಿದ್ದ ಮಹಿಳೆಯರು ಇದೀಗ ಸ್ಥಳೀಯವಾಗಿ ಕೂಲಿ ಕೆಲಸ ಪಡೆಯುತ್ತಿರುವುದು ಗ್ರಾಮೀಣ ಕುಟುಂಬಗಳ ಆದಾಯಕ್ಕೆ ನೆರವಾಗಿದೆ. ಮಹಿಳೆ ಮತ್ತು ಪುರುಷರಿಗೆ ಸಮಾನ ಕೂಲಿ ನಿಗದಿಪಡಿಸಿರುವುದು ಯೋಜನೆಯ ಮತ್ತೊಂದು ಪ್ರಮುಖ ಅಂಶ.ಯೋಜನೆಯ ಹೊಸ ನಿಯಮಾವಳಿಯಂತೆ ವಾರ್ಷಿಕ ಉದ್ಯೋಗದ ದಿನ 100ರಿಂದ 125ಕ್ಕೆ ಹೆಚ್ಚಿಸಲಾಗಿದೆ. ಇದರಿಂದ ಗ್ರಾಮೀಣ ಕುಟುಂಬಗಳಿಗೆ ಹೆಚ್ಚುವರಿ ಆದಾಯ ಗಳಿಸುವ ಅವಕಾಶ ಕಲ್ಪಿಸಲಾಗಿದೆ.
ಜಿಲ್ಲೆಯಲ್ಲಿ ಈವರೆಗೆ 28 ಕುಟುಂಬಗಳು 125 ದಿನಗಳ ಉದ್ಯೋಗ ಪೂರ್ಣಗೊಳಿಸಿವೆ. ಈ ಪೈಕಿ 26 ಕುಟುಂಬಗಳು ಸಂಡೂರು ತಾಲೂಕಿನವರಾಗಿದ್ದು, ಉಳಿದ ಎರಡು ಕುಟುಂಬಗಳು ಕುರುಗೋಡು ಹಾಗೂ ಸಿರುಗುಪ್ಪ ತಾಲೂಕುಗಳಿಗೆ ಸೇರಿವೆ. ಆದರೆ, ಒಟ್ಟು 52,862 ಕುಟುಂಬಗಳು ಉದ್ಯೋಗ ಪಡೆದಿರುವ ಜಿಲ್ಲೆಯಲ್ಲಿ ಕೇವಲ 28 ಕುಟುಂಬಗಳು ಮಾತ್ರ 125 ದಿನಗಳ ಕೆಲಸ ಪೂರ್ಣಗೊಳಿಸಿರುವುದು ಗಮನಾರ್ಹ. ಒಟ್ಟಿನಲ್ಲಿ, ಬರದ ಸಂಕಷ್ಟಕ್ಕೆ ಸಿಲುಕಿರುವ ಗ್ರಾಮೀಣ ಜನರಿಗೆ ಉದ್ಯೋಗ ಖಾತ್ರಿ ಯೋಜನೆ ತಕ್ಷಣದ ಆರ್ಥಿಕ ನೆರವು ಒದಗಿಸುತ್ತಿದೆ.