ಸಾರಾಂಶ
ಸಂಡೂರು: ತಾಲೂಕಿನ ತೋರಣಗಲ್ಲು ಗ್ರಾಪಂ ಸಭಾಂಗಣದಲ್ಲಿ ಗುರುವಾರ ಮಹಾತ್ಮ ಗಾಂಧಿ ರಾಷ್ಟ್ರೀಯ ಉದ್ಯೋಗ ಖಾತ್ರಿ ಯೋಜನೆ ಅಡಿಯಲ್ಲಿ ತೋರಣಗಲ್ಲು ಹೋಬಳಿ ಮಟ್ಟದ ವೈಯ್ಯಕ್ತಿಕ ಕಾಮಗಾರಿಗಳ ಆದೇಶ ಪತ್ರ ವಿತರಣಾ ಮೇಳ ಹಾಗೂ ೨೦೨೫-೨೬ನೇ ಸಾಲಿನ ವಾರ್ಷಿಕ ಕ್ರಿಯಾ ಯೋಜನೆ ತಯಾರಿಸಲು ಹಮ್ಮಿಕೊಂಡಿದ್ದ ಉದ್ಯೋಗ ಖಾತರಿ ನಡಿಗೆ ಸಬಲತೆಯಡಿಗೆ ಕಾರ್ಯಕ್ರಮಕ್ಕೆ ತಾಪಂ ಇಒ ಎಚ್.ಷಡಾಕ್ಷರಯ್ಯ ಚಾಲನೆ ನೀಡಿದರು.
ಕಾರ್ಯಕ್ರಮದಲ್ಲಿ ತೋರಣಗಲ್ಲು ಹೋಬಳಿಯ ತೋರಣಗಲ್ಲು, ಮೆಟ್ರಿಕಿ, ದರೋಜಿ ಮುಂತಾದ ಗ್ರಾಪಂ ವ್ಯಾಪ್ತಿಯ ಫಲಾನುಭವಿಗಳಿಗೆ ಕಾಮಗಾರಿ ಅನುಷ್ಠಾನಗೊಳಿಸಲು ಆದೇಶ ಪತ್ರ ನೀಡಲಾಯಿತು.ಆದೇಶ ಪತ್ರಗಳನ್ನು ವಿತರಿಸಿ ಮಾತನಾಡಿದ ತಾಪಂ ಇಒ, ಉದ್ಯೋಗ ಖಾತ್ರಿ ಯೋಜನೆ ಅಡಿಯಲ್ಲಿ ವೈಯಕ್ತಿಕ ಕಾಮಗಾರಿಗಳಾದ ದನದ ಕೊಟ್ಟಿಗೆ, ಕುರಿ ಕೊಟ್ಟಿಗೆ, ಬಚ್ಚಲಗುಂಡಿ, ಕೋಳಿ ಶೆಡ್, ಎರೆಹುಳ ಘಟಕ, ತೆರೆದ ಬಾವಿ, ಕೃಷಿ ಹೊಂಡ, ಬದು ನಿರ್ಮಾಣ, ಹಂದಿ ಕೊಟ್ಟಿಗೆ ನಿರ್ಮಾಣ, ವೈಯ್ಯಕ್ತಿಕ ಇಂಗು ಗುಂಡಿ, ಬೋರ್‌ವೆಲ್ ರಿಚಾರ್ಜ್, ಬದು ಅರಣ್ಯೀಕರಣ ಮುಂತಾದ ಕಾಮಗಾರಿಗಳನ್ನು ಕೈಗೊಳ್ಳಬಹುದಾಗಿದೆ. ಒಂದು ಕುಟುಂಬಕ್ಕೆ ಜೀವತಾವಧಿಯಲ್ಲಿ ಈ ಹಿಂದೆ ೨.೫೦ ಲಕ್ಷ ಇದ್ದುದನ್ನು ಪ್ರಸ್ತುತ ರೂ.೫ ಲಕ್ಷದಷ್ಟು ಮನರೇಗಾ ಯೋಜನೆ ಅಡಿ ಸಹಾಯ ಧನವನ್ನು ನೀಡಲಾಗುವುದು. ಹೆಚ್ಚುಹೆಚ್ಚು ನೀರು ಮತ್ತು ಮಣ್ಣಿನ ಸಂರಕ್ಷಣೆಯ ಕಾಮಗಾರಿಗಳನ್ನು ಅನುಷ್ಠಾನಗೊಳಿಸಬೇಕಿದೆ. ಈ ಯೋಜನೆಯನ್ನು ಜನತೆ ಸದುಪಯೋಗ ಪಡಿಸಿಕೊಳ್ಳಬೇಕು ಎಂದರು.
ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆಯ ಸಹಾಯಕ ನಿರ್ದೇಶಕ ರೇಣುಕಾಚಾರ್ಯ ಸ್ವಾಮಿ ಹಾಗೂ ಸಹಾಯಕ ತೋಟಗಾರಿಕೆ ಅಧಿಕಾರಿ ಬಿ.ಜಿ. ತಿಪ್ಪೇಸ್ವಾಮಿ ಉದ್ಯೋಗ ಖಾತ್ರಿ ಹಾಗೂ ತೋಟಗಾರಿಕೆ ಇಲಾಖೆಯಿಂದ ದೊರೆಯುವ ಸೌಲಭ್ಯಗಳ ಕುರಿತು ಮಾತನಾಡಿದರು.ಕಾರ್ಯಕ್ರಮದಲ್ಲಿ ಕೃಷಿ, ತೋಟಗಾರಿಕೆ, ಪಶು ಸಂಗೋಪನೆ ಇಲಾಖೆ ಅಧಿಕಾರಿಗಳು, ತೋರಣಗಲ್ಲು ಗ್ರಾಪಂ ಅಧ್ಯಕ್ಷ ಅಳ್ಳಾಪುರದ ವೀರೇಶಪ್ಪ, ಪಿಡಿಒ ಸಿದ್ದಲಿಂಗಸ್ವಾಮಿ ಸೇರಿದಂತೆ ತೋರಣಗಲ್ಲು ಹೋಬಳಿ ವ್ಯಾಪ್ತಿಯ ಎಲ್ಲ ಗ್ರಾಪಂ ಅಧ್ಯಕ್ಷ, ಉಪಾಧ್ಯಕ್ಷ, ಸದಸ್ಯರು, ವೈಯಕ್ತಿಕ ಫಲಾನುಭವಿಗಳು, ಪಿಡಿಒಗಳು, ಟಿಸಿ, ಟಿಐಇಸಿ, ಟಿಎಇ, ಬಿಎಫ್‌ಟಿ, ಡಿಇಒ, ಜಿಕೆಎಂಗಳು ಹಾಗೂ ಗ್ರಾಮ ಪಂಚಾಯ್ತಿ ಸಿಬ್ಬಂದಿ ಉಪಸ್ಥಿತರಿದ್ದರು.
ಸಂಡೂರು ತಾಲೂಕಿನ ತೋರಣಗಲ್ಲಿನ ಗ್ರಾಪಂನಲ್ಲಿ ನಡೆದ ಕಾರ್ಯಕ್ರಮದಲ್ಲಿ ತಾಪಂ ಇಒ ಷಡಕ್ಷರಯ್ಯ ಉದ್ಯೋಗ ಖಾತ್ರಿ ಯೋಜನೆ ಅಡಿಯಲ್ಲಿ ಫಲಾನುಭವಿಗಳಿಗೆ ವೈಯಕ್ತಿಕ ಕಾಮಗಾರಿಗಳ ಆದೇಶ ಪತ್ರ ವಿತರಿಸಿದರು.