ಶಾರದಾ ಪೂಜೆ ಮತ್ತು ಶಾಲಾ ವಾರ್ಷಿ ಕೋತ್ಸವ
ಕನ್ನಡಪ್ರಭ ವಾರ್ತೆ ಚಿಕ್ಕಮಗಳೂರು,ಮಕ್ಕಳಲ್ಲಿರುವ ಕಲಾತ್ಮಕ ಚಟುವಟಿಕೆ ಹೊರಸೂಸಲು ವಾರ್ಷಿಕೋತ್ಸವ ಮುಖ್ಯ ವೇದಿಕೆಯಾಗಿದೆ. ಬಾಲ್ಯದಿಂದಲೇ ಕಲೆ, ಸಂಗೀತಾಸಕ್ತಿಗೆ ಶಿಕ್ಷಕರು ಮತ್ತು ಪಾಲಕರು ಹೆಚ್ಚು ಗಮನಹರಿಸುವ ಮೂಲಕ ಪ್ರತಿಭೆಗೆ ಅವಕಾಶ ಕಲ್ಪಿಸಿಕೊಡಬೇಕು ಜಿಲ್ಲಾ ಒಕ್ಕಲಿಗರ ಸಂಘದ ಉಪಾಧ್ಯಕ್ಷ ಟಿ.ಡಿ.ಮಲ್ಲೇಶ್ ಹೇಳಿದರು.
ತಾಲೂಕಿನ ಇಳೆಹೊಳೆಯ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಯಲ್ಲಿ ನಡೆದ ಶಾರದಾ ಪೂಜೆ ಮತ್ತು ಶಾಲಾ ವಾರ್ಷಿ ಕೋತ್ಸವವನ್ನು ಗುರುವಾರ ಉದ್ಘಾಟಿಸಿ ಮಾತನಾಡಿದರು. ಕಿರಿಯ ಶಾಲಾ ಮಕ್ಕಳಲ್ಲಿ ಇಂದಿಗೂ ಮುಗ್ದತೆ ಕಾಣಸಿಗಲಿದೆ. ಅರಿವಿಲ್ಲದೇ ಅನೇಕ ಕಲೆಗಳು ಬಾಲ್ಯ ದಿಂದಲೇ ಹುದುಗಿರುತ್ತದೆ. ಆ ಕಲೆಯನ್ನು ಆಸಕ್ತಿಗನುಸಾರ ಪ್ರೋತ್ಸಾಹಿಸಬೇಕು. ಪಠ್ಯ ಚಟುವಟಿಕೆ ಜೊತೆಗೆ ಕಲೆ, ಕ್ರೀಡಾಸಕ್ತಿ ತುಂಬಿದರೆ ದೇಶ ಹಾಗೂ ನಾಡಿಗೆ ಕೀರ್ತಿವಂತರಾಗುತ್ತಾರೆ ಎಂದರು.ಜಿಲ್ಲಾ ಸ್ತ್ರಿಶಕ್ತಿ ಒಕ್ಕೂಟದ ಅಧ್ಯಕ್ಷೆ ಬಿ.ಎನ್.ದಿವ್ಯಾ ಮಾತನಾಡಿ. ಪ್ರತಿ ಮಕ್ಕಳು ಶ್ರೀ ಶಾರದದೇವಿ ಆರಾಧನೆ ಜೊತೆಗೆ ಕಲಿಕೆಯತ್ತ ಆಸಕ್ತಿ ಹೊಂದಿ ಆತ್ಮವಿಶ್ವಾಸದಿಂದ ಪರೀಕ್ಷೆ ಎದುರಿಸಿದರೆ ಗೆಲುವು ಶತಸಿದ್ಧ ಎಂದು ತಿಳಿಸಿದರು.
ಶಾಲಾಭಿವೃದ್ದಿ ಸಮಿತಿ ಅಧ್ಯಕ್ಷ ಕಲ್ಲೇಶ್ ಮಾತನಾಡಿ, 3-4 ದಶಕಗಳ ಹಿಂದೆ ಮಕ್ಕಳಿಗೆ ಕಲೆ, ಸಾಂಸ್ಕೃತಿಕ ಚಟುವಟಿಕೆ ಅನಾವರಣಗೊಳಿಸಲು ಸಾಕಷ್ಟು ಅವಕಾಶವಿರಲಿಲ್ಲ. ಇದೀಗ ದಾನಿಗಳು, ಹಳೇ ವಿದ್ಯಾರ್ಥಿಗಳು, ಪೋಷಕರು ಹಾಗೂ ಸರ್ಕಾರಗಳ ನೆರವಿನಿಂದ ಸವಲತ್ತು ಪೂರೈಸುವ ಮೂಲಕ ಮಕ್ಕಳ ಕನಸು ಈಡೇರಿಸಲಾಗುತ್ತಿದೆ ಎಂದರು.
ಕಾರ್ಯಕ್ರಮದಲ್ಲಿ ಅಕ್ಷರ ದಾಸೋಹ ಸಹಾಯಕ ನಿರ್ದೇಶಕ ನೀಲಕಂಠಪ್ಪ, ತಳಿಹಳ್ಳ ಗ್ರಾಪಂ. ಮಾಜಿ ಉಪಾಧ್ಯಕ್ಷ ಅರುಣ್ ಕುಮಾರ್, ನೆನಪಿನಂಗಳ ವಿದ್ಯಾರ್ಥಿ ಸಂಘದ ಅಧ್ಯಕ್ಷ ಕೃಷ್ಣ, ಶೌರ್ಯ ವಿಪತ್ತು ನಿರ್ವಹಣೆ ಘಟಕದ ಸದಸ್ಯರಾದ ದತ್ತೇಗೌಡ, ಕೌಶಲ್ಯ, ಚೈತ್ರಾ, ಶಶಿ ಉಪಸ್ಥಿತರಿದ್ದರು.