ಸಾರಾಂಶ
ಹಾನಗಲ್ಲ: ವಿದೇಶಿ ವಸ್ತುಗಳ ಕೊಳ್ಳುಬಾಕರಾಗುತ್ತಿರುವ ಭಾರತೀಯರಾದ ನಾವು ಸ್ವದೇಶದ ವಸ್ತು ವಿಷಯದ ಶಕ್ತಿಯನ್ನರಿಯದೇ ಇರುವುದು ವಿಷಾದದ ಸಂಗತಿ ಎಂದು ಸಾಹಿತಿ ದೀಪಾ ಗೋನಾಳ ಖೇದ ವ್ಯಕ್ತಪಡಿಸಿದರು.
ಹಾನಗಲ್ಲಿನ ನಾಡಹಬ್ಬ ಕಾರ್ಯಕ್ರಮದ ಶ್ರೀಮತಿ ಪ್ರೇಮಾಬಾಯಿ ಬಳ್ಳಾರಿ ವೇದಿಯಲ್ಲಿ ಮಹಿಳಾ ಗೋಷ್ಠಿಯ ಅಧ್ಯಕ್ಷತೆವಹಿಸಿ ಮಾತನಾಡಿದ ಅವರು, ಸ್ವದೇಶಿ ಕೇವಲ ಮಾತಾಗದೇ ಕೃತಿಯಲ್ಲಿ ಅನುಸರಿಸಬೇಕು. ಸ್ವದೇಶಿ ಉದ್ಯಮ ಪ್ರೋತ್ಸಾಹಿಸುವುದು ಅತ್ಯಗತ್ಯ. ಸ್ವದೇಶಿ ಪ್ರೀತಿ ಕೇವಲ ಪುಸ್ತಕಕ್ಕೆ ಸೀಮಿತವಾಗುವುದು ಬೇಡ. ನಮ್ಮ ಸಂಸ್ಕೃತಿ ಪರಂಪರೆಯ ಓದು, ಅರಿವು, ಪ್ರೀತಿ ಅತ್ಯಂತ ಆವಶ್ಯಕ. ಪುಸ್ತಕ ಪ್ರೀತಿಯನ್ನು ಬೆಳೆಸಿಕೊಳ್ಳೋಣ ಎಂದರು.ಸ್ವದೇಶಿ ಚಿಂತನೆಯ ಅವಶ್ಯಕತೆ ಇಂದು ಎಂಬ ವಿಷಯದ ಕುರಿತು ಮಾತನಾಡಿದ ವಕೀಲೆ ವೀಣಾ ಬ್ಯಾತನಾಳ, ಬ್ರಿಟಿಷ್ ಆಳ್ವಿಕೆಯ ದಟ್ಟ ಛಾಯೆ ಇನ್ನೂ ನಮ್ಮಲ್ಲಿ ಉಳಿದಿರುವುದೇ ವಿದೇಶಿ ಪ್ರೀತಿಗೆ ಕಾರಣವಾಗಿದೆ. ಪರಕೀಯರು ಬಳಸದೇ ತಿರಸ್ಕರಿಸಿದ ವಸ್ತುಗಳನ್ನು ನಾವು ಬಳಸುತ್ತಿದ್ದೇವೆ. ಅಸಭ್ಯ ಆಧುನಿಕತೆಗೆ ಮಾರು ಹೋಗುತ್ತಿದ್ದೇವೆ. ನಮ್ಮ ಆಯುರ್ವೇದ ಆಹಾರ ಪದ್ಧತಿಗಳು ನಮ್ಮ ನಿತ್ಯ ಬದುಕಿನ ಅನುಸರಣೆಯಾಗಬೇಕಾಗಿದೆ. ಪರಾವಲಂಬಿಗಳಾಗುವುದು ಬೇಡ. ಸ್ವದೇಶಿ ಸ್ವಾವಲಂಬಿ ಜೀವನದ ಮೂಲಕ ನಾವು ನಮ್ಮ ದೇಶವನ್ನು ಬಲಿಷ್ಠ ಶಕ್ತಿಯುತ ದೇಶವನ್ನಾಗಿಸೋಣ ಎಂದರು.
ಮನುಕುಲಕ್ಕೆ ನವರಾತ್ರಿಯ ಕೊಡುಗೆ ಕುರಿತು ಮಾತನಾಡಿದ ಲೇಖಕಿ ಸುರೇಖಾ ಕುಲಕರ್ಣಿ, ಹಿಂದೂ ಧರ್ಮದ ಎಲ್ಲ ಆಚರಣೆಗಳಲ್ಲಿನ ವೈಜ್ಞಾನಿಕತೆ, ಜೀವನ ದರ್ಶನದ ಸತ್ಯಾಸತ್ಯತೆಗಳನ್ನು ಅರಿಯಬೇಕಾಗಿದೆ. ಹಬ್ಬಗಳು ಕೇವಲ ಆಚರಣೆಗಳಲ್ಲ. ಸಂಸ್ಕಾರದ ಸೂತ್ರಗಳು. ಅಜ್ಞಾನದಿಂದ ಜ್ಞಾನದೆಡೆಗೆ ಕೊಂಡೊಯ್ಯುವ ದಿವ್ಯ ಸಂಕಲ್ಪಗಳು. ದಾನ ಧರ್ಮಾಚರಣೆಯ ಅರಿವು ಮೂಡಿಸುವ ಸತ್ಯ ಸಂದೇಶಗಳು. ನವರಾತ್ರಿ ನಮ್ಮ ಬದುಕಿನ ಸೂತ್ರ ಸಂದೇಶಗಳು ಎಂದರು.ಕೆ.ಎಲ್. ದೇಶಪಾಂಡೆ, ಎ.ಎಸ್. ಬಳ್ಳಾರಿ, ಸಾಹಿತಿ ಮಾರುತಿ ಶಿಡ್ಲಾಪುರ, ವಕೀಲ ಎಸ್.ಎಂ. ಕೋತಂಬರಿ, ಡಿ.ಜೆ. ಕುಲಕರ್ಣಿ, ಎ.ಆರ್. ಪ್ರಾಣೇಶರಾವ್, ಶಾಂತಾ ಪ್ರಾಣೇಶರಾವ್, ಶಿವಗಂಗಕ್ಕ ಪಟ್ಟಣದ, ಗಿರೀಶ ದೇಶಪಾಂಡೆ, ಜ್ಯೋತಿ ಬೆಲ್ಲದ ಪಾಲ್ಗೊಂಡಿದ್ದರು.
ಕಮಲಾಕ್ಷಿ ಕೊಂಡೋಜಿ ಪ್ರಾರ್ಥನೆ ಹಾಡಿದರು. ರೇಖಾ ಶೆಟ್ಟರ ಸ್ವಾಗತಿಸಿದರು. ಸುನೀತಾ ಉಪ್ಪಿನ ಕಾರ್ಯಕ್ರಮ ನಿರೂಪಿಸಿದರು. ರೂಪಶ್ರೀ ಗೌಳಿ ವಂದಿಸಿದರು.