ಮಕ್ಕಳ ಪ್ರತಿಭೆಗೆ ಪ್ರೋತ್ಸಾಹ ಅವಶ್ಯ: ಎನ್.ರವಿಕುಮಾರ

| Published : Nov 18 2025, 12:30 AM IST

ಸಾರಾಂಶ

ಮಕ್ಕಳ ಪ್ರತಿಭೆ ಅನಾವರಣಕ್ಕೆ ಸಮಾಜ ಅಗತ್ಯ ಪ್ರೋತ್ಸಾಹ ನೀಡಬೇಕು. ಇದರಿಂದ ಮಕ್ಕಳಿಗಷ್ಟೇ ಅಲ್ಲ, ಸಮಾಜಕ್ಕೂ ಒಳ್ಳೆಯದಾಗುತ್ತದೆ ಎಂದು ಕರ್ನಾಟಕ ವಿಧಾನ ಪರಿಷತ್ತಿನ ಸಚೇತಕ ಎನ್. ರವಿಕುಮಾರ ಹೇಳಿದ್ದಾರೆ.

- ಶ್ರೀ ಪಾಂಡುರಂಗ ವಿಠ್ಠಲ ರುಕ್ಮಿಣಿ ದಿಂಡಿ ಮಹೋತ್ಸವ: ಪುರಸ್ಕಾರ, ಸನ್ಮಾನ

- - -

ಕನ್ನಡಪ್ರಭ ವಾರ್ತೆ ದಾವಣಗೆರೆ

ಮಕ್ಕಳ ಪ್ರತಿಭೆ ಅನಾವರಣಕ್ಕೆ ಸಮಾಜ ಅಗತ್ಯ ಪ್ರೋತ್ಸಾಹ ನೀಡಬೇಕು. ಇದರಿಂದ ಮಕ್ಕಳಿಗಷ್ಟೇ ಅಲ್ಲ, ಸಮಾಜಕ್ಕೂ ಒಳ್ಳೆಯದಾಗುತ್ತದೆ ಎಂದು ಕರ್ನಾಟಕ ವಿಧಾನ ಪರಿಷತ್ತಿನ ಸಚೇತಕ ಎನ್. ರವಿಕುಮಾರ ಹೇಳಿದರು.

ನಗರದಲ್ಲಿ ಶನಿವಾರ ದೊಡ್ಡಪೇಟೆಯ ಶ್ರೀ ನಾಮದೇವ ಭಜನಾ ಮಂದಿರದಲ್ಲಿ ನಾಮದೇವ ಸಿಂಪಿ ಸಮಾಜ ವತಿಯಿಂದ 100ನೇ ಶ್ರೀ ಪಾಂಡುರಂಗ ವಿಠ್ಠಲ ರುಕ್ಮಿಣಿ ದಿಂಡಿ ಮಹೋತ್ಸವ ಅಂಗವಾಗಿ ಏರ್ಪಡಿಸಿದ್ದ ಪ್ರತಿಭಾ ಪುರಸ್ಕಾರ ಹಾಗೂ ಸನ್ಮಾನ ಸಮಾರಂಭದಲ್ಲಿ ಮುಖ್ಯ ಅತಿಥಿಗಳಾಗಿ ಪಾಲ್ಗೊಂಡು, ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.

ಪ್ರತಿಭೆ ಇಲ್ಲದಿದವರ ಬದುಕು ಪ್ರಾಣಿಗಳಂತಾಗುತ್ತದೆ. ಮಕ್ಕಳು ಪ್ರತಿಭಾವಂತರಾಗಿ ಸುಸಂಸ್ಕೃತ ಹಾಗೂ ಬಲಿಷ್ಠ ಸಮಾಜ ನಿರ್ಮಾಣಕ್ಕೆ ಕಾರಣರಾಗಬೇಕು. ನಾಮದೇವ ಸಿಂಪಿ ಸಮಾಜ ಸಂಖ್ಯಾತ್ಮಕವಾಗಿ ಸಣ್ಣದಾದರೂ ಗುಣಾತ್ಮಕವಾಗಿ ದೊಡ್ಡದು ಎಂದರು.

ಹಿರಿಯ ಪತ್ರಕರ್ತ ಡಾ. ಎಚ್.ಬಿ. ಮಂಜುನಾಥ ಮಾತನಾಡಿ, ಶಾಲಾ ಶಿಕ್ಷಣವು ವಾರ್ಷಿಕ ಪರೀಕ್ಷೆ ಎದುರಿಸಲು ಅವಶ್ಯವಾದರೆ, ಜೀವನ ಶಿಕ್ಷಣವು ಬದುಕು ಎದುರಿಸಲು ಅವಶ್ಯವಾಗಿದೆ. ಇದನ್ನು ಮನೆಯಲ್ಲಿನ ಹಿರಿಯ ಸದಸ್ಯರು, ಮುಖ್ಯವಾಗಿ ತಾಯಂದಿರು ಮಕ್ಕಳಿಗೆ ನೀತಿ ಪಾಠವಾಗಿ ಕಥಾ ರೂಪದಲ್ಲಿ ಹೇಳಿಕೊಡಬೇಕು. ಸಿಂಪಿ ಸಮಾಜದವರ ಮೂಲ ಕಸುಬಾದ ಬಟ್ಟೆ ಹೊಲಿಯುವಿಕೆಯ ಹಿಂದಿರುವ ಆಧ್ಯಾತ್ಮಿಕ ಸಂದೇಶವನ್ನು ಸ್ವಾರಸ್ಯಕರವಾಗಿ ಬಿಂಬಿಸುತ್ತಾ ಸಂತ ನಾಮದೇವ ಮಹಾರಾಜರ ಬದುಕು ಹಾಗೂ ಅವರ ಅಭಂಗಗಳಲ್ಲಿನ ಗೂಡಾರ್ಥಗಳ ಬಗ್ಗೆಯೂ ವಿವರಿಸಿದರು.

ಸಮಾಜದ ಗೌರವಾಧ್ಯಕ್ಷ ಜ್ಞಾನದೇವ ಬೊಂಗಾಳೆ ಅಧ್ಯಕ್ಷತೆ ಕಾರ್ಯಕ್ರಮದಲ್ಲಿ ಹಿರಿಯರಾದ ಕೆ.ಬಿ. ಶಂಕರನಾರಾಯಣ, ಬೆಂಗಳೂರು ನಾಮದೇವ ಸಿಂಪಿ ಸಮಾಜದ ಅಧ್ಯಕ್ಷ ಸತೀಶ್ ಕುಮಾರ್ ಎಂ.ಧಾವಸ್ಕರ್, ಶಿವಶಂಕರ, ಅಶೋಕ ಮಾಳೋದೆ, ಮನೋಹರ ವಿ.ಬೊಂಗಾಳೆ, ಸಮಾಜದ ಅಧ್ಯಕ್ಷ ಎಂ.ಎ.ವಿಠ್ಠಲ್, ಸಹ ಕಾರ್ಯದರ್ಶಿ ವಿಠ್ಠಲ ರಾಕುಂಡೆ, ಕೆ.ಜಿ.ಯಲ್ಲಪ್ಪ, ರಾಘವೇಂದ್ರ, ಮಣಿಕಂಠ ಪಿಸೆ, ಪಾಂಡುರಂಗ, ಮಂಜುನಾಥ, ಪರಶುರಾಮ ಇತರರು ಇದ್ದರು.

- - - -17ಕೆಡಿವಿಜಿ33.ಜೆಪಿಜಿ:

ದಾವಣಗೆರೆಯಲ್ಲಿ ಶ್ರೀ ಪಾಂಡುರಂಗ ವಿಠ್ಠಲ ರುಕ್ಮಿಣಿ ದಿಂಡಿ ಮಹೋತ್ಸವ ಅಂಗವಾಗಿ ಏರ್ಪಡಿಸಿದ್ದ ಪ್ರತಿಭಾ ಪುರಸ್ಕಾರ ಹಾಗೂ ಸನ್ಮಾನ ಸಮಾರಂಭವನ್ನು ಎನ್.ರವಿಕುಮಾರ ಉದ್ಘಾಟಿಸಿದರು.