ಸಾರಾಂಶ
ವಿಚಾರಣೆ ನಡೆಸಿದ ಹೈಕೋರ್ಟ್ ಖಾಸಗಿಯವರ ಸ್ವಾಧೀನವಿರುವ ಭೂಮಿಯನ್ನು ಗ್ರಾಮ ಪಂಚಾಯಿತಿ ಬಿಟ್ಟುಕೊಡುವಂತೆ ಆದೇಶಿಸಿತ್ತು.
ಕನ್ನಡಪ್ರಭ ವಾರ್ತೆ ಉಪ್ಪಿನಂಗಡಿ
ಅತಿಕ್ರಮಣವಾಗಿದ್ದ ಗ್ರಾಮ ಪಂಚಾಯಿತಿ ಅಧೀನಕ್ಕೆ ಸೇರಿದ ನಿವೇಶನವನ್ನು ಬೆಳ್ತಂಗಡಿ ತಹಸೀಲ್ದಾರ್ ನೇತೃತ್ವದಲ್ಲಿ ಭೂಮಾಪಕರಿಂದ ಅಳತೆ ಕಾರ್ಯ ನಡೆಸಿ ಪಂಚಾಯಿತಿ ಸ್ವಾಧೀನಕ್ಕೆ ಒದಗಿಸಿದ ಪ್ರಕ್ರಿಯೆ ತಣ್ಣೀರುಪಂತ ಗ್ರಾಮದಲ್ಲಿ ನಡೆದಿದೆ.ಕಳೆದ ಆರು ವರ್ಷಗಳ ಹಿಂದೆ ಗ್ರಾಮದ ಕಲ್ಲೇರಿ ಪೇಟೆಯ ಹೃದಯ ಭಾಗದಲ್ಲಿ ಗ್ರಾಮಾಂತರ ಪ್ರದೇಶದ ರೈತಾಪಿ ವರ್ಗದ ಜನರಿಗಾಗಿ ಕೃಷಿ ಮಾರುಕಟ್ಟೆಗೆಂದು ೪೮ ಸೆಂಟ್ಸ್ ಸರ್ಕಾರಿ ಭೂಮಿಯನ್ನು ಕಾಯ್ದಿರಿಸಲಾಗಿತ್ತು. ಆದರೆ ಖಾಸಗಿಯವರ ಅತಿಕ್ರಮಣದಿಂದ ಗ್ರಾಮ ಪಂಚಾಯಿತಿ ಆಡಳಿತಕ್ಕೆ ಕಗ್ಗಂಟಾಗಿ ಭೂ ಸ್ವಾಧೀನಕ್ಕಾಗಿ ಗ್ರಾಮ ಪಂಚಾಯಿತಿ ಹೈಕೋರ್ಟ್ ಮೊರೆ ಹೋಗಿತ್ತು. ವಿಚಾರಣೆ ನಡೆಸಿದ ಹೈಕೋರ್ಟ್ ಖಾಸಗಿಯವರ ಸ್ವಾಧೀನವಿರುವ ಭೂಮಿಯನ್ನು ಗ್ರಾಮ ಪಂಚಾಯಿತಿ ಬಿಟ್ಟುಕೊಡುವಂತೆ ಆದೇಶಿಸಿತ್ತು.
ಅದರಂತೆ ಬೆಳ್ತಂಗಡಿ ತಾಲೂಕು ದಂಢಾಧಿಕಾರಿ ಪೃಥ್ವಿ ಸಾನಿಕಂ ಅವರ ಉಪಸ್ಥಿತಿಯಲ್ಲಿ ಭೂಮಾಪಕರು ಅಳತೆ ಕಾರ್ಯ ನಡೆಸಿದಾಗ ಒಂದಡೆ ಅತಿಕ್ರಮಿಸಿದ ಜಾಗದಲ್ಲಿ ೨೦ ಅಡಕೆ ಸಸಿ ನೆಡಲಾದ ಕೃಷಿ ಭೂಮಿ ಹಾಗೂ ಇನ್ನೊಂದಡೆ ಖಾಸಗಿಯವರ ಸ್ವಾಧೀನವಿದ್ದ ಆರು ಅಂಗಡಿ ಕೋಣೆಗಳನ್ನು ಒಳಗೊಂಡ ವಾಣಿಜ್ಯ ಕಟ್ಟಡ ಸಹಿತ ಎಲ್ಲ ೪೮ ಸೆಂಟ್ಸ್ಸ್ ಭೂಮಿಯನ್ನು ಒತ್ತುವರಿಯಿಂದ ತೆರವು ಮಾಡಿ ಗ್ರಾಮ ಪಂಚಾಯಿತಿ ಸ್ವಾಧೀನಕ್ಕೆ ಒಳಪಡಿಸಲಾಯಿತು. ಈ ಸಂರ್ಭದಲ್ಲಿ ಗ್ರಾಮ ಪಂಚಾಯಿತಿ ಅಧ್ಯಕ್ಷೆ ಹೇಮಾವತಿ, ಉಪಾಧ್ಯಕ್ಷೆ ಪ್ರಿಯಾ, ಸದಸ್ಯರಾದ ಜಯವಿಕ್ರಮ, ಸದಾನಂದ ಶೆಟ್ಟಿ ಮಡಪ್ಪಾಡಿ, ಡಿ.ಕೆ ಅಯೂಬ್, ಲೀಲಾವತಿ, ಸಾಮ್ರಾಟ್, ಮಾಜಿ ಗ್ರಾಪಂ ಸದಸ್ಯ ಕೆ.ಎಸ್, ಅಬ್ದುಲ್ಲಾ, ಕಂದಾಯ ನಿರೀಕ್ಷಕರಾದ ಪಾವಡಪ್ಪ ದೊಡ್ಡಮನೆ. ಪ್ರಭಾರ ಪಿಡಿಒ ಶ್ರವಣ್‌ಕುಮಾರ್, ಕಾರ್ಯದರ್ಶಿ ಆನಂದ ಉಪಸ್ಥಿತರಿದ್ದರು. ಉಪ್ಪಿನಂಗಡಿ ಪೊಲೀಸರು ಸೂಕ್ತ ಬಂದೋಬಸ್ತ್ ಕಲ್ಪಿಸಿದ್ದರು.