ಬಳ್ಳಾರಿ ನಗರದಲ್ಲಿ ಸರ್ಕಾರಿ ಜಾಗ ಒತ್ತುವರಿ ತೆರವು ಕಾರ್ಯಾಚರಣೆಗೆ ಚುರುಕು ನೀಡಿರುವ ಜಿಲ್ಲಾಡಳಿತ, ಇದೀಗ ಕಾರ್ಯಾಚರಣೆಯನ್ನು ತಾಲೂಕು ಕೇಂದ್ರಗಳಿಗೂ ವಿಸ್ತರಿಸಲು ನಿರ್ಧರಿಸಿದೆ.
ಮಂಜುನಾಥ ಕೆ.ಎಂ.
ಬಳ್ಳಾರಿ: ನಗರದಲ್ಲಿ ಸರ್ಕಾರಿ ಜಾಗ ಒತ್ತುವರಿ ತೆರವು ಕಾರ್ಯಾಚರಣೆಗೆ ಚುರುಕು ನೀಡಿರುವ ಜಿಲ್ಲಾಡಳಿತ, ಇದೀಗ ಕಾರ್ಯಾಚರಣೆಯನ್ನು ತಾಲೂಕು ಕೇಂದ್ರಗಳಿಗೂ ವಿಸ್ತರಿಸಲು ನಿರ್ಧರಿಸಿದೆ.ರಾಜಕೀಯ ಹಾಗೂ ವಿವಿಧ ಪ್ರಭಾವ ಬಳಸಿ ಬಳ್ಳಾರಿ ನಗರದಲ್ಲಿ ಒತ್ತುವರಿ ಮಾಡಿಕೊಂಡಿದ್ದ ಸರ್ಕಾರಿ ಜಾಗವನ್ನು ತೆರವುಗೊಳಿಸಿದ ಕಂದಾಯ ಅಧಿಕಾರಿಗಳು, ನಗರದಲ್ಲಿ ಈಗಾಗಲೇ ಸುಮಾರು ₹500 ಕೋಟಿ ಮೌಲ್ಯದ 126 ಎಕರೆ ಜಾಗವನ್ನು ಒತ್ತುವರಿದಾರರಿಂದ ವಶಪಡಿಸಿಕೊಂಡಿದ್ದಾರೆ.
ಸರ್ಕಾರಿ ಆಸ್ತಿಯ ರಕ್ಷಣೆಗೆ ಕಠಿಣ ನಿಲುವು ತಳೆದಿರುವ ಜಿಲ್ಲಾಧಿಕಾರಿ ನಾಗೇಂದ್ರ ಪ್ರಸಾದ ಹಾಗೂ ಅಪರ ಜಿಲ್ಲಾಧಿಕಾರಿ ಮಹ್ಮದ್ ಝುಬೇರ್ ಅವರ ನೇತೃತ್ವದಲ್ಲಿ ನಗರದ ವಿವಿಧೆಡೆ ತೆರವು ಕಾರ್ಯಾಚರಣೆ ಮುಂದುವರಿದಿದೆ. ಸರ್ಕಾರಿ ಜಾಗದಲ್ಲಿ ನಿರ್ಮಿಸಲಾಗಿದ್ದ ಕಟ್ಟಡ, ಶೆಡ್ ಸೇರಿದಂತೆ ವಿವಿಧ ಅಕ್ರಮ ನಿರ್ಮಾಣಗಳನ್ನು ತೆರವುಗೊಳಿಸಿ ಜಾಗವನ್ನು ಜಿಲ್ಲಾಡಳಿತದ ವಶಕ್ಕೆ ಪಡೆದು ಎಚ್ಚರಿಕೆ ಫಲಕ ನೆಟ್ಟಿದೆ.ನಗರದ ಹಲವು ಪ್ರದೇಶಗಳಲ್ಲಿ ಸರ್ಕಾರಿ ಜಾಗ ಒತ್ತುವರಿಯಾಗಿರುವ ಕುರಿತು ಈ ಹಿಂದೆ ಸಾಕಷ್ಟು ದೂರುಗಳು ಬಂದಿದ್ದರೂ, ರಾಜಕೀಯ ಹಾಗೂ ಪ್ರಭಾವಿಗಳ ಒತ್ತಡದಿಂದಾಗಿ ಪರಿಣಾಮಕಾರಿ ಕ್ರಮ ಕೈಗೊಳ್ಳಲು ಸಾಧ್ಯವಾಗಿರಲಿಲ್ಲ. ಆದರೆ, ಜಿಲ್ಲಾಡಳಿತ ಇದೀಗ ಯಾವುದೇ ಪ್ರಭಾವಕ್ಕೆ ಮಣಿಯದೆ ದಾಖಲೆಗಳನ್ನು ಪರಿಶೀಲಿಸಿ, ಸರ್ಕಾರಿ ಜಾಗ ಒತ್ತುವರಿ ತೆರವುಗೊಳಿಸುವ ಕಾರ್ಯಕ್ಕೆ ವೇಗ ನೀಡಿದೆ. ಈ ನಡುವೆ ನಗರದ ಇನ್ನೂ ಹಲವು ಪ್ರದೇಶಗಳಲ್ಲಿ ಸರ್ಕಾರಿ ಜಾಗ ಒತ್ತುವರಿಯಾಗಿರುವ ಕುರಿತು ದೂರುಗಳು ಜಿಲ್ಲಾಡಳಿತದ ಗಮನಕ್ಕೆ ಬಂದಿವೆ. ಅಂತಹ ಸ್ಥಳಗಳ ದಾಖಲೆ ಪರಿಶೀಲನೆ ಹಾಗೂ ಸ್ಥಳ ಪರಿಶೀಲನಾ ಕಾರ್ಯ ನಡೆಯುತ್ತಿದ್ದು, ಅಕ್ರಮ ಒತ್ತುವರಿ ದೃಢಪಟ್ಟಲ್ಲಿ ಹಂತ ಹಂತವಾಗಿ ತೆರವುಗೊಳಿಸುವ ಸಾಧ್ಯತೆಯಿದೆ.
ತಾಲೂಕು ಕೇಂದ್ರಗಳಲ್ಲೂ ಕಾರ್ಯಾಚರಣೆ: ಬಳ್ಳಾರಿ ನಗರದಲ್ಲಿ ನಡೆದ ಒತ್ತುವರಿ ತೆರವು ಕಾರ್ಯಾಚರಣೆಗೆ ಸಾರ್ವಜನಿಕರಿಂದ ಮೆಚ್ಚುಗೆ ವ್ಯಕ್ತವಾಗಿರುವ ಬೆನ್ನಲ್ಲೇ, ಇದೇ ಮಾದರಿಯ ಕಾರ್ಯಾಚರಣೆಯನ್ನು ತಾಲೂಕು ಕೇಂದ್ರಗಳಲ್ಲೂ ಕೈಗೊಳ್ಳಬೇಕು ಎಂಬ ಒತ್ತಾಯ ಕೇಳಿಬಂದಿದೆ. ವಿವಿಧ ಸಂಘಟನೆಗಳು ಹಾಗೂ ಸಾರ್ವಜನಿಕರು ಈ ಕುರಿತು ಜಿಲ್ಲಾಡಳಿತಕ್ಕೆ ಮನವಿ ಸಲ್ಲಿಸಿದ್ದಾರೆ.ಇದನ್ನು ಪರಿಗಣಿಸಿರುವ ಜಿಲ್ಲಾಡಳಿತ, ಜಿಲ್ಲೆಯ ತಾಲೂಕು ಕೇಂದ್ರಗಳಲ್ಲಿಯೂ ಸರ್ಕಾರಿ ಜಾಗಗಳ ಸ್ಥಿತಿಗತಿ ಪರಿಶೀಲಿಸಿ, ಅಕ್ರಮ ಒತ್ತುವರಿ ಕಂಡುಬಂದಲ್ಲಿ ತೆರವುಗೊಳಿಸಲು ನಿರ್ಧರಿಸಿದೆ. ಹೀಗಾಗಿ ಶೀಘ್ರದಲ್ಲಿಯೇ ತಾಲೂಕು ಕೇಂದ್ರಗಳಲ್ಲೂ ಜೆಸಿಬಿ ಯಂತ್ರಗಳ ಗರ್ಜನೆ ಕೇಳಿಬರುವ ಸಾಧ್ಯತೆಯಿದೆ.
ಮತ್ತೆ ಒತ್ತುವರಿ ಮಾಡಿದರೆ ಕ್ರಿಮಿನಲ್ ಕೇಸ್: ನಗರದಲ್ಲಿ ಒತ್ತುವರಿ ತೆರವುಗೊಳಿಸಿ ಜಿಲ್ಲಾಡಳಿತ ವಶಪಡಿಸಿಕೊಂಡಿರುವ ಜಾಗಗಳಲ್ಲಿ ಮತ್ತೆ ಅಕ್ರಮವಾಗಿ ಪ್ರವೇಶಿಸಿ ಒತ್ತುವರಿ ಮಾಡುವುದನ್ನು ತಡೆಯಲು ಕಟ್ಟುನಿಟ್ಟಿನ ಕ್ರಮಕ್ಕೆ ಮುಂದಾಗಿದೆ. ವಶಪಡಿಸಿಕೊಂಡಿರುವ ಜಾಗಗಳಲ್ಲಿ ಜಿಲ್ಲಾಡಳಿತದ ವತಿಯಿಂದ ಫಲಕಗಳನ್ನು ಅಳವಡಿಸಲಾಗಿದ್ದು, ಇವುಗಳನ್ನು ಮತ್ತೆ ಒತ್ತುವರಿ ಮಾಡಲು ಮುಂದಾದರೆ ಕ್ರಿಮಿನಲ್ ಮೊಕದ್ದಮೆ ದಾಖಲಿಸಲು ಜಿಲ್ಲಾಡಳಿತ ನಿರ್ಧರಿಸಿದೆ.ಸರ್ಕಾರಿ ಜಾಗ ಒತ್ತುವರಿ ಮಾಡುವುದು ಮೊದಲ ಅಪರಾಧವಾದರೆ, ಜಿಲ್ಲಾಡಳಿತ ತೆರವುಗೊಳಿಸಿದ ಬಳಿಕ ಅದೇ ಜಾಗವನ್ನು ಪುನಃ ಅತಿಕ್ರಮಿಸುವುದು ಮತ್ತಷ್ಟು ಗಂಭೀರವಾಗಿ ಪರಿಗಣಿಸಲಾಗುವುದು. ಈ ವಿಚಾರದಲ್ಲಿ ಯಾವುದೇ ಮುಲಾಜು ತೋರಿಸುವುದಿಲ್ಲ ಎಂಬ ಸ್ಪಷ್ಟ ಸಂದೇಶವನ್ನು ಜಿಲ್ಲಾಡಳಿತ ನೀಡಿದೆ.
ತೆರವು ಕಾರ್ಯ: ಬಳ್ಳಾರಿ ನಗರದಲ್ಲಿ ಸರ್ಕಾರಿ ಜಾಗ ಅತಿಕ್ರಮಣ ತೆರವು ಮಾಡಿದಂತೆಯೇ ತಾಲೂಕು ಕೇಂದ್ರಗಳಲ್ಲೂ ತೆರವು ಕಾರ್ಯ ಆರಂಭಿಸಲಾಗುವುದು. ಜಿಲ್ಲಾಡಳಿತ ವಶಪಡಿಸಿಕೊಂಡ ಜಾಗದಲ್ಲಿ ಮತ್ತೆ ಒತ್ತುವರಿ ಮಾಡಿದರೆ ಕ್ರಿಮಿನಲ್ ಮೊಕದ್ದಮೆ ದಾಖಲಿಸಲಾಗುವುದು ಎಂದು ಬಳ್ಳಾರಿ ಜಿಲ್ಲಾಧಿಕಾರಿ ನಾಗೇಂದ್ರ ಪ್ರಸಾದ್ ಕೆ. ಹೇಳಿದರು.