ರಾಜ್ಯಾದ್ಯಂತ ಇಂದು ಹಲವಾರು ಕೆರೆಗಳ ಒತ್ತುವರಿ: ತಹಸೀಲ್ದಾರ್

| Published : Jun 28 2024, 12:48 AM IST

ರಾಜ್ಯಾದ್ಯಂತ ಇಂದು ಹಲವಾರು ಕೆರೆಗಳ ಒತ್ತುವರಿ: ತಹಸೀಲ್ದಾರ್
Share this Article
  • FB
  • TW
  • Linkdin
  • Email

ಸಾರಾಂಶ

ನಾಡಪ್ರಭು ಕೆಂಪೇಗೌಡರು ನಗರಾಭಿವೃದ್ಧಿಗೆ ಪೂರಕವಾದ ಜತೆಗೆ ರೈತರ ಹಿತವನ್ನು ಭವಿಷ್ಯದ ದೂರದೃಷ್ಟಿಯಿಂದ ಅಗತ್ಯವಾದ ಯೋಜನೆಗಳು ಹಾಗೂ ಸಾವಿರಾರು ಕೆರೆ- ಕಟ್ಟೆಗಳನ್ನು ನಿರ್ಮಿಸಿದ್ದರು. ಅದೇ ರೀತಿ ರಾಜ್ಯದ ಗ್ರಾಮೀಣ ಭಾಗಗಳಲ್ಲೂ ಕೆರೆಗಳ ನಿರ್ಮಾಣವಾಗಿವೆ. ಇತ್ತೀಚಿನ ವರ್ಷಗಳಲ್ಲಿ ಮಳೆಯಿಂದಾಗುವ ಅನಾಹುತಗಳ ಜತೆಗೆ ಜಲ ಸಂಪನ್ಮೂಲಗಳ ರಕ್ಷಣೆಗಾಗಿ ಕೆರೆಗಳನ್ನು ಉಳಿಸಿಕೊಳ್ಳುವ ನಿಟ್ಟಿನಲ್ಲಿ ಸರ್ಕಾರ ಮುಂದಾಗಿದೆ.

ಕನ್ನಡಪ್ರಭ ವಾರ್ತೆ ಹೊಳೆನರಸೀಪುರ

ನಾಡಪ್ರಭು ಕೆಂಪೇಗೌಡರು ದೂರದೃಷ್ಟಿಯಿಂದ ನಿರ್ಮಿಸಿದ್ದ ಸಾವಿರಾರು ಕೆರೆಗಳ ಒತ್ತುವರಿಯಿಂದಾಗಿ ಈಗ ಕೇವಲ ಒಂದು ಮಳೆ ಬಂದರೂ ಬೆಂಗಳೂರು ನಗರ ಈಜು ಕೊಳವಾಗುತ್ತದೆ. ಇಂದು ರಾಜ್ಯಾದ್ಯಾಂತ ಕೆರೆಗಳ ಒತ್ತುವರಿಯಾಗಿವೆ ಹಾಗೂ ಒತ್ತುವರಿ ತೆರವಿಗೆ ಮುಂದಾದಲ್ಲಿ ೨೦ ಫೋನ್‌ ಕರೆಗಳು ಬರುತ್ತವೆ ಎಂದು ತಹಸೀಲ್ದಾರ್ ಕೆ.ಕೆ.ಕೃಷ್ಣಮೂರ್ತಿ ತಮ್ಮ ಅಸಹಾಯಕತೆ ವ್ಯಕ್ತಪಡಿಸಿದರು.

ಪಟ್ಟಣದ ತಾಲೂಕು ಕಚೇರಿಯಲ್ಲಿ ರಾಷ್ಟ್ರೀಯ ಹಬ್ಬಗಳ ಆಚರಣೆ ಸಮಿತಿ ವತಿಯಿಂದ ಆಯೋಜನೆ ಮಾಡಿದ್ದ ಶ್ರೀ ಕೆಂಪೇಗೌಡರ ಜಯಂತ್ಯುತ್ಸವ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು. ನಾಡಪ್ರಭು ಕೆಂಪೇಗೌಡರು ನಗರಾಭಿವೃದ್ಧಿಗೆ ಪೂರಕವಾದ ಜತೆಗೆ ರೈತರ ಹಿತವನ್ನು ಭವಿಷ್ಯದ ದೂರದೃಷ್ಟಿಯಿಂದ ಅಗತ್ಯವಾದ ಯೋಜನೆಗಳು ಹಾಗೂ ಸಾವಿರಾರು ಕೆರೆ- ಕಟ್ಟೆಗಳನ್ನು ನಿರ್ಮಿಸಿದ್ದರು. ಅದೇ ರೀತಿ ರಾಜ್ಯದ ಗ್ರಾಮೀಣ ಭಾಗಗಳಲ್ಲೂ ಕೆರೆಗಳ ನಿರ್ಮಾಣವಾಗಿವೆ. ಇತ್ತೀಚಿನ ವರ್ಷಗಳಲ್ಲಿ ಮಳೆಯಿಂದಾಗುವ ಅನಾಹುತಗಳ ಜತೆಗೆ ಜಲ ಸಂಪನ್ಮೂಲಗಳ ರಕ್ಷಣೆಗಾಗಿ ಕೆರೆಗಳನ್ನು ಉಳಿಸಿಕೊಳ್ಳುವ ನಿಟ್ಟಿನಲ್ಲಿ ಸರ್ಕಾರ ಮುಂದಾಗಿದೆ. ಪ್ರತಿ ತಿಂಗಳೂ ಇಷ್ಟು ಕೆರೆಗಳ ಪತ್ತೆ ಹಾಗೂ ಸರ್ವೇ ಮಾಡಬೇಕು. ಒತ್ತುವರಿ ತೆರವು ಗೊಳಿಸಲು ನಿರ್ದೇಶನ ನೀಡಲಾಗಿದೆ, ಆದರೆ ದುರದೃಷ್ಟವಶಾತ್ ಸಾಧ್ಯವಾಗುತ್ತಿಲ್ಲ, ಈ ಕಾರ್ಯದಲ್ಲಿ ನಮ್ಮ ಕಂದಾಯ ಇಲಾಖೆ ಹಾಗೂ ಎಡಿಎಲ್‌ಆರ್ ಅವರ ತಪ್ಪಿಲ್ಲ, ಕೆರೆಗಳ ಉಳಿಸುವ ಪ್ರಾಮಾಣಿಕ ಪ್ರಯತ್ನ ಮಾಡಲಾಗುತ್ತಿದೆ ಎಂದರು.

ಪುರಸಭೆ ಮುಖ್ಯಾಧಿಕಾರಿ ಮಹೇಂದ್ರ ಮಾತನಾಡಿ, ನಾಡಪ್ರಭು ಕೆಂಪೇಗೌಡರು ಒಂದು ಸಮಾಜಕ್ಕೆ ಸೀಮಿತವಾಗದೇ ಸರ್ವ ಜನಾಂಗದ ಅಭಿವೃದ್ಧಿಗಾಗಿ ದುಡಿದಿದ್ದರು. ನೀರಾವರಿ, ವ್ಯಾಪಾರ, ಉದ್ಯಮಗಳ ಸ್ಥಾಪನೆಗೆ ಒತ್ತು ನೀಡಿದ್ದ ಅವರು, ಪರಿಸರ ಕಾಳಜಿ ಹೊಂದಿದ್ದರು. ಚನ್ನಮ್ಮನಕೆರೆ, ಅಲಸೂರು ಕೆರೆ ಸೇರಿ ಹತ್ತಾರು ಕೆರೆ, ಕಟ್ಟೆ ನಿರ್ಮಿಸಿ ನೀರಿನ ಬವಣೆ ನೀಗಿಸುವ ಜತೆಗೆ ಕೃಷಿ ಮತ್ತು ಪಶುಪಾಲನೆಗೆ ಅಗತ್ಯ ಸೌಕರ್ಯ ಒದಗಿಸಲಾಗಿತ್ತು. ಬೆಂಗಳೂರು ಇಂದು ತಂತ್ರಜ್ಞಾನದಿಂದ ಖ್ಯಾತಿ ಹೊಂದಲು ಅಂದಿನ ಕೆಂಪೇಗೌಡರ ದೂರದೃಷ್ಟಿಯ ಅಭಿವೃದ್ಧಿಯೇ ಕಾರಣವಾಗಿದೆ, ಸರ್ವ ಧರ್ಮದವರಿಗೂ ಆಶ್ರಯ ನೀಡಿ, ವ್ಯಾಪಾರ, ಉದ್ಯಮ ಮಾಡಿಕೊಳ್ಳಲು ಅವಕಾಶ ಕಲ್ಪಿಸಿದ್ದರು. ಶ್ರೀಯುತರು ತೋರಿದ ವಿಶೇಷ ಕಾಳಜಿಯ ಗೌರವಾರ್ಥವಾಗಿ ಬೆಂಗಳೂರಿನ ವಿಮಾನ ನಿಲ್ದಾಣಕ್ಕೆ ಕೆಂಪೇಗೌಡರ ಹೆಸರಿಟ್ಟು ಗೌರವಿಸಲಾಗಿದೆ. ನಾಡಪ್ರಭು ಕೆಂಪೇಗೌಡರ ಆದರ್ಶಗಳನ್ನು ಜೀವನದಲ್ಲಿ ರೂಢಿಸಿಕೊಂಡು ಸಮಾಜದ ಏಳಿಗೆಗೆ ಪರಿಸರ ರಕ್ಷಣೆಗೆ ಹೆಚ್ಚಿನ ಸೇವೆ ಸಲ್ಲಿಸೋಣವೆಂದು ಕರೆಕೊಟ್ಟರು.ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಚೇರಿಯ ಬಿಆರ್‌ಸಿ ವಿಶ್ವನಾಥ್ ಪ್ರಧಾನ ಭಾಷಣ ಮಾಡಿದರು. ತಾಪಂ ಇಒ ಕುಸುಮಾಧರ್, ಬಿಇಒ ಸೋಮಲಿಂಗೇಗೌಡ, ನಾಡಪ್ರಭು ಕೆಂಪೇಗೌಡ ಯುವ ವೇದಿಕೆ ಅಧ್ಯಕ್ಷ ಕೆ.ಎ.ಲೋಕೇಶ್, ಒಕ್ಕಲಿಗ ಮುಖಂಡರಾದ ಎಂ.ಎನ್.ಜೈಪ್ರಕಾಶ್ ಮಾತನಾಡಿದರು.

ನಾಡಪ್ರಭು ಕೆಂಪೇಗೌಡರ ಭಾವಚಿತ್ರಕ್ಕೆ ಪೂಷ್ಪಾರ್ಚನೆ ಮಾಡಿ ಗೌರವ ಸಲ್ಲಿಸಲಾಯಿತು.

ತಾಪಂ ಮಾಜಿ ಸದಸ್ಯ ಲೋಕೇಶ್, ಉಪ ತಹಸೀಲ್ದಾರ್ ರೂಪೇಶ್, ಬಿಸಿಎಂ ಇಲಾಖೆ ಕಲ್ಯಾಣಾಧಿಕಾರಿ ಮಂಜುನಾಥ್, ಸಮಾಜ ಕಲ್ಯಾಣ ಇಲಾಖೆ ಸಹಾಯಕ ನಿರ್ದೇಶಕ ಕೌಸರ್ ಅಹಮದ್, ಸ.ಬಾ.ಪ.ಪೂ. ಕಾಲೇಜಿನ ಪ್ರಾಂಶುಪಾಲ ದೇವರಾಜ್, ಸಿಡಿಪಿಒ ಜ್ಯೋತಿ, ಕೃಷಿ ಇಲಾಖೆ ಸಹಾಯಕ ನಿರ್ದೇಶಕಿ ಸಪ್ನ, ತೋಟಗಾರಿಕೆ ಇಲಾಖೆ ಸಹಾಯಕ ನಿರ್ದೇಶಕ ರಘು, ಜಿ.ಪಂ. ಇಂಜಿನಿಯರ್ ಪ್ರಶಾಂತ್, ಪಿಡ್ಲ್ಯೂಡಿ ಇಂಜಿನಿಯರ್ ಪವನ್, ಶಿರೆಸ್ತೆದಾರ್ ಲೋಕೇಶ್, ಶಿಕ್ಷಕ ಸುಜಾತ, ಆರ್‌ಟಿಐ ಕಾರ್ಯಕರ್ತ ಮುತ್ತುರಾಜ್, ಲೋಕೇಶ್, ಇತರರು ಇದ್ದರು.

------