ಸರ್ಕಾರಿ ಶಾಲೆ ಜಾಗಕ್ಕೆ ಅತಿಕ್ರಮಪ್ರವೇಶ: ಕಾನೂನು ಕ್ರಮಕ್ಕೆ ಆಗ್ರಹ

| Published : Jul 04 2024, 01:04 AM IST

ಸರ್ಕಾರಿ ಶಾಲೆ ಜಾಗಕ್ಕೆ ಅತಿಕ್ರಮಪ್ರವೇಶ: ಕಾನೂನು ಕ್ರಮಕ್ಕೆ ಆಗ್ರಹ
Share this Article
  • FB
  • TW
  • Linkdin
  • Email

ಸಾರಾಂಶ

ಸದರಿ ಮುನಿನಾರಾಯಣಪ್ಪ ಶಾಲಾಭಿವೃದ್ಧಿ ಸಮಿತಿ ಅಥವಾ ಶಾಲೆಯ ಮುಖ್ಯಶಿಕ್ಷಕರ ಗಮನಕ್ಕೂ ತರದೇ ಶಾಲಾ ಜಾಗದಲ್ಲಿನ ಮರಗಳನ್ನು ಏಕಾಏಕಿ ಕಡಿದು ಸಾಗಾಟ ಮಾಡಿದ್ದಾರೆ ಎಂದು ಆರೋಪಿಸಿದ್ದಾರೆ.

ಕನ್ನಡಪ್ರಭ ವಾರ್ತೆ ಕೋಲಾರ

ಸರ್ಕಾರಿ ಶಾಲೆಯ ಆವರಣದಲ್ಲಿದ್ದ ಸುಮಾರು ೨ ಲಕ್ಷ ಮೌಲ್ಯದ ನೀಲಗಿರಿ ಮರಗಳನ್ನು ಅಕ್ರಮವಾಗಿ ಕಡಿದು ಸಾಗಿಸಿರುವ ಘಟನೆ ನಡೆದಿದ್ದು, ಅತಿಕ್ರಮಣ ನಡೆಸಿರುವವರ ವಿರುದ್ಧ ಕಾನೂನು ಕ್ರಮಕ್ಕೆ ಆಗ್ರಹಿಸಿ ತ್ಯಾವನಹಳ್ಳಿ ಗ್ರಾಮಸ್ಥರು ಜಿಲ್ಲಾಧಿಕಾರಿಗಳು, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳು ಹಾಗೂ ಶಾಲಾ ಶಿಕ್ಷಣ ಇಲಾಖೆ ಉಪನಿರ್ದೇಶಕರಿಗೆ ಮನವಿ ಸಲ್ಲಿಸಿದ್ದಾರೆ.

ಗ್ರಾಮದ ಗೋಮಾಳ ಸರ್ವೇ ನಂ.೧೧೬ ರಲ್ಲಿನ ೨ ಎಕರೆ ಜಮೀನನ್ನು ಶಾಲೆಗೆ ಮಂಜೂರು ಮಾಡಿದ್ದು, ಇದು ಶಾಲಾ ಶಿಕ್ಷಣ ಇಲಾಖೆ ಉಪನಿರ್ದೇಶಕರ ಹೆಸರಿನಲ್ಲಿ ಖಾತೆಯೂ ಆಗಿದೆ ಎಂದು ಗ್ರಾಮಸ್ಥರು ತಿಳಿಸಿದ್ದಾರೆ.

ಸದರಿ ಜಮೀನಿನಲ್ಲಿ ಬೆಳೆದಿದ್ದ ಸುಮಾರು೨ ಲಕ್ಷ ಮೌಲ್ಯದ ನೀಲಗಿರಿ ಮರಗಳನ್ನು ಜಮೀನಿಗೆ ಅಕ್ರಮವಾಗಿ ಪ್ರವೇಶಿಸಿದ ಲಕ್ಷ್ಮಮ್ಮ ,ಕೋಂ ಲೇಟ್ ಕೃಷ್ಣಪ್ಪ ಇವರ ವಾರಸುದಾರರು ಮರಗಳನ್ನು ಕೂತಾಂಡಹಳ್ಳಿ ಮುನಿನಾರಾಯಣಪ್ಪ, ಬಿನ್ ನರಸಿಂಹಪ್ಪ ಎಂಬುವವರಿಗೆ ಮಾರಾಟ ಮಾಡಿದ್ದಾರೆ.

ಸದರಿ ಮುನಿನಾರಾಯಣಪ್ಪ ಶಾಲಾಭಿವೃದ್ಧಿ ಸಮಿತಿ ಅಥವಾ ಶಾಲೆಯ ಮುಖ್ಯಶಿಕ್ಷಕರ ಗಮನಕ್ಕೂ ತರದೇ ಶಾಲಾ ಜಾಗದಲ್ಲಿನ ಮರಗಳನ್ನು ಏಕಾಏಕಿ ಕಡಿದು ಸಾಗಾಟ ಮಾಡಿದ್ದಾರೆ ಎಂದು ಆರೋಪಿಸಿದ್ದಾರೆ.

ಮರ ಕಡಿಯುವಾಗ ಶಾಲಾಭಿವೃದ್ಧಿ ಸಮಿತಿ ಸದಸ್ಯರು ಹಾಗೂ ಮುಖ್ಯಶಿಕ್ಷಕರು ತಡೆಯಲು ಪ್ರಯತ್ನಿಸಿದ್ದು, ಅದಕ್ಕೆ ಜಗ್ಗದ ಮುನಿನಾರಾಯಣಪ್ಪನವರ ಕಡೆಯವರು ಇದು ನಮ್ಮ ಜಾಗವಾಗಿದ್ದು ಕೇಳುವುದಕ್ಕೆ ನೀವ್ಯಾರು? ಎಂದು ಧಮಕಿ ಹಾಕಿ ಮರಗಳನ್ನು ಸಾಗಾಟ ಮಾಡಿದ್ದಾರೆ ಎಂದು ದೂರಿನಲ್ಲಿ ಆರೋಪಿಸಿದ್ದಾರೆ.

ಸದರಿ ಗೋಮಾಳ ಜಮೀನಿನ ಪಕ್ಕದಲ್ಲಿ ಅವರ ಜಮೀನಿದ್ದು, ಶಾಲೆಗೆ ಸೇರಿದ ೨೦ ಗುಂಟೆ ಜಮೀನು ಸಹ ನಮಗೇ ಸೇರುತ್ತದೆ ಎಂದು ಅತೀಕ್ರಮಣ ಮಾಡಿದ್ದು, ಇದರಿಂದ ಶೈಕ್ಷಣಿಕ ವಾತಾವರಣ ಹದೆಗೆಡುವಂತಾಗಿದೆ. ಸರ್ಕಾರಿ ಶಾಲೆಯ ಆಸ್ತಿಗೆ ಸರ್ಕಾರ ರಕ್ಷಣೆ ನೀಡದಿರುವುದು ವಿಪರ್ಯಾಸವಾಗಿದೆ, ಈ ಸಂಬಂಧ ಈಗಾಗಲೇ ಹಲವಾರು ವಿವಾದಗಳು ನಡೆದಿದ್ದು, ದಾರಿ ಬಿಟ್ಟುಕೊಡುವ ಕುರಿತು ಸಹ ಗ್ರಾಪಂ ವತಿಯಿಂದ ಕ್ರಮವಹಿಸಲಾಗಿತ್ತು ಎಂದು ತಿಳಿಸಿದ್ದಾರೆ.

ಈ ಆರೋಪಿಗಳು ಶಾಲೆಯ ರಸ್ತೆಗೆ ಹೊಂದಿಕೊಂಡಂತೆ ಮನೆ ನಿರ್ಮಿಸಿ ದಾರಿಗೂ ಅಡ್ಡಿಪಡಿಸಿದ್ದು, ಸದರಿ ಮಾಹಿತಿಯನ್ನು ಶಾಲಾ ಶಿಕ್ಷಣ ಇಲಾಖೆಯ ಅಧಿಕಾರಿಗಳ ಗಮನಕ್ಕೆ ಮುಖ್ಯ ಶಿಕ್ಷಕರು ತಂದಿದ್ದರೂ ಯಾವುದೇ ಪ್ರಯೋಜನವಾಗಿಲ್ಲ ಎಂದು ತಿಳಿಸಿದ್ದಾರೆ.

ಈ ಹಿನ್ನಲೆಯಲ್ಲಿ ಜಿಲ್ಲಾಧಿಕಾರಿಗಳು ಸರ್ಕಾರಿ ಶಾಲೆಯ ಆಸ್ತಿಯನ್ನು ಸಂರಕ್ಷಿಸಿ, ಮರಕಡಿದು ಸಾಗಿಸಿರುವ ಆರೋಪಿಗಳ ವಿರುದ್ಧ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಲು ಗ್ರಾಮಸ್ಥರು ಆಗ್ರಹಿಸಿದ್ದಾರೆ.

ಗ್ರಾಪಂ ಸದಸ್ಯ ಮಂಜುನಾಥ್, ನಾಗೇಶ್ವರರಾವ್, ಎಸ್‌ಡಿಎಂಸಿ ಅಧ್ಯಕ್ಷ ಚಂದ್ರಕುಮಾರ್ ಮತ್ತು ಗ್ರಾಮಸ್ಥರು ಜಿಲ್ಲಾಧಿಕಾರಿಯವರಿಗೆ ಈ ಸಂಬಂಧ ಮನವಿ ಸಲ್ಲಿಸಿದ್ದಾರೆ.