ಸಾರಾಂಶ
ಕನ್ನಡಪ್ರಭ ವಾರ್ತೆ ಮೈಸೂರು
ವಚನ ಸಾಹಿತ್ಯ ಸಂಗ್ರಹ, ಮುದ್ರಣದಲ್ಲಿ ಡಾ.ಫ.ಗು. ಹಳಕಟ್ಟಿ ಅವರ ಸೇವೆ ಅನನ್ಯವಾದುದು ಎಂದು ಸುತ್ತೂರು ಜೆಎಸ್ಎಸ್ ಸಂಸ್ಥೆಗಳ ಸಂಯೋಜನಾಧಿಕಾರಿ ಜಿ.ಎಲ್. ತ್ರಿಪುರಾಂತಕ ಹೇಳಿದರು.ಮೈಸೂರು ಜಿಲ್ಲಾ ಹಾಗೂ ತಾಲೂಕು ಶರಣ ಸಾಹಿತ್ಯ ಪರಿಷತ್ತು ಶ್ರೀರಾಂಪುರದ ಶ್ರೀ ವಿವೇಕ ವಿದ್ಯಾಲಯ ಪದವಿಪೂರ್ವ ಕಾಲೇಜಿನಲ್ಲಿ ಏರ್ಪಡಿಸಿದ್ದ ಡಾ.ಫ.ಗು. ಹಳಕಟ್ಟಿಯವರ ಜಯಂತಿ, ವಚನ ಸಾಹಿತ್ಯ ಸಂರಕ್ಷಣಾ ದಿನಾಚರಣೆಯಲ್ಲಿ ಸುತ್ತೂರು ಜಗದ್ಗುರು ಶ್ರೀ ಪರ್ವತೇಂದ್ರ ಶಿವಚಾರ್ಯ ಮಹಾಸ್ವಾಮಿಗಳವರ ದತ್ತಿ ಉಪನ್ಯಾಸ ನೀಡಿದ ಅವರು, ಇದರಿಂದಾಗಿಯೇ ಫ.ಗು. ಹಳಕಟ್ಟಿಯವರು ವಚನ ಪಿತಾಮಹ ಎನಿಸಿಕೊಂಡಿದ್ದಾರೆ ಎಂದರು.
ವಚನ ಸಾಹಿತ್ಯ ಅತ್ಯಂತ ಶ್ರೀಮಂತವಾದುದು. ಸುಲಿದ ಬಾಳಹಣ್ಣಿನಂತಿದೆ. ಏಕೆಂದರೆ ಇದೆಲ್ಲಾ ಅನುಭವದಿಂದ ರಚಿತವಾದವು. ವಚನಕಾರರು ನುಡಿದಂತೆ ನಡೆದವರು. ಇಂತಹ ವಚನ ಸಾಹಿತ್ಯ ಇಂದು ನಮಗೆ ಅಭ್ಯಾಸ ಮಾಡಲು ಸಿಗಲು ಫ.ಗು. ಹಳಕಟ್ಟಿಯವರು ಕಾರಣ. ಹಳಕಟ್ಟಿಯವರು ತಮಗೋಸ್ಕರ ಬದುಕಲಿಲ್ಲ, ಸಮಾಜಕೋಸ್ಕರ ಬದುಕಿದವರು ಎಂದು ಅವರು ಹೇಳಿದರು.ಎಲ್ಲ ಮನೆ ಕಟ್ಟುತ್ತಾರೆ. ಮನೆ ಕಟ್ಟುವಾಗ ಹಣ ಸಾಲದಿದ್ದರೆ ನಮ್ಮ ಹೆಂಡತಿಯೇ ಚಿನ್ನ ಕೊಡುವುದಿಲ್ಲ. ಹೀಗಿರುವಾಗ ಫ.ಗು. ಹಳಕಟ್ಟಿಯವರು ವಚನ ಸಾಹಿತ್ಯ ಮುದ್ರಣಕ್ಕಾಗಿ ತಮ್ಮ ಮನೆಯನ್ನು ಮಾರಿ, ಹಿತಚಿಂತಕ ಎಂಬ ಮುದ್ರಣಾಲಯ ಆರಂಭಿಸಿದರು. ಅಲ್ಲದೇ ನ್ಯುಮೊನಿಯಾದಿಂದ ಬಳಲುತ್ತಾ ಮೂರು ವರ್ಷ ವಿಶ್ರಾಂತಿಯಲ್ಲಿದ್ದಾಗಲೂ ವಚನ ಸಾಹಿತ್ಯ ಕಾಯಕವನ್ನು ನಿಲ್ಲಿಸಲಿಲ್ಲ ಎಂದು ಅವರು ಸ್ಮರಿಸಿದರು.
ವಚನ ಗುಮ್ಮಟ ನೋಡಬೇಕಿದೆ:ಕುವೆಂಪು ಅವರಿಗೆ ಗುರುಗಳಾಗಿದ್ದ ಬಿಎಂಶ್ರೀಯವರು ಬಿಜಾಪುರಕ್ಕೆಕಾರ್ಯಕ್ರಮಕ್ಕೆ ಹೋದಾಗ ಅಲ್ಲಿ ಗೋಲಗುಮ್ಮಟ ನೋಡುವಂತೆ ಸಂಘಟಕರು ಆಹ್ವಾನಿಸಿದರು. ಆದರೆ ಗೋಲಗುಮ್ಮಟಕ್ಕಿಂತ ನಾನು ವಚನ ಗುಮ್ಮಟ ನೋಡಬೇಕಾಗಿದೆ ಎಂದು ಫ.ಗು. ಹಳಕಟ್ಟಿಯವರನ್ನು ಭೇಟಿಯಾದರು ಎಂದರು.
ತಮ್ಮ ಭಾಷಣದಲ್ಲಿ ಪ್ರಧಾನಿ ಮೋದಿಯವರು ವಚನವನ್ನು ಉಲ್ಲೇಖಿಸುತ್ತಾರೆ ಎಂದರೇ ವಚನ ಸಾಹಿತ್ಯಕ್ಕಿರುವ ಶಕ್ತಿಯನ್ನು ತಿಳಿಯಬಹುದು ಎಂದು ಅವರು, ನಮ್ಮ ಜನರಿಗೆ ಈ ಸಾಹಿತ್ಯದ ಬಗ್ಗೆ ಹೆಮ್ಮೆ ಇಲ್ಲ ಎಂದು ವಿಷಾದಿಸಿದರು.ವಚನ ಸಾಹಿತ್ಯ ಉಳಿಯಬೇಕು ಮತ್ತು ಬೆಳೆಯಬೇಕು. ಆದ್ದರಿಂದ ಯುವಜನತೆ ದಿನಕ್ಕೆ ಎರಡು- ಮೂರು ವಚನವನ್ನು ಓದಿ, ಅರ್ಥೈಸಿಕೊಳ್ಳಬೇಕು. ಶರಣರ ಬದುಕನ್ನು ಅನುಸರಿಸಬೇಕು. ಆತ್ಮಕಥನಗಳನ್ನು ಓದಿ ಜೀವನಪಾಠ ಕಲಿಯಬೇಕು ಎಂದು ಅವರು ಸಲಹೆ ಮಾಡಿದರು.
ಜ್ಞಾನಿ ಹಾಗೂ ಸಾಧಕರಾದ ಹಳಕಟ್ಟಿಯವರು ಸೆಲ್ಫ್ ಮೇಡ್ ಮ್ಯಾನ್. ಇಂತಹವರು ನಮಗೆ ಹೀರೋ ಆಗಬೇಕೆ ಹೊರತು ಯಾವುದೋ ಸಿನಿಮಾ ನಟರಲ್ಲ ಎಂದು ಅವರು ಕಿವಿಮಾತು ಹೇಳಿದರು.ಸಂಸ್ಕಾರ ಅಳವಡಿಸಿಕೊಳ್ಳಿ
ಮುಖ್ಯ ಅತಿಥಿಯಾಗಿದ್ದ ಶ್ರೀ ವಿವೇಕ ಬಾಲೋಧ್ಯಾನ ಪಬ್ಲಿಕ್ ಶಾಲೆಯ ಕಾರ್ಯದರ್ಶಿ ಹಾಗೂ ಶ್ರೀ ವಿವೇಕ ವಿದ್ಯಾಲಯ ಪಿಯು ಕಾಲೇಜಿನ ವ್ಯವಸ್ಥಾಪಕ ನಿರ್ದೇಶಕ ಎಂ.ಎಸ್. ನಾಗೇಶ್ ಮಾತನಾಡಿ, ವಿವೇಕಾನಂದರು ಹೇಳಿದಂತೆ ಇತರರಿಗಾಗಿ ಬಾಳಿ, ಇಲ್ಲದಿದ್ದರೆ ಇದ್ದು ಸತ್ತಂತೆ. ಸಮಾಜಕ್ಕಾಗಿ ಕೆಲಸ ಮಾಡಿದವರನ್ನು ಸ್ಮರಿಸಿ. ಜೀವನದಲ್ಲಿ ವಿವೇಕ, ವಿದ್ಯೆ ಮತ್ತು ಸಂಸ್ಕಾರವನ್ನು ಅಳವಡಿಸಿಕೊಳ್ಳಿ ಎಂದು ಕರೆ ನೀಡಿದರು.ಅಧ್ಯಕ್ಷತೆ ವಹಿಸಿದ್ದ ಜಿಲ್ಲಾ ಶರಣ ಸಾಹಿತ್ಯ ಪರಿಷತ್ ಅಧ್ಯಕ್ಷ ಹೆಳವರಹುಂಡಿ ಸಿದ್ದಪ್ಪ ಮಾತನಾಡಿ, ಇವತ್ತು ವಚನ ಸಾಹಿತ್ಯ ಎಲ್ಲರ ಮನ, ಮನೆ, ಮಸ್ತಕಕ್ಕೆ ತಲುಪಲು ಫ.ಗು. ಹಳಕಟ್ಟಿಯವರು ಕಾರಣ. ವಚನ ಸಾಹಿತ್ಯ, ಶರಣ ಸಾಹಿತ್ಯವನ್ನು ಮನೆ ಮನೆಗೆ ತಲುಪಿಸುವ, ಅದರಲ್ಲೂ ನಾಳಿನ ಪ್ರಜೆಗಳಾದ ವಿದ್ಯಾರ್ಥಿಗಳಿಗೆ ತಲುಪಿಸುವ ಕೆಲಸವನ್ನು ಪರಿಷತ್ತು ಮಾಡುತ್ತಿದೆ ಎಂದರು.
ವಚನಕಾರರು ಸಾಹಿತಿಗಳಲ್ಲ. ಅವರು ತಮ್ಮ ಜೀವನದ ಅನುಭವವನ್ನು ಹೇಳುತ್ತಾ ಹೋದರು. ಅವು ಇಂದಿಗೂ ಪ್ರಸ್ತುತವಾಗಿವೆ ಎಂದರು.ಜಿಲ್ಲಾ ಶರಣ ಸಾಹಿತ್ಯ ಪರಿಷತ್ ಮಾಜಿ ಅಧ್ಯಕ್ಷ ಎಂ. ಚಂದ್ರಶೇಖರ್ ಪ್ರಾಸ್ತಾವಿಕ ಭಾಷಣ ಮಾಡಿ, ಸ್ವಾಗತಿಸಿದರು. ಮೈಸೂರು ತಾ. ಅಧ್ಯಕ್ಷ ದೇವರಾಜ್ ಪಿ. ಚಿಕ್ಕಹಳ್ಳಿ ವಂದಿಸಿದರು. ಲಲಿತಾ ಪಾಟೀಲ್ ವಚನ ಗಾಯನ ನಡೆಸಿಕೊಟ್ಟರು. ಕವಿ ಎಸ್. ಪುಟ್ಟಪ್ಪ ಮುಡಿಗುಂಡ ಕಾರ್ಯಕ್ರಮ ನಿರೂಪಿಸಿದರು. ಶ್ರೀ ವಿವೇಕಾ ವಿದ್ಯಾಲಯ ಪಿಯು ಕಾಲೇಜಿನ ಆಡಳಿತಾಧಿಕಾರಿ ಭವಾನಿ ನಾಗೇಶ್, ಸಿದ್ದೇಶ್ ಬಾಬು, ಶಿವಕುಮಾರ್, ಬಸವಲಿಂಗಪ್ಪ, ಯಶವಂತ್, ಗೋವಿಂದಾಚಾರಿ ಮೊದಲಾದವರು ಇದ್ದರು.
-- ಬಾಕ್ಸ್---- ವಚನಕ್ಕಾಗಿ ಬದುಕು ಮುಡಿಪಾಗಿಟ್ಟರು--
ಕಾರ್ಯಕ್ರಮ ಉದ್ಘಾಟಿಸಿದ ಹಿರಿಯ ಪತ್ರಕರ್ತ ಅಂಶಿ ಪ್ರಸನ್ನಕುಮಾರ್ ಮಾತನಾಡಿ, ಹನ್ನೆರಡನೇ ಶತಮಾನದ ಕಲ್ಯಾಣದ ಕೋಲಾಹಲದ ನಂತರ ಕಾಲಗರ್ಭದಲ್ಲಿಯೇ ಹೂತು ಹೋಗಿದ್ದ ವಚನ ಸಾಹಿತ್ಯವನ್ನು ಶೋಧಿಸಿ, ಸಂಶೋಧಿಸಿ, ಸಂರಕ್ಷಿಸಿದವರು ಫ.ಗು. ಹಳಕಟ್ಟಿಯವರು. ವಚನ ಸಾಹಿತ್ಯ ಪ್ರಚುರಪಡಿಸಲು ತಮ್ಮ ಬದುಕನ್ನು ಮುಡಿಪಾಗಿಟ್ಟಿದ್ದರು. ಇದರಿಂದಾಗಿಯೇ ನಮಗೆ ವಚನ ಸಾಹಿತ್ಯದಂತಹ ದೊಡ್ಡಪರಂಪರೆಯ ಪರಿಚಯವಾಗಿದೆ ಎಂದರು.ಹಳಕಟ್ಟಿಯವರು ಶಿಕ್ಷಣ, ಸಾಹಿತ್ಯ, ಸಹಕಾರ, ಪ್ರಕಟಣೆ, ಪತ್ರಿಕೋದ್ಯಮ, ರಾಜಕೀಯದಲ್ಲಿ ತೊಡಗಿಸಿಕೊಂಡಿದ್ದರು. ವಿಜಾಪುರ ನಗರಸಭೆ ಸದಸ್ಯರಾಗಿದ್ದರು. ಮಹಾರಾಷ್ಟ್ರದ ವಿಧಾನ ಪರಿಷತ್ ಸದಸ್ಯರಾಗಿದ್ದರು. ಇಂದು ಬೃಹತ್ ಆಗಿ ಬೆಳೆದಿರುವ ಬಿಜಾಪುರ ಲಿಂಗಾಯತ್ ಸೊಸೈಟಿ ಆರಂಭಕ್ಕೆ ಕಾರಣಕರ್ತರು ಎಂದರು.