ಚಲಿಸುವ ರೈಲಿಗೆ ಹತ್ತಲು ಹೋಗಿ ಕಾಲು ಜಾರಿ ಬಿದ್ದು ಖಾಸಗಿ ಕಂಪನಿ ಎಂಜನಿಯರ್‌ವೊಬ್ಬರು ಮೃತಪಟ್ಟಿರುವ ಘಟನೆ ಜ್ಞಾನಭಾರತಿ ರೈಲ್ವೆ ನಿಲ್ದಾಣದಲ್ಲಿ ನಡೆದಿದೆ.

ಕನ್ನಡಪ್ರಭ ವಾರ್ತೆ ಬೆಂಗಳೂರು

ಚಲಿಸುವ ರೈಲಿಗೆ ಹತ್ತಲು ಹೋಗಿ ಕಾಲು ಜಾರಿ ಬಿದ್ದು ಖಾಸಗಿ ಕಂಪನಿ ಎಂಜನಿಯರ್‌ವೊಬ್ಬರು ಮೃತಪಟ್ಟಿರುವ ಘಟನೆ ಜ್ಞಾನಭಾರತಿ ರೈಲ್ವೆ ನಿಲ್ದಾಣದಲ್ಲಿ ನಡೆದಿದೆ.

ಬೆಂಗಳೂರು ದಕ್ಷಿಣ ಜಿಲ್ಲೆ ರಾಮನಗರ ತಾಲೂಕಿನ ಕೂಟಗಲ್ ಹೋಬಳಿಯ ಕೆ.ಹೊಸೂರು ಗ್ರಾಮದ ಎಚ್‌.ಜಿ.ಗಿರೀಶ್ (37) ಮೃತ ದುರ್ದೈವಿ. ಕೆಲಸ ಮುಗಿಸಿಕೊಂಡು ಗುರುವಾರ ರಾತ್ರಿ ಅವರು ಮನೆಗೆ ಮರಳುವಾಗ ಈ ಘಟನೆ ನಡೆದಿದೆ.

ಕೋಲಾರ ಜಿಲ್ಲೆಯ ಮಾಲೂರಿನ ಖಾಸಗಿ ಕಂಪನಿಯಲ್ಲಿ ಗಿರೀಶ್ ಉದ್ಯೋಗದಲ್ಲಿದ್ದು, ಪ್ರತಿ ದಿನ ರೈಲಿನಲ್ಲೇ ತಮ್ಮೂರಿನಿಂದ ಅವರು ಓಡಾಡುತ್ತಿದ್ದರು. ಮಾಲೂರಿನಿಂದ ರೈಲಿನಲ್ಲಿ ಜ್ಞಾನಭಾರತಿಗೆ ಬಂದು ಅಲ್ಲಿಂದ ಮತ್ತೊಂದು ರೈಲಿನಲ್ಲಿ ಮನೆಗೆ ಗಿರೀಶ್ ಮರಳುತ್ತಿದ್ದರು. ಅಂತೆಯೇ ಗುರುವಾರ ರಾತ್ರಿ 7.45 ಗಂಟೆಗೆ ಮೈಸೂರಿಗೆ ಸಾಗುತ್ತಿದ್ದ ಪ್ಯಾಸೆಂಜರ್‌ ರೈಲನ್ನು ಹತ್ತಿಕೊಳ್ಳಲು ಮುಂದಾಗಿದ್ದಾರೆ. ಆಗ ಆಯ ತಪ್ಪಿ ಹಳಿಗೆ ಅವರು ಬಿದ್ದಾಗ ರೈಲಿನ ಚಕ್ರಗಳಿಗೆ ಸಿಲುಕಿ ಮೃತಪಟ್ಟಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ. ಸಿಟಿ ರೈಲ್ವೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.