ಕನ್ನಡಪ್ರಭ ವಾರ್ತೆ ಬೆಂಗಳೂರು

ಪರಿಸರ ಸಂರಕ್ಷಣೆ ಯುವ ಸಮೂಹದ ಹೊಣೆಯಾಗಿದೆ. ಹೀಗಾಗಿ ಭವಿಷ್ಯದ ಹಿತದೃಷ್ಟಿಯಿಂದ ಶಿಕ್ಷಣ ಸಂಸ್ಥೆಗಳು ಯುವ ಪೀಳಿಗೆಯಲ್ಲಿ ಪರಿಸರ ಜಾಗೃತಿ ಮತ್ತು ವೈಜ್ಞಾನಿಕ ಮನೋಭಾವ ಬೆಳೆಸಬೇಕಾದ ಅಗತ್ಯವಿದೆ ಎಂದು ವಿಧಾನಪರಿಷತ್ತಿನ ಸಭಾಪತಿ ಬಸವರಾಜ ಹೊರಟ್ಟಿ ತಿಳಿಸಿದ್ದಾರೆ.ಶುಕ್ರವಾರ ಡಾ.ಮನಮೋಹನ್‌ ಸಿಂಗ್‌ ಬೆಂಗಳೂರು ನಗರ ವಿಶ್ವವಿದ್ಯಾಲಯದ ಪರಿಸರ ಮತ್ತು ಹವಾಮಾನ ಬದಲಾವಣೆ ಅಧ್ಯಯನ ವಿಭಾಗದಿಂದ ಜ್ಞಾನಜ್ಯೋತಿ ಸಭಾಂಗಣದಲ್ಲಿ ಆಯೋಜಿಸಲಾಗಿದ್ದ ವಿಶ್ವ ಪರಿಸರ ದಿನಾಚರಣೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ವಿದ್ಯಾರ್ಥಿ ದೆಸೆಯಲ್ಲಿಯೇ ಪ್ರಕೃತಿ ಪ್ರೇಮ ಬೆಳೆಸಬೇಕು. ಅದಕ್ಕಾಗಿ ವಿಶ್ವವಿದ್ಯಾಲಯಗಳು ಸೇರಿದಂತೆ ಶಿಕ್ಷಣ ಸಂಸ್ಥೆಗಳು ಪೂರಕ ಕ್ರಮಗಳನ್ನು ಕೈಗೊಳ್ಳಬೇಕು. ಪರಿಸರಕ್ಕೆ ಹಾನಿ ಮಾಡುವವರನ್ನು ಪ್ರಶ್ನಿಸುವ ಮತ್ತು ಅಂತಹ ಪ್ರಯತ್ನಗಳನ್ನು ತಡೆಯುವ ಸಾಮಾಜಿಕ ಪ್ರಜ್ಞೆ ಮತ್ತು ಧೈರ್ಯವನ್ನು ಯುವ ಜನರಲ್ಲಿ ಬೆಳೆಸಬೇಕು. ಹಾಗೆಯೇ ಹುಟ್ಟೂರು, ಹೆತ್ತವರು, ಕಲಿತ ಶಾಲೆ ಮತ್ತು ಕಷ್ಟಕಾಲದಲ್ಲಿ ನೆರವಾದವರನ್ನು ಎಂದಿಗೂ ಮರೆಯಬಾರದು ಎಂದರು.

ವಿಧಾನಪರಿಷತ್‌ ಸದಸ್ಯ ತಿಪ್ಪಣ್ಣಪ್ಪ ಕಮಕನೂರು, ವಿಶ್ವವಿದ್ಯಾಲಯದ ಕುಲಪತಿ ಪ್ರೊ. ಬಿ.ರಮೇಶ್‌, ಕುಲಸಚಿವ ಎ. ನವೀನ್‌ ಜೋಸೆಫ್‌, ಕುಲಸಚಿವ (ಮೌಲ್ಯಮಾಪನ) ಪ್ರೊ. ರಮೇಶ್‌ ಬಿ.ಕುಡೇನಟ್ಟಿ ಇತರರಿದ್ದರು.