ಸಾರಾಂಶ
ಕನ್ನಡಪ್ರಭ ವಾರ್ತೆ ಹೊಸದುರ್ಗ
ಮಕ್ಕಳ ತಾಂತ್ರಿಕ ಶಿಕ್ಷಣಕ್ಕಾಗಿ ರಾಜ್ಯ ಸರ್ಕಾರ ತಾಲೂಕಿಗೆ ನೂತನ ಎಂಜಿನಿಯರಿಂಗ್ ಕಾಲೇಜು ಮಂಜೂರುಮಾಡಿದೆ ಎಂದು ಶಾಸಕ ಬಿ.ಜಿ.ಗೋವಿಂದಪ್ಪ ತಿಳಿಸಿದರು.ಪಟ್ಟಣದ ಸಿದ್ದರಾಮೇಶ್ವರ ಸಮುಧಾಯ ಭವನದಲ್ಲಿ ಶನಿವಾರ ವೀರಶೈವ ಲಿಂಗಾಯಿತ ನೌಕರರ ಕ್ಷೇಮಾಭಿವೃದ್ಧಿ ಸಂಘ ಆಯೋಜಿಸಿದ್ದ ಶೈಕ್ಷಣಿಕ ಹಾಗೂ ವೃತ್ತಿ ಮಾರ್ಗದರ್ಶನ ಕಾರ್ಯಾಗಾರ ಉದ್ಘಾಟಿಸಿ ಮಾತನಾಡಿ, ನೂತನ ಎಂಜಿನಿಯರ್ ಕಾಲೇಜು ನಿರ್ಮಾಣಕ್ಕೆ ಸರ್ಕಾರ ₹50 ಕೋಟಿ ಅನುದಾನ ಬಿಡುಗಡೆ ಮಾಡಿದೆ. ಕಾಲೇಜು ಕಟ್ಟಡ ನಿರ್ಮಾಣಕ್ಕಾಗಿ ಅಗತ್ಯವಿರುವ 5 ಎಕರೆ ಭೂಮಿ ಒದಗಿಸುವಂತೆ ತಹಸೀಲ್ದಾರರಿಗೆ ಸೂಚಿಸಲಾಗಿದೆ. ಶ್ರೀರಾಂಪುರ ಹೋಬಳಿ ಮಾಳಪ್ಪನಹಳ್ಳಿ ಗೇಟ್ ಅಥವಾ ದೊಡ್ಡ ಕಿಟ್ಟದಹಳ್ಳಿ ಬಳಿ ಜಾಗ ಗುರುತಿಸಲಾಗುವುದು ಎಂದರು.
ತಾಲೂಕಿಗೆ 100 ಕಾಲೇಜು ವಿಧ್ಯಾರ್ಥಿನಿಯರ ಸಾರ್ಮಥ್ಯದ ವಸತಿ ನಿಲಯ ಮಂಜೂರಾಗಿದ್ದು, ಪ್ರಸಕ್ತ ವರ್ಷದಲ್ಲಿಯೇ ಆರಂಭಗೊಳ್ಳಲಿದೆ. ಹೊಸದಾಗಿ ಮುರಾರ್ಜಿ ದೇಸಾಯಿ ವಸತಿ ಶಾಲೆ ಮಂಜೂರಾಗಿದ್ದು, ಹತ್ತು ಎಕರೆ ಸರ್ಕಾರಿ ಜಮೀನು ಲಭ್ಯವಿರುವ ಜಾಗದಲ್ಲಿ ಶಾಲೆ ಆರಂಭ ಮಾಡಲಾಗುವುದು. ತಾಲೂಕಿನ ಶೈಕ್ಷಣಿಕ ಅಭಿವೃದ್ಧಿಗೆ ಬದ್ಧವಾಗಿ ಕೆಲಸ ಮಾಡಲಾಗುವುದು ಎಂದರು.ವೀರಶೈವ ಲಿಂಗಾಯಿತ ನೌಕರರ ಕ್ಷೇಮಾಭಿವೃದ್ಧಿ ಸಂಘವು ತಾಲೂಕಿನಲ್ಲಿ ಸಮಾಜಮುಖಿಯಾದ ಕೆಲಸ ಮಾಡುತ್ತಿದೆ. ಮಕ್ಕಳು ಶಿಕ್ಷಣದ ಜೊತೆಗೆ ಉತ್ತಮ ಸಂಸ್ಕಾರ ರೂಡಿಸಿಕೊಂಡರೆ ಮಾತ್ರ ಬದುಕಿನಲ್ಲಿ ಯಶಸ್ಸು ಗಳಿಸಬಹುದು. ಮಕ್ಕಳನ್ನು ಅಭಿನಂದಿಸುವ ಜೊತೆಗೆ ವೃತ್ತಿ ಮಾರ್ಗದರ್ಶನ ನೀಡುವ ಮೂಲಕ ಉನ್ನತ ಶಿಕ್ಷಣದ ಅವಕಾಶ ತಿಳಿಸುವ ಕೆಲಸ ಮಾಡುತ್ತಿರುವುದು ಶ್ಲಾಘನೀಯ ಎಂದರು.
ಹಾಸನದ ವಿವೇಕ್ ಬ್ಯೂರೋ ಕೇಂದ್ರ ಸಂಸ್ಥಾಪಕ ಶಿವಕುಮಾರ್, ಪ್ರೌಡಶಾಲೆ ಹಾಗೂ ಕಾಲೇಜು ವಿಧ್ಯಾರ್ಥಿಗಳಿಗೆ ಎಸ್‌ಎಸ್‌ಎಲ್‌ಸಿ ಹಾಗೂ ಪಿಯುಸಿ ನಂತರದ ಶಿಕ್ಷಣದ ಅವಕಾಶಗಳ ಕುರಿತು ಅರಿವು ಮೂಡಿಸಿದರು. ವೃತ್ತಿ ಪರ ಕೋರ್ಸ್, ಸ್ಪರ್ಧಾತ್ಮಕ ಪರೀಕ್ಷೆಗಳು, ಆರ್ಥಿಕ ಹಾಗೂ ಔದ್ಯೋಗಿಕ ಕ್ಷೇತ್ರದಲ್ಲಿರುವ ಅವಕಾಶಗಳ ಕುರಿತು ತಿಳಿಸಿಕೊಟ್ಟರು. ಸುಮಾರು ಒಂದು ಸಾವಿರಕ್ಕೂ ಹೆಚ್ಚು ವಿಧ್ಯಾರ್ಥಿಗಳು ಹಾಗೂ ಪೋಷಕರು ಕಾರ್ಯಾಗಾರದಲ್ಲಿ ಪಾಲ್ಗೊಂಡು ಸಂವಾದ ನಡೆಸಿದರು.ರಾಜ್ಯ ಖನಿಜ ನಿಗಮದ ಮಾಜಿ ಅಧ್ಯಕ್ಷ ಎಸ್.ಲಿಂಗಮೂರ್ತಿ ಮಾತನಾಡಿ, ಭಾರತವು ಪ್ರಪಂಚದ 5 ನೇ ಆರ್ಥಿಕ ಶಕ್ತಿಯಾಗಿ ಬೆಳೆಯಲು ದೇಶವು ಶಿಕ್ಷಣದಲ್ಲಿ ಸಾಧಿಸಿರುವ ಸಾಧನೆ ಕಾರಣವಾಗಿದೆ. ಶೈಕ್ಷಣಿಕ ಶಕ್ತಿ ಪಡೆಯುವ ಮೂಲಕ ಮಕ್ಕಳು ದೇಶದ ಪ್ರಗತಿಗೆ ಕೈಜೋಡಿಸಬೇಕು. ತಾಲೂಕಿನ ವೀರಶೈವ-ಲಿಂಗಾಯಿತ ನೌಕರರ ಕ್ಷೇಮಾಭಿವೃದ್ದಿ ಸಂಘವು ರಾಜ್ಯದಲ್ಲಿಯೇ ಉತ್ತಮವಾದ ಕೆಲಸ ಮಾಡುತ್ತಿದೆ. ಲಿಂಗಾಯಿತ ಸಮಾಜದ ಒಳ ಪಂಗಡ ಒಟ್ಟುಗೂಡಿಸಿ ಸಮಾಜ ಕಟ್ಟುವ ಕೆಲಸ ಮಾಡುತ್ತಿರುವ ಸಂಘಕ್ಕೆ ಯಾವಾಗಲೂ ಬೆಂಬಲ ನೀಡುತ್ತೆನೆ ಎಂದರು.
ಸಂಘದ ಕಾರ್ಯಾಧ್ಯಕ್ಷ ಎಲ್.ಜಯಪ್ಪ ಮಾತನಾಡಿ, ಕಳೆದ 12 ವರ್ಷಗಳಿಂದ ವೀರಶೈವ-ಲಿಂಗಾಯಿತ ನೌಕರರ ಕ್ಷೇಮಾಭಿವೃದ್ಧಿ ಸಂಘವು ಸಮುದಾಯದ ಮಕ್ಕಳಿಗೆ ಶೈಕ್ಷಣಿಕ ಅವಕಾಶಗಳ ಕುರಿತು ಅರಿವು ಮೂಡಿಸುವ ಕೆಲಸ ಮಾಡುತ್ತಿದೆ. ಉತ್ತಮ ಸಾಧನೆ ಮಾಡಿದ ಮಕ್ಕಳನ್ನು ಬೆನ್ನು ತಟ್ಟಿ ಪ್ರೋತ್ಸಾಹಿಸಿದರೆ ಸಮಾಜಕ್ಕೆ ಆಸ್ತಿಯಾಗುತ್ತಾರೆ. ಸ್ಫರ್ದಾತ್ಮಕ ಪರೀಕ್ಷೆಗಳ ತಯಾರಿಗಾಗಿ ಮಕ್ಕಳನ್ನು 6ನೇ ತರಗತಿಯಿಂದ ಸಿದ್ಧಗೊಳಿಸುವ ಅವಶ್ಯಕತೆಯಿದೆ ಎಂದರು.ಜಿಲ್ಲಾ ವೀರಶೈವ ಮಹಾಸಭಾದ ಅಧ್ಯಕ್ಷ ಮಹಡಿ ಶಿವಮಾರ್ತಿ, ಡಾ.ಸಂಜಯ್, ಸಂಘದ ಗೌರವ ಅಧ್ಯಕ್ಷ ಎಲ್ ಜಯಪ್ಪ, ಲಯನ್ಸ ಅಧ್ಯಕ್ಷ ಕೆ.ಎಸ್.ರೇವಣ್ಣ, ಮುಖಂಡರಾದ ಮರಿದಿಮ್ಮಪ್ಪ, ಶಿವಮೂರ್ತಿ, ಮಾಜಿ ಜಿಪಂ ಸದಸ್ಯರಾದ ಹನುಮಂತಪ್ಪ, ಗುರುಸ್ವಾಮಿ ಎಂ.ಪಿ.ರಂಗೇಶ್, ತಾ. ಮಹಾಸಭಾ ಅಧ್ಯಕ್ಷ ಎಸ್.ಮಂಜುನಾಥ, ಉಪನ್ಯಾಸಕ ಶಿವಕುಮಾರ್, ತಾಲೂಕು ಕಸಾಪ ಅಧ್ಯಕ್ಷ ಬಿ.ಪಿ.ಓಂಕಾರಪ್ಪ, ಭಾಗವಹಿಸಿದ್ದರು.
ಎಸ್ಎಸ್ಎಲ್‌ಸಿ ಮತ್ತು ಪಿಯುಸಿ ಪ್ರತಿಭಾವಂತ ವಿದ್ಯಾರ್ಥಿಗಳನ್ನು ಗೌರವಿಸಲಾಯಿತು.ಶಿಕ್ಷಣದಲ್ಲಿ ಯಾವ ವಿದ್ಯಾರ್ಥಿಯು ದಡ್ಡನಲ್ಲ, ಅವರಿಗೆ ಪ್ರೋತ್ಸಾಹದಾಯಕ ಕಲಿಕೆಗೆ ಪ್ರೇರಣೆ ನೀಡಿದರೆ ಶೈಕ್ಷಣಿಕವಾಗಿ ಮುಂದೆ ಬರಲು ಸಾಧ್ಯ ಎಂದು ಪಂಡಿತಾರಾಧ್ಯ ಸ್ವಾಮೀಜಿ ಅಭಿಪ್ರಾಯಪಟ್ಟರು.ಪಟ್ಟಣದ ಸಿದ್ದರಾಮನಗರದಲ್ಲಿ ಶನಿವಾರ ತಾಲೂಕ ವೀರಶೈವ ಲಿಂಗಾಯತ ನೌಕರ ಸಂಘ ಆಯೋಜಿಸಿದ್ದ ಪ್ರತಿಭಾ ಪುರಸ್ಕಾರ ಕಾರ್ಯಕ್ರಮದಲ್ಲಿ ಸಾನ್ನಿಧ್ಯವಹಿಸಿ ಮಾತನಾಡಿ, ಸಮಾಜದಲ್ಲಿನ ಆರ್ಥಿಕವಾಗಿ ಹಿಂದುಳಿದ ಮಕ್ಕಳ ಶಿಕ್ಷಣಕ್ಕೆ ಆರ್ಥಿಕವಾಗಿ ಉನ್ನತ ಸ್ಥಾನ ಪಡೆದಿರುವವರು ಸಹಕಾರ ನೀಡಬೇಕು ಎಂದರು.
ಕುಂಚಿಟಿಗ ಮಹಾಸಂಸ್ಥಾನ ಮಠದ ಶಾಂತವೀರ ಸ್ವಾಮೀಜಿ ಮಾತನಾಡಿ, ಮಕ್ಕಳಿಗೆ ನೈತಿಕ ಶಿಕ್ಷಣ ಕೊಡುವ ನಿಟ್ಟಿನಲ್ಲಿ ಪೂರಕವಾದ ನಿರ್ಮಾಣ ಮಾಡಬೇಕು. ಮಕ್ಕಳಿಗೆ ಸಂಸ್ಕಾರಯುತ ಶಿಕ್ಷಣ ಕೊಡುವ ಮೂಲಕ ಸಮಾಜದ ಉತ್ತಮ ಪ್ರಜೆಯನ್ನಾಗಿ ರೂಪಿಸುವ ಹೊಣೆಗಾರಿಕೆ ಎಲ್ಲರದ್ದು ಎಂದರು.ಎಂಎಲ್‌ಸಿಕೆಎಸ್ ನವೀನ್, ರಾಜ್ಯ ಖನಿಜ ನಿಗಮದ ಮಾಜಿ ಅಧ್ಯಕ್ಷ ಲಿಂಗಮೂರ್ತಿ, ಚಿಂತಕ ಚಟ್ನಹಳ್ಳಿ ಮಹೇಶ ಉಪನ್ಯಾಸ ನೀಡಿದರು. ನೌಕರರ ಸಂಘದ ಅಧ್ಯಕ್ಷ ಶಶಿಧರ ಅಧ್ಯಕ್ಷತೆ ವಹಿಸಿದ್ದರು. ನಿ.ಪೋಲಿಸ್ ಕಮೀಷನರ ಎಚ್.ಎನ್.ಸಿದ್ದರಾಮಪ್ಪ ಅಭಿನಂದನೆ ಸ್ವೀಕರಿಸಿ ಮಾತನಾಡಿದರು.