ಸಾರಾಂಶ
ಹಾವೇರಿ: 3ನೇ ಸೆಮಿಸ್ಟರ್ ಪರೀಕ್ಷೆಯಲ್ಲಿ ಫೇಲ್ ಆಗಿದ್ದಕ್ಕೆ ಮನನೊಂದು ಇಲ್ಲಿಯ ಸರ್ಕಾರಿ ಎಂಜಿನಿಯರಿಂಗ್ ಕಾಲೇಜಿನ ವಿದ್ಯಾರ್ಥಿ ಕೆರೆಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ತಾಲೂಕಿನ ದೇವಗಿರಿಯಲ್ಲಿ ನಡೆದಿದೆ.ಬೆಳಗಾವಿ ಜಿಲ್ಲೆಯ ಬೈಲಹೊಂಗಲ ತಾಲೂಕಿನ ನಾವಲಗಟ್ಟಿ ಗ್ರಾಮದ ಉಲ್ಲಾಸ ವೀರಪ್ಪ ಹುದಲಿ (21) ಆತ್ಮಹತ್ಯೆ ಮಾಡಿಕೊಂಡಿರುವ ವಿದ್ಯಾರ್ಥಿ.ಈತ ಇಲ್ಲಿಯ ದೇವಗಿರಿ ಸರ್ಕಾರಿ ಎಂಜಿನಿಯರಿಂಗ್ ಕಾಲೇಜಿನಲ್ಲಿ ಎಲೆಕ್ಟ್ರಾನಿಕ್ಸ್ ಮತ್ತು ಕಮ್ಯುನಿಕೇಷನ್ ವಿಭಾಗದ ನಾಲ್ಕನೇ ಸೆಮಿಸ್ಟರ್‌ನಲ್ಲಿ ಅಧ್ಯಯನ ಮಾಡುತ್ತಿದ್ದ. ಇತ್ತೀಚೆಗೆ ಪ್ರಕಟಗೊಂಡಿದ್ದ 3ನೇ ಸೆಮಿಸ್ಟರ್‌ನ ಒಂದು ವಿಷಯದಲ್ಲಿ ಫೇಲ್ ಆಗಿದ್ದಕ್ಕೆ ಮನನೊಂದು, ಬೇಸರದಲ್ಲಿದ್ದ ಎನ್ನಲಾಗಿದೆ. ಎರಡು ದಿನದಿಂದ ಕಾಲೇಜಿಗೂ ಹೋಗಿರಲಿಲ್ಲ, ಇದರಿಂದ ಸಹಪಾಠಿಗಳು ಗಾಬರಿಗೊಂಡು ಹುಡುಕಾಟ ನಡೆಸಿದ್ದರು. ದೇವಗಿರಿ ಗ್ರಾಮದಲ್ಲಿರುವ ಕೆರೆಯ ದಡದಲ್ಲಿ ಆತನ ಮೊಬೈಲ್ ಹಾಗೂ ಕೈಕಡಗ ಸೋಮವಾರ ಪತ್ತೆಯಾಗಿತ್ತು. ಇದನ್ನು ಆಧರಿಸಿ ಪೊಲೀಸರು ಹುಡುಕಾಟ ನಡೆಸಿದ್ದರು. ಮಂಗಳವಾರ ಬೆಳಗ್ಗೆ ಉಲ್ಲಾಸನ ಮೃತದೇಹ ಪತ್ತೆಯಾಗಿದೆ. ಈ ಕುರಿತು ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.
ಅಂಗನವಾಡಿ ಹಾಲಿನಪುಡಿ ಪೂರೈಕೆಯಲ್ಲಿ ಅವ್ಯವಹಾರ: ಆರೋಪಹಾವೇರಿ: ಹಾನಗಲ್ಲ ತಾಲೂಕಿನ ಅಂಗನವಾಡಿ ಕೇಂದ್ರಗಳಿಗೆ ಸರಬರಾಜು ಮಾಡಬೇಕಿದ್ದ ಹಾಲಿನಪುಡಿ ಹಾಗೂ ಇನ್ನಿತರ ಪೌಷ್ಟಿಕ ಆಹಾರ ಸರಬರಾಜಿನಲ್ಲಿ ಅವ್ಯವಹಾರ ನಡೆದಿದ್ದು, ಹಾಲಿ ನ್ಯಾಯಾಧೀಶರ ನೇತೃತ್ವದಲ್ಲಿ ಈ ಬಗ್ಗೆ ತನಿಖೆ ನಡೆಸಿ ತಪ್ಪಿತಸ್ಥರ ಮೇಲೆ ಶಿಸ್ತು ಕ್ರಮ ಕೈಗೊಳ್ಳಬೇಕು ಎಂದು ಮಾನವ ಹಕ್ಕುಗಳ ಕಾರ್ಯಕರ್ತ ಮಂಜುನಾಥ ಕರ್ಜಗಿ ಒತ್ತಾಯಿಸಿದರು.ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಹಾಲಿನ ಪುಡಿ ಪೂರೈಕೆ ಕುರಿತು ಜಿಲ್ಲಾ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯಿಂದ ಮಾಹಿತಿ ಹಕ್ಕಿನ ಅಡಿಯಲ್ಲಿ ಪಡೆದ ಎಲ್ಲ ದಾಖಲೆಗಳಲ್ಲಿ ಮೇಲ್ನೋಟಕ್ಕೆ ಅವ್ಯವಹಾರ ನಡೆದಿರುವುದು ಸ್ಪಷ್ಟವಾಗಿದೆ. ಅಲ್ಲದೇ ಇಲಾಖಾ ಆಂತರಿಕ ತನಿಖೆಯಲ್ಲಿ ಹಾನಗಲ್ಲ ತಾಲೂಕು ಸಿಡಿಪಿಒ, ಶಿಶು ಅಭಿವೃದ್ಧಿ ಯೋಜನಾಧಿಕಾರಿಗಳ ಕಚೇರಿ ಸಿಬ್ಬಂದಿ, ಎಂಎಸ್‌ಪಿಸಿಯವರು ಈ ಹಾಲಿನಪುಡಿ ಸರಬರಾಜಿನಲ್ಲಿ ಅಕ್ರಮ ಎಸಗಿದ್ದು ಮೇಲ್ನೋಟಕ್ಕೆ ಕಂಡುಬಂದಿದೆ ಎಂದು ತಿಳಿಸಿದ್ದಾರೆ. ಆದರೆ ಈವರೆಗೂ ಯಾವುದೇ ಕ್ರಮ ಜರುಗಿಸಿಲ್ಲ.
ಹಾನಗಲ್ಲ ತಾಲೂಕಿಗೆ ಎರಡು ಲೋಡ್‌ಗಳಷ್ಟು ಹಾಲಿನಪುಡಿ ಸರಬರಾಜು ಆಗಿದ್ದರೆ, ಕೇವಲ ಒಂದು ಲೋಡ್ ಮಾತ್ರ ಹಂಚಿಕೆಯಾಗಿದೆ. ಈ ಕುರಿತು ತಾಲೂಕಿನ ವಿವಿಧ ಅಂಗನವಾಡಿಗಳಲ್ಲಿ ಮಾಹಿತಿ ಪಡೆದಾಗ ಕಳೆದ ಕೆಲವು ತಿಂಗಳಿಂದ ಹಾಲಿನಪುಡಿ ಸರಬರಾಜು ಆಗಿಲ್ಲ ಎಂದೂ, ಮತ್ತೆ ಕೆಲವೆಡೆ ಅನುದಾನ ಇಲ್ಲ ಎಂಬ ಉತ್ತರ ಹೇಳುತ್ತಿದ್ದಾರೆ. ಅಂಗನವಾಡಿಗಳಲ್ಲಿ ನಿರ್ವಹಿತ್ತಿರುವ ರಜಿಸ್ಟರ್‌ಗಳನ್ನೇ ಬದಲಿಸುವ ಕಾರ್ಯ ನಡೆದಿದೆ. ಅಂಗನವಾಡಿ ಮಕ್ಕಳಿಗೆ ಸಿಗಬೇಕಾದ ಹಾಲಿನ ಪುಡಿಯನ್ನು ಕಾಳಸಂತೆಯಲ್ಲಿ ಮಾರಾಟ ಮಾಡುತ್ತಿದ್ದು, ಇದರಲ್ಲಿ ಬೃಹತ್ ಅವ್ಯವಹಾರ ನಡೆಯುತ್ತಿದೆ. ಈ ಬಗ್ಗೆ ತುರ್ತು ಕ್ರಮ ಜರುಗಿಸಬೇಕೆಂದು ಆಗ್ರಹಿಸಿದರು.ಇತ್ತೀಚೆಗೆ ಜಿಲ್ಲೆಗೆ ಭೇಟಿ ನೀಡಿದ್ದ ಉಪಲೋಕಾಯುಕ್ತರಿಗೂ ಈ ಬಗ್ಗೆ ದೂರು ಸಲ್ಲಿಸಲಾಗಿದೆ. ಈ ಭ್ರಷ್ಟಾಚಾರದಲ್ಲಿ ಕೆಎಂಎಫ್ ಅಧಿಕಾರಿ, ಸಿಬ್ಬಂದಿ, ಹಾನಗಲ್ಲ ತಾಲೂಕಿನ ಸಿಡಿಪಿಒ ಹಾಗೂ ಕಚೇರಿ ಸಿಬ್ಬಂದಿ ಮತ್ತು ಎಂಎಸ್‌ಪಿಸಿ ಸಿಬ್ಬಂದಿ ಶಾಮೀಲಾಗಿರುವ ಶಂಕೆ ಇದ್ದು, ಕೂಡಲೇ ಹಾಲಿ ನ್ಯಾಯಾಧೀಶರ ನೇತೃತ್ವದಲ್ಲಿ ತಮ್ಮನ್ನೂ ಒಳಗೊಂಡ ಸಮಿತಿ ರಚಿಸಿ ತನಿಖೆ ನಡೆಸಿ ತಪ್ಪಿತಸ್ಥರ ವಿರುದ್ಧ ಕ್ರಮ ಜರುಗಿಸಬೇಕು. ಇದರಲ್ಲಿ ಶಾಮೀಲಾದ ಎಲ್ಲ ಸರ್ಕಾರಿ ಸಿಬ್ಬಂದಿಯನ್ನು ಅಮಾನತ್ತಿನಲ್ಲಿ ಇರಿಸಿ ವಿಚಾರಣೆ ನಡೆಸಿ ಅಂಗನವಾಡಿ ಮಕ್ಕಳಿಗೆ ನ್ಯಾಯ ದೊರಕಿಸಿಕೊಡಬೇಕೆಂದು ಎಂದರು. ಪ್ರಶಾಂತ ಮುಚ್ಚಂಡಿ ಇದ್ದರು.