ಎಂಜಿನಿಯರಿಂಗ್ ಮತ್ತು ಶಿಕ್ಷಣ ಕ್ಷೇತ್ರದಲ್ಲಿ ಭಾರತ ರತ್ನ ಮೋಕ್ಷಗುಂಡಂ ವಿಶ್ವೇಶ್ವರಯ್ಯ ಅವರ ಕೊಡುಗೆಯು ಗಮನಾರ್ಹ. ಭಾರತದಲ್ಲಿ ಅಣೆಕಟ್ಟು ಮತ್ತು ಜಲವಿದ್ಯುತ್ ಯೋಜನೆಗಳ ನಿರ್ಮಾಣದಲ್ಲಿ ಅವರ ಕೊಡುಗೆಯು ಅಪಾರವಾಗಿದೆ.

ಹಳಿಯಾಳ: ದೇಶ ನಿರ್ಮಾಣದಲ್ಲಿ ಎಂಜಿನಿಯರ್‌ಗಳ ಕೊಡುಗೆ ಅಪರಿಮಿತವಾಗಿದೆ. ಆದರೆ ಪ್ರಸ್ತುತ ದಿನಮಾನಗಳಲ್ಲಿ ದೇಶದಲ್ಲಿ ನಿರುದ್ಯೋಗಿ ಎಂಜಿನಿಯರ್‌ಗಳ ಸಮಸ್ಯೆಯು ಗಂಭೀರವಾಗಿ ಎದುರಾಗುತ್ತಿದೆ. ತಂತ್ರಜ್ಞಾನ ಯುಗದಲ್ಲಿ ಎಂಜಿನಿಯರ್‌ಗಳ ಕೈಗೆ ಕೆಲಸ ಇರಬೇಕು ಎಂದು ಎಂದು ರಾಜ್ಯ ಆಡಳಿತ ಸುಧಾರಣಾ ಆಯೋಗದ ಅಧ್ಯಕ್ಷ ಹಿರಿಯ ಶಾಸಕ ಆರ್.ವಿ. ದೇಶಪಾಂಡೆ ಹೇಳಿದರು.

ಮಂಗಳವಾರ ಪಟ್ಟಣದ ಪಿಡಬ್ಲ್ಯುಡಿ ಕಚೇರಿಯ ಆವರಣದಲ್ಲಿ ಆಯೋಜಿಸಿದ ಎಂಜಿನಿಯರ್ಸ್ ಡೇ ಸಮಾರಂಭದಲ್ಲಿ ಸರ್ ಎಂ. ವಿಶ್ವೇಶ್ವರಯ್ಯ ಅವರ ಪುತ್ಥಳಿಗೆ ಮಾಲಾರ್ಪಣೆ ಮಾಡಿ ಮಾತನಾಡಿದರು.

ಎಂಜಿನಿಯರಿಂಗ್ ಮತ್ತು ಶಿಕ್ಷಣ ಕ್ಷೇತ್ರದಲ್ಲಿ ಭಾರತ ರತ್ನ ಮೋಕ್ಷಗುಂಡಂ ವಿಶ್ವೇಶ್ವರಯ್ಯ ಅವರ ಕೊಡುಗೆಯು ಗಮನಾರ್ಹ. ಭಾರತದಲ್ಲಿ ಅಣೆಕಟ್ಟು ಮತ್ತು ಜಲವಿದ್ಯುತ್ ಯೋಜನೆಗಳ ನಿರ್ಮಾಣದಲ್ಲಿ ಅವರ ಕೊಡುಗೆಯು ಅಪಾರವಾಗಿದೆ. ಹಾಗಾಗಿ ವಿಶ್ವೇಶ್ವರಯ್ಯನವರನ್ನು ಮಹಾನ್ ರಾಷ್ಟ್ರ ನಿರ್ಮಾಪಕರಲ್ಲಿ ಒಬ್ಬರೆಂದು ಭಾರತದ ಮಹಾನ್ ಎಂಜಿನಿಯರ್‌ಗಳಲ್ಲಿ ಶ್ರೇಷ್ಠರೆಂದು ಪರಿಗಣಿಸಲಾಗುತ್ತಿದೆ ಎಂದರು.

ಟೆಂಡರ್ ಆಗಿಲ್ಲ, ಬಿಲ್ ಆಗಿಲ್ಲ, ಗುತ್ತಿಗೆದಾರರು ಕೆಲಸ ಮಾಡುತ್ತಿಲ್ಲ ಎಂಬ ಉತ್ತರವನ್ನೇ ನಾವಿಂದು ಎಂಜಿನಿಯರ್‌ಗಳಿಂದ ಕೇಳುತ್ತೇವೆ ವಿನಾ ಯಾವೊಬ್ಬ ಎಂಜಿನಿಯರ್‌ ಕಾಮಗಾರಿಯ ಗುಣಮಟ್ಟದ ಬಗ್ಗೆ ಮಾತನಾಡುತ್ತಿಲ್ಲ. ಇಂದು ದೇಶದ ಎಲ್ಲ ಎಂಜಿನಿಯರ್‌ಗಳಿಗೆ ಸರ್ ಎಂ. ವಿಶ್ವೇಶ್ವರಯ್ಯನವರು ಆದರ್ಶವಾಗಬೇಕು ಎಂದರು.

ಸನ್ಮಾನ: ಕಾರ್ಯಕ್ರಮದಲ್ಲಿ ರಾಜ್ಯಮಟ್ಟದ ಉತ್ತಮ ಶಿಕ್ಷಕ ಪ್ರಶಸ್ತಿ ಪುರಸ್ಕೃತ ಚಿಬ್ಬಲಗೇರಿ ಸರ್ಕಾರಿ ಪ್ರೌಢಶಾಲೆಯ ವಿಜ್ಞಾನ ಶಿಕ್ಷಕ, ಗೊಂಬೆಯಾಟ ತಜ್ಞ ಸಿದ್ದಪ್ಪ ಬಿರಾದಾರ ಹಾಗೂ ರಾಜ್ಯಮಟ್ಟದ ಉತ್ತಮ ಪ್ರಾಥಮಿಕ ಶಾಲೆ ಪ್ರಶಸ್ತಿ ಪುರಸ್ಕೃತ ಪಟ್ಟಣದ ಶಾಸಕರ ಮಾದರಿ ನಂ. 1 ಶಾಲೆಯ ಶಾಲಾಭಿವೃದ್ಧಿ ಸಮಿತಿ ಅಧ್ಯಕ್ಷ ಸುರೇಶ ಕೋಕಿತ್ಕರ್ ಹಾಗೂ ಶಿಕ್ಷಕಿ ಮಹಾದೇವಿಯವರನ್ನು ಶಾಸಕರು ಸನ್ಮಾನಿಸಿದರು.

ತಹಸೀಲ್ದಾರ್ ಫಿರೋಜಷಾ ಸೋಮನಕಟ್ಟಿ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಕೃಷ್ಣ ಪಾಟೀಲ, ಹಳಿಯಾಳ ಪಿಡಬ್ಲ್ಯುಡಿ ಎಇಇ ಸಂತೋಷ ಅಥಣಿ ಇದ್ದರು. ನಿವೃತ್ತ ಹಿರಿಯ ಕಾರ್ಯನಿರ್ವಾಹಕ ಎಂಜಿನಿಯರ್ ಆರ್.ಎಚ್.ಕುಲಕರ್ಣಿ, ಪಿಡಬ್ಲ್ಯುಡಿ ಎಇ ಸಂಜು ನಾಯ್ಕ, ಜಿಪಂ ಇಲಾಖೆಯ ಸತೀಶ, ಚಿಕ್ಕ ನೀರಾವರಿ ಇಲಾಖೆಯ ವೀರೇಶ್ ಬಿಜಾಪುರ, ಗ್ರಾಮೀಣ ನೀರು ಸರಬರಾಜು ಇಲಾಖೆಯ ಸಂಜೀವ ಬಿರಾದಾರ್, ಹೆಸ್ಕಾಂ ಎಇಇ ಗಣಪತಿ ಹಳ್ಯಾಳಕರ, ಒಳಚರಂಡಿ ವಿಭಾಗದ ಎಇಇ ರಷೀದ್ ರಿತ್ತಿ, ತಾನಾಜಿ ಕಾಳಗಿಣಕರ, ವಿಆರ್‌ಡಿ ಟ್ರಸ್ಟ್ ಆಡಳಿತಾಧಿಕಾರಿ ಪ್ರಕಾಶ ಪ್ರಭು ಹಾಗೂ ವಿವಿಧ ಇಲಾಖೆಯ ಹಿರಿಯ ಕಿರಿಯ ಎಂಜಿನಿಯರ್‌ಗಳು ಇದ್ದರು. ಕನ್ನಡ ಉಪನ್ಯಾಸಕ ಶಾಂತಾರಾಮ ಚಿಬುಲಕರ ಕಾರ್ಯಕ್ರಮ ನಿರೂಪಿಸಿದರು.