ಸಾರಾಂಶ
ಸಮ್ಮೇಳನದಲ್ಲಿ ತೆಗೆದುಕೊಳ್ಳುವ ನಿರ್ಣಯ ಅನುಷ್ಟಾನವಾಗಬೇಕು । ಚಿಕ್ಕಮಗಳೂರು ಪ್ರೆಸ್ ಕ್ಲಬ್‌ನಲ್ಲಿ ಸಂವಾದ
ಕನ್ನಡಪ್ರಭ ವಾರ್ತೆ, ಚಿಕ್ಕಮಗಳೂರುಪ್ರಾಥಮಿಕ ಶಿಕ್ಷಣದ ಹಂತದಿಂದಲೇ ಇಂಗ್ಲಿಷ್ ಭಾಷೆ ತುರುಕುವ ಕೆಲಸ ಆಗಬಾರದು ಎಂದು 87ನೇ ರಾಜ್ಯ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷ ಸಾಹಿತಿ ಗೊ.ರು. ಚನ್ನಬಸಪ್ಪ ಕಿವಿಮಾತು ಹೇಳಿದರು. ಚಿಕ್ಕಮಗಳೂರು ಪ್ರೆಸ್ ಕ್ಲಬ್‌ನಲ್ಲಿ ಮಂಗಳವಾರ ನಡೆದ ಸಂವಾದದಲ್ಲಿ ಮಾತನಾಡಿದ ಅವರು, ಕನ್ನಡ ಮಾಧ್ಯಮದಲ್ಲಿ ಮಕ್ಕಳು ಓದಿದರೆ ಮುಂದೆ ಉದ್ಯೋಗ ಸಿಗದಿರಬಹುದು. ಇಂದಿನ ಜಾಗತಿಕ ಸ್ಪರ್ಧಾತ್ಮಕ ಸಂದರ್ಭದಲ್ಲಿ ಇಂಗ್ಲಿಷ್ ಅಂತಾರಾಷ್ಟ್ರೀಯ ಸಂವಹನ ಭಾಷೆ ಆಗಿರುವುದರಿಂದ ಮಕ್ಕಳು ಇಂಗ್ಲಿಷ್ ಭಾಷೆ ಕಲಿಯದೆ ಹೋದರೆ ಅವರ ಭವಿಷ್ಯ ಆತಂಕಕ್ಕೆ ಒಳಗಾಗಬಹುದು ಎನ್ನುವ ಆತಂಕ ಪೋಷಕರಲ್ಲಿದೆ ಎಂದರು. ಈ ಆತಂಕ ನಿವಾರಣೆ ಮಾಡಲು ಪ್ರಾಥಮಿಕ ಹಂತದಿಂದಲೇ ಇಂಗ್ಲಿಷ್ ತುರುಕುವ ಕೆಲಸ ಆಗಬಾರದು. ಅದನ್ನು ಸಂವಿಧಾನ ದತ್ತವಾಗಿ ಆಯಾಯ ಪ್ರಾದೇಶಿಕ ಭಾಷೆಯಲ್ಲಿ ಶಿಕ್ಷಣ ಮಾಧ್ಯಮ ಇರಬೇಕೆಂದಿದೆ ಎಂದು ಹೇಳಿದರು. ಪ್ರಾಥಮಿಕ ಹಂತದಲ್ಲಿ ಯಾವುದೇ ಕಾರಣಕ್ಕೂ ಕನ್ನಡವಲ್ಲದೆ ಬೇರೆ ಭಾಷೆಯಲ್ಲೇ ಶಿಕ್ಷಣ ಹೇಳಬಾರದು. ಪ್ರಾಥಮಿಕ ಹಂತ ದ ನಂತರ ಯುವಕರು ಸ್ಪರ್ಧಾತ್ಮಕ ಪರೀಕ್ಷೆ ಎದುರಿಸಲು ಸಜ್ಜು ಮಾಡಲು ಬೇರೆ ಬೇರೆ ವಿಷಯಗಳ ಬಗ್ಗೆ ತರಬೇತಿ ನೀಡುವ ಹಾಗೆ ಇಂಗ್ಲಿಷ್ ನಲ್ಲೂ ತರಬೇತಿ ನೀಡಬೇಕು. ಆಗ ಪೋಷಕರಲ್ಲಿ ಭರವಸೆ ಉಂಟಾಗುತ್ತದೆ. ಇಂಗ್ಲಿಷ್ ಭ್ರಮೆ ಕಡಿಮೆ ಯಾಗಲಿದೆ. ಈ ಕೆಲಸ ರಾಜ್ಯ ಸರ್ಕಾರ ಮಾಡಬೇಕು ಎಂದರು.
ಸಮ್ಮೇಳನದಲ್ಲಿ ತೆಗೆದುಕೊಳ್ಳುವ ನಿರ್ಣಯಗಳು ಅನುಷ್ಠಾನಕ್ಕೆ ಬರುವುದಿಲ್ಲ ಎಂಬ ಪ್ರಶ್ನೆಗೆ ಉತ್ತರಿಸಿದ ಅವರು,ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ತೆಗೆದುಕೊಳ್ಳುವ ಕೆಲವು ನಿರ್ಣಯಗಳು ಸಂಸ್ಥೆಯೇ ಅನುಷ್ಠಾನಕ್ಕೆ ತರಬೇಕಾಗುತ್ತದೆ. ಇನ್ನು ಕೆಲವು ಸರ್ಕಾರ ಅನುಷ್ಠಾನಕ್ಕೆ ತರಬೇಕು. ಪರಿಷತ್ ತೆಗೆದುಕೊಂಡಿರುವ ನಿರ್ಣಯಗಳಲ್ಲಿ ಕೆಲವು ಮಾತ್ರ ಅನುಷ್ಟಾನಕ್ಕೆ ಬಂದಿವೆ. ಬಹುತೇಕ ಅನುಷ್ಟಾನಕ್ಕೆ ಬಂದಿಲ್ಲ ಎಂದು ಹೇಳಿದರು.ನಾನು ಪರಿಷತ್ ರಾಜ್ಯಾಧ್ಯಕ್ಷರಾಗಿದ್ದಾಗ ನಿರ್ಣಯಗಳ ಅನುಷ್ಠಾನ ಸಮಿತಿಯನ್ನ ಪರಿಷತ್‌ನಲ್ಲಿ ರಚನೆ ಮಾಡಿದ್ದೆ. ಆ ಸಮಿತಿ ಆ ನಿರ್ಣಯಕ್ಕೆ ಸಂಬಂಧಿಸಿದಂತೆ ಇಲಾಖೆ ಹಾಗೂ ಸಚಿವರೊಂದಿಗೆ ಸಂಪರ್ಕ ಬಳಸಿ ಒತ್ತಡ ಹಾಕಬೇಕೆಂದು ಸೂಚನೆ ನೀಡಲಾಗಿತ್ತು. ಈಗಲೂ ನಿರ್ಧಿಷ್ಟವಾದ ಶಾಶ್ವತವಾದ ಸಮಿತಿ ಪರಿಷತ್‌ನಲ್ಲಿ ಇದ್ದಿದ್ದರೆ, ನಿರ್ಣಯಗಳನ್ನು ಕಾರ್ಯಾನುಸರಣೆ ಮಾಡಲು ಹೆಚ್ಚು ಅನುಕೂಲವಾಗಲಿದೆ. ಪ್ರಾತಿನಿಧಿಕ ಸಂಸ್ಥೆ ತೆಗೆದುಕೊಳ್ಳುವ ನಿರ್ಣಯಗಳನ್ನ ಸರ್ಕಾರ ಗಂಭೀರವಾಗಿ ಪರಿಗಣಿಸಬೇಕು. ಈ ವಿಷಯದಲ್ಲಿ ಮತ್ತೆ ಮತ್ತೆ ಒತ್ತಾಯ ಮಾಡುವ ಅಗತ್ಯವಿಲ್ಲ ಎಂದರು.ಬೀದರ್‌ನಲ್ಲಿ ನಡೆದ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಅಮೃತ ನಿಧಿ ಆರಂಭ ಮಾಡಿದೆ. ಆದರೆ, ಆ ಯೋಜನೆ ಮುಂದುವರಿಯಲಿಲ್ಲ. ರಾಜ್ಯದ ಪ್ರತಿಯೊಬ್ಬ ಕನ್ನಡಿಗನು ಕನ್ನಡ ಸಾಹಿತ್ಯ ಪರಿಷತ್ ನನ್ನದು ಎಂಬ ಭಾವನಾತ್ಮಕ ಸಂಬಂಧ ಹೊಂದಬೇಕು. ಹಾಗಾಗಿ ಈ ಕಾರ್ಯಕ್ರಮ ಜಾರಿಗೆ ತರಲಾಗಿತ್ತು ಎಂದರು.
ಸರ್ಕಾರ ಸಾಹಿತ್ಯ ಪರಿಷತ್‌ಗೆ ನೆರವು ನೀಡುತ್ತಿದೆ. ಭಾರತ ದೇಶದಲ್ಲಿ ಬೇರೆ ಯಾವ ರಾಜ್ಯದಲ್ಲೂ ಕೂಡ ಕನ್ನಡದ ಸಂಸ್ಕೃತಿ ಮತ್ತು ಸಾಹಿತ್ಯಕ್ಕೆ ಸಂಬಂಧಿಸಿದಂತೆ ಕರ್ನಾಟಕ ಸರ್ಕಾರ ಕೊಡುವಷ್ಟು ಬೇರೆ ಯಾರೂ ಕೊಟ್ಟಿಲ್ಲ. ಪರಿಷತ್ ಶ್ರೀಮಂತ ಸಂಸ್ಥೆಯಾಗಿದೆ. ಸಹಜವಾಗಿ ವಿಸ್ತಾರವಾಗಿದೆ. ಪರಿಷತ್ ಬಗ್ಗೆ ಆಸಕ್ತಿ ಹೆಚ್ಚು ಬೆಳೆಯುತ್ತಿದೆ. ಸಾಹಿತ್ಯದ ಒಲವು ಹೆಚ್ಚಿಸಿಕೊಳ್ಳಲು ಓದುಗರ ಸಂಖ್ಯೆ ಹೆಚ್ಚಿಸಲು ವಾರ್ಷಿಕ ಸಮಾವೇಶಗಳು ಸಾಕಷ್ಟು ಪರಿಣಾಮ ಬೀರಿವೆ ಎಂದು ಹೇಳಿದರು.ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಸೂರಿ ಶ್ರೀನಿವಾಸ್ ಮಾತನಾಡಿದರು. ಚಿಕ್ಕಮಗಳೂರು ಪ್ರೆಸ್ ಕ್ಲಬ್ ಅಧ್ಯಕ್ಷ ಪಿ. ರಾಜೇಶ್ ಅಧ್ಯಕ್ಷತೆ ವಹಿಸಿದ್ದರು. ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ಮಾಜಿ ಅಧ್ಯಕ್ಷ ಎನ್. ರಾಜು, ಪ್ರೆಸ್ ಕ್ಲಬ್ ಪ್ರಧಾನ ಕಾರ್ಯದರ್ಶಿ ಆರ್. ತಾರಾನಾಥ್ ಉಪಸ್ಥಿತರಿದ್ದರು. ಖಜಾಂಚಿ ಎನ್.ಕೆ. ಗೋಪಿ ಸ್ವಾಗತಿಸಿದರು. ನಿರ್ದೇಶಕ ಉಮೇಶ್ ಕುಮಾರ್ ವಂದಿಸಿದರು.ಇದೇ ಸಂದರ್ಭದಲ್ಲಿ ಮಾಜಿ ಮುಖ್ಯಮಂತ್ರಿ ಎಸ್.ಎಂ. ಕೃಷ್ಣ ಅವರಿಗೆ ಮೌನಾಚರಣೆ ಮೂಲಕ ಸಂತಾಪ ಸೂಚಿಸ ಲಾಯಿತು.
--ಬಾಕ್ಸ್--ಏನ್ ಆತಿಥ್ಯ ಕೊಡ್ತಾರೋ ಸ್ವೀಕಾರ ಮಾಡ್ತೀವಿ:ಗೊರುಚಚಿಕ್ಕಮಗಳೂರು: ಕನ್ನಡ ಸಾಹಿತ್ಯ ಸಮ್ಮೇಳನದ ಹಿನ್ನಲೆಯಲ್ಲಿ ಸ್ವಾಗತ ಸಮಿತಿ ರಚನೆ ಮಾಡುವ ಆಹಾರ ಸಮಿತಿಯಲ್ಲಿ ಊಟಕ್ಕೆ ಸಂಬಂಧಿಸಿದಂತೆ ಏನು ನಿರ್ಧಾರ ಮಾಡುತ್ತಾರೋ ಅದನ್ನ ಊಟ ಮಾಡಬೇಕು ಎಂದು 87ನೇ ರಾಜ್ಯ ಕನ್ನಡ ಸಾಹಿತ್ಯ ಸಮ್ಮೇಳನಾಧ್ಯಕ್ಷ ಗೊ.ರು. ಚನ್ನಬಸಪ್ಪ ಹೇಳಿದರು.ಚಿಕ್ಕಮಗಳೂರು ಪ್ರೆಸ್ ಕ್ಲಬ್‌ನಲ್ಲಿ ಮಂಗಳವಾರ ನಡೆದ ಸಂವಾದ ಕಾರ್ಯಕ್ರಮದಲ್ಲಿ ಮಂಡ್ಯದಲ್ಲಿ ನಡೆಯಲಿರುವ ಸಮ್ಮೇಳನದಲ್ಲಿ ಬಾಡೂಟದ ವ್ಯವಸ್ಥೆ ಮಾಡಬೇಕೆಂಬ ಒತ್ತಾಯಕ್ಕೆ ಅವರು ಉತ್ತರಿಸಿದರು. ಬೇರೆಯವರ ಮನೆಗೆ ಹೋದ್ರೆ ಊಟಕ್ಕೆ ಇದೇ ಬೇಕೆಂದು ಹೇಳುವುದಿಲ್ಲ, ಅವರು ಏನು ಆತಿಥ್ಯ ಕೊಟ್ತಾರೋ ಸ್ವೀಕಾರ ಮಾಡ್ತಿವಿ ಎಂದು ಹೇಳಿದರು.
--ಸಾಹಿತಿ ಗೊರುಚ ಸಂತಾಪಮಾಜಿ ಮುಖ್ಯಮಂತ್ರಿ ಎಸ್.ಎಂ. ಕೃಷ್ಣ ಅವರು ನನ್ನ ಬಗ್ಗೆ ಅಪಾರ ಅಭಿಮಾನ ಹೊಂದಿದ್ದರು. ಕನ್ನಡ ರಾಜ್ಯೋತ್ಸವ ಪ್ರಶಸ್ತಿ ಅವರಿಂದ ಪ್ರದಾನ ಮಾಡಲಾಗಿತ್ತು. ಅವರು ನಿಧನದ ವಿಷಯ ಕೇಳಿ ವ್ಯಸನವಾಯಿತು ಎಂದು ಸಾಹಿತಿ ಗೊ.ರು. ಚನ್ನಬಸಪ್ಪ ಹೇಳಿದರು. ನಾನು ವಾರ್ತಾ ಇಲಾಖೆಯಲ್ಲಿದ್ದರಿಂದ ಅವರ ಸಂಪರ್ಕ ಆಗಾಗ ಬರುತ್ತಿತ್ತು. ಅವರು ಸಾಹಿತ್ಯ ಅಭಿಮಾನಿಗಳು, ಪರಿಷತ್‌ನ ಚಟುವಟಿಕೆಗೆ ಸಾಕಷ್ಟು ಬೆಂಬಲ ಕೊಟ್ಟವರು. ಅವರಿಗೆ ಗೌರವ ಪೂರ್ವಕ ಶ್ರದ್ಧಾಂಜಲಿ ಅರ್ಪಿಸುತ್ತೇನೆ ಎಂದರು.
--10 ಕೆಸಿಕೆಎಂ 1ಚಿಕ್ಕಮಗಳೂರು ಪ್ರೆಸ್ ಕ್ಲಬ್‌ನಲ್ಲಿ ಮಂಗಳವಾರ ಆಯೋಜಿಸಿದ್ದ ಸಂವಾದವನ್ನು 87ನೇ ರಾಜ್ಯ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷ, ಸಾಹಿತಿ ಗೊ.ರು. ಚನ್ನಬಸಪ್ಪ ಉದ್ಘಾಟಿಸಿದರು. ಸೂರಿ ಶ್ರೀನಿವಾಸ್, ರಾಜೇಶ್, ಎನ್. ರಾಜು, ಆರ್. ತಾರಾನಾಥ್, ಎನ್.ಕೆ. ಗೋಪಿ ಇದ್ದರು.