ಸಾರಾಂಶ
ಅಥಣಿ ಪಟ್ಟಣದ ತಾಪಂ ಸಭಾಂಗಣದಲ್ಲಿ ಬರಗಾಲ ಹಿನ್ನೆಲೆಯಲ್ಲಿ ಟಾಸ್ಕ್ ಫೋರ್ಸ್ ಸಮಿತಿ ಸಭೆಯ ಅಧ್ಯಕ್ಷತೆ ವಹಿಸಿದ್ದ ಶಾಸಕ ಲಕ್ಷ್ಮಣ ಸವದಿ ಮಾತನಾಡಿ, ಬೇಸಿಗೆ ಬಿಸಿಲಿನ ತಾಪ ಅಧಿಕವಾಗುತ್ತಿದ್ದು, ಅಗತ್ಯವಿರುವ ಗ್ರಾಮಗಳಲ್ಲಿ ಜನರಿಗೆ ಕುಡಿಯುವ ನೀರನ್ನು ಟ್ಯಾಂಕರ್ ಗಳ ಮೂಲಕ ಒದಗಿಸುವ ವ್ಯವಸ್ಥೆ ಕಲ್ಪಿಸಬೇಕು. ನೀರಿನ ಮೂಲಗಳ ಬಗ್ಗೆ ಮಾಹಿತಿ ಪಡೆದುಕೊಂಡು ಅಧಿಕಾರಿಗಳು ಈಗಿನಿಂದಲೇ ಜಾಗೃತಿ ವಹಿಸಬೇಕು ಎಂದು ಅಧಿಕಾರಿಗಳಿಗೆ ಎಚ್ಚರಿಕೆ ನೀಡಿದರು.
ಕನ್ನಡಪ್ರಭ ವಾರ್ತೆ ಅಥಣಿ
ಬೇಸಿಗೆ ಬಿಸಿಲಿನ ತಾಪ ಅಧಿಕವಾಗುತ್ತಿದ್ದು, ಅಗತ್ಯವಿರುವ ಗ್ರಾಮಗಳಲ್ಲಿ ಜನರಿಗೆ ಕುಡಿಯುವ ನೀರನ್ನು ಟ್ಯಾಂಕರ್ ಗಳ ಮೂಲಕ ಒದಗಿಸುವ ವ್ಯವಸ್ಥೆ ಕಲ್ಪಿಸಬೇಕು. ನೀರಿನ ಮೂಲಗಳ ಬಗ್ಗೆ ಮಾಹಿತಿ ಪಡೆದುಕೊಂಡು ಅಧಿಕಾರಿಗಳು ಈಗಿನಿಂದಲೇ ಜಾಗೃತಿ ವಹಿಸಬೇಕು ಎಂದು ಶಾಸಕ ಲಕ್ಷ್ಮಣ ಸವದಿ ಅಧಿಕಾರಿಗಳಿಗೆ ಎಚ್ಚರಿಕೆ ನೀಡಿದರು.ಗುರುವಾರ ಪಟ್ಟಣದ ತಾಪಂ ಸಭಾಂಗಣದಲ್ಲಿ ಬರಗಾಲ ಹಿನ್ನೆಲೆಯಲ್ಲಿ ಟಾಸ್ಕ್ ಫೋರ್ಸ್ ಸಮಿತಿ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿ, ತಾಲೂಕಿನ ಪೂರ್ವ ಭಾಗದ ತೆಲಸಂಗ ಹೋಬಳಿಯಲ್ಲಿ ಉತ್ತರ ಭಾಗದ ಅನಂತಪುರ ಹೋಬಳಿಯಲ್ಲಿನ ಅನೇಕ ಗ್ರಾಮಗಳ ತೋಟದ ವಸತಿಗಳಲ್ಲಿ ನೀರಿನ ಸಮಸ್ಯೆ ಬಗ್ಗೆ ದೂರು ಬರುತ್ತಿದ್ದು, ಗ್ರಾಮ ಪಂಚಾಯತಿ ಅಧಿಕಾರಿಗಳಿಗೆ ಸೂಚನೆ ನೀಡುವ ಮೂಲಕ ಜನರಿಗೆ ನೀರಿನ ತೊಂದರೆ ಆಗದಂತೆ ಪರ್ಯಾಯ ವ್ಯವಸ್ಥೆ ಮಾಡಬೇಕು. ಮುಂಬರುವ ದಿನಗಳಲ್ಲಿ ರೈತರ ಜಾನುವಾರುಗಳಿಗೆ ಮೇವಿನ ಸಮಸ್ಯೆ ಆಗದಂತೆ ಕೂಡಲೇ ಮೇವು ಬ್ಯಾಂಕ್ ಆರಂಭಿಸಲು ಸಿದ್ಧತೆ ಮಾಡಿಕೊಳ್ಳಬೇಕು ಎಂದು ಅಧಿಕಾರಿಗಳಿಗೆ ಸೂಚನೆ ನೀಡಿದರು.
ಟಾಸ್ಕ್ ಫೋರ್ಸ್ ಸಮಿತಿಯ ಅಧಿಕಾರಿಗಳು ಮುಂದಿನ ದಿನಗಳಲ್ಲಿ ಹೆಚ್ಚು ಜವಾಬ್ದಾರಿಯುತವಾಗಿ ಕರ್ತವ್ಯ ನಿರ್ವಹಿಸಬೇಕು. ನೀರಿಗೆ ಸಂಬಂಧಿಸಿದ ದೂರುಗಳು ಬಂದಲ್ಲಿ ತಕ್ಷಣವೇ ಪರ್ಯಾಯ ವ್ಯವಸ್ಥೆ ಕೈಗೊಳ್ಳಬೇಕು. ಅಧಿಕಾರಿಗಳಿಗೆ ಯಾವುದೇ ತಾಂತ್ರಿಕ ಸಮಸ್ಯೆಗಳು ಬಂದಲ್ಲಿ, ನನಗೆ ಮಾಹಿತಿ ನೀಡಿ, ನಾನು ಮೇಲಧಿಕಾರಿಗಳ ಜೊತೆ ಮಾತನಾಡಿ ಬಗೆಹರಿಸುವ ಪ್ರಯತ್ನ ಮಾಡುತ್ತೇನೆ ಎಂದು ಹೇಳಿದರು.ತಹಸೀಲ್ದಾರ್ ವಾಣಿ ಯು, ತಾಪಂ ಕಾರ್ಯನಿರ್ವಾಹಕ ಅಧಿಕಾರಿ ಶಿವಾನಂದ ಕಲ್ಲಾಪುರ, ಜಿಪಂ ಎಂಜಿನಿಯರಿಂಗ್ ವಿಭಾಗದ ಅಧಿಕಾರಿ ವೀರಣ್ಣ ವಾಲಿ, ತಾಲೂಕು ವೈದ್ಯಾಧಿಕಾರಿ ಡಾ. ಬಸವಗೌಡ ಕಾಗೆ, ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆಯ ರವೀಂದ್ರ ಮುರುಗಾಲಿ ಸೇರಿದಂತೆ ಇತರರು ಉಪಸ್ಥಿತರಿದ್ದರು.