ಸರ್ಕಾರಿ ಎಲ್ಲ ಇಲಾಖೆಗಳಲ್ಲಿ ಲಂಚ ಅವರ್ ಎಂದು ಮದ್ಯಾಹ್ನ 1.30ಕ್ಕೆ ಹೊರಗಡೆ ಹೋದರೆ 2.30ಕ್ಕೆ ವಾಪಸ್ ಬರುವುದಿಲ್ಲ, 3.30ಕ್ಕೆ ಬರುತ್ತಾರೆ
ಹರಪನಹಳ್ಳಿ: ತಾಲೂಕಿನಲ್ಲಿ ತೀವ್ರ ಬರಗಾಲವಿದೆ, ಕೂಲಿಕಾರರು ಗುಳೇ ಹೋಗದಂತೆ ನೋಡಿಕೊಳ್ಳಿ ಎಂದು ವಿವಿಧ ಇಲಾಖೆಗಳ ಅಧಿಕಾರಿಗಳಿಗೆ ಶಾಸಕಿ ಎಂ.ಪಿ. ಲತಾ ಮಲ್ಲಿಕಾರ್ಜುನ ಹೇಳಿದ್ದಾರೆ.
ಅವರು ನಗರದ ತಾಪಂ ರಾಜೀವಗಾಂಧಿ ಸಭಾಂಗಣದಲ್ಲಿ ಗುರುವಾರ ನಡೆದ ತ್ರೈಮಾಸಿಕ ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.ವಿಬಿಜಿ ರಾಂ ಜಿ ಯೋಜನೆಯಲ್ಲಿ ಸರ್ಕಾರದ ನಿರ್ದೆಶನದಂತೆ ಸಮರ್ಪಕವಾಗಿ ಕೂಲಿ ಕೆಲಸ ಕೊಡಿ, ಕುಡಿಯುವ ನೀರಿನ ಸಮಸ್ಯೆ ಆಗದಂತೆ ನಿಗಾವಹಿಸಿ, ದಿನನಿತ್ಯದ ಕೆಲಸ ಕಾರ್ಯಗಳಿಗೆ ಜನರು ತಮ್ಮ ಕಚೇರಿಗಳಿಗೆ ಬಂದಾಗ ಅಲೆದಾಡಿಸದೆ ತ್ವರಿತವಾಗಿ ಕೆಲಸ ಮಾಡಿ ಕೊಡಿ ಎಂದು ಅಧಿಕಾರಿಗಳು ಹಾಗೂ ಸಿಬ್ಬಂದಿಗೆ ತಾಕೀತು ಮಾಡಿದರು.
ಸರ್ಕಾರಿ ಎಲ್ಲ ಇಲಾಖೆಗಳಲ್ಲಿ ಲಂಚ ಅವರ್ ಎಂದು ಮದ್ಯಾಹ್ನ 1.30ಕ್ಕೆ ಹೊರಗಡೆ ಹೋದರೆ 2.30ಕ್ಕೆ ವಾಪಸ್ ಬರುವುದಿಲ್ಲ, 3.30ಕ್ಕೆ ಬರುತ್ತಾರೆ, ಪುನಃ 4 ಗಂಟೆಗೆ ಟೀ ಕುಡಿಯಲು ತೆರಳುತ್ತಾರೆ, 4.30 ಕ್ಕೆ ಕಚೇರಿ ಬಿಟ್ಚು ಮನೆಗೆ ಹೋಗುತ್ತಾರೆ, ಜನರು ಹಳ್ಳಿಯಿಂದ ಬಂದಾಗ ನೌಕರರು ತಮ್ಮ ತಮ್ಮ ಟೇಬಲ್ ಮೇಲೆ ಇಲ್ಲದಿದ್ದರೆ ಜನರ ಕಷ್ಟ ಕೇಳುವವರು ಯಾರು ಎಂದು ಪ್ರಶ್ನಿಸಿದ ಅವರು ಈ ಸಂಬಂಧ ಇಲಾಖಾ ಮುಖ್ಯಸ್ಥರು ಗಮನಹರಿಸಬೇಕು ಎಂದು ಸೂಚಿಸಿದರು.ತಹಸೀಲ್ದಾರ ಬಿ.ವಿ.ಗಿರೀಶಬಾಬು ಮಾತನಾಡಿ, ಸರ್ಕಾರಿ ಭೂಮಿ ಯಾವುದೇ ಅಧಿಕಾರಿಗಳು ಇತರರಿಗೆ ಪರಭಾರೆ ಮಾಡುವುದು ಕಾನೂನು ಬಾಹೀರ, ಅಕಸ್ಮಾತ್ ಪರಭಾರೆ ಮಾಡಿದರೆ ಅಂತವರ ವಿರುದ್ಧ ಕ್ರಿಮಿನಲ್ ಮೊಕದ್ದಮೆ ದಾಖಲಾಗುತ್ತದೆ ಎಂದು ಪಿಡಿಒ ಹಾಗೂ ಇತರೆ ಅಧಿಕಾರಿಗಳಿಗೆ ಎಚ್ಚರಿಸಿದರು.
ಸಹಾಯಕ ಕೃಷಿ ನಿರ್ದೇಶಕ ಮಹಮದ್ ಆಶ್ರಪ್ ಅವರು ಬೆಳೆ ಹಾನಿ ಪರಿಹಾರ 2500 ಬಿಡುಗಡೆಯಾಗಿದೆ, ಒಂದೆರೆಡು ದಿನದಲ್ಲಿ ರೈತರ ಖಾತೆಗಳಿಗೆ ಜಮಾ ಆಗುತ್ತದೆ ಎಂದ ಅವರು, ಹಿಂಗಾರು ಸಹ ಶೇ.62 ರಷ್ಟು ಮಳೆ ಕೊರತೆಯಾಗಿದೆ, ಇನ್ನು ಮಳೆ ಬರುವ ಮುನ್ಸೂಚನೆ ಇಲ್ಲ ಎಂದು ತಿಳಿಸಿದರು.ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆಯ ಎಇಇ ಮಂಜನಾಯ್ಕ ಅವರು ತಾಲೂಕಿನಲ್ಲಿ 68 ಹಳ್ಳಿಗಳಲ್ಲಿ ಕುಡಿಯುವ ನೀರಿನ ಸಮಸ್ಯೆ ಇದೆ, 43 ಖಾಸಗಿ ಕೊಳವೆ ಬಾವಿಗಳಿಂದ ನೀರನ್ನು ಪಡೆದು ಸಾರ್ವಜನಿಕರಿಗೆ ಸರಬರಾಜು ಮಾಡುತ್ತಿದ್ದೇವೆ ಎಂದು ಹೇಳಿದರು.
ಶಾಸಕಿ ಎಂ.ಪಿ.ಲತಾ ಅವರು, ಪ್ರತಿ ದಿನ ಹಳ್ಳಿಗಳಿಂದ ಕುಡಿಯುವ ನೀರಿನ ಸಮಸ್ಯೆ ಇದೆ ಎಂದು ದೂರುಗಳು ಬರುತ್ತಿವೆ ಎಂದು ಹೇಳಿದಾಗ ತಾಪಂ ಇಒ ಚಂದ್ರಶೇಖರ ಅವರು ಖಾಸಗಿ ಬೋರವೇಲ್ಗಳಿಂದ ಈಗಾಗಲೇ ಕುಡಿಯುವ ನೀರು ಸರಬರಾಜು ಮಾಡುತ್ತಿದ್ದೇವೆ, ಇನ್ನೂ ತೀವ್ರವಾದರೆ ಸಮಸ್ಯೆ ಇದ್ದ ಕಡೆ ಟ್ಯಾಂಕರ್ ಮೂಲಕ ನೀರು ಸರಬರಾಜು ಮಾಡಲು ಸಿದ್ಧತೆ ಮಾಡಿಕೊಂಡಿದ್ದೇವೆ ಎಂದು ಸಭೆಯ ಗಮನಕ್ಕೆ ತಂದರು.ಶುದ್ದ ಕುಡಿಯುವ ನೀರಿನ ಘಟಕಗಳ ದುರಸ್ತಿಗೆ ಅನುದಾನ ಬಂದಿಲ್ಲ ಎಂದು ಪಿಡಿಒಗಳು ಹೇಳಿದರು. ನಿಟ್ಟೂರಲ್ಲಿ ಶುದ್ಧ ಕುಡಿಯುವ ನೀರಿನ ಘಟಕ ದುರಸ್ತಿ ಮಾಡಿಸಿ ಸಾಕಾಗಿದೆ ಎಂದಾಗ ಅಲ್ಲಿಯ ಪಿಡಿಒ ನನಗೂ ತೊಂದರೆ ಕೊಡುತ್ತಾರೆ ಎಂದು ಮಾರುತ್ತರ ನೀಡುತ್ತಾನೆ, ಆಗ ಶಾಸಕರು ಪೊಲೀಸ್ ಠಾಣೆಗೆ ದೂರು ಕೊಡಿ ಎಂದು ಸೂಚಿಸುತ್ತಾರೆ.
ನಗರಸಭೆ ಪೌರಾಯುಕ್ತೆ ರೇಣುಕಾ ದೇಸಾಯಿ ಪುರಸಭೆಯಿಂದ ನಗರಸಭೆಗೆ ಹುದ್ದೆಗಳು ಮೇಲ್ದರ್ಜಗೇರಿಲ್ಲ ಎಂದು ಶಾಸಕರಿಗೆ ತಿಳಿಸಿದರು.ವಿಬಿಜಿ ರಾಂ ಜೀ ಯೋಜನೆಯ ಸಹಾಯಕ ನಿರ್ದೆಶಕ ಸೋಮಶೇಖರ ತಾಲೂಕಿನಲ್ಲಿ 144 ಸ್ಮಶಾಸನ ಹದ್ದು ಬಸ್ತು ಮಾಡಲು ತೆಗೆದುಕೊಂಡಿದ್ದೇವೆ, ಅದರಲ್ಲಿ 103 ಪೂರ್ಣಗೊಂಡಿವೆ, ಗುಂಡಗತ್ತಿ ಹಾಗೂ ಕೆರೆಗುಡಿಹಳ್ಳಿ ಗ್ರಾಮಗಳ ಸ್ಮಶಾನ ಅಭಿವೃದ್ಧಿಗೆ ಹೊಸದಾಗಿ ಅನುಮೋದನೆ ಸಿಕ್ಕಿದೆ ಎಂದು ಹೇಳಿದರು.
ಬಿಇಒ ಲೇಪಾಕ್ಷಪ್ಪ ಎಸ್ಸೆಸ್ಸೆಲ್ಸಿ ಫಲಿತಾಂಶ ಹೆಚ್ಚಳಕ್ಕೆ 29 ಅಂಶಗಳ ಕಾರ್ಯಕ್ರಮ ಚಾಚು ತಪ್ಪದೆ ಮಾಡುತ್ತಿದ್ದೇವೆ ಎಂದಾಗ ಶಾಸಕರು ಶಿಕ್ಷಕರಿಗೆ ತರಬೇತಿ ಕೊಡಿ ಹಾಗೂ ಬಿಸಿಯೂಟ ಸಿಬ್ಬಂದಿ ಸ್ವಚ್ಛವಾಗಿ ಇರಲು ಹೇಳಿ ಎಂದು ತಿಳಿಸಿದರು.ಅಕ್ಷರ ದಾಸೋಹದ ಎ.ಡಿ. ನಾಗರಾಜ, ತೋಟಗಾರಿಕೆಯ ಜಯಸಿಂಹ, ಪಿಆರ್ ಇಡಿ ಕುಬೇಂದ್ರನಾಯ್ಕ, ಬಿಸಿಎಂ ಇಲಾಖೆಯ ಭೀಮಪ್ಪ, ಸಿಡಿಪಿಒ ರಾಮನಗೌಡ, ಲೋಕೋಪಯೋಗಿ ಇಲಾಖೆಯ ರಾಘವೇಂದ್ರ, ಅರಣ್ಯ ಇಲಾಖೆಯ ಗಿರೀಶ, ದೇವರಾಜ ತಮ್ಮ ತಮ್ಮ ಇಲಾಖೆಯ ಪ್ರಗತಿ ವರದಿ ಮಂಡಿಸಿದರು.
ಜಿಪಂ ಉಪ ಕಾರ್ಯದರ್ಶಿ ಕೆ. ತಿಮ್ಮಪ್ಪ, ಉಪವಿಭಾಗಾಧಿಕಾರಿ ಸುರೇಶಕುಮಾರ, ಇಒ ಚಂದ್ರಶೇಖರ, ತಹಸೀಲ್ದಾರ ಗಿರೀಶಬಾಬು, ನಾಮನಿರ್ದೇಶನ ಸದಸ್ಯರಾದ ಕವಿತಾ ಸುರೇಶ, ಕೆಂಚಪ್ಪ, ಮೆಹಬೂಬ್ ಸಾಹೇಬ್, ಬಸವರಾಜಯ್ಯ ಹಾಜರಿದ್ದರು.