ಕನ್ನಡಪ್ರಭ ವಾರ್ತೆ ಚಿತ್ರದುರ್ಗ
ಯಾವುದೇ ವಸ್ತು ಕೊಳ್ಳುವ ಮೊದಲು ಅದರ ಗುಣಮಟ್ಟ, ಸೇವೆ ಹಾಗೂ ಬಾಳಿಕೆಯ ಬಗ್ಗೆ ಖಚಿತಪಡಿಸಿಕೊಳ್ಳಬೇಕು ಎಂದು ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ ಸದಸ್ಯ ಕಾರ್ಯದರ್ಶಿ ಹಾಗೂ ಹಿರಿಯ ಸಿವಿಲ್ ನ್ಯಾಯಾಧೀಶ ಎಂ.ವಿಜಯ್ ಮನವಿ ಮಾಡಿದರು.ನಗರದ ಸರ್ಕಾರಿ ಕಲಾ ಕಾಲೇಜಿನಲ್ಲಿ ಸೋಮವಾರ ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ, ಆಹಾರ, ನಾಗರಿಕ ಸರಬರಾಜು ಮತ್ತು ಗ್ರಾಹಕರ ವ್ಯವಹಾರಗಳ ಇಲಾಖೆ, ಜಿಲ್ಲಾ ಗ್ರಾಹಕರ ವ್ಯಾಜ್ಯಗಳ ಪರಿಹಾರ ಆಯೋಗ, ಕಾನೂನು ಮಾಪನಾಶಾಸ್ತ್ರ ಇಲಾಖೆ, ಆಹಾರ ಸುರಕ್ಷತೆ ಮತ್ತು ಔಷಧ ಆಡಳಿತ ಇಲಾಖೆ, ಜಿಲ್ಲಾ ವಕೀಲರ ಸಂಘ, ಜಿಲ್ಲಾ ಅಡುಗೆ ಅನಿಲ ವಿತರಕರ ಸಂಯುಕ್ತಾಶ್ರಯದಲ್ಲಿ ಸುರಕ್ಷಿತ ಉತ್ಪನ್ನಗಳು, ಆತ್ಮವಿಶ್ವಾಸದ ಗ್ರಾಹಕರು ಎಂಬ ಘೋಷವಾಕ್ಯದೊಂದಿಗೆ ಸೋಮವಾರ ಹಮ್ಮಿಕೊಂಡಿದ್ದ ವಿಶ್ವ ಗ್ರಾಹಕರ ದಿನಾಚರಣೆ ಉದ್ಘಾಟಿಸಿ ಮಾತನಾಡಿದರು.
ಮಾರುಕಟ್ಟೆಯಲ್ಲಿ ಲಭ್ಯವಿರುವ ನಕಲಿ ಬ್ರ್ಯಾಂಡ್‍ಗಳ ಬಗ್ಗೆ ಎಚ್ಚರದಿಂದಿರಬೇಕು. ಗ್ರಾಹಕರು ಕಾನೂನಿನ ಅರಿವು ಹೊಂದಿದ್ದರೆ ಮಾತ್ರ ತಮ್ಮ ಹಕ್ಕುಗಳನ್ನು ರಕ್ಷಿಸಿಕೊಳ್ಳಲು ಸಾಧ್ಯ. ವಿದ್ಯಾರ್ಥಿಗಳು ಇಂತಹ ಮಾಹಿತಿಗಳನ್ನು ಪಡೆದು ಸಮಾಜದಲ್ಲಿ ಜಾಗೃತಿ ಮೂಡಿಸಬೇಕು ಎಂದರು.10 ವರ್ಷಗಳ ಹಿಂದೆ ಜನರು ನೇರವಾಗಿ ಅಂಗಡಿಗಳಿಗೆ ಭೇಟಿ ನೀಡಿ, ವಸ್ತುವಿನ ಗುಣಮಟ್ಟ ಪರಿಶೀಲಿಸಿ ಖರೀದಿ ಮಾಡುತ್ತಿದ್ದರು. ಆದರೆ ಇಂದು ಆನ್‍ಲೈನ್ ಶಾಪಿಂಗ್ ವ್ಯಾಪಕವಾಗಿದ್ದು, ಅದರೊಂದಿಗೆ ಗ್ರಾಹಕರು ವಂಚನೆಗೊಳಗಾಗುವ ಸಾಧ್ಯತೆಗಳೂ ಹೆಚ್ಚಿವೆ. ಹೀಗಾಗಿ ಪ್ರತಿಯೊಬ್ಬ ಗ್ರಾಹಕನೂ ಜಾಗೃತನಾಗಿರುವುದು ಇಂದಿನ ಅಗತ್ಯ. ಆನ್‍ಲೈನ್ ವೇದಿಕೆಗಳಲ್ಲಿ ವಂಚನೆಗೊಳಗಾದ ಸಂದರ್ಭದಲ್ಲಿ ಗ್ರಾಹಕರು ಎದೆಗುಂದದೆ ಗ್ರಾಹಕರ ವೇದಿಕೆಗೆ ದೂರು ಸಲ್ಲಿಸಬೇಕು. ಪ್ರಸ್ತುತ ಜಿಲ್ಲಾ ಮಟ್ಟದಲ್ಲಿ ಮಾತ್ರವಲ್ಲದೆ, ಆನ್‍ಲೈನ್ ಮೂಲಕವೂ ದೂರನ್ನು ದಾಖಲಿಸುವ ಸೌಲಭ್ಯಗಳು ಲಭ್ಯವಿವೆ ಎಂದರು.
ಜಿಲ್ಲಾ ವಕೀಲರ ಸಂಘದ ಅಧ್ಯಕ್ಷ ಹೆಚ್.ಎಸ್.ಮಹೇಶ್ವರಪ್ಪ ಮಾತನಾಡಿ, ಇಂದಿನ ಸ್ಪರ್ಧಾತ್ಮಕ ಮಾರುಕಟ್ಟೆಯಲ್ಲಿ ಗ್ರಾಹಕರು ಕೇವಲ ವಸ್ತುಗಳನ್ನು ಖರೀದಿಸುವವರಾಗದೆ, ತಮ್ಮ ಹಕ್ಕುಗಳ ಬಗ್ಗೆ ಸಂಪೂರ್ಣ ಅರಿವುಳ್ಳವರಾಗಿರಬೇಕು. ಒಂದು ಕಂಪನಿಯ ಉತ್ಪನ್ನ ಮಾರುಕಟ್ಟೆಗೆ ಬಂದರೆ ಅದಕ್ಕೆ ಪೈಪೋಟಿ ನೀಡಲು ಹತ್ತಾರು ಕಂಪನಿಗಳು ಕಳಪೆ ಗುಣಮಟ್ಟದ ವಸ್ತುಗಳನ್ನು ಬಿಡುಗಡೆ ಮಾಡುತ್ತವೆ. ಇಂತಹ ಸಂದರ್ಭದಲ್ಲಿ ಗ್ರಾಹಕರು ಗುಣಮಟ್ಟ ಮತ್ತು ಪರಿಮಾಣದ ಬಗ್ಗೆ ಎಚ್ಚರವಹಿಸುವುದು ಅತ್ಯಗತ್ಯ ಎಂದರು.
ಜಿಲ್ಲಾ ಗ್ರಾಹಕರ ವ್ಯಾಜ್ಯಗಳ ಪರಿಹಾರ ಆಯೋಗದ ಅಧ್ಯಕ್ಷೆ ಬಿ.ಎಚ್.ಯಶೋಧ ಮಾತನಾಡಿ, ಮಗು ತಾಯಿಯ ಗರ್ಭದಲ್ಲಿ ಇದ್ದಾಗಿನಿಂದಲೇ ಯಾವುದಾದರೂ ಒಂದು ರೂಪದಲ್ಲಿ ಗ್ರಾಹಕನಾಗಿರುತ್ತದೆ. ಹೀಗಾಗಿ ಪ್ರತಿಯೊಬ್ಬರೂ ತಮ್ಮ ಹಕ್ಕುಗಳ ಬಗ್ಗೆ ಜಾಗೃತಿ ಬೆಳೆಸಿಕೊಳ್ಳಬೇಕು. ಯಾವುದೇ ವಸ್ತು ಅಥವಾ ಸೇವೆಯನ್ನು ಹಣ ನೀಡಿ ಪಡೆದಾಗ ಅದಕ್ಕೆ ಸಂಬಂಧಿಸಿದ ಅಧಿಕೃತ ರಶೀದಿಯನ್ನು ಪಡೆಯುವುದು ಅತ್ಯಗತ್ಯ. ರಶೀದಿ ಇಲ್ಲದಿದ್ದರೆ ಗ್ರಾಹಕರು ನ್ಯಾಯಾಲಯದಲ್ಲಿ ಪರಿಹಾರ ಪಡೆಯಲು ಅರ್ಹರಾಗುವುದಿಲ್ಲ ಎಂದು ತಿಳಿಸಿದರು.
ಸರ್ಕಾರಿ ಕಲಾ ಕಾಲೇಜಿನ ಪ್ರಾಂಶುಪಾಲ ಡಾ.ಜೆ.ಕರಿಯಪ್ಪ ಮಾಳಿಗೆ ಮಾತನಾಡಿ, ನಾವೆಲ್ಲರೂ ಹುಟ್ಟು ಮತ್ತು ಸಾವಿನ ಮಧ್ಯೆ ನಿರಂತರವಾಗಿ ಗ್ರಾಹಕರಾಗಿರುತ್ತೇವೆ. ಆದ್ದರಿಂದ ಗ್ರಾಹಕ ಹಕ್ಕುಗಳ ಬಗ್ಗೆ ತಿಳಿವಳಿಕೆ ಹೊಂದುವುದು ಬದುಕಿನ ಶಿಕ್ಷಣದ ಒಂದು ಭಾಗವಾಗಿದೆ.ವಿದ್ಯಾರ್ಥಿಗಳು ಕೇವಲ ಪದವಿಗಾಗಿ ಓದಬಾರದು, ಬದಲಿಗೆ ಸಮಾಜದಲ್ಲಿ ಬದುಕಲು ಅಗತ್ಯವಿರುವ ಸಾಮಾನ್ಯ ಜ್ಞಾನ ಬೆಳೆಸಿಕೊಳ್ಳಬೇಕು ಎಂದು ತಿಳಿಸಿದ ಅವರು, ಪುಸ್ತಕದ ಶಿಕ್ಷಣದ ಜೊತೆಗೆ ಬದುಕಿನ ಶಿಕ್ಷಣವೂ ಅತ್ಯಂತ ಮುಖ್ಯವಾಗಿದೆ. ಇಂದಿನ ವಿಜ್ಞಾನ ಮತ್ತು ತಂತ್ರಜ್ಞಾನದ ಯುಗದಲ್ಲೂ ನಮಗೆ ಅರಿವಿಲ್ಲದೆ ಅನೇಕ ತಪ್ಪುಗಳನ್ನು ಮಾಡುತ್ತಿದ್ದೇವೆ. ಯಾವುದೇ ವಸ್ತುವನ್ನು ಕೊಂಡುಕೊಳ್ಳುವ ಮುನ್ನ ಅದರ ಗುಣಮಟ್ಟ ಮತ್ತು ಸ್ವರೂಪದ ಬಗ್ಗೆ ಪೂರ್ಣ ಮಾಹಿತಿ ಇರಬೇಕು ಎಂದು ತಿಳಿಸಿದರು.ಉಪ ಪ್ರಧಾನ ಕಾನೂನು ಅಭಿರಕ್ಷಕ ಎಂ.ಮೂರ್ತಿ ಉಪನ್ಯಾಸ ನೀಡಿದರು. ಆಹಾರ ನಾಗರಿಕ ಸರಬರಾಜು ಹಾಗೂ ಗ್ರಾಹಕರ ವ್ಯವಹಾರಗಳ ಇಲಾಖೆ ಜಂಟಿ ನಿರ್ದೇಶಕ ಶಿದ್ರಾಮ ಮಾರಿಹಾಳ, ಕಾನೂನು ಮಾಪನಾ ಶಾಸ್ತ್ರ ಸಹಾಯಕ ನಿಯಂತ್ರಕ ಚನ್ನಬಸಪ್ಪ, ಜಿಲ್ಲಾ ಗ್ರಾಹಕರ ವ್ಯಾಜ್ಯಗಳ ಪರಿಹಾರ ಆಯೋಗದ ಸದಸ್ಯೆ ಯು.ಬಿ.ಗೀತಾ ಇದ್ದರು.