ಸಾರಾಂಶ
ಗ್ರಾಪಂ ಸಾಮಾನ್ಯ ಸಭೆಯಲ್ಲಿ ಪಿಡಿಒ ಅಮೀನಸಾಬ ಅಲಾಂದಾರ
ಕನ್ನಡಪ್ರಭವಾರ್ತೆ ಕುಷ್ಟಗಿಪ್ರಸ್ತುತ ದಿನಗಳಲ್ಲಿ ಬರಗಾಲ ಆವರಿಸುತ್ತಿದ್ದು, ಎಲ್ಲ ಗ್ರಾಮಗಳಲ್ಲಿ ಕುಡಿಯುವ ನೀರು ಹಾಗೂ ಮೇವಿನ ಕೊರತೆಯಾಗದಂತೆ ನೋಡಿಕೊಳ್ಳುವದು ನಮ್ಮ ಕರ್ತವ್ಯವಾಗಿದೆ. ಇದಕ್ಕೆ ಗ್ರಾಪಂ ಅಧ್ಯಕ್ಷರು ಹಾಗೂ ಸದಸ್ಯರು ಸಹಕಾರ ನೀಡಬೇಕು ಎಂದು ಪಿಡಿಒ ಅಮೀನಸಾಬ ಅಲಾಂದಾರ ಹೇಳಿದರು.
ತಾಲೂಕಿನ ಕೇಸೂರು ಗ್ರಾಪಂನಲ್ಲಿ ನಡೆದ ಸಾಮಾನ್ಯ ಸಭೆಯಲ್ಲಿ ಭಾಗವಹಿಸಿ ಮಾತನಾಡಿದ ಅವರು, ಈಗ ಬರಗಾಲ ಬಂದಿದ್ದು, ನಮ್ಮ ಗ್ರಾಪಂ ವ್ಯಾಪ್ತಿಯಲ್ಲಿ ಬರುವಂತಹ ಎಲ್ಲ ಗ್ರಾಮಗಳಲ್ಲಿ ಜನರಿಗೆ ನೀರಿನ ತೊಂದರೆ ಹಾಗೂ ದನಕರುಗಳಿಗೆ ಮೇವು ತೊಂದರೆ ಕಂಡು ಬಂದರೆ ತಕ್ಷಣವೆ ಗಮನಕ್ಕೆ ತರಬೇಕು. ಸೂಕ್ತ ಪರಿಹಾರ ಕಂಡುಕೊಳ್ಳುವ ಕೆಲಸ ಮಾಡಬೇಕಾಗಿದೆ ಎಂದರು.ಕುಡಿಯುವ ನೀರಿನ ಕೊರತೆಯು ಕಂಡುಬಂದಲ್ಲಿ ತಕ್ಷಣವೇ ಸಂಬಂದಪಟ್ಟ ವಾರ್ಡಗಳಲ್ಲಿ ಅಥವಾ ಗ್ರಾಮದಲ್ಲಿ ಬಾಡಿಗೆಯ ಬೋರವೆಲ್ ಪಡೆಯುವದು, ಇಲ್ಲವಾದಲ್ಲಿ ಕೊಳವೆ ಬಾವಿ ಕೊರೆಸುವ ಕೆಲಸ ಮಾಡಬೇಕು ಒಟ್ಟಿನಲ್ಲಿ ಬರಗಾಲದ ದಿನಗಳಲ್ಲಿ ಜನರಿಗೆ ನೀರು ಹಾಗೂ ಜಾನುವಾರುಗಳಿಗೆ ಮೇವು ಕೊರತೆಯಾಗದಂತೆ ನೋಡಿಕೊಳ್ಳಬೇಕಾಗಿದೆ ಎಂದರು.
ಕಸ ಹಾಕಿದವರಿಗೆ ದಂಡ:ಕೇಸೂರು ಗ್ರಾಪಂ ವ್ಯಾಪ್ತಿಯ ಎಲ್ಲ ಗ್ರಾಮಗಳಲ್ಲಿ ಕಸವಿಲೇವಾರಿ ವಾಹನವು ಮನೆ ಮನೆಗೆ ಬರುತ್ತಿದ್ದು, ಸಾರ್ವಜನಿಕರು ಸಂಗ್ರಹವಾದ ಕಸವನ್ನು ಗಾಡಿಯಲ್ಲಿ ಹಾಕಬೇಕು ಎಲ್ಲೆಂದರಲ್ಲಿ ಚೆಲ್ಲುವದು ಕಂಡು ಬಂದರೆ ದಂಡ ವಿಧಿಸುವ ಪ್ರಕ್ರೀಯೆ ಪ್ರಾರಂಭ ಮಾಡಲಾಗುತ್ತದೆ ಎಂದರು.
ವಾರದ ಸಂತೆ ಮಾಡಲು ನಿರ್ಣಯ:ಸಾರ್ವಜನಿಕರ ಬೇಡಿಕೆಯ ಹಿನ್ನೆಲೆಯಲ್ಲಿ ತಾಲೂಕಿನ ಕೇಸೂರು ಗ್ರಾಮದಲ್ಲಿ ವಾರದ ಸಂತೆಯನ್ನು ಮಾಡಲು ಗ್ರಾಪಂ ಅಧ್ಯಕ್ಷರು ಹಾಗೂ ಸರ್ವ ಸದಸ್ಯರು ಒಪ್ಪಿಗೆ ಸೂಚಿಸುವ ಮೂಲಕ ಸಂತೆ ಮಾಡಲು ನಿರ್ದಿಷ್ಟ ಸ್ಥಳವನ್ನು ವಿಜಯ ಮಹಾಂತೇಶ್ವರ ಮಠದ ಆವರಣದಲ್ಲಿ ಮಾಡಬೇಕು. ಈ ಕುರಿತು ಶಾಲಾ ಆಡಳಿತ ಮಂಡಳಿಯವರ ಗಮನಕ್ಕೆ ತಂದು ಒಪ್ಪಿಗೆ ಪಡೆದುಕೊಳ್ಳಬೇಕು ಎಂದು ಸಾಮಾನ್ಯ ಸಭೆಯಲ್ಲಿ ತೀರ್ಮಾನಿಸಲಾಯಿತು.
ಜೆಜೆಎಂ ಸುಪರ್ಧಿಗೆ ತೆಗೆದುಕೊಳ್ಳಬೇಡಿ:ಈಗಾಗಲೆ ಜೆಜೆಎಂ ಕಾಮಗಾರಿಯು ಮುಗಿಯದೆ ಕೆಲವೊಂದು ಬಿಲ್ ಆಗಿದ್ದು, ನೀವು ಯಾವುದೇ ಕಾರಣಕ್ಕೂ ಕೆಲಸ ಮುಗಿಯದೆ ಸುಪರ್ಧಿಗೆ ತೆಗೆದುಕೊಳ್ಳಬಾರದು ಎಂದು ಗ್ರಾಪಂ ಸದಸ್ಯರು ಪಿಡಿಒ ಅವರಿಗೆ ಸೂಚನೆ ನೀಡಿದರು. ಕೆಲವು ಮನೆಗಳಿಗೆ ಜೆಜೆಎಂ ನಳ ಹಾಕಿಲ್ಲ ಹಾಕಿಸುವಂತೆ ಹೇಳಬೇಕು ಎಂದರು.
ಈ ಸಭೆಯಲ್ಲಿ ನರೇಗಾ ಕಾಮಗಾರಿಯ ಚರ್ಚೆಗಳು ನಡೆದವು, ಕೆಲವು ಕಡೆಗಳಲ್ಲಿ ವಿದ್ಯುತ್ ಕಂಬ ಹಾಕುವದು, ಸ್ವಚ್ಚತೆಯ ಕ್ರಮಗಳನ್ನು ಅನುಸರಿಸುವದು, ಶುದ್ದ ನೀರು ಸೇರಿದಂತೆ ಅನೇಕ ಚರ್ಚೆಗಳು ನಡೆದವು. ಈ ಸಂದರ್ಭದಲ್ಲಿ ಗ್ರಾಪಂ ಅಧ್ಯಕ್ಷ ಶಕುಂತಲಾ ಮಲ್ಲಿಕಾರ್ಜುನಗೌಡ ಪಾಟೀಲ ಹಾಗೂ ಗ್ರಾಪಂ ಉಪಾಧ್ಯಕ್ಷರು ಹಾಗೂ ಸರ್ವ ಸದಸ್ಯರು ಹಾಜರಿದ್ದರು.