ಕನ್ನಡಪ್ರಭ ವಾರ್ತೆ ಹಾಸನ

ಸ್ವಚ್ಛತೆ ಎಂಬುದು ಕೇವಲ ಒಂದು ದಿನಕ್ಕೆ ಸೀಮಿತವಾಗಿರುವ ಕಾರ್ಯಕ್ರಮವಲ್ಲ. ಅದು ನಮ್ಮ ಪ್ರತಿದಿನದ ಬದುಕಿನ ಭಾಗ ಮತ್ತು ಜೀವನದ ಶೈಲಿ ಆಗಬೇಕು ಎಂದು ಜಿಲ್ಲಾ ಪಂಚಾಯತ್ ಮುಖ್ಯಕಾರ್ಯನಿರ್ವಹಣಾಧಿಕಾರಿ ಶುಭಂ ಶುಕ್ಲ ಕರೆ ನೀಡಿದರು.

ವಿಶ್ವ ಪರಿಸರ ದಿನಾಚರಣೆ ಅಂಗವಾಗಿ ನಗರದ ರೈಲ್ವೆ ನಿಲ್ದಾಣದ ಆವರಣದಲ್ಲಿ ಜಿಲ್ಲಾಡಳಿತ, ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ, ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ಅರಣ್ಯ ಇಲಾಖೆ, ಮಹಾನಗರ ಪಾಲಿಕೆ, ಭಾರತ್ ಸ್ಕೌಟ್ ಅಂಡ್ ಗೈಡ್ಸ್, ವಿವಿಧ ಸಂಘಸಂಸ್ಥೆಗಳು ಮತ್ತು ಕೈಗಾರಿಕೆಗಳು ಇವರ ಸಹಯೋಗದಲ್ಲಿ ಶುಕ್ರವಾರ ಬೆಳಿಗ್ಗೆ ಹಮ್ಮಿಕೊಳ್ಳಲಾಗಿದ್ದ ಸ್ವಚ್ಛತಾ ಜಾಗೃತಿ ಮತ್ತು ಪರಿಸರ ಸಂರಕ್ಷಣಾ ಕಾರ್ಯಕ್ರಮ ಜನರಲ್ಲಿ ವಿಶೇಷ ಗಮನ ಸೆಳೆಯಿತು. ಸಾರ್ವಜನಿಕರು, ವಿದ್ಯಾರ್ಥಿಗಳು, ವಿವಿಧ ಸಂಘ ಸಂಸ್ಥೆಗಳ ಪದಾಧಿಕಾರಿಗಳು ಹಾಗೂ ಪರಿಸರ ಪ್ರೇಮಿಗಳು ಭಾಗವಹಿಸಿ ಸ್ವಚ್ಛತೆ ಮತ್ತು ಪರಿಸರ ರಕ್ಷಣೆಯ ಮಹತ್ವವನ್ನು ಸಾರಿದರು.

ಕಾರ್ಯಕ್ರಮದಲ್ಲಿ ಜಿಲ್ಲಾ ಪಂಚಾಯತ್ ಮುಖ್ಯಕಾರ್ಯನಿರ್ವಹಣಾಧಿಕಾರಿ ಶುಭಂ ಶುಕ್ಲ ಉದ್ದೇಶಿಸಿ ಮಾತನಾಡಿದ ಅವರು, ನಮ್ಮ ಮನೆ, ಬೀದಿ, ರಸ್ತೆ, ಶಾಲೆ, ಕಾಲೇಜು, ಕಚೇರಿ, ಬಸ್ ನಿಲ್ದಾಣ, ರೈಲ್ವೆ ನಿಲ್ದಾಣ ಸೇರಿದಂತೆ ಪ್ರತಿಯೊಂದು ಸಾರ್ವಜನಿಕ ಸ್ಥಳವೂ ಸ್ವಚ್ಛವಾಗಿದ್ದಾಗ ಮಾತ್ರ ಸಮಾಜ ಆರೋಗ್ಯಕರವಾಗಿರಲು ಸಾಧ್ಯ ಎಂದರು. ಇತ್ತೀಚಿನ ದಿನಗಳಲ್ಲಿ ಪರಿಸರ ಮಾಲಿನ್ಯ ಹೆಚ್ಚಾಗುತ್ತಿದ್ದು, ಪ್ಲಾಸ್ಟಿಕ್ ಬಳಕೆ, ಕಸದ ಅಸಮರ್ಪಕ ವಿಲೇವಾರಿ ಹಾಗೂ ನಿರ್ಲಕ್ಷ್ಯದಿಂದ ಅನೇಕ ಆರೋಗ್ಯ ಸಮಸ್ಯೆಗಳು ಎದುರಾಗುತ್ತಿವೆ. ಇದನ್ನು ತಡೆಯಲು ಪ್ರತಿಯೊಬ್ಬ ನಾಗರಿಕನೂ ಸ್ವಚ್ಛತೆಯನ್ನು ಜೀವನ ಶೈಲಿಯ ಭಾಗವನ್ನಾಗಿ ಮಾಡಿಕೊಳ್ಳಬೇಕು. ನಾನು ಸ್ವಚ್ಛವಾಗಿದ್ದರೆ ಸಾಕು ಎನ್ನುವ ಮನೋಭಾವ ಬಿಟ್ಟು ನನ್ನ ಸುತ್ತಮುತ್ತಲೂ ಸ್ವಚ್ಛವಾಗಿರಬೇಕು ಎಂಬ ಜವಾಬ್ದಾರಿಯ ಮನೋಭಾವ ಬೆಳೆಸಿಕೊಳ್ಳಬೇಕೆಂದು ಕರೆ ನೀಡಿದರು.

ಸ್ವಚ್ಛತೆ ಎಂಬುದು ಕೇವಲ ಸರ್ಕಾರದ ಜವಾಬ್ದಾರಿಯಲ್ಲ. ಜನರ ಸಹಕಾರವಿಲ್ಲದೆ ಯಾವುದೇ ನಗರ ಅಥವಾ ಗ್ರಾಮವನ್ನು ಸ್ವಚ್ಛವಾಗಿಡಲು ಸಾಧ್ಯವಿಲ್ಲ. ಸಾರ್ವಜನಿಕ ಸ್ಥಳಗಳಲ್ಲಿ ಕಸ ಎಸೆಯುವುದು, ಪ್ಲಾಸ್ಟಿಕ್ ತ್ಯಾಜ್ಯವನ್ನು ಎಲ್ಲೆಂದರಲ್ಲಿ ಬಿಸಾಡುವುದು, ಚರಂಡಿಗಳಲ್ಲಿ ತ್ಯಾಜ್ಯ ಹಾಕುವುದು ಪರಿಸರ ಹಾನಿಗೆ ಪ್ರಮುಖ ಕಾರಣವಾಗುತ್ತಿದೆ. ಪರಿಸರವನ್ನು ಕಾಪಾಡುವುದು ಎಂದರೆ ಮುಂದಿನ ಪೀಳಿಗೆಗೆ ಆರೋಗ್ಯಕರ ಬದುಕನ್ನು ನೀಡುವುದೇ ಆಗಿದೆ ಎಂದು ಅಭಿಪ್ರಾಯಪಟ್ಟರು. ಜೂನ್ ತಿಂಗಳಲ್ಲಿ ವಿಶ್ವ ಪರಿಸರ ದಿನಾಚರಣೆ ಅಂಗವಾಗಿ ಜಿಲ್ಲೆಯ ವಿವಿಧ ಶಾಲೆ, ಕಾಲೇಜುಗಳು ಹಾಗೂ ಸಂಘಸಂಸ್ಥೆಗಳ ಮೂಲಕ ಅನೇಕ ಜಾಗೃತಿ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗುತ್ತಿದೆ.


ವಿದ್ಯಾರ್ಥಿಗಳು ಹಾಗೂ ಯುವ ಸಮುದಾಯ ಇಂತಹ ಕಾರ್ಯಕ್ರಮಗಳಲ್ಲಿ ಸಕ್ರಿಯವಾಗಿ ಪಾಲ್ಗೊಳ್ಳಬೇಕು. ಪರಿಸರ ಸಂರಕ್ಷಣೆ ಬಗ್ಗೆ ಶಾಲಾ ಹಂತದಲ್ಲೇ ಮಕ್ಕಳಲ್ಲಿ ಅರಿವು ಮೂಡಿಸಿದರೆ ಭವಿಷ್ಯದಲ್ಲಿ ಉತ್ತಮ ಸಮಾಜ ನಿರ್ಮಾಣ ಸಾಧ್ಯ ಎಂದು ಹೇಳಿದರು. ಸ್ವಚ್ಛತೆ ಮನೆಯಲ್ಲೇ ಆರಂಭವಾಗಬೇಕು. ಪ್ರತಿಯೊಬ್ಬರೂ ತಮ್ಮ ಮನೆ, ಅಂಗಡಿ, ಕಚೇರಿ ಹಾಗೂ ಸುತ್ತಮುತ್ತಲಿನ ಪ್ರದೇಶವನ್ನು ಸ್ವಚ್ಛವಾಗಿಟ್ಟುಕೊಂಡರೆ ನಮ್ಮ ನಗರಗಳು ಸುಂದರವಾಗುತ್ತವೆ. ಹಾಸನ ಜಿಲ್ಲೆ ಸ್ವಚ್ಛ ಜಿಲ್ಲೆಯಾಗಿ ಗುರುತಿಸಿಕೊಳ್ಳಬೇಕಾದರೆ ಸಾರ್ವಜನಿಕರ ಸಹಭಾಗಿತ್ವ ಅತ್ಯಗತ್ಯ ಎಂದು ತಿಳಿಸಿದರು. ಮುಂದಿನ ದಿನಗಳಲ್ಲಿ ಇನ್ನಷ್ಟು ಜನಜಾಗೃತಿ ಕಾರ್ಯಕ್ರಮಗಳು, ಸ್ವಚ್ಛತಾ ಅಭಿಯಾನಗಳು ಹಾಗೂ ಪರಿಸರ ಸಂರಕ್ಷಣಾ ಕಾರ್ಯಗಳನ್ನು ಹಮ್ಮಿಕೊಳ್ಳುವ ಅಗತ್ಯವಿದೆ ಎಂದು ಸಲಹೆ ನೀಡಿದರು.

ಕಾರ್ಯಕ್ರಮದ ಅಂಗವಾಗಿ ರೈಲ್ವೆ ನಿಲ್ದಾಣದ ಆವರಣದಲ್ಲಿ ಸ್ವಚ್ಛತಾ ಕಾರ್ಯ ನಡೆಸಲಾಯಿತು. ಕಸ ಸಂಗ್ರಹ, ಪ್ಲಾಸ್ಟಿಕ್ ತೆರವು ಹಾಗೂ ಸಾರ್ವಜನಿಕರಿಗೆ ಸ್ವಚ್ಛತೆ ಕುರಿತು ಜಾಗೃತಿ ಮೂಡಿಸುವ ಕಾರ್ಯಗಳು ನಡೆದವು. ಪರಿಸರ ರಕ್ಷಣೆ, ನೀರು ಸಂರಕ್ಷಣೆ, ಮರಗಳ ಬೆಳವಣಿಗೆ ಹಾಗೂ ಸ್ವಚ್ಛತಾ ಕಾಳಜಿ ಕುರಿತ ಘೋಷಣೆಗಳ ಮೂಲಕ ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸಲಾಯಿತು. ಭಾಗವಹಿಸಿದ ವಿದ್ಯಾರ್ಥಿಗಳು ಹಾಗೂ ಯುವಕರು, ಪರಿಸರ ಉಳಿಸುವುದು ಪ್ರತಿಯೊಬ್ಬರ ಕರ್ತವ್ಯ. ನಾವು ಇಂದು ಪರಿಸರದ ಬಗ್ಗೆ ಕಾಳಜಿ ವಹಿಸದಿದ್ದರೆ ಮುಂದಿನ ದಿನಗಳಲ್ಲಿ ಪ್ರಕೃತಿ ವಿಕೋಪಗಳು ಹೆಚ್ಚಾಗುವ ಸಾಧ್ಯತೆ ಇದೆ. ಆದ್ದರಿಂದ ಪ್ರತಿಯೊಬ್ಬರೂ ಸ್ವಚ್ಛತೆ ಮತ್ತು ಪರಿಸರ ಸಂರಕ್ಷಣೆಗೆ ಆದ್ಯತೆ ನೀಡಬೇಕು ಎಂದು ಅಭಿಪ್ರಾಯಪಟ್ಟರು.ಇದೆ ವೇಳೆ ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿಯ ಭಾಸ್ಕರ್, ಎಚ್‌ಪಿಸಿಎಲ್‌ ಪ್ರಕಾಶ್ ಪೂರ್ಣಮ್, ಪುನೀತ್ ಗೌಡ, ಭಾರತ್ ಸ್ಕೌಟ್ ಅಂಡ್ ಗೈಡ್ಸ್ ಗಿರೀಶ್, ಪ್ರಶಸ್ತಿ ವಿಜೇತ ಬಿ.ಟಿ. ಮಾನವ, ಮಹಾನಗರ ಪಾಲಿಕೆ, ಪೌರಕಾರ್ಮಿಕರು, ಸಂಘಸಂಸ್ಥೆ ಕಾರ್ಯಕರ್ತರು ಸೇರಿದಂತೆ ಇತರರು ಉಪಸ್ಥಿತರಿದ್ದರು.