ಸಾರಾಂಶ
ಕನ್ನಡಪ್ರಭ ವಾರ್ತೆ ಮಡಿಕೇರಿ ಕೊಡಗು ಕೊಡಗಾಗಿಯೇ ಉಳಿಯಬೇಕು. ಆದ್ದರಿಂದ ತಾನು ಪರಿಸರಕ್ಕೆ ಪೂರಕ ಅಭಿವೃದ್ಧಿ ಯೋಜನೆ ರೂಪಿಸಲು ಮುಂದಾಗಿದ್ದೇನೆ ಎಂದು ಕೊಡಗು-ಮೈಸೂರು ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಯದುವೀರ್ ಒಡೆಯರ್ ಹೇಳಿದ್ದಾರೆ. ಕೊಡಗು ಜಿಲ್ಲಾ ಹಿಂದುಳಿದ ವರ್ಗಗಳ ಮೋರ್ಚಾದಿಂದ ನಗರದ ಕಾವೇರಿ ಹಾಲ್ ನಲ್ಲಿ ಶುಕ್ರವಾರ ನಡೆದ ಬೃಹತ್ ಸಮಾವೇಶದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.ಕೊಡಗು ಕೊಡಗಾಗಿಯೇ ಉಳಿಯಬೇಕು. ಮುಂದಿನ ಪೀಳಿಗೆಗೂ ಇದು ಉಳಿಯುವಂತಾಗಬೇಕು. ನಾನು ವನ್ಯಜೀವಿ ಪ್ರೇಮಿ, ಆದ್ದರಿಂದ ಕೊಡಗಿನಲ್ಲಿ ಮಾನವ-ವನ್ಯಜೀವಿ ಸಮಸ್ಯೆ ಪರಿಹಾರಕ್ಕೆ ಕ್ರಮ ವಹಿಸಲಾಗುವುದು. ಪ್ರಕೃತಿ ಕಾಳಜಿಯೊಂದಿಗೆ ಅಭಿವೃದ್ಧಿ ಮಾಡಲಾಗುವುದು. ಕೊಡಗಿನ ಆಚಾರ ವಿಚಾರ ಸಂಸ್ಕೃತಿಯನ್ನು ಉಳಿಸುವುದರೊಂದಿಗೆ ಅಭಿವೃದ್ಧಿ ಪೂರಕವಾದ ಯೋಜನೆಗಳನ್ನು ಅನುಷ್ಠಾನಕ್ಕೆ ತರಬೇಕಾಗಿದೆ ಎಂದರು. ಇದೀಗ ಲೋಕಸಭಾ ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದೇನೆ. ಕೊಡಗಿನವರ ಪ್ರೀತಿಯೊಂದಿಗೆ ನಿಮ್ಮೆಲ್ಲರ ಆಶೀರ್ವಾದ ನನಗೆ ಬೇಕಾಗಿದೆ. ರಾಷ್ಟ್ರೀಯ ಚಿಂತನೆಯಲ್ಲಿ ಕೊಡಗು ಮೈಸೂರು ಕ್ಷೇತ್ರವನ್ನು ಅಭಿವೃದ್ಧಿ ಪಥದತ್ತ ಕೊಂಡಯುವ ಕನಸು ಹೊತ್ತಿದ್ದೇನೆ. ನಿಮ್ಮೆಲ್ಲರ ಸಹಕಾರ ಬಯಸುತ್ತೇನೆ ಎಂದರು.
ಕೊಡಗಿನಲ್ಲಿ ನಾಗರಹೊಳೆ, ಕುಟ್ಟ, ಮಡಿಕೇರಿ, ಮಾದಾಪುರ, ಸುಂಟಿಕೊಪ್ಪ ಸೇರಿದಂತೆ ಹಲವಾರು ಪ್ರದೇಶಕ್ಕೆ ಬಾಲ್ಯದಿಂದ ಬಂದು ಅನುಭವಿಸಿದ್ದೇನೆ. ಇದೀಗ ಇಲ್ಲಿಗೆ ಸೇವೆ ಮಾಡಲು ಅವಕಾಶ ದೊರಕಿರುವುದು ನನ್ನ ಸೌಭಾಗ್ಯ. ತಾಯಿ ಕಾವೇರಿಯಲ್ಲಿ ಸೇವೆ ಮಾಡುವುದು ಪ್ರತಿ ಕನ್ನಡಿಗರ ಕರ್ತವ್ಯ ಎಂದು ಹೇಳಿದರು.ಮಾಜಿ ಉಪ ಮುಖ್ಯಮಂತ್ರಿ ಅಶ್ವತ್ಥ್ ನಾರಾಯಣ್ ಮಾತನಾಡಿ ಕಾಂಗ್ರೆಸ್ ಸರ್ಕಾರ ಹಿಂದುಳಿದ ಪರವಾಗಿ ಎಳ್ಳಷ್ಟೂ ಕೆಲಸ ಮಾಡಿಲ್ಲ. ಮಂಡಲ್ ಆಯೋಗ ವರದಿ ಕೂಡ ಅನುಷ್ಠಾನಕ್ಕೆ ತರಲಿಲ್ಲ ಎಂದು ಆರೋಪಿಸಿದ ಅವರು, ಬಿಜೆಪಿಯಲ್ಲಿ ಈ ಬಾರಿ ಲೋಕಸಭಾ ಚುನಾವಣೆಯಲ್ಲಿ ಶೇ.38ರಷ್ಟು ಮಂದಿಗೆ ಟಿಕೆಟ್ ನೀಡಲಾಗಿದೆ ಎಂದರು.ಮೈಸೂರು-ಕೊಡಗು ಕ್ಷೇತ್ರಕ್ಕೆ ಮೈಸೂರು ರಾಜವಂಶಸ್ಥ ಯದುವೀರ್ ಅವರ ಸ್ಪರ್ಧೆಗೆ ಪಕ್ಷ ಅವಕಾಶವನ್ನು ನೀಡಿದೆ. ಮೈಸೂರು ಒಡೆಯರ್ ವಂಶದ ರಾಜರು ಜನಪರವಾದ ತಮ್ಮ ಕಾರ್ಯವೈಖರಿಗಳ ಮೂಲಕ ಜನರ ಮನಗೆದ್ದವರಾಗಿದ್ದಾರೆ. ಇಡೀ ದೇಶದಲ್ಲೆ ಮೊಟ್ಟ ಮೊದಲ ಬಾರಿಗೆ ಸಮಾಜದ ಎಲ್ಲಾ ಸ್ತರದ ಜನರಿಗೆ ಸಮಾನ ಹಕ್ಕುಗಳನ್ನು ನೀಡುವ ಪ್ರಯತ್ನ ನಡೆದದ್ದು ಮೈಸೂರು ಸಂಸ್ಥಾನದಲ್ಲೆ. ಅಂತಹ ರಾಜಮನೆತನದ ಯದುವೀರ್ ಅವರ ಗೆಲುವಿಗೆ ಶ್ರಮಿಸುವಂತೆ ಕರೆ ನೀಡಿದರು.ಹಿಂದುಳಿದ ವರ್ಗಗಳ ಮೋರ್ಚಾದ ರಾಜ್ಯ ಅಧ್ಯಕ್ಷ ರಘು ಕೌಟಿಲ್ಯ ಮಾತನಾಡಿ ಈ ಬಾರಿಯೂ ಮೋದಿ ಅವರು ಪ್ರಧಾನಿಯಾಗಿಸಲು ಹಿಂದುಳಿದ ವರ್ಗ ಮಹಾ ಸಂಕಲ್ಪ ಮಾಡಬೇಕಿದೆ ಎಂದು ಕರೆ ನೀಡಿದರು. ಮಾಜಿ ಸಚಿವ ರಾಮದಾಸ್ ಮಾತನಾಡಿ, ಕೊಡಗಿಗೂ ರಾಜ ಮನೆತನಕ್ಕೆ ನೂರಾರು ವರ್ಷಗಳ ಇತಿಹಾಸವಿದೆ. ಅವರನ್ನು ಗೆಲ್ಲಿಸಲು ಕಾರ್ಯಕರ್ತರು ಕೆಲಸ ಮಾಡಬೇಕೆಂದರು. ಮಾಜಿ ಶಾಸಕ ಕೆ.ಜಿ. ಬೋಪಯ್ಯ ಮಾತನಾಡಿ, ಸಂಸದ ಪ್ರತಾಪ ಸಿಂಹ ಅವರು ಒಳ್ಳೆಯ ಕೆಲಸ ಮಾಡಿದ್ದಾರೆ. ಅವರ ಕೆಲಸ ಜನರಿಗೆ ತಿಳಿಸಬೇಕು. ಚುನಾವಣೆಯಲ್ಲಿ ಅತಿಯಾದ ವಿಶ್ವಾಸ ಬೇಡ. ಕೊಡಗಿನ ಕಳೆದ ವರ್ಷ 95 ಸಾವಿರ ಮತಗಳ ಲೀಡ್ ಇತ್ತು. ಈ ಬಾರಿ ಒಂದೂವರೆ ಲಕ್ಷ ಅಧಿಕ ಮತಗಳ ಅಂತರದಿಂದ ಗೆಲುವು ಸಾಧಿಸುವಂತೆ ಮಾಡಬೇಕೆಂದು ಕರೆ ನೀಡಿದರು. ಮಾಜಿ ಶಾಸಕ ಅಪ್ಪಚ್ಚು ರಂಜನ್ ಮಾತನಾಡಿ, ತಾನು ಮತ್ತು ಬೋಪಯ್ಯ ಅವರು ತಂದ ಅನುದಾನದಿಂದ ಇಂದಿನ ಶಾಸಕರು ಗುದ್ದಲಿ ಪೂಜೆ ಮಾಡುತ್ತಿದ್ದಾರೆ. ಈ ಕಾಂಗ್ರೆಸ್ ಸರ್ಕಾರದಿಂದ ಕೊಡಗು ಜಿಲ್ಲೆಗೆ ಒಂದು ಚುಕ್ಕಾಸೂ ಬಂದಿಲ್ಲ ಎಂದು ಆರೋಪಿಸಿದರು. ವಿಧಾನ ಪರಿಷತ್ ಸದಸ್ಯ ಸುಜಾ ಕುಶಾಲಪ್ಪ, ವಿಧಾನ ಪರಿಷತ್ ಮಾಜಿ ಸದಸ್ಯ ಸುನಿಲ್ ಸುಬ್ರಮಣಿ, ಎಸ್.ಜಿ. ಮೇದಪ್ಪ, ಬಿಜೆಪಿ ಜಿಲ್ಲಾಧ್ಯಕ್ಷ ರವಿ ಕಾಳಪ್ಪ, ಹಿಂದುಳಿದ ವರ್ಗಗಳ ಕೊಡಗು ಅಧ್ಯಕ್ಷ ಅಪ್ರು ರವೀಂದ್ರ ಮತ್ತಿತರರು ಹಾಜರಿದ್ದರು. -----------ಕೊಡಗಿನಲ್ಲಿ ಸಾಮಾನ್ಯ ಕಾರ್ಯಕರ್ತರಂತೆ ಓಡಾಡಿದ ಒಡೆಯರ್
ಕೊಡಗು-ಮೈಸೂರು ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಯದುವೀರ ಒಡೆಯರ್ ಶುಕ್ರವಾರ ಕೊಡಗಿನಲ್ಲಿ ಸಾಮಾನ್ಯ ಕಾರ್ಯಕರ್ತರಂತೆ ಕಂಡುಬಂದರು.ಮಡಿಕೇರಿಗೆ ಆಗಮಿಸಿದ ಸಂದರ್ಭ ಫೀಲ್ಡ್ ಮಾರ್ಷಲ್ ಕಾರ್ಯಪ್ಪ, ಗುಡ್ಡೆಮನೆ ಅಪ್ಪಯ್ಯ ಗೌಡ, ಜನರಲ್ ತಿಮ್ಮಯ್ಯ ಪ್ರತಿಮೆಗೆ ಗೌರವ ನಮನ ಸಲ್ಲಿಸಿದರು. ಬಿಜೆಪಿ ಪಕ್ಷದ ಕೊಡಗು ಮೈಸೂರು ಲೋಕಸಭಾ ಕ್ಷೇತ್ರದ ಅಭ್ಯರ್ಥಿಯಾಗಿ ಘೋಷಣೆಯಾದ ಒಂದೇ ದಿನದಲ್ಲಿ ಮಡಿಕೇರಿಗೆ ಆಗಮಿಸಿದ ಯದುವೀರ್ ಕಾವೇರಿ ಹಾಲಿನ ಸಭಾಂಗಣಕ್ಕೆ ಆಗಮಿಸುವ ಸಂದರ್ಭ ಕೊಡವ ವಾಲಗದೊಂದಿಗೆ ದೀಪ ಹೊತ್ತ ಮಹಿಳೆಯರಿಂದ ಭವ್ಯ ಸ್ವಾಗತ ನೀಡಲಾಯಿತು. ಸಮಾವೇಶದಲ್ಲಿ ಪಾಲ್ಗೊಂಡ ನೆನಪಿಗಾಗಿ ಜಿಲ್ಲಾ ಬಿಜೆಪಿ ಅಧ್ಯಕ್ಷ ರವಿ ಕಾಳಪ್ಪ ಒಡಿಕತ್ತಿ ನೀಡಿ ಯದುವೀರ್ ಅವರನ್ನು ಗೌರವಿಸಿದರು. ಕಾರ್ಯಕ್ರಮದ ನಂತರ ಪಕ್ಷದ ಕಾರ್ಯಕರ್ತರೊಂದಿಗೆ ಯದುವೀರ್ ಒಡೆಯರ್ ಅವರು ಸಹ ಭೋಜನವನ್ನು ಸ್ವೀಕರಿಸಿದರು. ರಾಜ ವಂಶಸ್ಥರಾದ ಕೃಷ್ಣ ದತ್ತ ಒಡೆಯರ್ ಅವರು ಯಾವುದೇ ಅಹಂ ಇಲ್ಲದೆ ಪಕ್ಷದ ಕಾರ್ಯಕರ್ತರೊಂದಿಗೆ ಸಾಮಾನ್ಯರಲ್ಲಿ ಸಾಮಾನ್ಯರಾಗಿ ಬೆರೆತಿದ್ದು ವಿಶೇಷವಾಗಿತ್ತು. ಬಿಜೆಪಿ ಕಾರ್ಯಕರ್ತರು ಸೆಲ್ಫಿಗಾಗಿ ಮುಗಿಬಿದ್ದ ದೃಶ್ಯ ಕಂಡುಬಂತು. ಎಲ್ಲಿ ಹೋದರೂ ಯದುವೀರ್ ಬಳಿ ಕಾರ್ಯಕರ್ತರು ಕಿಕ್ಕಿರಿದು ಸೇರಿದ್ದರು. ಬೆಳಗ್ಗಿನ ಉಪಹಾರ ಕೂಡ ಸೇವನೆ ಮಾಡದೆ ಕೊಡಗಿಗೆ ಆಗಮಿಸಿದ ಯದುವೀರ್ ಅವರು ಮಡಿಕೇರಿಯ ಜನರಲ್ ತಿಮ್ಮಯ್ಯ ವೃತ್ತದ ಬಳಿ ಎಳನೀರು ಸವಿದರು.