ಸಾರಾಂಶ
ಕನ್ನಡ್ರಭ ವಾರ್ತೆ ಲೋಕಾಪುರ
ಪರಿಸರ ಕಾಳಜಿ ಒಂದು ದಿನಕ್ಕೆ ಸಿಮಿತವಾಗದೆ, ಪ್ರತಿದಿನದ ಬಹುಮುಖ್ಯ ಕಾಳಜಿಯಾಗಿದೆ ಎಂದು ಬಿಡಿಸಿಸಿ ಬ್ಯಾಂಕ್ ಮಾಜಿ ಉಪಾಧ್ಯಕ್ಷ ಶಿವಾನಂದ ಉದಪುಡಿ ಹೇಳಿದರು.ಲೋಕಾಪುರ ಬಸ್ ನಿಲ್ದಾಣದಲ್ಲಿ ಪೌರಾಡಳಿತ ಇಲಾಖೆ, ಜಿಲ್ಲಾ ಆಡಳಿತ ಬಾಗಲಕೋಟೆ, ತಾಲೂಕಾಡಳಿತ ಮುಧೋಳ ಹಾಗೂ ಪಟ್ಟಣ ಪಂಚಾಯತಿ ಲೋಕಾಪುರ ವತಿಯಿಂದ ಜಿಲ್ಲೆಯಾದ್ಯಂತ ಲಕ್ಷ ಸಸಿ ನೆಡುವ ಕಾರ್ಯಕ್ಕೆ ಮಂಗಳವಾರ ಚಾಲನೆ ನೀಡಿ ಮಾತನಾಡಿದ ಅವರು, ಕಳೆದ ಬೇಸಿಗೆ ಗಮನಿಸಿದರೆ ಅತ್ಯಂತ ಭೀಕರ ಬಿಸಿಲಿನ ಅನುಭವನ ಕಂಡಿದ್ದಾಗಿದೆ. ನಿಸರ್ಗ ಮುನಿಸಿಕೊಂಡ ರೀತಿಗಳಲ್ಲಿ ಇದು ಒಂದು. ಕಾಲಮಾನ ಬದಲಾದಂತೆಲ್ಲ ಮನುಷ್ಯ ನಿಸರ್ಗವನ್ನು ಕಡೆಗೆಣಿಸುತ್ತಿರುವುದಕ್ಕೆ ಅದು ನೀಡಿದ ಶಿಕ್ಷೆ ಎಂದು ಹೇಳಿದರು.
ಉಪತಹಸೀಲ್ದಾರ್ ಸತೀಶ ಬೇವೂರ ಮಾತನಾಡಿ, ಜಾಗತಿಕ ತಾಪಮಾನಕ್ಕೆ ಸೆಡ್ಡು ಹೊಡೆಯಲು ಗಿಡ ನೆಡುವ ಮೂಲಕ ಹಸರೀಕರಣ ಹೆಚ್ಚಿಸುವ ಮೂಲಕ ಉತ್ತರ ಕೊಡಬೇಕಿದೆ. ಎಲ್ಲ ಕೆಲಸವನ್ನು ಸರ್ಕಾರ ಮಾಡಲಿ ಎಂದು ಜನಸಾಮಾನ್ಯರು ತೆಗಳುತ್ತ ಇರದೆ, ಇಂತಹ ಸಾಮಾಜಿಕ ಕಾರ್ಯದಲ್ಲಿ ಪಾಲ್ಗೊಂಡರೆ ನಿಸರ್ಗದ ಋಣ ತೀರಿಸುವ ಸಣ್ಣ ಕೆಲಸವಾದರೂ ಆದೀತು. ನಿಸರ್ಗ ನಮಗೆ ನೀಡಿದ ಕೊಡುಗೆಗೆ ನಾವು ಪ್ರತಿಯಾಗಿ ನೀಡುತ್ತಿರುವುದು ಶೂನ್ಯ. ಹಾಗಾಗಿ ಗಿಡ ನೆಡಲು ಸರ್ಕಾರದ ಜೊತೆಗೆ ಎಲ್ಲರೂ ಕೈಜೋಡಿಸಬೇಕು ಎಂದರು.ಪಿಎಸ್‌ಐ ಸಿದ್ದಪ್ಪ ಯಡಹಳ್ಳಿ ಮಾತನಾಡಿ, ಮನುಷ್ಯನ ಬದುಕಿಗೆ ಶುದ್ಧ ಗಾಳಿ ತುಂಬಾ ಅವಶ್ಯಕ, ಮರಗಳಿಂದ ನಮಗೆ ಶುದ್ಧಗಾಳಿ ಪ್ರಾಪ್ತವಾಗುತ್ತದೆ. ಆದ್ದರಿಂದ ಸಸಿಗಳನ್ನು ಬೆಳೆಸಿ ಪರಿಸರ ರಕ್ಷಿಸುವುದು ನಮ್ಮೆಲ್ಲರ ಜವಾಬ್ದಾರಿ ಎಂದರು.
ಪಟ್ಟಣ ಪಂಚಾಯತಿ ಮುಖ್ಯಾಧಿಕಾರಿ ಜ್ಯೋತಿ ಉಪ್ಪಾರ ಮಾತನಾಡಿ, ಆರೋಗ್ಯಯುತ ಸಮಾಜ ನಿರ್ಮಾಣದಲ್ಲಿ ಪರಿಸರದ ಕೊಡುಗೆ ಅನನ್ಯವಾಗಿದೆ, ಸ್ವಚ್ಛ ಮತ್ತು ಸುಂದರ ಪರಿಸರ ಮನುಷ್ಯನ ಬದುಕಿಗೆ ಅವಶ್ಯಕವಾಗಿದೆ ಎಂದರು.ಈ ವೇಳೆ ಪಟ್ಟಣ ಪಂಚಾಯತಿ ಆರೋಗ್ಯ ನಿರೀಕ್ಷಕ ಭಾಗ್ಯಶ್ರೀ ಪಾಟೀಲ, ಬಿಆರ್‌ಸಿಒ ಎ.ಆರ್. ಛಬ್ಬಿ, ಇಸಿಒ ವೈ.ಎಂ. ಪಮ್ಮಾರ, ಬಿಆರ್‌ಪಿ ವಿ.ಆರ್. ಕಟ್ಟಿಮನಿ, ಸಿಆರ್‌ಪಿಗಳಾದ ಕೆ.ಎಲ್. ಮಾಳೇದ, ಸುನೀಲ ನಾಯಕ, ದೈಹಿಕ ಶಿಕ್ಷಕ ಮಂಜುನಾಥ ಪಾಟೀಲ, ಕೃಷ್ಣಾ ಹೂಗಾರ, ಗಣಪತಿ ಗಸ್ತಿ, ಮುತ್ತಪ್ಪ ಚೌಧರಿ, ಅಬ್ದುಲ್ ರೆಹೆಮಾನ್ ತೊರಗಲ್, ಪೋಲಿಸ್, ಶಿಕ್ಷಣ, ಕಂದಾಯ ಇಲಾಖೆ, ಪಟ್ಟಣ ಪಂಚಾಯತಿ ಸಿಬ್ಬಂದಿ ಇದ್ದರು.