ಪರಿಸರ ಮಾಲಿನ್ಯ ಜಗತ್ತು ಎದುರಿಸುತ್ತಿರುವ ದೊಡ್ಡ ಸಮಸ್ಯೆ

| Published : Jun 06 2024, 12:31 AM IST

ಪರಿಸರ ಮಾಲಿನ್ಯ ಜಗತ್ತು ಎದುರಿಸುತ್ತಿರುವ ದೊಡ್ಡ ಸಮಸ್ಯೆ
Share this Article
  • FB
  • TW
  • Linkdin
  • Email

ಸಾರಾಂಶ

ಕನ್ನಡ ಪ್ರಭ ವಾರ್ತೆ ಮುಧೋಳ ಇಂದು ಇಡೀ ವಿಶ್ವ ಎದುರಿಸುತ್ತಿರುವ ಅತಿದೊಡ್ಡ ಸಮಸ್ಯೆ ಎಂದರೆ ಪರಿಸರ ಮಾಲಿನ್ಯ, ಜಲ ಮಾಲಿನ್ಯ, ವಾಯು ಮಾಲಿನ್ಯ, ಶಬ್ಧ ಮಾಲಿನ್ಯ, ಮಣ್ಣಿನ ಮಾಲಿನ್ಯ ಹಾಗೂ ಸಮುದ್ರ ಮಾಲಿನ್ಯ. ಇದನ್ನು ನಿಯಂತ್ರಿಸಲು ಪರಿಸರ ಸಂರಕ್ಷಣೆ ಮಾಡುವುದು ಅನಿವಾರ್ಯವಾಗಿದೆ ಎಂದು ಎಸ್.ಆರ್. ಕಂಠಿ ಕಾಲೇಜಿನ ಪ್ರಾಚಾರ್ಯ ಪ್ರೊ.ಮಲ್ಲಣ್ಣ ಜಿಗಬಡ್ಡಿ ಹೇಳಿದರು.

ಕನ್ನಡ ಪ್ರಭ ವಾರ್ತೆ ಮುಧೋಳ

ಇಂದು ಇಡೀ ವಿಶ್ವ ಎದುರಿಸುತ್ತಿರುವ ಅತಿದೊಡ್ಡ ಸಮಸ್ಯೆ ಎಂದರೆ ಪರಿಸರ ಮಾಲಿನ್ಯ, ಜಲ ಮಾಲಿನ್ಯ, ವಾಯು ಮಾಲಿನ್ಯ, ಶಬ್ಧ ಮಾಲಿನ್ಯ, ಮಣ್ಣಿನ ಮಾಲಿನ್ಯ ಹಾಗೂ ಸಮುದ್ರ ಮಾಲಿನ್ಯ. ಇದನ್ನು ನಿಯಂತ್ರಿಸಲು ಪರಿಸರ ಸಂರಕ್ಷಣೆ ಮಾಡುವುದು ಅನಿವಾರ್ಯವಾಗಿದೆ ಎಂದು ಎಸ್.ಆರ್. ಕಂಠಿ ಕಾಲೇಜಿನ ಪ್ರಾಚಾರ್ಯ ಪ್ರೊ.ಮಲ್ಲಣ್ಣ ಜಿಗಬಡ್ಡಿ ಹೇಳಿದರು.

ಬಾಗಲಕೋಟೆ ಬಿವಿವಿ ಸಂಘದ ಸ್ಥಳೀಯ ಎಸ್.ಆರ್.ಕಂಠಿ ಕಾಲೇಜಿನ ಎನ್‌ಎಸ್‌ಎಸ್ ಘಟಕ 1 ಮತ್ತು 2ರ ಆಶ್ರಯದಲ್ಲಿ ಬುಧವಾರ ಕಾಲೇಜಿನ ಆವರಣದಲ್ಲಿ ಸಸಿಗಳನ್ನು ನೆಡುವುದರ ಮೂಲಕ ವಿಶ್ವ ಪರಿಸರ ದಿನ ಆಚರಣೆ ಮಾಡಲಾಯಿತು.

ಪ್ರಾಚಾರ್ಯ ಪ್ರೊ.ಮಲ್ಲಣ್ಣ ಜಿಗಬಡ್ಡಿ ಮಾತಮಾಡಿ, ವಿದ್ಯಾರ್ಥಿಗಳು ತಮ್ಮ ಗ್ರಾಮದ ಸಾರ್ವಜನಿಕ ಸ್ಥಳ ಅಥವಾ ಮನೆಯ ಅಂಗಳದಲ್ಲಿ ಕನಿಷ್ಠ ಒಂದು ಸಸಿಯನ್ನಾದರೂ ನೆಟ್ಟು, ಪೋಷಿಸಿ ವಿಶ್ವ ಪರಿಸರ ದಿನ ಆಚರಿಸಬೇಕು, ಇದರಿಂದ ತಮಗೆ ನೆರಳು ಮತ್ತು ಶುದ್ಧವಾದ ಗಾಳಿಯನ್ನು ನೀಡಲಿದೆ, ನೀವು ಹೆಚ್ಚು ಹೆಚ್ಚು ಸಸಿಗಳನ್ನು ನೆಡುವುದರಿಂದ ಭೂಮಿಯಲ್ಲಿ ಆಮ್ಲಜನಕ ಪ್ರಮಾಣ ಹೆಚ್ಚಾಗುತ್ತದೆ. ಇದರಿಂದ ತಾವೆಲ್ಲರೂ ಆರೋಗ್ಯದಿಂದ ಇರಬಹುದೆಂದು ಹೇಳಿದ ಅವರು, ಕೈಗಾರಿಕೀಕರಣ, ನಗರೀಕರಣ ಮತ್ತು ಖನಿಜ ಸಂಪನ್ಮೂಲಗಳಿಗಾಗಿ ಭೂಮಿಯನ್ನು ಅಗೆದು ಮನುಜನು ಪರಿಸರಕ್ಕೆ ಹಾನಿಯನ್ನುಂಟು ಮಾಡುತ್ತಿದ್ದಾನೆ. ಇದರಿಂದ ಪರಿಸರ ನಾಶವಾಗುತ್ತಿದೆ. ಇದನ್ನು ತಡೆಗಟ್ಟಬೇಕಾದರೆ ಪ್ರತಿಯೊಬ್ಬರು ಸಸಿಗಳನ್ನು ನೆಟ್ಟು ಸಂರಕ್ಷಿಸಬೇಕೆಂದು ಮನವಿ ಮಾಡಿದರು.

ಎನ್‌ಎಸ್‌ಎಸ್ ಘಟಕ 1 ಮತ್ತು 2ರ ಸಂಯೋಜನಾಧಿಕಾರಿಗಳಾದ ಡಾ. ಲೋಕೇಶ ರಾಠೋಡ, ಪ್ರೊ.ಪಿ.ಡಿ.ಕುಂಬಾರ, ಕಾಲೇಜಿನ ಬೋಧಕ-ಬೋಧಕೇತರ ಸಿಬ್ಬಂದಿ ಹಾಗೂ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.