ಪರಿಸರ ಸಂರಕ್ಷಣೆ ಅತ್ಯಗತ್ಯ: ಬಿರಾದಾರ

| Published : Jun 06 2024, 12:31 AM IST

ಸಾರಾಂಶ

ನಾವೆಲ್ಲ ಸೇರಿ ವಿವಿಧ ಸಸಿಗಳನ್ನು ನಮ್ಮ ಸುತ್ತಮುತ್ತಲಿನ ಪರಿಸರದಲ್ಲಿ ನಡೆಸಿ ರಕ್ಷಿಸುವುದರ ಮೂಲಕ ವರ್ಷವೀಡಿ ಪರಿಸರ ದಿನಾಚರಣೆ ನಡೆಸುವಂತಾಗಬೇಕು

ನರಗುಂದ: ಅಧುನಿಕ ಜೀವನದ ಭರಾಟೆಯಲ್ಲಿ ಮನುಷ್ಯ ಜೀವಿ ಪರಿಸರ ಸಂರಕ್ಷಣೆ ಬಗ್ಗೆ ಕಾಳಜಿ ತೊರದಿರುವುದು ವಿಷಾದನೀಯ. ಆದರೆ ಭವಿಷ್ಯದ ಮಾನವ ಸಂಕುಲದ ಉಳವಿಗೋಸ್ಕರ ನಮ್ಮ ಸುತ್ತಮುತ್ತಲಿನ ಪರಿಸರ ರಕ್ಷಿಸುವುದು ಅನಿವಾರ್ಯ ಎಂದು ತಾಪಂ ಕಾರ್ಯನಿರ್ವಾಹಕ ಅಧಿಕಾರಿ ಸೋಮಶೇಖರ್ ಬಿರಾದಾರ ಹೇಳಿದರು.

ಅವರು ಬುಧವಾರ ತಾಲೂಕಿನ ಕನಕಿಕೊಪ್ಪ ಗ್ರಾಪಂ ವ್ಯಾಪ್ತಿಯ ಗುರ್ಲಕಟ್ಟಿ ಗ್ರಾಮದಲ್ಲಿ ವಿಶ್ವ ಪರಿಸರ ದಿನಾಚರಣೆ ಅಂಗವಾಗಿ ನರೇಗಾ ಯೋಜನೆಯ ಅಮೃತ ಸರೋವರ ಕಾರ್ಯಕ್ರಮದಡಿ ಅಭಿವೃದ್ಧಿಪಡಿಸಿದ ಗ್ರಾಮದ ಕೆರೆಯ ದಂಡೆ ಮೇಲೆ ಹಮ್ಮಿಕೊಂಡ ಪರಿಸರ ದಿನಾಚರಣೆ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದರು.

ನಾವೆಲ್ಲ ಸೇರಿ ವಿವಿಧ ಸಸಿಗಳನ್ನು ನಮ್ಮ ಸುತ್ತಮುತ್ತಲಿನ ಪರಿಸರದಲ್ಲಿ ನಡೆಸಿ ರಕ್ಷಿಸುವುದರ ಮೂಲಕ ವರ್ಷವೀಡಿ ಪರಿಸರ ದಿನಾಚರಣೆ ನಡೆಸುವಂತಾಗಬೇಕು.ಈ ಮೂಲಕ ಪರಿಸರದಲ್ಲಿ ವ್ಯತ್ಯಾಸವಾಗುತ್ತಿರುವ ವಾತಾವರಣ ಸಮತೋಲನಗೊಳಿಸಬಹುದು. ಪರಿಸರ ರಕ್ಷಣೆ ಕೇವಲ ಪರಿಸರ ಪ್ರೇಮಿಗಳ ಜವಾಬ್ದಾರಿಯಲ್ಲ. ಸಮಾಜದ ಕಟ್ಟಕಡೆಯ ವ್ಯಕ್ತಿಯೂ ಕೂಡಾ ಪರಿಸರ ರಕ್ಷಣೆ ಬಗ್ಗೆ ಕಾಳಜಿ ವಹಿಸಬೇಕು ಎಂದರು.

ಪಂಚಾಯತ ರಾಜ್ ಸಹಾಯಕ ನಿರ್ದೇಶಕ ಕೃಷ್ಣಮ್ಮ ಹಾದಿಮನಿ ಮಾತನಾಡಿ, ಪರಿಸರ ಸಂರಕ್ಷಣೆಯಿಂದ ಮಾತ್ರ ಮಳೆ, ಬೆಳೆ ಎಲ್ಲವೂ ಸಾಧ್ಯ. ಸುತ್ತಮುತ್ತಲಿನ ಗಿಡ ಕಡೆದು ಹಾಕುವುದರಿಂದ ನಮ್ಮ ಪರಿಸರವನ್ನು ನಾವೇ ಹಾಳು ಮಾಡಿಕೊಂಡಂತೆ. ಹೀಗಾಗಿ ಮನೆ ಸುತ್ತಮುತ್ತ ಖಾಲಿಯಿರುವ ಸ್ಥಳದಲ್ಲಿ ಸಸಿ ನೆಟ್ಟು ಪರಿಸರ ಉಳಿಸೋಣ ಎಂದರು.

ತಾಲೂಕಿನ ನರೇಗಾ ಐಇಸಿ ಸಂಯೋಜಕ ಸುರೇಶ್ ಬಾಳಿಕಾಯಿ, ಅಲ್ತಾಪ ಅಮ್ಮೀನಬಾವಿ, ಬಸವರಾಜ ಚಿಮ್ಮನಕಟ್ಟಿ, ಗ್ರಾಮದ ನರೇಗಾ ಕೂಲಿಕಾರರು ಮತ್ತು ಕನಕಿಕೊಪ್ಪ ಗ್ರಾಪಂ ಸಿಬ್ಬಂದಿ ವರ್ಗದವರು ಇದ್ದರು.