ಸಾರಾಂಶ
ದಾವಣಗೆರೆ: ರಜೆ ಹಾಕದೇ ಕರ್ತವ್ಯಕ್ಕೆ ಗೈರು, ದುರ್ನಡತೆ, ಕರ್ತವ್ಯ ಲೋಪದಿಂದ ಅಮಾನತುಗೊಂಡಿದ್ದ ಗ್ರಾಪಂ ಗ್ರಂಥಾಲಯ ಮೇಲ್ವಿಚಾರಕರನಿಗೆ ಅಮಾನತ್ತಿನಿಂದ ಬಿಡುಗಡೆಗೊಳಿಸಿ, ಮರು ನಿಯೋಜಿಸಲು ₹50 ಸಾವಿರ ಲಂಚ ಪಡೆಯುತ್ತಿದ್ದ ಚನ್ನಗಿರಿ ತಾಪಂ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಯ ಜೀಪು ಚಾಲಕನನ್ನು ಹಣದ ಸಮೇತ ಲೋಕಾಯುಕ್ತ ಪೊಲೀಸರು ಸೋಮವಾರ ಬಂಧಿಸಿದ್ದಾರೆ.
ಚನ್ನಗಿರಿ ತಾಪಂ ಇಒ ಜೀಪು ಚಾಲಕ ಶ್ಯಾಮಕುಮಾರ ಬಂಧಿತ ಆರೋಪಿ. ಚನ್ನಗಿರಿ ತಾಲೂಕಿನ ಬೆಳ್ಳಿಗನೂಡು ಗ್ರಾಪಂ ಗ್ರಂಥಾಲಯದ ಮೇಲ್ವಿಚಾರಕನಾಗಿದ್ದ ಷಫೀವುಲ್ಲಾ ಫೆ.12, 15 ಮತ್ತು 16ರಂದು ರಜೆ ಹಾಕದೇ, ಕರ್ತವ್ಯಕ್ಕೆ ಗೈರಾಗಿದ್ದರು. ಚನ್ನಗಿರಿ ತಾಪಂ ಇಒ ಅವರು ಷಫೀವುಲ್ಲಾಗೆ ಕರ್ತವ್ಯಕ್ಕೆ ಗೈರುಹಾಜರಿ, ದುರ್ನಡತೆ, ಕರ್ತವ್ಯ ಲೋಪದ ಕಾರಣದಿಂದ ಸೇವೆಯಿಂದ ಅಮಾನತುಗೊಳಿಸಿದ್ದರು.ಷಫೀವುಲ್ಲಾ ಅಮಾನತಿನಿಂದ ಬಿಡುಗಡೆಗೊಳಿಸಿ, ಕರ್ತವ್ಯಕ್ಕೆ ಮರುನಿಯೋಜಿಸಲು ತಾಪಂ ಇಒ ಜೀಪು ಚಾಲಕ ಶ್ಯಾಮಕುಮಾರ ₹50 ಸಾವಿರ ರು. ಲಂಚದ ಹಣಕ್ಕೆ ಬೇಡಿಕೆ ಇಟ್ಟಿದ್ದನು. ಷಫೀವುಲ್ಲಾ ಲಂಚದ ಹಣ ಕೊಡಲು ಇಷ್ಟವಿಲ್ಲದ ಕಾರಣ, ಅಧಿಕಾರಿಗಳ ಮೇಲೆ ಸೂಕ್ತ ಕ್ರಮ ಕೈಗೊಳ್ಳುವಂತೆ ಲೋಕಾಯುಕ್ತ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರು.
ಚನ್ನಗಿರಿ ತಾಪಂ ಕಚೇರಿಯಲ್ಲಿ ಸೋಮವಾರ ತಾಪಂ ಇಒ ಜೀಪು ಚಾಲಕ, ಆರೋಪಿ ಶ್ಯಾಮ್ ₹40 ಸಾವಿರ ಲಂಚ ಸ್ವೀಕರಿಸುವಾಗ ಲೋಕಾಯುಕ್ತರು ದಾಳಿ ಮಾಡಿ, ಹಣದ ಸಮೇತ ಆರೋಪಿಯನ್ನು ಬಂಧಿಸಿದರು.ಲೋಕಾಯುಕ್ತ ಪೊಲೀಸ್ ಅಧೀಕ್ಷಕ ಎಂ.ಎಸ್.ಕೌಲಾಪೂರೆ, ಡಿವೈಎಸ್ಪಿ ಕಲಾವತಿ ಮಾರ್ಗದರ್ಶನದಲ್ಲಿ ನಿರೀಕ್ಷಕರಾದ ಪ್ರಭು ಬ.ಸೂರಿನ, ಎಚ್.ಗುರುಬಸವರಾಜ, ಪಿ.ಸರಳ, ಸಿಎಚ್‌ಸಿ ಆಂಜನೇಯ, ಕನ್ನಪ್ಪ, ಸಿಪಿಸಿ ಸಿಬ್ಬಂದಿ ಮಲ್ಲಿಕಾರ್ಜುನ, ಲಿಂಗೇಳ, ಧನರಾಜ, ಮಂಜುನಾಥ, ಗಿರೀಶ, ಬಸವರಾಜ, ಚಾಲಕರಾದ ಕೋಟಿನಾಯ್ಕ, ಸಂತೋಷ, ಬಸವರಾಜ, ಮೋಹನ ಅವರನ್ನು ಒಳಗೊಂಡ ತಂಡವು ಕಾರ್ಯಾಚರಣೆಯಲ್ಲಿ ಭಾಗಿಯಾಗಿತ್ತು.
ಆರೋಪಿ ಶ್ಯಾಮಕುಮಾರನನ್ನು ವಶಕ್ಕೆ ಪಡೆದ ಲೋಕಾಯುಕ್ತ ಪೊಲೀಸ್ ಅಧಿಕಾರಿ, ಸಿಬ್ಬಂದಿ ಹೆಚ್ಚಿನ ತನಿಖೆಗೆ ಒಳಪಡಿಸಿದ್ದಾರೆ.- - - -24ಕೆಡಿವಿಜಿ7:
ಶ್ಯಾಮಕುಮಾರ, ಜೀಪು ಚಾಲಕ