ಶೋಷಿತರಿಗೆ ಆರ್ಥಿಕ, ಸಾಮಾಜಿಕ ಶಕ್ತಿ ಸಿಕ್ಕರೆ ಸಮಾನತೆ: ಸಿಎಂ

| Published : Feb 10 2024, 01:49 AM IST / Updated: Feb 10 2024, 05:06 PM IST

ಸಾರಾಂಶ

ಬ್ರಹ್ಮವಿದ್ಯಾನಗರದಲ್ಲಿ ನಡೆದ ಭಗಿರಥ ಜಯಂತೋತ್ಸವದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಭಗೀರಥ ಶ್ರೀ ಪ್ರಶಸ್ತಿಯನ್ನು ನೀಡಿ ಗೌರವಿಸಲಾಯಿತು.

ಕನ್ನಡಪ್ರಭ ವಾರ್ತೆ ಹೊಸದುರ್ಗ

ಶೋಷಿತ ಸಮುದಾಯಗಳಿಗೆ ಆರ್ಥಿಕ, ಸಾಮಾಜಿಕ ಶಕ್ತಿ ಸಿಕ್ಕಾಗ ಮಾತ್ರ ಸಮ ಸಮಾಜ ನಿರ್ಮಾಣ ಮಾಡಲು ಸಾಧ್ಯ ಎಂದು ಸಿಎಂ ಸಿದ್ದರಾಮಯ್ಯ ಹೇಳಿದರು.

ತಾಲೂಕಿನ ಬ್ರಹ್ಮವಿದ್ಯಾನಗರದ ಭಗೀರಥ ಮಠದಲ್ಲಿ ಆಯೋಜಿಸಲಾಗಿದ್ದ ಭಗೀರಥ ಜಯಂತಿ ಹಾಗೂ ಪುರುಷೋತ್ತಮಾನಂದ ಶ್ರೀಗಳ 25ನೇ ವರ್ಷದ ಪಟ್ಟಾಭಿಷೇಕದ ರಜತ ಮಹೋತ್ಸವ ಸಮಾರಂಭ ಉದ್ಘಾಟಿಸಿ ಮಾತನಾಡಿದರು.

ಶಿಕ್ಷಣದ ಕೊರತೆಯಿಂದ ಅನೇಕ ಸಮಾಜಗಳು ಹಿಂದುಳಿದವೆ. ಅವಕಾಶ ಯಾರನ್ನು ಹುಡುಕಿಕೊಂಡು ಬರುವುದಿಲ್ಲ. ಸಿಕ್ಕ ಅವಕಾಶ ಬಳಸಿಕೊಂಡು ಸಮಾಜದ ಮುಖ್ಯ ವಾಹಿನಿಗೆ ಬರಬೇಕಿದೆ. ಎಲ್ಲಾ ಶೂದ್ರರು ಅಕ್ಷರ ಸಂಸ್ಕೃತಿಯಿಂದ ವಂಚಿತರಾಗಿದ್ದಾರೆ. ಈ ಸಮಸ್ಯೆಗೆ ಜಾತಿ ವ್ಯವಸ್ಥೆಯೇ ಕಾರಣ ಎಂದರು.

ಸ್ವಾತಂತ್ರ ಹೋರಾಟದಲ್ಲಿ ನಡೆದ ಉಪ್ಪಿನ ಸತ್ಯಾಗ್ರಹಕ್ಕೆ ಉಪ್ಪಾರ ಸಮಾಜದ ಕೊಡುಗೆ ಅನನ್ಯ. ಉಪ್ಪಿನ ವ್ಯಾಪಾರ ನಿಂತ ಮೇಲೆ ಈ ಸಮುದಾಯಕ್ಕೆ ಶಿಕ್ಷಣ, ಆರ್ಥಿಕ ಶಕ್ತಿ ಉದ್ಯೋಗವಿಲ್ಲದೆ ಅತ್ಯಂತ ಹಿಂದುಳಿದ ಸಮಾಜವಾಗಿದೆ. ಈ ಸಮುದಾಯಕ್ಕೆ ಕೃಷಿ ಭೂಮಿಯೂ ಇಲ್ಲ ಇಂತಹ ಸಂದಿಗ್ಧ ಸಮಯದಲ್ಲಿ ಸಮಾಜ ಸಂಘಟಿಸುವ ಕೆಲಸವನ್ನ ಪುರುಷೋತ್ತಮಾನಂದ ಪುರಿ ಸ್ವಾಮೀಜಿ ಮಾಡುತ್ತಿದ್ದಾರೆ. ಅವರಿಗೆ ಎಲ್ಲಾ ಸಮುದಾಯ ಬಾಂಧವರು ಕೈಜೋಡಿಸಬೇಕು ಎಂದರು.

ಸಮಾಜದಲ್ಲಿ ಪರಿವರ್ತನೆ ತರಲು ಎಲ್ಲಾ ದಾರ್ಶನಿಕರು ಪ್ರಯತ್ನ ಮಾಡಿದ್ದಾರೆ. ಜಾತಿ ವ್ಯವಸ್ಥೆ ಗಟ್ಟಿಯಾಗಿ ಬೇರು ಬಿಟ್ಟಿದೆ. ಬಸವಾದಿ ಶರಣರಿಂದ ಹಿಡಿದು ಬುದ್ಧನವರೆಗೆ ಎಲ್ಲಾ ದಾರ್ಶನಿಕರು ಜಾತಿ ವ್ಯವಸ್ಥೆ ಸರಿಪಡಿಸಲು ಪ್ರಯತ್ನಿಸಿದ್ದಾದರೂ ಪಟ್ಟಭದ್ರರ ಹಿತಾಸಕ್ತಿಯಿಂದ ಮತ್ತೆ ಅದೇ ಪರಿಸ್ಥಿತಿಗೆ ಬಂದಿದೆ ಎಂದರು.

ಉಪ್ಪಾರರ ಕುಲಶಾಸ್ತ್ರ ಅಧ್ಯಯನ ವರದಿ ಸ್ವೀಕರಿಸಿ ಕೇಂದ್ರ ಸರ್ಕಾರಕ್ಕೆ ಶಿಫಾರಸು ಮಾಡಲಾಗುವುದು. ಅಲ್ಲದೆ ಶ್ರೀಮಠಕ್ಕೆ ನೀಡಿರುವ ಜಮೀನಿನ ಲೀಸ್ ಅವಧಿ ಮುಗಿದಿದ್ದು, ಪುನಃ ಮಂಜೂರು ಮಾಡಲು ಕ್ರಮ ಕೈಗೊಳ್ಳಲಾಗುವುದು ಎಂದರು.

ಸಚಿವ ಸತೀಶ್ ಜಾರಕಿಹೊಳಿ ಮಾತನಾಡಿ, ಬಹಳಷ್ಟು ಸಮಸ್ಯೆ ಎದರಿಸುತ್ತಿರುವ ಉಪ್ಪಾರ ಸಮಾಜ, ಹೋರಾಟದ ಮೂಲಕ ತಮ್ಮ ಹಕ್ಕನ್ನು ಪಡೆಯಬೇಕಿದೆ. ಮಠಕ್ಕೆ ನೀಡಿದ ಜಾಗದ ಲೀಸ್ ಅವಧಿ ಮುಗಿದಿದ್ದು, ಅದನ್ನು ಮುಂದುವರೆಸಲು ಸರ್ಕಾರದೊಂದಿಗೆ ಕೈ ಜೋಡಿಸುವುದಾಗಿ ತಿಳಿಸಿ, ಶೋಷಿತರ ಪರವಾಗಿರುವ ಸಿದ್ದರಾಮಯ್ಯ ನವರ ಪರವಾಗಿ ಸಮುದಾಯದ ಜನ ನಿಲ್ಲಬೇಕು ಎಂದು ಕರೆ ನೀಡಿದರು.

ಸಚಿವ ಮುನಿಯಪ್ಪ ಮಾತನಾಡಿ, ಶೋಷಿತ ವರ್ಗಗಳಿಗೆ ಸಮಾನತೆ ಸಮಾಜ ನೀಡಬೇಕೆಂದು ಮುಖ್ಯಮಂತ್ರಿ ಸಿದ್ದರಾಮಯ್ಯ ದಿಟ್ಟ ನಿರ್ಧಾರ ಹೊಂದಿದ್ದು ಎಲ್ಲರೂ ಅವರ ಕೈ ಬಲಪಡಿಸಬೇಕು ಎಂದರು. ಸಮಾರಂಭದಲ್ಲಿ ಭಗೀರಥ ಪೀಠದ ಶ್ರೀ ಪುರುಷೋತ್ತಮಾನಂದ ಸ್ವಾಮೀಜಿ ಸಾನ್ನಿಧ್ಯ ವಹಿಸಿದ್ದರು.

ವೇದಿಕೆಯಲ್ಲಿ ಎಂಎಸ್‌ಐಎಲ್ ಅಧ್ಯಕ್ಷ ಸಿ ಪುಟ್ಟರಂಗಶೆಟ್ಟಿ, ಜಿಲ್ಲಾ ಉಸ್ತುವಾರಿ ಸಚಿವ ಡಿ ಸುಧಾಕರ್, ಸಚಿವರುಗಳಾದ ಉತ್ತರ ಪ್ರದೇಶ ಸರ್ಕಾರದ ಸಚಿವ ಕುವೇರ್ ಸಿಂಗ್, ಪದ್ಮಶ್ರೀ ಡಾ.ಶ್ರೀಮತಿ ಸಾಲುಮರದ ತಿಮ್ಮಕ್ಕ, ರಾಜೀವ್ ಗಾಂಧಿ ವಿವಿ ಮಾಜಿ ಕುಲಪತಿ ಡಾ.ಕೆ.ಎಸ್ ರವೀಂದ್ರ ನಾಥ್, ಶಾಸಕ ಬಿಜಿ ಗೋವಿಂದಪ್ಪ ಮತ್ತಿತರರಿದ್ದರು.

ಭಗೀರಥ ಪೀಠದಿಂದ ಪ್ರತಿ ವರ್ಷ ಕೊಡಮಾಡುವ ಭಗೀರಥ ಶ್ರೀ ಪ್ರಶಸ್ತಿಯನ್ನು ಈ ಬಾರಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ನೀಡಿ ಗೌರವಿಸಲಾಯಿತು.

ಉಪ್ಪಾರ ಸಮಾಜಕ್ಕೆ ರಾಜಕೀಯ ಸ್ಥಾನಮಾನಕ್ಕೆ ಮನವಿ: ಭಗೀರಥ ಮಹರ್ಷಿಗಳ 60 ಅಡಿ ಏಕಶಿಲಾ ಮೂರ್ತಿ ಸ್ಥಾಪನೆ ಹಾಗೂ ಥೀಮ್ ಪಾರ್ಕ್ ನಿರ್ಮಾಣ ಸೇರಿ ಉಪ್ಪಾರ ಸಮಾಜಕ್ಕೆ ರಾಜಕೀಯ ಸ್ಥಾನಮಾನ ನೀಡುವಂತೆ ಭಗೀರಥ ಪೀಠ ಪುರುಷೋತ್ತಮಾನಂದ ಸ್ವಾಮೀಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಮನವಿ ಮಾಡಿದರು.

ಶುಕ್ರವಾರ ಭಗೀರಥ ಪೀಠದಲ್ಲಿ ನಡೆದ ಭಗೀರಥ ಜಯಂತೋತ್ಸವ ಕಾರ್ಯಕ್ರಮದ ಸಾನ್ನಿದ್ಯ ವಹಿಸಿ ಮಾತನಾಡಿದ ಅವರು, ಉಪ್ಪಾರ ಸಮಾಜವನ್ನು ಎಸ್‌ಟಿ ಮೀಸಲಾತಿಗಾಗಿ ಈಗಾಗಲೇ ಕುಲಶಾಸ್ತ್ರ ಅಧ್ಯಯನ ಪೂರ್ಣ ಗೊಂಡಿದೆ. ರಾಜ್ಯ ಸರ್ಕಾರದ ಮುಂದಿರುವ ಅಧ್ಯಯನದ ವರದಿಯನ್ನು ಕೇಂದ್ರ ಸರ್ಕಾರಕ್ಕೆ ಕಲಿಸಬೇಕು. 

ಅಲ್ಲದೆ ಮಠದ ಆವರಣದಲ್ಲಿ ನಿರ್ಮಾಣ ಮಾಡಲು ಉದ್ದೇಶಿಸಿರುವ ಭಗೀರಥ ಥೀಮ್ ಪಾರ್ಕ್ ನಿರ್ಮಾಣಕ್ಕೆ ವಿಶ್ವೇಶ್ವರಯ್ಯ ಜಲ ನಿಗಮದಿಂದ ₹12 ಕೋಟಿ ಹಣ ಬಿಡುಗಡೆ ಮಾಡುವಂತೆ ಕೋರಿದ ಶ್ರೀಗಳು, ಉಪ್ಪಾರ ಸಮಾಜಕ್ಕೆ ಒಂದು ಎಂಎಲ್‌ಸಿ, 2 ಅಭಿವೃದ್ಧಿ ನಿಗಮದ ಅಧ್ಯಕ್ಷ ಸ್ಥಾನ, ಲೋಕಸೇವಾ ಮತ್ತು ಹಿಂದುಳಿದ ಆಯೋಗದಲ್ಲಿ ಸದಸ್ಯತ್ವ ನೀಡುವಂತೆ ಮುಖ್ಯಮಂತ್ರಿಗಳನ್ನು ಒತ್ತಾಯಿಸಿದರು.