ವೈಚಾರಿಕತೆಯಿಂದ ಸಮಾನತೆಯ ಆಶಯ ಸಾಕಾರ
KannadaprabhaNewsNetwork | Published : Oct 15 2023, 12:47 AM IST
ವೈಚಾರಿಕತೆಯಿಂದ ಸಮಾನತೆಯ ಆಶಯ ಸಾಕಾರ
ಸಾರಾಂಶ
ದೊಡ್ಡಬಳ್ಳಾಪುರ: ಸಮ ಸಮಾಜ ನಿರ್ಮಾಣದ ಆಶಯ ಈಡೇರಿಕೆಗೆ ವೈಜ್ಞಾನಿಕ ಮನೋಭಾವದ ಜೊತೆಗೆ ವೈಚಾರಿಕ ಪ್ರಜ್ಞೆ ಅತ್ಯಗತ್ಯ ಎಂದು ಲೋಕೋಪಯೋಗಿ ಇಲಾಖೆ ಸಚಿವ ಸತೀಶ್ ಜಾರಕಿಹೊಳಿ ಅಭಿಪ್ರಾಯಪಟ್ಟರು.
ದೊಡ್ಡಬಳ್ಳಾಪುರ: ಸಮ ಸಮಾಜ ನಿರ್ಮಾಣದ ಆಶಯ ಈಡೇರಿಕೆಗೆ ವೈಜ್ಞಾನಿಕ ಮನೋಭಾವದ ಜೊತೆಗೆ ವೈಚಾರಿಕ ಪ್ರಜ್ಞೆ ಅತ್ಯಗತ್ಯ ಎಂದು ಲೋಕೋಪಯೋಗಿ ಇಲಾಖೆ ಸಚಿವ ಸತೀಶ್ ಜಾರಕಿಹೊಳಿ ಅಭಿಪ್ರಾಯಪಟ್ಟರು. ನಗರದ ಹೊರವಲಯದ ಬೆಸೆಂಟ್ ಪಾರ್ಕ್‌ನಲ್ಲಿ ರಾಜ್ಯ ವೈಜ್ಞಾನಿಕ ಸಂಶೋಧನಾ ಪರಿಷತ್ತು ಆಯೋಜಿಸಿದ್ದ ರಾಜ್ಯ ಮಟ್ಟದ ನಾನೂ ನಾಯಕ - 2 ದಿನಗಳ ನಾಯಕತ್ವ ಕಾರ್ಯಾಗಾರದ ಉದ್ಘಾಟನಾ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ದೇಶದಲ್ಲಿ ಮೌಢ್ಯ ಹೆಚ್ಚಾಗುತ್ತಿದೆ, ಸಮಸಮಾಜ ಉಳಿವಿಗಾಗಿ ಕೆಲಸ ಮಾಡಬೇಕಾಗಿದೆ, ದೇಶದ ಇತಿಹಾಸವನ್ನು ತಿರುಚುವ ಕೆಲಸ ಆಗುತ್ತಿದೆ, ಆಧುನಿಕತೆ ಹೆಸರಿನಲ್ಲಿ ಕಟ್ಟಡಗಳ ನಿರ್ಮಾಣದ ಹೆಸರಿನಲ್ಲಿ ಐತಿಹಾಸಿಕ ಕಟ್ಟಗಳು ಮಾಯವಾಗುತ್ತಿವೆ, ನಿಜವಾದ ಇತಿಹಾಸ ತಿಳಿಸಬೇಕಾಗಿದೆ. ಸಂವಿಧಾನ ಬದಲಿಸುವ ಪ್ರಸ್ತಾಪ ಹಾಗೂ ಹುನ್ನಾರಗಳ ಬಗ್ಗೆ ಎಚ್ಚೆತ್ತುಕೊಳ್ಳಬೇಕಾಗಿದೆ ಎಂದರು. ಹೊಸ ಸಮಾಜದ ಸೃಷ್ಟಿಗೆ ವೈಜ್ಞಾನಿಕ ಜಗತ್ತು ಮುಖ್ಯ, ಸಂವಿಧಾನದ ಜತೆಗೆ ಜನರಲ್ಲಿ ವೈಜ್ಞಾನಿಕ ಮನೋಭಾವನೆಗಳನ್ನು ಬೆಳಸಬೇಕಾಗಿದೆ, ಭಾವನೆಗಳನ್ನು ಬಿತ್ತುವ ಬದಲು ಬದುಕು ಕಟ್ಟಿಕೊಡುವ ಕಾರ್ಯ ಆಗಬೇಕಾಗಿದೆ. ಉತ್ತಮ ಸಮಾಜ ಕಟ್ಟುವಲ್ಲಿ ಇಂತಹ ಸಂಘಟನೆಗಳ ಅವಶ್ಯಕತೆ ಇದೆ ಎಂದು ಹೇಳಿದರು. ವಿಜ್ಞಾನ ಗ್ರಾಮಕ್ಕೆ 5 ಕೋಟಿ ಅನುದಾನ: ಶಿಡ್ಲಘಟ್ಟ ಬಳಿ ನಿರ್ಮಾಣ ಮಾಡಲು ಉದ್ದೇಶಿಸಿರುವ ವಿಜ್ಞಾನ ಗ್ರಾಮಕ್ಕೆ ಕರ್ನಾಟಕ ಸರ್ಕಾರದಿಂದ 5 ಕೋಟಿ ಅನುದಾನವನ್ನು ನೀಡಲಾಗುವುದು. ಇನ್ನೂ ಹೆಚ್ಚಿನ ಅನುದಾನವನ್ನು ಮುಂದಿನ ದಿನಗಳಲ್ಲಿ ಒದಗಿಸಿಕೊಡಲಾಗುವುದು. ಈ ವಿಜ್ಞಾನ ಗ್ರಾಮ ಯೋಜನೆಯು ಮುಂದಿನ 5 ವರ್ಷಗಳಲ್ಲಿ ಪೂರ್ಣವಾಗಿಸಿ ದೇಶದ ಎಲ್ಲಾ ವೈಜ್ಞಾನಿಕ ಚಿಂತಕರನ್ನು ಸೇರಿಸುವ ಕೆಲಸವಾಗಬೇಕು. ರಾಯಚೂರಿನಲ್ಲಿ ಡಿಸೆಂಬರ್ 29, 30ರಂದು ನಡೆಯಲಿರುವ ರಾಜ್ಯ ಮಟ್ಟದ 3ನೇ ವೈಜ್ಞಾನಿಕ ಸಮ್ಮೇಳನದ ಸರ್ವಾಧ್ಯಕ್ಷತೆ ನಿರ್ವಹಿಸಲು ಒಪ್ಪಿಗೆ ಸೂಚಿಸಿದರು. ಪ್ರತಿಜ್ಞೆ ವಿಧಿ ಬೋಧನೆ: ಇದೇ ವೇಳೆ ಅವರು, ಭಾಗವಹಿಸಿದ ಶಿಬಿರಾರ್ಥಿಗಳಿಗೆ "ನಾನು ನನ್ನ ಜೀವನದಲ್ಲಿ ವೈಜ್ಞಾನಿಕ ಹಾಗೂ ಮಾನವೀಯ ಧರ್ಮ ಮತ್ತು ಮೌಲ್ಯಗಳನ್ನು ಮೈಗೂಡಿಸಿಕೊಳ್ಳುತ್ತೇನೆ. ನಾನು ಪ್ರಶ್ನೆ ಮಾಡದೆ ಯಾವುದೇ ತರ್ಕವನ್ನು ಒಪ್ಪುವುದಿಲ್ಲ. ನನ್ನ ಮಾನವೀಯ ಧರ್ಮ ಸಮಾಜ ಹಾಗೂ ದೇಶದ ಕಾನೂನಿಗೆ ಧಕ್ಕೆ ತರುವ ಕೆಲಸವನ್ನು ಮಾಡುವುದಿಲ್ಲ ನನ್ನ ದೇಶದ ಸಂಸ್ಕೃತಿಯನ್ನು ಗೌರವಿಸುತ್ತೇನೆ, ಮೌಢ್ಯತೆ ಮತ್ತು ಅಂಧಕಾರ ನಿರ್ಮೂಲನೆ ಮಾಡಿ ಜೀವ ಜಗತ್ತಿಗೆ ಪೂರಕವಾದ ನನ್ನ ಬದುಕನ್ನು ರೂಪಿಸಿಕೊಳ್ಳುತ್ತೇನೆ ಎಂದು ಈ ಮೂಲಕ ಪ್ರತಿಜ್ಞೆ ಮಾಡುತ್ತೇನೆ "ಎಂದು ಪ್ರತಿಜ್ಞಾ ವಿಧಿ ಬೋಧಿಸಿದರು. ಸಂವಿಧಾನ ಅರಿವು ಅಗತ್ಯ: ನಿವೃತ್ತ ನ್ಯಾಯಮೂರ್ತಿ ನಾಗಮೋಹನ್ ದಾಸ್ ಮಾತನಾಡಿ, ನಮ್ಮ ಸಂವಿಧಾನ ನಮ್ಮ ಹಕ್ಕು ಕುರಿತು ಮಾತನಾಡಿ, ಸಂವಿಧಾನದ ಅರಿವು ಪ್ರತಿಯೊಬ್ಬರಿಗೂ ಇರಬೇಕಾಗಿದೆ. ಸಂವಿಧಾನ ಜಾತ್ಯತೀತ ವಿಚಾರಗಳನ್ನೊಳಗೊಂಡಿದ್ದು ಅದರ ಪೂರ್ಣ ಪರಿಚಯ ಮಾಡಿಕೊಳ್ಳುವುದು ಅಗತ್ಯ ಎಂದು ಹೇಳಿದರು. ಕರ್ನಾಟಕ ವೈಜ್ಞಾನಿಕ ಸಂಶೋಧನಾ ಪರಿಷತ್ತಿನ ರಾಜ್ಯಾಧ್ಯಕ್ಷ ಡಾ.ಹುಲಿಕಲ್ ನಟರಾಜ್ ಮಾತನಾಡಿ, ಪರಿಷತ್ತನ್ನು ಜನಸಾಮಾನ್ಯರ ಪರಿಷತ್ತಾಗಿ ರೂಪಿಸುವ ಕಾರ್ಯವನ್ನು ನಡೆಸಲಾಗುವುದು ಎಂದರು. ಜಿಲ್ಲಾ ಉಸ್ತುವಾರಿ ಸಚಿವ ಕೆ.ಎಚ್.ಮುನಿಯಪ್ಪ ವಿಜ್ಞಾನ ಗ್ರಾಮದ ಭೂಮಿಯನ್ನು ಪರಿಷತ್ತಿಗೆ ಹಸ್ತಾಂತರಿಸಿದರು. ಇಸ್ರೋ ಮಾಜಿ ಅಧ್ಯಕ್ಷ ಡಾ.ಎ.ಎಸ್.ಕಿರಣ್‌ಕುಮಾರ್, ಶಾಸಕ ಧೀರಜ್ ಮುನಿರಾಜ್ ಕರ್ನಾಟಕ ವೈಜ್ಞಾನಿಕ ಸಂಶೋಧನಾ ಪರಿಷತ್ತಿನ ಧ್ಯೇಯೋದ್ದೇಶ ಪುಸ್ತಕ ಬಿಡುಗಡೆ ಮಾಡಿದರು. ಕರ್ನಾಟಕ ಗಡಿ ಪ್ರದೇಶ ಅಭಿವೃದ್ದಿ ಮಂಡಳಿಯ ಮಾಜಿ ಅಧ್ಯಕ್ಷ ಡಾ.ಸಿ.ಸೋಮಶೇಖರ್, ವಿಜ್ಞಾನ ಗ್ರಾಮ ಭೂಮಿ ದಾನ ನೀಡಿರುವ ಆರ್.ರವಿ ಬಿಳಿಶಿವಾಲೆ, ಪರಿಷತ್ತಿನ ಉಪಾಧ್ಯಕ್ಷ ಕೆ.ಜಿ.ರಾವ್, ಡಾ.ಶ್ರೀರಾಮಚಂದ್ರ, ರಾಜೇಂದ್ರ, ಚಿಕ್ಕಹನುಮಂತೇಗೌಡ , ಬಿ.ಜಿ.ಜಗದೀಶ್, ಡಾ.ಉಷಾದೇವಿ, ರಾಜ್ಯ ಸಂಘಟನಾ ಕಾರ್ಯದರ್ಶಿ ವಿ.ಟಿ.ಸ್ವಾಮಿ ಉಪಸ್ಥಿತರಿದ್ದರು. 14ಕೆಡಿಬಿಪಿ3- ದೊಡ್ಡಬಳ್ಳಾಪುರದಲ್ಲಿ ಕರ್ನಾಟಕ ವೈಜ್ಞಾನಿಕ ಸಂಶೋಧನಾ ಪರಿಷತ್ತು ಆಯೋಜಿಸಿದ್ದ ನಾಯಕತ್ವ ಶಿಬಿರದ ಉದ್ಘಾಟನಾ ಕಾರ್ಯಕ್ರಮಕ್ಕೆ ಇಸ್ರೋ ಮಾಜಿ ಅಧ್ಯಕ್ಷ ಡಾ.ಎ.ಎಸ್.ಕಿರಣ್‌ಕುಮಾರ್ ಚಾಲನೆ ನೀಡಿದರು.