ಕನ್ನಡಪ್ರಭ ವಾರ್ತೆ ಕೆ.ಆರ್.ಪೇಟೆ

ಪಠ್ಯದ ಜೊತೆಗೆ ವಿದ್ಯಾರ್ಥಿಗಳ ಆಸಕ್ತಿದಾಯಕ ಕ್ಷೇತ್ರವನ್ನು ಗುರುತಿಸಿ, ಪ್ರೋತ್ಸಾಹಿಸುವ ಮೂಲಕ ಜಾಗತಿಕ ಸ್ಪರ್ಧೆಯನ್ನು ಎದುರಿಸಲು ಯುವಪಡೆಯನ್ನು ಕಾಲೇಜುಗಳಲ್ಲಿ ಸಜ್ಜುಗೊಳಿಸಬೇಕು ಎಂದು ಶಾಸಕ ಎಚ್.ಟಿ.ಮಂಜು ಕರೆ ನೀಡಿದರು.

ಪಟ್ಟಣದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಆಯೋಜಿಸಿದ್ದ ಸಾಂಸ್ಕೃತಿಕ, ಕ್ರೀಡಾ ಹಾಗೂ ಎನ್‌ಎಸ್‌ಎಸ್ ಕಾರ್ಯ ಚಟುವಟಿಕೆಗಳನ್ನು ಉದ್ಘಾಟಿಸಿ ಮಾತನಾಡಿ, ಬಹುತೇಕ ವಿದ್ಯಾರ್ಥಿಗಳು ಗ್ರಾಮೀಣ ಭಾಗದಿಂದ ಬರುತ್ತಾರೆ. ಅವರುಗಳಿಗೆ ಪ್ರಾಧ್ಯಾಪಕರ ಮಾರ್ಗದರ್ಶನವು ಬಹಳ ಮುಖ್ಯವಾಗಿರುವುದಾಗಿ ಹೇಳಿದರು.

ಪಿಯುಸಿ ಹಂತ ದಾಟಿ ಪದವಿಗೆ ಸೇರಿದಾಗಲೇ ಅವರಲ್ಲಿನ ಮನೋಭಾವವು ಬದಲಾವಣೆ ಕಂಡಿರುತ್ತದೆ. ಬದುಕಿನ ಬಗೆಗೆ ಪ್ರೀತಿಯನ್ನು ಬೆಳೆಸಿಕೊಂಡಿರುತ್ತಾರೆ. ಆದ್ದರಿಂದ ಪ್ರಾಧ್ಯಾಪಕರು ಕೇವಲ ಕೊಠಡಿ ಪಠ್ಯಕ್ಕೆ ಸೀಮಿತವಾಗದೆ ವಿದ್ಯಾರ್ಥಿಗಳ ಸರ್ವಾಂಗೀಣ ಅಭಿವೃದ್ಧಿಗೆ ಶ್ರಮಿಸಬೇಕು ಎಂದರು.

ತಾಲೂಕಿನಲ್ಲಿ ಪೂರ್ವ ಪ್ರಾಥಮಿಕ ಹಂತದಿಂದ ಇಂಜಿನಿಯರಿಂಗ್ ಹಾಗೂ ಸ್ನಾತಕೋತ್ತರ ಪದವಿಯವರೆಗೆ ಶಿಕ್ಷಣ ದೊರೆಯುತ್ತಿದೆ, ಇದು ಗ್ರಾಮೀಣ ಮಕ್ಕಳಿಗೆ ವರದಾನ. ತಂದೆ- ತಾಯಂದಿರು ನಿಮ್ಮ ಬಗ್ಗೆ ಕನಸು ಕಂಡಿರುತ್ತಾರೆ. ಒಳ್ಳೆಯ ಹಾದಿಯಲ್ಲಿ ನಡೆದು ಜೀವನದ ಗುರಿಯನ್ನು ಮುಟ್ಟುವಂತೆ ಕರೆ ನೀಡಿದರು.


ಪ್ರಾಂಶುಪಾಲ ಡಾ.ವಿ.ವಿ.ಜಗದೀಶ್ ಮಾತನಾಡಿ, ಕಾಲೇಜಿನಲ್ಲಿ ಐದು ವಿಷಯಗಳಿಗೆ ಸ್ನಾತಕೋತ್ತರ ತರಗತಿಗಳನ್ನು ನಡೆಸುತ್ತಿದ್ದು, ಹೊಸದಾಗಿ ಪದವಿಯಲ್ಲಿ ಬಿಸಿಎ ಕೋರ್ಸ್‌ನ್ನು ತೆರೆಯಲಾಗಿದೆ. ಕಾಲೇಜಿನ ಸಮಸ್ಯೆಗಳನ್ನು ತಮಗೆ ಲಿಖಿತ ರೂಪದಲ್ಲಿ ನೀಡಲಾಗಿದೆ. ಅವುಗಳನ್ನು ಪರಿಹರಿಸಿಕೊಡಬೇಕು ಎಂದು ಮನವಿ ಮಾಡಿದರು.

ಕಾರ್ಯಕ್ರಮದಲ್ಲಿ ವಿಶ್ವವಿದ್ಯಾಲಯ ಮಟ್ಟದ ಕ್ರೀಡೆ ಹಾಗೂ ಸಾಂಸ್ಕೃತಿಕ ಸ್ಪರ್ಧೆಗಳಲ್ಲಿ ವಿಜೇತ ವಿದ್ಯಾರ್ಥಿಗಳನ್ನು ಅಭಿನಂದಿಸಲಾಯಿತು. ಕನ್ನಡ ಪ್ರಾಧ್ಯಾಪಕ ಕೆಂಡಗಣ್ಣೇಗೌಡ ವಿಶೇಷ ಉಪನ್ಯಾಸ ನೀಡಿದರು.

ವೇದಿಕೆಯಲ್ಲಿ ಕಾಲೇಜು ಅಭಿವೃದ್ಧಿ ಸಮಿತಿ ಸದಸ್ಯರಾದ ಕೆ.ಬಿ.ಮಧು, ಪ್ರಾಧ್ಯಾಪಕರಾದ ಡಾ.ಜಯಕೀರ್ತಿ, ಡಾ.ಮಹೇಶ್, ಬೋರೇಗೌಡ, ಉಮೇಶ್, ಸವಿತಾ, ಪತ್ರಾಂಕಿತ ವ್ಯವಸ್ಥಾಪಕಿ ಜೆ.ಭುವನೇಶ್ವರಿ, ಹಿರಿಯ ವಿದ್ಯಾರ್ಥಿಗಳ ಸಂಘದ ಅಧ್ಯಕ್ಷ ಚಿಕ್ಕೋನಹಳ್ಳಿ ಚೇತನ್ ಹಲವರು ಇದ್ದರು.