ಶಿಕ್ಷಣದಿಂದ ಅನಿಷ್ಟ ಪದ್ಧತಿಗಳ ನಿರ್ಮೂಲನೆ

| Published : Sep 16 2025, 01:00 AM IST

ಸಾರಾಂಶ

ಪ್ರತಿಜ್ಞೆ ಕಾರ್ಯಕ್ರಮದಲ್ಲಿ ಬಸವಲಿಂಗ ಸ್ವಾಮೀಜಿ ಅಭಿಮತ

ಕನ್ನಡಪ್ರಭ ವಾರ್ತೆ ಮೊಳಕಾಲ್ಮರು

ಸಮಾಜದೊಳಗಿನ ಅನಿಷ್ಟ ಪದ್ಧತಿ ಮತ್ತು ಮೌಢ್ಯ ಆಚರಣೆಗಳು ತೊಲಗಲು ಮೌಲ್ಯಯುತ ಶಿಕ್ಷಣದ ಅಗತ್ಯವಿದೆ ಎಂದು ಚಿತ್ತರಗಿ ಶ್ರೀ ವಿಜಯ ಮಹಾಂತೇಶ್ವರ ಸಂಸ್ಥಾನ ಶಾಖಾ ಮಠದ ಪೀಠಾಧಿಪತಿ ಮ.ನಿ.ಪ್ರ.ಬಸವಲಿಂಗ ಸ್ವಾಮೀಜಿ ಹೇಳಿದರು.

ತಾಲೂಕಿನ ಸಿದ್ದಯ್ಯನ ಕೋಟೆ ಗ್ರಾಮದ ಶ್ರೀಮಠದ ಆವರಣದಲ್ಲಿ ಆಶ್ರಿತಾ ಸಂಸ್ಥೆ ಚಿತ್ರದುರ್ಗ ಹಾಗೂ ಚಿತ್ತರಗಿ ಶ್ರೀ ವಿಜಯ ಮಾಂತೇಶ್ವರ ಸಾಂಸ್ಕೃತಿಕ ಮತ್ತು ಕ್ರೀಡಾ ಯುವಕ ಸಂಘ ಇವರ ಸಂಯುಕ್ತ ಆಶ್ರಯದಲ್ಲಿ ನಡೆದ ಬಾಲ್ಯ ವಿವಾಹವನ್ನು ಕೊನೆಗೊಳಿಸಲು ಜಾಗತಿಕ ಅಂತರ್ಧರ್ಮಿಯ ವಾರಾಂತ್ಯದ ಪ್ರತಿಜ್ಞೆ ಕಾರ್ಯಕ್ರಮದ ದಿವ್ಯ ಸಾನಿಧ್ಯ ವಹಿಸಿ ಮಾತನಾಡಿದರು.

ಅಸ್ಪೃಶ್ಯತೆಯಂತೆಯೇ ಬಾಲ್ಯವಿವಾಹ ಮತ್ತು ಬಾಲಕಾರ್ಮಿಕ ಪದ್ಧತಿಗಳು ಸಾಮಾಜಿಕ ಪಿಡುಗುಗಳಾಗಿದ್ದು ಇವುಗಳಿಂದ ಸಾಮಾಜಿಕ ಅಸಮತೋಲನ ಸಮಾಜವನ್ನು ಮತ್ತಷ್ಟು ಹಿಂದಕ್ಕೆ ಕರೆದುಯುತ್ತವೆ. ಇವುಗಳ ನಿರ್ಮೂಲನೆಗಾಗಿಯೇ 12ನೇ ಶತಮಾನದಿಂದಲೂ ಹಲವಾರು ಸಾಮಾಜಿಕ ಚಳುವಳಿಗಳು ನಡೆದು ಆದರೆ ಇಂದಿಗೂ ಅಲ್ಲಲ್ಲಿ ಇಂತಹ ಆಚರಣೆಗಳು ವರದಿಯಾಗುತ್ತಿರುವುದು ಯೋಚನೆಯ ಸಂಗತಿ ಎಂದರು.

ವಯಸ್ಕರಲ್ಲದ ಮಕ್ಕಳಿಗೆ ಮದುವೆ ಮಾಡಿದರೆ ದೈಹಿಕವಾಗಿ ಮತ್ತು ಮಾನಸಿಕವಾಗಿ ಪ್ರಬಲರಾಗಿರುವುದಿಲ್ಲ ಇದರಿಂದ ಆರೋಗ್ಯದ ಸಮಸ್ಯೆಗಳು ಮತ್ತು ಸಾಮಾಜಿಕ ಅಡಚಣೆಗಳನ್ನು ಎದುರಿಸುತ್ತಾರೆ ಹಾಗಾಗಿ ಮಕ್ಕಳಿಗೆ ಶಿಕ್ಷಣದ ಜೊತೆಗೆ ಸಂಸ್ಕಾರವನ್ನು ಕಲಿಸಿಕೊಡಬೇಕಾಗಿದೆ ಎಂದು ತಿಳಿಸಿದರು.

ಸಮಾಜ ಸೇವಕ ಅಜ್ಜೇರಿ ತಿಪ್ಪೇಸ್ವಾಮಿ ಮಾತನಾಡಿ, ಬಾಲ್ಯವಿವಾಹ ಮತ್ತು ಮೌಢ್ಯ ಆಚರಣೆಗಳು ತಾಲೂಕಿನಲ್ಲಿ ಇನ್ನೂ ಜೀವಂತವಾಗಿದ್ದು ಅವುಗಳನ್ನು ತೊಲಗಿಸಲು ಆಶ್ರಿತಾ ಸಂಸ್ಥೆಯು ನಿರಂತರ ಶ್ರಮಿಸುತ್ತಿದ್ದು ಇಂತಹ ಸಂಘಟನೆಗಳಿಗೆ ಸಾರ್ವಜನಿಕರ ಬೆಂಬಲದ ಅಗತ್ಯವಿದೆ ಎಂದರು. ಆಶ್ರಿತ ಸಂಸ್ಥೆಯ ತಾಲೂಕು ಸಾಮಾಜಿಕ ಸಂಘಟಕರಾದ ಹರ್ಷವರ್ಧನ್.ಸಿ.ಜಿ.ಹಳ್ಳಿ. ಧನಂಜಯ ಭಟ್ರಹಳ್ಳಿ. ದೇವಿರಮ್ಮ. ಮತ್ತು ಬಿ ಮಲ್ಲೇಶಪ್ಪ ಇತರರು ಹಾಜರಿದ್ದರು.