ಹುಬ್ಬಳ್ಳಿ:
ಹುಬ್ಬಳ್ಳಿ-ಧಾರವಾಡ ಜನತೆಗೆ ತ್ವರಿತಗತಿಯಲ್ಲಿ ಸಾರಿಗೆ ಸೇವೆ ಒದಗಿಸಬೇಕೆಂಬ ಉದ್ದೇಶದಿಂದ ಜಾರಿಗೊಳಿಸಲಾದ ಬಿಆರ್‌ಟಿಎಸ್ ಏಳೇ ವರ್ಷದಲ್ಲಿ ಸಾಕು ಸಾಕು ಎನಿಸಿದೆ. ಇದೀಗ ಇದಕ್ಕೆ ಪರ್ಯಾಯವಾಗಿ ಇಆರ್‌ಟಿ ಸೇವೆಗೆ ಈ ಬಜೆಟ್‌ನಲ್ಲಿ ಹಸಿರು ನಿಶಾನೆ ಸಿಗುತ್ತದೆಯೇ?ಇದು ಜನರ ನಿರೀಕ್ಷೆ. ಹುಬ್ಬಳ್ಳಿ-ಧಾರವಾಡದಲ್ಲಿ ಜನರಿಗೆ ಅತ್ಯುತ್ತಮ ಸೇವೆ ನೀಡಬೇಕೆಂಬ ಉದ್ದೇಶದಿಂದ 2012ರಲ್ಲಿ ಚಾಲನೆ ದೊರೆತ್ತಿದ್ದ ಬಿಆರ್‌ಟಿಎಸ್ 2018ರಲ್ಲಿ ಪ್ರಾರಂಭವಾಗಿದೆ. ಆದರೆ, ಶೇ. 20ರಷ್ಟು ಬಸ್‌ಗಳಿಗೆ ಶೇ. 80ರಷ್ಟು ರಸ್ತೆ ಬಿಟ್ಟಿರುವುದು ಜನರನ್ನು ರೊಚ್ಚಿಗೇಳುವಂತೆ ಮಾಡಿದೆ. ಜತೆಗೆ ಇದರ ನಿರ್ವಹಣೆಯೂ ಸರಿಯಾಗಿ ಆಗುತ್ತಿಲ್ಲ. ಸಂಸ್ಥೆಯೂ ನಷ್ಟದಲ್ಲಿದೆ. ಇದರ ವಿರುದ್ಧ ಸಾರ್ವಜನಿಕರು ಪ್ರತಿಭಟನೆ ನಡೆಸಿರುವುದುಂಟು. ಇದಕ್ಕಾಗಿ ಜಿಲ್ಲಾ ಉಸ್ತುವಾರಿ ಸಂತೋಷ ಲಾಡ್ ಇದಕ್ಕಾಗಿ ಸಮೀಕ್ಷೆ ನಡೆಸಿ ಇಆರ್‌ಟಿ (ಎಲೆಕ್ಟ್ರಿಕ್ ರೈಲ್ ಟ್ರಾನ್ಸಿಟ್) ಯೋಜನೆ ಜಾರಿಗೊಳಿಸುವುದಾಗಿ ಹೇಳಿದ್ದಾರೆ. ಪಿಪಿಪಿ ಮಾಡಲ್‌ನಲ್ಲಿ ₹ 7000 ಕೋಟಿ ಖರ್ಚು ವೆಚ್ಚದಲ್ಲಿ ಇದು ಅನುಷ್ಠಾನಕ್ಕೆ ಬರಲಿದೆ ಎಂದು ಹೇಳಲಾಗಿದೆ. ಈ ಬಜೆಟ್‌ನಲ್ಲಿ ಈ ಬಗ್ಗೆ ಪ್ರಸ್ತಾಪವಾಗುತ್ತದೆಯೇ? ಎಂಬ ನಿರೀಕ್ಷೆ ಜನರದ್ದು.
ಭೂಸ್ವಾಧೀನಕ್ಕೆ ಹಣ ಮೀಸಲಿಡಲಿ:ಇನ್ನು ಧಾರವಾಡ-ಕಿತ್ತೂರ-ಬೆಳಗಾವಿ ಸೇರಿದಂತೆ ವಿವಿಧ ರೈಲು ಯೋಜನೆಗಳಿಗೆ ಭೂಸ್ವಾಧೀನ ಪ್ರಕ್ರಿಯೆಯೇ ಅಡ್ಡಿಯಾಗಿದೆ. ಭೂಸ್ವಾಧೀನಪಡಿಸಿಕೊಂಡು ರೈಲ್ವೆ ಇಲಾಖೆಗೊಪ್ಪಿಸಿದರೆ ಮಾತ್ರ ಯೋಜನೆಗಳು ಪ್ರಾರಂಭವಾಗುತ್ತವೆ. ಈ ನಿಟ್ಟಿನಲ್ಲಿ ರಾಜ್ಯ ಸರ್ಕಾರ ಭೂಸ್ವಾಧೀನಕ್ಕೆ ಅನುದಾನ ಬಿಡುಗಡೆ ಮಾಡಬೇಕಿದೆ. ಇದಕ್ಕಾಗಿ ಈ ಬಜೆಟ್‌ನಲ್ಲಿ ಅನುದಾನ ಬಿಡುಗಡೆ ಮಾಡುತ್ತದೆಯೇ? ಎಂಬುದು ಜನರ ನಿರೀಕ್ಷೆ.
ಅನುದಾನ ಬಿಡುಗಡೆ ಮಾಡಲಿ:
ಅಣ್ಣಿಗೇರಿ, ಅಳ್ವಾವರ ಹಾಗೂ ಹುಬ್ಬಳ್ಳಿ ನಗರ ಸೇರಿದಂತೆ ರಾಜ್ಯ 49 ತಾಲೂಕುಗಳು ಘೋಷಣೆಯಾಗಿ ಬರೋಬ್ಬರಿ 14 ವರ್ಷಗಳೇ ಆಗಿವೆ. ಆದರೆ ಈ ವರೆಗೂ ಎಲ್ಲ ತಾಲೂಕು ಕಚೇರಿಗಳು ಬಂದಿಲ್ಲ. ಪ್ರತ್ಯೇಕ ಹಣಕಾಸಿನ ನೆರವನ್ನು ಪಡೆದಿಲ್ಲ. ಈ ಸಲವಾದರೂ ಸರ್ಕಾರ ಅನುದಾನ ಬಿಡುಗಡೆ ಮಾಡಬೇಕು. ತಾಲೂಕುಗಳ ಅಭಿವೃದ್ಧಿ ಮಾಡಲಿ ಎಂಬುದು ಜನರ ನಿರೀಕ್ಷೆ..
ಇವುಗಳಲ್ಲಿ ಯಾವುದಕ್ಕೆ ಸರ್ಕಾರ ಒಪ್ಪಿಗೆ ಸೂಚಿಸುತ್ತದೆ ಎಂಬುದನ್ನು ಕಾಯ್ದು ನೋಡಬೇಕಷ್ಟೇ!