ಸಾರಾಂಶ
- ಕೊಪ್ಪಳ ಜಿಲ್ಲಾಸ್ಪತ್ರೆಯ ವೈದ್ಯರ ಚಿಕಿತ್ಸಾ ಕಾಳಜಿಗೆ ಮರು ಜನ್ಮ ಪಡೆದ ಯುವತಿ
ಕನ್ನಡಪ್ರಭ ವಾರ್ತೆ ಕೊಪ್ಪಳಜೀವನದಲ್ಲಿ ಜಿಗುಪ್ಸೆಗೊಂಡು ವಿಷ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ ಯುವತಿ ವೈದ್ಯರ ಕಾಳಜಿಯ ಚಿಕಿತ್ಸೆಯಿಂದಾಗಿ 78 ದಿನಗಳ ಕೋಮಾದಲ್ಲಿದ್ದು, ಈಗ ಗುಣಮುಖವಾಗಿದ್ದಾಳೆ.
ಕೊಪ್ಪಳ ಜಿಲ್ಲಾಸ್ಪತ್ರೆಯ ವೈದ್ಯರ ನಿರಂತರ ಚಿಕಿತ್ಸೆಯ ಬಳಿಕ ಯುವತಿ ಮರು ಜನ್ಮ ಪಡೆದಿದ್ದಾಳೆ.ಕ್ರಿಮಿನಾಶಕ ಸೇವಿಸಿ ಆತ್ಮಹತ್ಯೆಗೆ ಪ್ರಯತ್ನಿಸಿದ್ದ ಗಡ್ಡದಹನುಮಸಾಗರ ಗ್ರಾಮದ 23 ವರ್ಷದ ಮುತ್ತಮ್ಮ ಎಂಬ ಯುವತಿಯನ್ನು ಕುಷ್ಟಗಿ ತಾಲೂಕು ಆಸ್ಪತ್ರೆಗೆ ದಾಖಲಿಸಲಾಗಿತ್ತು. ಪ್ರಾಥಮಿಕ ಚಿಕಿತ್ಸೆ ಬಳಿಕೆ ಹೆಚ್ಚಿನ ಚಿಕಿತ್ಸೆಗಾಗಿ ಅಲ್ಲಿಂದ ಕೊಪ್ಪಳಕ್ಕೆ ಕಳುಹಿಸಿಕೊಡಲಾಗಿದ್ದು, ಮೇ 8ರಂದು ಯುವತಿಯನ್ನು ಕೊಪ್ಪಳ ಜಿಲ್ಲಾಸ್ಪತ್ರೆಗೆ ದಾಖಲಿಸಲಾಗಿತ್ತು. ದೇಹದಲ್ಲಿ ವಿಷ ಹರಡಿದ್ದರಿಂದ ಯುವತಿಯ ಸ್ಥಿತಿ ಚಿಂತಾಜನಕ ಸ್ಥಿತಿಯಲ್ಲಿತ್ತು. ಇದರ ಜೊತೆಗೆ ಉಸಿರಾಟದ ವೈಫಲ್ಯ ಉಂಟಾಗಿತ್ತು. ಜಿಲ್ಲಾಸ್ಪತ್ರೆಯ ವೈದ್ಯರ ಸಮಯಪ್ರಜ್ಞೆಯಿಂದ ಕೂಡಲೇ ಯುವತಿಗೆ ವೆಂಟಿಲೇಟರ್ ಚಿಕಿತ್ಸೆ ಹಾಗೂ ಶ್ವಾಸಕೋಶನಾಳ ಶಸ್ತ್ರಚಿಕಿತ್ಸೆ ನೀಡಿರುವುದರ ಫಲವಾಗಿ ಯುವತಿಗೆ ಮರು ಜೀವ ಸಿಕ್ಕಿದೆ. ಜಿಲ್ಲಾಸ್ಪತ್ರೆಯ ವೈದ್ಯರ ಕಾರ್ಯಕ್ಕೆ ಸಾರ್ವಜನಿಕರಿಂದ ಮೆಚ್ಚುಗೆ ವ್ಯಕ್ತವಾಗಿದೆ.
ಯುವತಿಯನ್ನು 64 ದಿನಗಳ ವೆಂಟಿಲೇಟರ್‌ನಲ್ಲಿಟ್ಟು ನಿರಂತರವಾಗಿ ಶ್ವಾಸಕೋಶನ ಚಿಕಿತ್ಸೆ ನೀಡಿದ್ದಾರೆ. ಬಳಿಕ ವೈದ್ಯರ ನಿಗಾದಲ್ಲಿ ಅಲ್ಲಿಂದ ಕ್ರಮೇಣವಾಗಿ ವೆಂಟಿಲೇಟರ್ ತೆಗೆಯಲಾಯಿತು. ನಂತರ ಆಕ್ಸಿಜನ್, ರೂಮ್ ಆಕ್ಸಿಜನ್ ಬಗ್ಗೆ ಪರಿಶೀಲನೆಯೊಂದಿಗೆ ಇತರ ಚಿಕಿತ್ಸೆ ಮತ್ತು ವೈದ್ಯರ ಕಾಳಜಿಗೆ 78 ದಿನಗಳ ಕೋಮಾ ಪಯಣದಲ್ಲಿ ಯುವತಿಯು ಸಾವು ಗೆದ್ದಂತಾಯಿತು. ಈಗ ಸಾಮಾನ್ಯ ಸ್ಥಿತಿಗೆ ತಲುಪಿದ ಯುವತಿಯು ಗುಣಮುಖಳಾಗಿ ಜು. 23ರಂದು ಜಿಲ್ಲಾಸ್ಪತ್ರೆಯಿಂದ ಬಿಡುಗಡೆಯಾಗಿರುವುದು ವಿಸ್ಮಯ ಎನ್ನುತ್ತಾರೆ ಸಂಬಂಧಿಕರು.ಕೊಪ್ಪಳ ಕಿಮ್ಸ್ ಸಾಮಾನ್ಯ ವೈದ್ಯಶಾಸ್ತ್ರ ವಿಭಾಗದ ಮುಖ್ಯಸ್ಥ ಡಾ. ಉಮೇಶ ರಾಜೂರ, ಯುನಿಟ್ ಮುಖ್ಯಸ್ಥ ಡಾ. ಕೃಷ್ಣಕುಮಾರ ನಾಯಕ್, ವೈದ್ಯಾಧಿಕಾರಿ ಡಾ. ಶಿವಪ್ರಸಾದ್, ಡಾ. ಗವಿಸಿದ್ದೇಶ್, ಡಾ. ವಿನಾಯಕ್, ಡಾ. ನವೀದ್ ಖಾನ್ ಹಾಗೂ ವೈದ್ಯಕೀಯ ಸಿಬ್ಬಂದಿಯನ್ನೊಳಗೊಂಡ ತಂಡವು ಯುವತಿಗೆ ಮರು ಜೀವ ನೀಡಲು ಶ್ರಮಿಸಿದ್ದಾರೆ.
ಜಿಲ್ಲಾಸ್ಪತ್ರೆಯ ವೈದ್ಯರ ನಿರಂತರ ಚಿಕಿತ್ಸೆ, ಪ್ರಯತ್ನದಿಂದ ಇಂದು ನನ್ನ ಸಹೋದರಿ ಸಾವನ್ನು ಗೆದ್ದಿದ್ದಾಳೆ. ಎಲ್ಲ ವೈದ್ಯಾಧಿಕಾರಿಗಳಿಗೆ ಹಾಗೂ ಸಿಬ್ಬಂದಿಗೆ ಧನ್ಯವಾದ ಸಲ್ಲಿಸುತ್ತೇನೆ ಎನ್ನುತ್ತಾರೆ ಯುವತಿಯ ಸಹೋದರ ನಿರುಪಾದಪ್ಪ.