‘ಹಿಂದ’ ಸಂಘಟನೆ ಸ್ಥಾಪಿಸುವ ಸುಳಿವು ನೀಡಿದ ಈಶ್ವರಪ್ಪ

| Published : May 01 2024, 01:17 AM IST

ಸಾರಾಂಶ

ಈಗ ಲೋಕಸಭಾ ಪಕ್ಷೇತರ ಅಭ್ಯರ್ಥಿ ಕೆ.ಎಸ್‌.ಈಶ್ವರಪ್ಪಗೆ ಬೆಂಬಲ ಸೂಚಿಸಿದ್ದಾರೆ. ಶರಾವತಿ ಸಂತ್ರಸ್ತರು, ಬಗರ್‌ ಹುಕುಂ, ಮಲೆನಾಡು ರೈತರ ಸಮಸ್ಯೆಗಳನ್ನು ಯಾವ ಸರ್ಕಾರಗಳು ಬಗೆಹರಿಸಿಲ್ಲ

ಕನ್ನಡಪ್ರಭ ವಾರ್ತೆ ಶಿವಮೊಗ್ಗ

ಈ ಹಿಂದೆ ಸಂಗೊಳ್ಳಿ ರಾಯಣ್ಣ ಬ್ರಿಗೇಡ್ ಸ್ಥಾಪಿಸಿ ಬಿಜೆಪಿ ವರಿಷ್ಠರ ಕೆಂಗಣ್ಣಿಗೆ ಗುರಿಯಾಗಿದ್ದ ಈಶ್ವರಪ್ಪ ಪುನಃ ಇಂತಹದೇ ಸಂಘಟನೆ ಹುಟ್ಟು ಹಾಕುವ ಪ್ರಸ್ತಾಪ ಮಾಡಿದ್ದಾರೆ.

ಚುನಾವಣೆ ಬಳಿಕ ಪುನಃ ಹಿಂದುಳಿದವರು ಮತ್ತು ದಲಿತರನ್ನು ಒಟ್ಟುಗೂಡಿಸುವ ಮತ್ತು ಅವರಿಗೆ ಅಧಿಕಾರ ನೀಡುವ ಪ್ರಯತ್ನ ನಡೆಸಲು ‘ಹಿಂದ’ ಸಂಘಟನೆ ಹುಟ್ಟು ಹಾಕುವ ಚಿಂತನೆ ನಡೆಸಿರುವುದಾಗಿ ಸ್ವತಂತ್ರ ಅಭ್ಯರ್ಥಿ ಕೆ. ಎಸ್. ಈಶ್ವರಪ್ಪ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.

ಚುನಾವಣೆ ಬಳಿಕ ಇಡೀ ರಾಜ್ಯಾದ್ಯಂತ ಸುತ್ತಿ, ವಿವಿಧ ಜಾತಿ, ಸಂಘಟನೆ ನಾಯಕರನ್ನು ಭೇಟಿ ಮಾಡಿ, ಚರ್ಚಿಸಿ ಸಂಘಟನೆ ಹುಟ್ಟು ಹಾಕಲು ಚಿಂತನೆಯಿದೆ. ಇದು ಯಾವ ಸ್ವರೂಪದಲ್ಲಿ ಇರಬೇಕು ಎಂಬುದನ್ನು ಆ ನಂತರವೇ ನಿರ್ಧರಿಸಲಾಗುವುದು. ಇಂತಹ ಸಂಘಟನೆ ಅನಿವಾರ್ಯ ಎಂಬುದರ ಬಗ್ಗೆ ಎಲ್ಲರೂ ಹೇಳುತ್ತಿದ್ದಾರೆ ಎಂದು ಹೇಳಿದರು.

ಈ ಹಿಂದೆ ನಾನು ಸಂಗೊಳ್ಳಿ ರಾಯಣ್ಣ ಬ್ರಿಗೇಡ್ ಹೆಸರಿನಲ್ಲಿ ಸಂಘಟನೆ ಕಟ್ಟಿ ಬೆಳೆಸಿದ್ದೆ. ಆದರೆ ಯಡಿಯೂರಪ್ಪನವರು ಕೇಂದ್ರದ ನಾಯಕ ಅಮಿತ್ ಶಾ ಅವರಿಗೆ ತಪ್ಪು ಮಾಹಿತಿ ನೀಡಿ ಇದನ್ನು ವಿಸರ್ಜನೆ ಮಾಡಿಸುವಲ್ಲಿ ಯಶಸ್ವಿಯಾದರು. ನಾನು ಎಲ್ಲಿ ಮುಖ್ಯಮಂತ್ರಿಯಾಗಿ ಬಿಡುತ್ತೇನೆಯೋ ಎಂಬ ಹೆದರಿಕೆ ಅವರಲ್ಲಿ ಇತ್ತು ಎಂದು ಕಾಣುತ್ತದೆ ಎಂದು ವ್ಯಂಗ್ಯವಾಡಿದರಲ್ಲದೆ, ಆಗ ನಾನು ಇದಕ್ಕೆ ಒಪ್ಪಬಾರದಿತ್ತು ಎಂದು ಈಗ ಅನಿಸುತ್ತಿದೆ. ಆದರೆ ಅದು ಆಗಿ ಹೋದ ವಿಚಾರ. ಈಗ ಸಂಘಟನೆಗೆ ಮರು ಜೀವ ನೀಡುತ್ತೇನೆ ಎಂದರು.

ಈಶ್ವರಪ್ಪಗೆ ಜಿಲ್ಲಾ ಕಾಂಗ್ರೆಸ್‌ನ ಮಾಜಿ ಅಧ್ಯಕ್ಷ ಬೆಂಬಲಶಿವಮೊಗ್ಗ: ಬಿಜೆಪಿ ಬಂಡಾಯ ಅಭ್ಯರ್ಥಿ ಕೆ.ಎಸ್.ಈಶ್ವರಪ್ಪಗೆ ಜಿಲ್ಲಾ ಕಾಂಗ್ರೆಸ್‌ನ ಮಾಜಿ ಅಧ್ಯಕ್ಷ ತೀ.ನಾ.ಶ್ರೀನಿವಾಸ್‌ ಬೆಂಬಲ ನೀಡಿದ್ದಾರೆ. ಮಂಗಳವಾರ ಕೆ.ಎಸ್‌.ಈಶ್ವರಪ್ಪ ನಿವಾಸದಲ್ಲಿ ಪತ್ರಿಕಾಗೋಷ್ಠಿಯಲ್ಲಿ ಈಶ್ವರಪ್ಪಗೆ ಬೆಂಬಲ ನೀಡುವುದಾಗಿ ತಿಳಿಸಿದ್ದಾರೆ. ತೀ.ನಾ.ಶ್ರೀನಿವಾಸ್‌ ಅವರು 2023ರ ಚುನಾವಣೆ ಸಂದರ್ಭದಲ್ಲಿ ಕಾಂಗ್ರೆಸ್‌ ಪಕ್ಷ ತೊರೆದಿದ್ದರು. ಬಳಿಕ ಮಲೆನಾಡು ರೈತ ಹೋರಾಟ ಸಮಿತಿ ಕಟ್ಟಿಕೊಂಡು ಶರಾವತಿ ಸಂತ್ರಸ್ತರು, ಬಗರ್‌ಹುಕುಂ ಸಾಗುವಳಿದಾರರಿಗೆ ಹಕ್ಕುಪತ್ರ ಕೊಡಿಸುವ ಸಲುವಾಗಿ ಹೋರಾಟ ಮಾಡಿಕೊಂಡು ಬರುತ್ತಿದ್ದಾರೆ. ಅವರು ಕಾಂಗ್ರೆಸ್‌ನ ಜಿಲ್ಲಾಧ್ಯಕ್ಷರಾಗಿದ್ದ ಅಲ್ಪ ಅವಧಿಯಲ್ಲೆ ಸಂಘಟನೆ ಮಾಡುವಲ್ಲಿ ಗಮನ ಸೆಳೆದಿದ್ದರು. ಈಗ ಲೋಕಸಭಾ ಪಕ್ಷೇತರ ಅಭ್ಯರ್ಥಿ ಕೆ.ಎಸ್‌.ಈಶ್ವರಪ್ಪಗೆ ಬೆಂಬಲ ಸೂಚಿಸಿದ್ದಾರೆ. ಶರಾವತಿ ಸಂತ್ರಸ್ತರು, ಬಗರ್‌ ಹುಕುಂ, ಮಲೆನಾಡು ರೈತರ ಸಮಸ್ಯೆಗಳನ್ನು ಯಾವ ಸರ್ಕಾರಗಳು ಬಗೆಹರಿಸಿಲ್ಲ. ಸಂಸದರಾಗಿದ್ದ ಯಡಿಯೂರಪ್ಪ, ಬಿ.ವೈ.ರಾಘವೇಂದ್ರ ಈ ಕುರಿತು ಸಂಸತ್ತಿನಲ್ಲಿ ಪ್ರಶ್ನಿಸಲಿಲ್ಲ. ಕಾಂಗ್ರೆಸ್‌ ಸರ್ಕಾರವು ಸಮಸ್ಯೆ ಪರಿಹರಿಸುವಲ್ಲಿ ವಿಫಲವಾಗಿದೆ. ಇದೇ ಕಾರಣಕ್ಕೆ ಮಲೆನಾಡು ರೈತ ಹೋರಾಟ ಸಮಿತಿ ಸ್ವತಂತ್ರ ಅಭ್ಯರ್ಥಿ ಈಶ್ವರಪ್ಪಗೆ ಬೆಂಬಲ ನೀಡುತ್ತಿದೇನೆ ಎಂದು ಸ್ಪಷ್ಟಪಡಿಸಿದರು.ಮಾಜಿ ಮುಖ್ಯಮಂತ್ರಿಗಳ ಮಕ್ಕಳಷ್ಟೆ ಚುನಾವಣೆಗೆ ಸ್ಪರ್ಧಿಸಬೇಕು? ಇದು ಕುಟುಂಬ ರಾಜಕಾರಣವಲ್ಲವೆ? ಹಿಂದುಳಿದ ವರ್ಗಗಳ ಪರವಾಗಿ ಕಾಂಗ್ರೆಸ್‌ ಮತ್ತು ಬಿಜೆಪಿ ಏನನ್ನೂ ಮಾಡಿಲ್ಲ. ಹಿಂದುಳಿದ ವರ್ಗದ ನಾಯಕರಾಗಿರುವ ಈಶ್ವರಪ್ಪ ಅವರಿಗೆ ಖಂಡಿತ ನ್ಯಾಯ ದೊರೆಯಲಿದೆ. ಈ ಬಾರಿ ಈ‍ಶ್ವರಪ್ಪ ಗೆಲುವು ಸಾಧಿಸುತ್ತಾರೆ ಎಂದು ತಿಳಿಸಿದರು.