ಲೋಕ ಚುನಾವಣಾ ಕಚೇರಿ ಆರಂಭಿಸಿದ ಈಶ್ವರಪ್ಪ

| Published : Mar 29 2024, 12:47 AM IST

ಸಾರಾಂಶ

ಶಿವಮೊಗ್ಗ ಲೋಕಸಭಾ ಕ್ಷೇತ್ರದ ಪಕ್ಷೇತರ ಅಭ್ಯರ್ಥಿ, ಮಾಜಿ ಸಚಿವ ಕೆ.ಎಸ್‌.ಈಶ್ವರಪ್ಪ ಅವರು ತಮ್ಮ ನಿವಾಸದಲ್ಲಿಯೇ ಲೋಕಸಭಾ ಚುನಾವಣಾ ಕಾರ್ಯಾಲಯ ಸ್ಥಾಪಿಸಿದ್ದು, ಗುರುವಾರ ಇದರ ಉದ್ಘಾಟನೆ ನೆರವೇರಿತು.

ಕನ್ನಡಪ್ರಭ ವಾರ್ತೆ ಶಿವಮೊಗ್ಗ

ಶಿವಮೊಗ್ಗ ಲೋಕಸಭಾ ಕ್ಷೇತ್ರದ ಪಕ್ಷೇತರ ಅಭ್ಯರ್ಥಿ, ಮಾಜಿ ಸಚಿವ ಕೆ.ಎಸ್‌.ಈಶ್ವರಪ್ಪ ಅವರು ತಮ್ಮ ನಿವಾಸದಲ್ಲಿಯೇ ಲೋಕಸಭಾ ಚುನಾವಣಾ ಕಾರ್ಯಾಲಯ ಸ್ಥಾಪಿಸಿದ್ದು, ಗುರುವಾರ ಇದರ ಉದ್ಘಾಟನೆ ನೆರವೇರಿತು.

ಕಾರ್ಯಾಲಯ ಉದ್ಘಾಟನೆ ಅಂಗವಾಗಿ ಬೆಳಗ್ಗೆ ಋತ್ವಿಜರಿಂದ ಸಹಸ್ರ ಮೋದಕ ಗಣಪತಿ ಹೋಮ ನೆರವೇರಿಸಲಾಯಿತು. ಬಳಿಕ ನಡೆದ ವೇದಿಕೆ ಕಾರ್ಯಕ್ರಮದಲ್ಲಿ ಐವರು ಮುತ್ತೈದೆಯರ ಮೂಲಕ ತಮ್ಮ ಕಚೇರಿಯನ್ನು ಈಶ್ವರಪ್ಪನವರು ಉದ್ಘಾಟಿಸಿದರು. ಕಾರ್ಯಾಲಯದ ಬ್ಯಾನರ್‌ನಲ್ಲಿ ಈಶ್ವರಪ್ಪ ಪೋಟೋ ಜೊತೆ ಪ್ರಧಾನಿ ನರೇಂದ್ರ ಮೋದಿಯವರ ಫೋಟೋವನ್ನೂ ಹಾಕಲಾಗಿತ್ತು.

ಈ ವೇಳೆ ಮಾತನಾಡಿ, ಚುನಾವಣೆಯಲ್ಲಿ ಸ್ಪರ್ಧಿಸಲು ಚಿಹ್ನೆ ಮಾತ್ರ ಬಾಕಿ ಇದೆ‌. ಏ.19ರಂದು ಚಿಹ್ನೆಯೂ ಸಿಗಲಿದೆ. ಏ.12ರಂದು ನಾಮಪತ್ರ ಸಲ್ಲಿಸುತ್ತೇನೆ ಎಂದರು. ರಾಜ್ಯದಲ್ಲಿ ಕಳೆದ ಬಾರಿಯ ಲೋಕಸಭೆ ಚುನಾವಣೆಯಲ್ಲಿ ಬಿಜೆಪಿಗೆ 25 ಸ್ಥಾನಗಳು ಬಂದಿದ್ದವು. ಈ ಬಾರಿ ಹೇಳಿಕೊಳ್ಳುವಷ್ಟು ಸ್ಥಾನಗಳು ಬರಲ್ಲ. ಎಷ್ಟು ಸೀಟು ಗೆಲ್ಲುತ್ತೋ ಗೊತ್ತಿಲ್ಲ. ಬಿಜೆಪಿ‌ ನನ್ನ ತಾಯಿ. ಯಾವ್ಯಾವ ಪಕ್ಷಕ್ಕೊ ಹೋಗಿ‌ ಬಂದೋರು‌ ಇವತ್ತು ನನ್ನ ಬಗ್ಗೆ ಮಾತನಾಡುತ್ತಿದ್ದಾರೆ ಎಂದು ಯಡಿಯೂರಪ್ಪ ವಿರುದ್ಧ ವಾಗ್ದಾಳಿ ನಡೆಸಿದರು.

ಯಡಿಯೂರಪ್ಪ ಅವರಿಗೆ ಡಮ್ಮಿ ಅಭ್ಯರ್ಥಿ ಹಾಕಿಸಿಕೊಂಡು ಬಂದು ಗೆದ್ದು ಅಭ್ಯಾಸ. ಅವರು ಲಿಂಗಾಯತ ನಾಯಕರು ಮತ್ತು ಹಿಂದುಳಿದ ನಾಯಕರನ್ನು ತುಳಿದು ಮಗನನ್ನು ಗೆಲ್ಲಿಸಿಕೊಂಡು‌ ಬರುತ್ತಿದ್ದಾರೆ. ಅದು ಈ‌ ಚುನಾವಣೆಯಲ್ಲಿ ಅಂತ್ಯವಾಗಬೇಕು. ಕಾಂಗ್ರೆಸ್‌ಗೆ ಈಡಿಗರು, ಯಡಿಯೂರಪ್ಪರಿಗೆ ಲಿಂಗಾಯತರು ಇದ್ದಾರೆ ಎಂದು ಬೀಗುತ್ತಿದ್ದಾರೆ. ಆದರೆ, ನನ್ನ ಪರ ಎಲ್ಲ ಹಿಂದುಗಳು ಇದ್ದಾರೆ ವಾಗ್ದಾಳಿ ನಡೆಸಿದರು.