ಹೊರಗುತ್ತಿಗೆ ನೌಕರರಿಗೂ ಇಎಸ್‌ಐ,ಪಿಎಫ್‌ ಸೌಲಭ್ಯ

| Published : Oct 06 2024, 01:18 AM IST

ಸಾರಾಂಶ

ಕನ್ನಡಪ್ರಭ ವಾರ್ತೆ ವಿಜಯಪುರ ಹೊರಗುತ್ತಿಗೆ ನೌಕರರನ್ನು ನಿಯೋಜಿಸಿರುವ ಗುತ್ತಿಗೆ ಕಂಪನಿಗಳು ಅವರಿಗೆ ಸೂಕ್ತವಾಗಿ ಇಎಸ್‌ಐ-ಪಿಎಫ್ ಇತರೆ ಸೌಲಭ್ಯಗಳನ್ನು ಕಲ್ಪಿಸಬೇಕು ಎಂದು ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ ಉಪನಿರ್ದೇಶಕ ಈರಪ್ಪ ಆಶಾಪೂರ ಹೇಳಿದರು.

ಕನ್ನಡಪ್ರಭ ವಾರ್ತೆ ವಿಜಯಪುರ

ಹೊರಗುತ್ತಿಗೆ ನೌಕರರನ್ನು ನಿಯೋಜಿಸಿರುವ ಗುತ್ತಿಗೆ ಕಂಪನಿಗಳು ಅವರಿಗೆ ಸೂಕ್ತವಾಗಿ ಇಎಸ್‌ಐ-ಪಿಎಫ್ ಇತರೆ ಸೌಲಭ್ಯಗಳನ್ನು ಕಲ್ಪಿಸಬೇಕು ಎಂದು ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ ಉಪನಿರ್ದೇಶಕ ಈರಪ್ಪ ಆಶಾಪೂರ ಹೇಳಿದರು.

ವಿಜಯಪುರದ ಬುದ್ಧ ವಿಹಾರ ಸಭಾಂಗಣದಲ್ಲಿ ಜಿಲ್ಲಾ ಪಂಚಾಯತಿ, ಸಮಾಜ ಕಲ್ಯಾಣ ಇಲಾಖೆ, ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ, ಹಾಗೂ ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆ, ಕ್ರೈಸ್ ಇಲಾಖೆ ಮತ್ತು ಕರ್ನಾಟಕ ರಾಜ್ಯ ಸರ್ಕಾರಿ ಹಾಸ್ಟೇಲ್ ಮತ್ತು ವಸತಿ ಶಾಲೆ ಹೊರಗುತ್ತಿಗೆ ನೌಕರರ ಸಂಘದ ಸಂಯುಕ್ತಾಶ್ರಯದಲ್ಲಿ ರಾಜ್ಯಮಟ್ಟದ ಅಡುಗೆ ಸಿಬ್ಬಂದಿಗಳಿಗೆ ಹಮ್ಮಿಕೊಂಡಿದ್ದ ಪುನಶ್ಚೇತನ ಕಾರ್ಯಾಗಾರ ಉದ್ಘಾಟಿಸಿ ಮಾತನಾಡಿದರು. ಹೊರಗುತ್ತಿಗೆ ನೌಕರರಿಗೆ ಸಿಬ್ಬಂದಿಗೆ ಕಾಲಕ್ರಮೇಣವಾಗಿ ವೇತನ, ಪಿಎಫ್, ಇಎಸ್ಐ ನೀಡಬೇಕು. ಮೂಲಭೂತ ಸೌಲಭ್ಯಗಳ ಕುರಿತು ಹಲವಾರು ಬಾರಿ ಮನವಿ ಸಲ್ಲಿಸಿದ್ದು, ಈ ಬಗ್ಗೆ ಸರಕಾರದ ಗಮನಕ್ಕೆ ತರಲಾಗಿದೆ. ಏಜೆನ್ಸಿಯನ್ನು ತೆಗೆದು ಸೊಸೈಟಿಯ ಮುಖಾಂತರ ವೇತನ ನೀಡುವಂತೆ ಮಾಡಿರುವ ಸರ್ಕಾರದ ಆದೇಶ ಸ್ವಾಗತಾರ್ಹ ಎಂದು ತಿಳಿಸಿದರು.

ಸಂಘಟನೆಯ ರಾಜ್ಯಾದ್ಯಕ್ಷ ಭೀಮಶೆಟ್ಟಿ ಯಂಪಳ್ಳಿ ಮಾತನಾಡಿ, ಹಾಸ್ಟೇಲ್ ಹಾಗೂ ವಸತಿ ಶಾಲಾ ನೌಕರರ ಬಗ್ಗೆ ಸಾಕಷ್ಟು ಬಾರಿ ಹೋರಾಟ ಮಾಡಿ ಸರ್ಕಾರದ ಗಮನ ಸೆಳೆಯಲಾಗಿದೆ. ನಮ್ಮ ಹೋರಾಟ ಎಂದಿಗು ನಿಲ್ಲುವುದಿಲ್ಲ. ಬೆಳಗಾವಿ ಅಧಿವೇಶನದಲ್ಲಿ ಕಾರ್ಮಿಕ ಸಚಿವರಾದ ಸಂತೋಷ ಲಾಡ್ ಹಮ್ಮಿಕೊಳ್ಳಲಾದ ಧರಣಿ ಸ್ಥಳಕ್ಕೆ ಬಂದು ₹ ೩೧ ಸಾವಿರ ಕನಿಷ್ಟ ವೇತನ ನೀಡುವುದಾಗಿ ಭರವಸೆ ನೀಡಿದ್ದರು. ಅಲ್ಲದೇ, ಏಜೆನ್ಸಿಯನ್ನು ತೆಗೆದುಹಾಕಿ ಸೊಸೈಟಿ ಮುಖಾಂತರ ವೇತನ ನಿಡುವುದಾಗಿ ವಿಧಾನಸಭೆಯಲ್ಲಿ ಭರವಸೆ ನೀಡಿದ್ದಾರೆ. ಇದಕ್ಕೆ ನಮ್ಮ ಸಂಘಟನೆಯ ವತಿಯಿಂದ ಸ್ವಾಗತವನ್ನು ಬಯಸುತ್ತೇನೆ. ಸೊಸೈಟಿ ಮುಖಾಂತರ ಕನಿಷ್ಠ ವೇತನ ಬಿಡುಗಡೆ ಆಗುವವರೆಗೆ ನಮ್ಮ ಹೋರಾಟ ಜಾರಿಯಲ್ಲಿರುತ್ತದೆ ಎಂದರು. ಈ ಕುರಿತು ಅಕ್ಟೋಬರ್ ೧೪ ರಂದು ಬೆಂಗಳೂರಿನ ಫ್ರೀಡಂ ಪಾರ್ಕ್‌ನಲ್ಲಿ ಅನಿರ್ದಿಷ್ಟ ಮುಷ್ಕರ ಹಮ್ಮಿಕೊಳ್ಳುವ ಎಚ್ಚರಿಕೆಯನ್ನು ನೀಡಿದರು.ಡಿ.ಎಂ.ಚಲವಾದಿ, ಬಿ.ಎಸ್.ಅಂಗಡಿ, ಎಸ್.ಎ.ಜಮಾದಾರ, ಅಣ್ಣಾರಾಯ ಈಳಗೇರ, ಲಕ್ಷ್ಮಣ ಹಂದ್ರಾಳ, ಸುರೇಖಾ ರಜಪೂತ, ಇಸಾಮೋದ್ದೀನ ಬೀದರ, ಕಾಶೀನಾಥ ಬಂಡಿ, ವಿರೇಶ ಕಲಬೀಳಗಿ, ಜಿಲ್ಲಾಧ್ಯಕ್ಷರಾದ ಹುಲಗಪ್ಪ ಚಲವಾದಿ, ಲಕ್ಷ್ಮಣ ಮಸಳಿ, ರಾಮಚಂದ್ರ ಕೋಳಿ, ಮೀನಾಕ್ಷಿ ತಳವಾರ, ಯಮನಪ್ಪ ಭಜಂತ್ರಿ, ವಿಜಯಪುರ, ಬಾಗಲಕೋಟೆ, ಗದಗ, ಹಾವೇರಿ, ವಿಜಯನಗರ, ಬೀದರ, ಕಲಬುರಗಿ ಮುಂತಾದವರು ಇದ್ದರು. ದೊಡಮನಿ ಕಾರ್ಯಕ್ರಮ ನಿರೂಪಿಸಿದರು. ಹುಲಗಪ್ಪ ಚಲವಾದಿ ಸ್ವಾಗತಿಸಿದರು. ಲಕ್ಷ್ಮಣ ಮಸಳಿ ವಂದಿಸಿದರು.