ಸಾರಾಂಶ
ಸಿ.ಸಿದ್ದರಾಜು, ಮಾದಹಳ್ಳಿ
ಕನ್ನಡಪ್ರಭ ವಾರ್ತೆ ಮಳವಳ್ಳಿಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ ಅನುತ್ತೀರ್ಣಗೊಂಡು ಮೂರನೇ ಬಾರಿಗೆ ಮರು ಪರೀಕ್ಷೆ ಬರೆಯಲು ಮುಂದಾದ ವಿದ್ಯಾರ್ಥಿಗಳಿಗೆ ಊಟ, ವಸತಿಯೊಂದಿಗೆ 10 ದಿನಗಳ ಕಾಲ ವಿಶೇಷ ತರಗತಿಗಳನ್ನು ನಡೆಸಿ ಹೆಚ್ಚಿನ ಮಂದಿಯನ್ನು ಉತ್ತೀರ್ಣರಾಗಿಸಿ, ಹೊಸ ಬದುಕು ಕಟ್ಟಿಕೊಡಲು ಕ್ಷೇತ್ರ ಶಿಕ್ಷಣಾಧಿಕಾರಿಗಳು ಉತ್ತಮ ಹೆಜ್ಜೆ ಇಟ್ಟಿದ್ದಾರೆ.
ಪ್ರಸಕ್ತ ಸಾಲಿನಲ್ಲಿ ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ 523 ವಿದ್ಯಾರ್ಥಿಗಳು ಅನುತ್ತೀರ್ಣಗೊಂಡಿದ್ದಾರೆ. ಆಯಾ ಶಾಲೆಗಳಲ್ಲಿಯೇ ಪರಿಹಾರ ಬೋಧನೆ ಮಾಡಬೇಕೆಂಬ ಶಿಕ್ಷಣ ಇಲಾಖೆ ಆದೇಶಕ್ಕೆ ಅನುತ್ತೀರ್ಣಗೊಂಡ ವಿದ್ಯಾರ್ಥಿಗಳು ಸ್ಪಂದಿಸಿರಲಿಲ್ಲ. ಜೊತೆಗೆ ಮನೆಯಲ್ಲಿಯೂ ಓದುವ ವಾತವರಣ ಇಲ್ಲದಿರುವುದು ತಿಳಿಯಿತು.ಈ ಹಿನ್ನೆಲೆಯಲ್ಲಿ ಶಾಸಕ ಪಿ.ಎಂ.ನರೇಂದ್ರಸ್ವಾಮಿ ಸಲಹೆ ಮೇರೆಗೆ ಕ್ಷೇತ್ರ ಶಿಕ್ಷಣಾಧಿಕಾರಿ ಎಸ್.ಚಂದ್ರಪಾಟೀಲ್ ಅವರು ವಿವಿಧ ಇಲಾಖೆ ಹಾಗೂ ಸಂಘ ಸಂಸ್ಥೆಗಳ ಸಹಕಾರದೊಂದಿಗೆ ವಿಶೇಷ ತರಗತಿ ನಡೆಸಲು ನಿರ್ಧಾರ ಮಾಡಿದ್ದಾರೆ.
ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ ಅನುತ್ತೀರ್ಣಗೊಂಡ ವಿದ್ಯಾರ್ಥಿಗಳಿಗೆ ಪರಿಹಾರ ಬೋಧನೆ ಮಾಡಬೇಕೆಂಬ ಶಿಕ್ಷಣ ಇಲಾಖೆ ಅದೇಶದ ಮೇರೆಗೆ ಎಲ್ಲಾ ಶಾಲೆಗಳಲ್ಲಿಯೂ ಶಾಲೆ ಆರಂಭಿಸಿದರೂ ಕೂಡ ವಿದ್ಯಾರ್ಥಿಗಳು ಕಿರಿಯ ವಿದ್ಯಾರ್ಥಿಗಳ ಜೊತೆಗೆ ಕುಳಿತುಕೊಳ್ಳಲು ಹಿಂಜರಿಕೆ ಪಡುತ್ತಿದ್ದರು. ಹೀಗಾಗಿ ಯಾವುದೇ ಆತಂಕವಿಲ್ಲದೇ ಕಠಿಣ ಅಭ್ಯಾಸದ ಜತೆಗೆ ಆತ್ಮ ಸ್ಥೈರ್ಯದಿಂದ ಮರು ಪರೀಕ್ಷೆ ಬರೆದು ಭವಿಷ್ಯ ರೂಪಿಸಿಕೊಳ್ಳಬೇಕು ಎಂಬ ಉದ್ದೇಶದಿಂದ ತರಬೇತಿ ಕಾರ್ಯಾಗಾರ ನಡೆಸಲಾಗುತ್ತಿದೆ.219 ವಿದ್ಯಾರ್ಥಿಗಳು ವಿಶೇಷ ತರಗತಿಗೆ ನೋಂದಣಿ ಮಾಡಿಸಿಕೊಂಡಿದ್ದು, ಪಟ್ಟಣದ ಬಾಯ್ಸ್ ಹೋಂ ಕಾಲೇಜು, ಸಮಾಜ ಕಲ್ಯಾಣ ಇಲಾಖೆಗಳಲ್ಲಿ 174 ವಿದ್ಯಾರ್ಥಿಗಳು ಹಾಗೂ 45 ವಿದ್ಯಾರ್ಥಿನಿಯರಿಗೆ ವಿದ್ಯಾರ್ಥಿನಿ ನಿಲಯಗಳಲ್ಲಿ ನುರಿತ 18 ಶಿಕ್ಷಕರಿಂದ ತರಗತಿ ಕೊಡಿಸಲಾಗುತ್ತಿದೆ.
ರಾಮಮನೋಹರ ಲೋಹಿಯಾ ವಿಚಾರ ವೇದಿಕೆ ಅಧ್ಯಕ್ಷ ದಡದಪುರ ಶಿವಣ್ಣ ಹಾಗೂ ಅದರ್ಶ ವಿದ್ಯಾಲಯದ ಎಸ್‌ಡಿಎಂಸಿ ಅಧ್ಯಕ್ಷ ಟಿ.ಎಂ.ಪ್ರಕಾಶ್ ಅವರಿಂದ ವಿದ್ಯಾರ್ಥಿಗಳಿಗೆ ಊಟದ ವ್ಯವಸ್ಥೆ, ತಾಂತ್ರಿಕ ಶಿಕ್ಷಣ ಇಲಾಖೆ ಜಂಟಿ ನಿರ್ದೇಶಕರು ಹಾಗೂ ಮಳವಳ್ಳಿ ತಾಲೂಕಿನ ಉಸ್ತುವಾರಿ ಅಧಿಕಾರಿ ಸುರೇಶ್ ಕುಮಾರ್ ಅವರಿಂದ ಅಧ್ಯಯನ ಸಾಮಗ್ರಿಗಳು, ಬಾಯ್ಸ್ ಹೊಂ ಕಾಲೇಜು, ಸಮಾಜ ಕಲ್ಯಾಣ ಇಲಾಖೆಯಿಂದ ತರಗತಿ ಹಾಗೂ ವಿದ್ಯಾರ್ಥಿಗಳ ವಾಸ್ತವ್ಯಕ್ಕೆ ಸ್ಥಳಾವಕಾಶ ನೀಡಿದೆ.ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ ಅನುತ್ತೀರ್ಣಗೊಂಡಿರುವ ವಿದ್ಯಾರ್ಥಿಗಳ ಆತ್ಮಸ್ಥೈರ್ಯವನ್ನು ತುಂಬಿ ಮೂರನೇ ಎಸ್ಸೆಸ್ಸೆಲ್ಸಿ ಮರು ಪರೀಕ್ಷೆಯಲ್ಲಿ ಉತ್ತೀರ್ಣರಾಗಿಸಲು ಕ್ಷೇತ್ರ ಶಿಕ್ಷಣಾಧಿಕಾರಿಗಳು ವಿವಿಧ ಇಲಾಖೆಗಳ ಸಹಕಾರ ಹಾಗೂ ಶಿಕ್ಷಣಾಸ್ತಕರ ನೆರವಿನಿಂದ ನಡೆಯುತ್ತಿರುವ ಕಾರ್ಯಾಗಾರ ಮಾದರಿಯಾಗಿದೆ.
ವಿದ್ಯಾರ್ಥಿಗಳಿಗೆ ವಿವಿಧ ಕಾರಣಗಳಿಂದ ಪರೀಕ್ಷೆಯಲ್ಲಿ ಹಿನ್ನಡೆಯಾಗಿತ್ತು. ಅನುತ್ತೀರ್ಣಗೊಂಡ ಅನೇಕರು ಮರುಪರೀಕ್ಷೆ ಬರೆದು ಸಮಾಜದಲ್ಲಿ ಉನ್ನತ ಸ್ಥಾನ ಪಡೆದಿರುವ ಅನೇಕ ಉದಾಹರಣೆಗಳಿವೆ. ಹೀಗಾಗಿ ಶಿಕ್ಷಣಾಧಿಕಾರಿಗಳು ವಿವಿಧ ಇಲಾಖೆಗಳ ಸಹಕಾರ ಹಾಗೂ ಶಿಕ್ಷಣಾಸ್ತಕರ ನೆರವಿನಿಂದ ತರಬೇತಿ ನೀಡುತ್ತಿರುವುದು ಮಾದರಿಯಾಗಿದೆ.- ಸುರೇಶ್ ಕುಮಾರ್, ತಾಂತ್ರಿಕ ಶಿಕ್ಷಣ ಇಲಾಖೆ ಜಂಟಿ ನಿರ್ದೇಶಕರು
ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ ಅನುತ್ತೀರ್ಣಗೊಂಡ ವಿದ್ಯಾರ್ಥಿಗಳಿಗೆ ಪರಿಹಾರ ಬೋಧನೆ ಮಾಡಲು ಶಿಕ್ಷಣ ಇಲಾಖೆ ಅದೇಶ ನೀಡಿತ್ತು. ಆದರೆ, ಹಿರಿಯ ವಿದ್ಯಾರ್ಥಿಗಳು ಕಿರಿಯರೊಂದಿಗೆ ತರಗತಿಗಳಲ್ಲಿ ಕುಳಿತು ಪಾಠ ಕೇಳಲು ಹಿಂಜರಿಕೆ ಪಡುತ್ತಿದ್ದರು. ಹೀಗಾಗಿ ವಿದ್ಯಾರ್ಥಿಗಳಿಗೆ ಉತ್ತಮ ವಾತವರಣ ಸೃಷ್ಟಿಸಲು ವಿಶೇಷ ತರಗತಿ ಹಮ್ಮಿಕೊಂಡು ಮರು ಪರೀಕ್ಷೆ ಬರೆಯಲು ಆತ್ಮಸ್ಥೈರ್ಯ ತುಂಬಲಾಗುತ್ತಿದೆ.
- ಎಸ್.ಚಂದ್ರಪಾಟೀಲ್, ಕ್ಷೇತ್ರ ಶಿಕ್ಷಣಾಧಿಕಾರಿ, ಮಳವಳ್ಳಿ
ಎಸ್ಸೆಸ್ಸೆಲ್ಸಿ ಮರು ಪರೀಕ್ಷೆ ಬರೆಯುತ್ತಿರುವ ವಿದ್ಯಾರ್ಥಿಗಳಿಗೆ ವಿಶೇಷ ತರಗತಿ ನಡೆಸಲು ಚಿಂತನೆ ನಡೆಸಿದ ವೇಳೆ ರಾಮಮನೋಹರ ಲೋಹಿಯಾ ವಿಚಾರ ವೇದಿಕೆಯಿಂದ ಊಟದ ವ್ಯವಸ್ಥೆ ಮಾಡಿದೆ. ಅಲ್ಲದೇ, ವಿಶೇಷ ತರಗತಿ ನಡೆಸುತ್ತಿರುವುದಕ್ಕೆ ಸಾರ್ವಜನಿಕರಿಂದ ಪ್ರಶಂಸೆ ವ್ಯಕ್ತವಾಗಿದೆ. ತಾಲೂಕಿನಲ್ಲಿ ಶಿಕ್ಷಣಕ್ಕೆ ವಿಶೇಷ ಒತ್ತು ನೀಡಲಾಗುತ್ತಿದೆ.- ಟಿ.ಎಂ.ಪ್ರಕಾಶ್, ಎಸ್‌ಡಿಎಂಸಿ ಅಧ್ಯಕ್ಷರು ಅದರ್ಶ ಶಾಲೆ, ಮಳವಳ್ಳಿ