ಸಾರಾಂಶ
ಕನ್ನಡಪ್ರಭ ವಾರ್ತೆ ಮಂಡ್ಯ
ಈ ಬಾರಿಯ ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ ಮಂಡ್ಯ ಜಿಲ್ಲೆ ಕಳಪೆ ಸಾಧನೆ ಮಾಡಿರುವುದಕ್ಕೆ ಜಿಲ್ಲಾಧಿಕಾರಿ ಡಾ.ಕುಮಾರ ಅವರು ಶಿಕ್ಷಣ ಇಲಾಖೆ ಅಧಿಕಾರಿಗಳನ್ನು ಹಿಗ್ಗಾಮುಗ್ಗಾ ತರಾಟೆ ತೆಗೆದುಕೊಂಡರು. ಬಿಇಒ, ಡಯಟ್ ಪ್ರಾಂಶುಪಾಲರು, ಡಯಟ್ ಉಪನ್ಯಾಸಕರು, ಕ್ಷೇತ್ರ ಸಮನ್ವಯಾಧಿಕಾರಿಳು, ವಿಷಯ ಪರಿವೀಕ್ಷಕರು, ಮುಖ್ಯಶಿಕ್ಷಕರು ಸೇರಿದಿಂತೆ ಶಿಕ್ಷಕರ ಅಸಮರ್ಪಕ ಕಾರ್ಯವೈಖರಿ ಬಗ್ಗೆ ತೀವ್ರ ಅಸಮಾಧಾನ ಹೊರಹಾಕಿದರು.ನಗರದ ಜಿಲ್ಲಾ ಪಂಚಾಯ್ತಿಯ ಕಾವೇರಿ ಸಭಾಂಗಣದಲ್ಲಿ ಗುರುವಾರ ಎಸ್ಸೆಸ್ಸೆಲ್ಸಿ ಪರೀಕ್ಷಾ ಫಲಿತಾಂಶದ ವಿಶ್ಲೇಷಣೆ ಸಭೆಯಲ್ಲಿ ಆರಂಭದಿಂದ ಕೊನೆಯವರೆಗೂ ಫುಲ್ ಗರಂ ಆಗಿದ್ದರು.
ಜಿಲ್ಲೆಯಲ್ಲಿ ೫೧೫೪ ಮಕ್ಕಳು ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ ಅನುತ್ತೀರ್ಣರಾಗಿದ್ದಾರೆ. ಅವರು ಫೇಲಾಗಿರುವುದಕ್ಕೆ ಮಕ್ಕಳು ಅಥವಾ ಪೋಷಕರು ಕಾರಣರಲ್ಲ. ಶಿಕ್ಷಕರೇ ನೇರ ಹೊಣೆ. ನೈತಿಕತೆ, ಜವಾಬ್ದಾರಿಯಿಂದ ಶಿಕ್ಷಕರು ಕೆಲಸ ಮಾಡಿದ್ದರೆ ಈ ಫಲಿತಾಂಶ ಬರುತ್ತಿರಲಿಲ್ಲ. ನನಗೆ ಮಂಡ್ಯ ಜಿಲ್ಲೆಗೆ ಯಾವ ಸ್ಥಾನ ಬಂದಿದೆ ಎನ್ನುವುದಕ್ಕಿಂತ ಗುಣಾತ್ಮಕ ಶಿಕ್ಷಣ ನೀಡುವುದು ಮುಖ್ಯ ಎಂದು ನೇರವಾಗಿ ಹೇಳಿದರು.ಟೀ-ಕಾಫಿ ಕುಡಿಯೋಕೆ ಹೋಗ್ತೀರಾ..?
ಕನ್ನಡದಲ್ಲೇ ಅತಿ ಹೆಚ್ಚು ಮಕ್ಕಳು ಫೇಲಾಗಿದ್ದಾರೆ. ಶಿಕ್ಷಕರು, ಮುಖ್ಯ ಶಿಕ್ಷಕರು, ಬಿಆರ್‌ಸಿಗಳು, ಬಿಇಒಗಳು ಏನು ಮಾಡುತ್ತಿದ್ದಾರೆ. ಕೇವಲ ಟೀ-ಕಾಫಿ ಕುಡಿದುಕೊಂಡು, ಊಟ ಮಾಡಿಕೊಂಡು ಬರುವುದಕ್ಕೆ ಶಾಲೆಗಳಿಗೆ ಭೇಟಿ ಕೊಡ್ತೀರಾ. ಕಚೇರಿಯಲ್ಲೇ ಕುಳಿತು ವಿಸಿಟರ್ ಬುಕ್‌ಗೆ ಸಹಿ ಹಾಕುತ್ತಿದ್ದೀರಾ. ಶಿಕ್ಷಣದಲ್ಲಿ ಗುಣಮಟ್ಟ ಕಾಪಾಡಬೇಕಾದ ಶಿಕ್ಷಕರು ಈ ರೀತಿ ಬೇಜವಾಬ್ದಾರಿತನ ಪ್ರದರ್ಶಿಸುವುದು ಬೇಸರದ ಸಂಗತಿ. ಎಲ್ಲಾ ವ್ಯವಸ್ಥೆಗಳಿದ್ದರೂ ಇಷ್ಟೊಂದು ಸಂಖ್ಯೆಯಲ್ಲಿ ಮಕ್ಕಳು ಫೇಲ್ ಆಗಿರುವುದು ತೀರಾ ನಾಚಿಕೆಗೇಡಿನ ವಿಚಾರ ಎಂದು ಅತೃಪ್ತಿ ವ್ಯಕ್ತಪಡಿಸಿದರು.ಅನ್ನ ತಿನ್ನುವ ಇಲಾಖೆಗೆ ದ್ರೋಹ ಸರಿಯಲ್ಲ:
ನಿಮ್ಮ ಅಸಮರ್ಥತೆಯನ್ನು ಮುಚ್ಚಿಕೊಳ್ಳುವುದಕ್ಕೆ ಸಿಸಿ ಕ್ಯಾಮೆರಾ, ವೆಬ್ ಕ್ಯಾಮೆರಾ ಕಾರಣ, ಮಕ್ಕಳ ಮೇಲೆ ಗೂಬೆ ಕೂರಿಸುವುದಲ್ಲ. ಯಾವ ಮಕ್ಕಳು ಕಲಿಕೆಯಲ್ಲಿ ಹಿಂದುಳಿದಿದ್ದಾರೆ. ಕಲಿಕೆಯಲ್ಲಿ ಹಿಂದುಳಿಯಲು ಕಾರಣವೇನೆಂಬುದನ್ನು ಗುರುತಿಸಿ ಅವರಿಗೆ ಪ್ರೋತ್ಸಾಹ, ಪ್ರೇರಣೆ ನೀಡಿ ಮಾರ್ಗದರ್ಶನ ಮಾಡಬೇಕಾದ್ದು ಶಿಕ್ಷಕರು, ಮುಖ್ಯ ಶಿಕ್ಷಕರ ಕರ್ತವ್ಯ. ಕೇವಲ ೩೦ ಅಂಕ ಗಳಿಸುವಷ್ಟು ಸಾಮರ್ಥ್ಯವನ್ನು ಮಕ್ಕಳಿಗೆ ತುಂಬಲಾಗದಿದ್ದ ಮೇಲೆ ನೀವು ಶಿಕ್ಷಕರಾಗಿ ಏನು ಪ್ರಯೋಜನ. ಅನ್ನ ತಿನ್ನುವ ಇಲಾಖೆಗೆ ದ್ರೋಹ ಮಾಡುವುದಕ್ಕೆ ನಿಮಗೆ ಮನಸ್ಸಾದರೂ ಹೇಗೆ ಬರುತ್ತೆ. ಮನಸ್ಸಾಕ್ಷಿ, ಆತ್ಮಸಾಕ್ಷಿ ಇದ್ದರೆ ಒಮ್ಮೆ ಆತ್ಮಾವಲೋಕನ ಮಾಡಿಕೊಳ್ಳುವಂತೆ ಕಠಿಣವಾಗಿ ನುಡಿದರು.ಪುಕ್ಕಟೆಯಾಗಿ ಯಾರೂ ದುಡಿಯುತ್ತಿಲ್ಲ..!
ಶಿಕ್ಷಕರು, ಮುಖ್ಯ ಶಿಕ್ಷಕರು ಮಾಡುವ ಕೆಲಸ ಬಿಟ್ಟು ಗುಂಪುಗಾರಿಕೆ ಮಾಡುತ್ತಿದ್ದೀರಾ ಅಥವಾ ರಾಜಕೀಯ ಮಾಡುತ್ತಿದ್ದೀರಾ. ನೀವು ಯಾರೂ ಧರ್ಮಕ್ಕೋ, ಪುಕ್ಕಟೆಯಾಗಿಯೋ ಕೆಲಸ ಮಾಡುತ್ತಿಲ್ಲ. ನಿಸ್ವಾರ್ಥದಿಂದ ಸೇವೆಯನ್ನೂ ಮಾಡುತ್ತಿಲ್ಲ. ನೀವೆಲ್ಲಾ ಸರ್ಕಾರದಿಂದ ಸಂಬಳ ಪಡೆದು ಕೆಲಸ ಮಾಡುತ್ತಿದ್ದೀರಿ. ಸಂಬಳ ಪಡೆಯುವುದಕ್ಕೆ ಸರಿಯಾಗಿ ಕೆಲಸ ಮಾಡಿ. ಕಾಟಾಚಾರಕ್ಕೆ ಶಾಲೆಗೆ ಬರೋದು, ಟೀ-ಕಾಫಿ ಕುಡಿದು ಕಾಲ ಕಳೆದು ಕಾಟಾಚಾರಕ್ಕೊಂದು ರಿಪೋರ್ಟ್ ಕಳುಹಿಸುವುದು ನಿಮ್ಮ ಕೆಲಸವಲ್ಲ. ನಾವು ಮಾಡುವ ಕೆಲಸದಲ್ಲಿ ಪ್ರಾಮಾಣಿಕತೆ, ಬದ್ಧತೆ ಇರಬೇಕು ಎಂದು ಬುದ್ಧಿಮಾತು ಹೇಳಿದರು.ಪ್ರೌಢಶಾಲಾ ಹಂತದಲ್ಲಿ ಮಕ್ಕಳ ಕಲಿಕಾ ಮಟ್ಟ ಕುಸಿಯಲು ಪ್ರಾಥಮಿಕ ಶಾಲೆಯ ಶಿಕ್ಷಕರನ್ನು ಹೊಣೆಗಾರರನ್ನಾಗಿ ಮಾಡುತ್ತೀರಿ. ಆ ಹಂತದ ಶಿಕ್ಷಕರೂ ನಿಮ್ಮ ವ್ಯಾಪ್ತಿಗೆ ಬರೋದು. ಅವರ ವಿರುದ್ಧ ಏನು ಕ್ರಮ ಜರುಗಿಸಿದ್ದೀರಿ. ಮಕ್ಕಳು ಪ್ರೌಢಶಾಲಾ ಹಂತ ತಲುಪಿದ ನಂತರ ಮೂರು ವರ್ಷ ನೀವೇನು ಮಾಡಿದ್ದೀರಿ. ಶಿಕ್ಷಣದ ಅಡಿಪಾಯ ಸರಿಯಿಲ್ಲವೆಂದು ತೆಗಳುವುದು ನಿಮ್ಮಲ್ಲಿರುವ ಅಸಮರ್ಥತೆ, ದೌರ್ಬಲ್ಯವನ್ನು ತೋರಿಸುತ್ತದೆ ಎಂದು ದೂಷಿಸಿದರು.
ಭಾಷಾ ಶಿಕ್ಷಕರಿಗೇ ಪ್ರತ್ಯೇಕ ಪರೀಕ್ಷೆ:ಈ ಸಮಯದಲ್ಲಿ ಕೆಲವು ಬಿಇಒ, ಮುಖ್ಯ ಶಿಕ್ಷಕರು ನಮ್ಮಿಂದ ತಪ್ಪುಗಳಾಗಿವೆ, ತಿದ್ದಿಕೊಳ್ಳುತ್ತೇವೆ ಎಂದಾಗ, ಮೂರು ವರ್ಷ ಮಾಡಲಾಗದ ಸಾಧನೆಯನ್ನು ಮುಂದಿನ ೨೦ ದಿನದಲ್ಲಿ ಮಾಡುತ್ತೀರಾ. ನಿಮಗೆ ಆ ವಿಶೇಷ, ಅಸಾಧ್ಯ ಶಕ್ತಿ ಇದೆಯಾ. ಕನ್ನಡ ವಿಷಯದಲ್ಲಿ ೩೫೭೧ ಮಕ್ಕಳು ಫೇಲಾಗಿದ್ದಾರೆಂದರೆ ಮಂಡ್ಯ ಕರ್ನಾಟಕದಲ್ಲಿದೆಯೋ, ಪಾಕಿಸ್ತಾನ, ಅಪ್ಘಾನಿಸ್ತಾನದಲ್ಲಿದೆಯೋ. ಇಂಗ್ಲಿಷ್‌ನಲ್ಲಿ ೪೧೩೨, ಹಿಂದಿಯಲ್ಲಿ ೪೨೯೦, ಗಣಿತದಲ್ಲಿ ೪೨೧೬ ಮಕ್ಕಳು ಫೇಲಾಗಿರುವುದನ್ನು ನೋಡಿದರೆ ಭಾಷಾ ಶಿಕ್ಷಕರಿಗೇ ಪ್ರತ್ಯೇಕ ಪರೀಕ್ಷೆ ನಡೆಸಬೇಕೆನಿಸುತ್ತದೆ. ಫಲಿತಾಂಶ ನೋಡಿದರೆ ಇವರೆಲ್ಲಾ ಮಕ್ಕಳಿಗೆ ಏನು ಪಾಠ ಮಾಡಿದ್ದಾರೆಂಬ ಬಗ್ಗೆ ಅನುಮಾನಗಳು ಮೂಡುತ್ತವೆ ಎಂದು ದೂಷಿಸಿದರು.
ಸಂಬಳದ ದಿನವಷ್ಟೇ ಪ್ರೀತಿ-ಒಲವು:ಶಿಕ್ಷಕ ವೃತ್ತಿ ಬಗ್ಗೆ ಪ್ರೀತಿ-ಒಲವು ಇರಬೇಕು. ಆ ಲಕ್ಷಣಗಳೇ ನಿಮ್ಮಲ್ಲಿ ಕಾಣಿಸುತ್ತಿಲ್ಲ. ಸಂಬಳದ ದಿನ ಮಾತ್ರ ನಿಮಗೆ ವೃತ್ತಿ ಬಗ್ಗೆ ಒಲವು-ಪ್ರೀತಿ ಎಲ್ಲಾ ಬರುತ್ತದೆ. ಮಕ್ಕಳನ್ನು ನಮ್ಮ ಮನೆ ಮಕ್ಕಳಂತೆ ಕಾಣಬೇಕು. ಎಷ್ಟೋ ಮಕ್ಕಳಿಗೆ ಓದೋಕೆ, ಬರೆಯೋಕೆ ಬರೋಲ್ಲ. ಆ ಬಗ್ಗೆ ಶಿಕ್ಷಕರಿಗೆ ಕಿಂಚಿತ್ತೂ ಕಾಳಜಿಯೇ ಇಲ್ಲ. ಹಾಗಿದ್ದ ಮೇಲೆ ಶಿಕ್ಷಕರ ಬಗ್ಗೆ ಗೌರವ ಹೇಗೆ ಬರುತ್ತೆ. ಯಾರಿಗೆ ಬರುತ್ತೆ, ಏಕೆ ಬರಬೇಕು. ವ್ಯವಸ್ಥೆಯೊಳಗೆ ಸಣ್ಣದೊಂದು ಬದಲಾವಣೆಯನ್ನು ತರಲಾಗದಿದ್ದ ಮೇಲೆ ನೀವು ಶಿಕ್ಷಕರಾಗಿ ಏನು ಪ್ರಯೋಜನ. ವೃತ್ತಿಯನ್ನು ಸವಾಲಾಗಿ ಸ್ವೀಕರಿಸುವ ಮನೋಭಾವವೇ ನಿಮ್ಮಲ್ಲಿ ಇಲ್ಲ. ಪೋಷಕರು, ಬಸ್ಸು, ಗ್ರೀನ್ ಬೆಲ್ಟ್ ಹೀಗೆ ಏನೇನೋ ಬೇಜವಾಬ್ದಾರಿ ಉತ್ತರಗಳನ್ನು ನೀಡೋದು. ನಿಮ್ಮ ಕೆಲಸ ನೀವು ಮಾಡದಿರುವುದರಿಂದಲೇ ಸರ್ಕಾರಕ್ಕೂ ನಷ್ಟ, ಸಮಾಜಕ್ಕೂ ನಷ್ಟ. ಶಿಕ್ಷಕರಿಂದ ಸುಧಾರಣೆಯನ್ನು ಮಾಡಲಾಗುವುದಿಲ್ಲ ಎಂಬ ನಿರ್ಧಾರಕ್ಕೆ ಬಂದರೆ ಇನ್ಯಾರಿಂದ ಸುಧಾರಣೆ ತರಲು ಸಾಧ್ಯ ಎಂದು ಪ್ರಶ್ನಿಸಿದರು.
ಸಭೆಯಲ್ಲಿ ಜಿಪಂ ಸಿಇಒ ಶೇಖ್ ತನ್ವೀರ್ ಆಸಿಫ್, ಡಿಡಿಪಿಐ ಶಿವರಾಮೇಗೌಡ ಇದ್ದರು.ಎಷ್ಟು ಗಂಟೆಗ್ರೀ ಸಭೆಗೆ ಬರೋದು..!
ಮಂಡ್ಯ:ಎಸ್ಸೆಸ್ಸೆಲ್ಸಿ ಫಲಿತಾಂಶದ ವಿಶ್ಲೇಷಣಾ ಸಭೆಗೆ ಅರ್ಧ ಗಂಟೆ ವಿಳಂಬವಾಗಿ ಆಗಮಿಸಿದ ಮೂವರು ಶಿಕ್ಷಣ ಇಲಾಖೆ ಅಧಿಕಾರಿಗಳನ್ನು ಜಿಲ್ಲಾಧಿಕಾರಿ ಸ್ಥಳದಲ್ಲೇ ನಿಲ್ಲಿಸಿ ತರಾಟೆ ತೆಗೆದುಕೊಂಡರು. ಡಿಸಿ-ಸಿಇಒ ಸಭೆ ಕರೆದಿದ್ದಾರೆ ಎಂದರೆ ಎಷ್ಟೊತ್ತಿಗ್ರೀ ಬರೋದು. ಏನು ಸಾಧನೆ ಮಾಡಿದ್ದೀವಂತ ಈಗ ಬರ್ತಿದ್ದಿರಿ. ೧೧ ಗಂಟೆಗೆ ಸಭೆ ಕರೆದರೆ ೧೧.೩೦ಕ್ಕೆ ಬರುತ್ತೀರಾ. ಇದೇನಾ ನಿಮ್ಮ ಸಮಯಪ್ರಜ್ಞೆ. ಸ್ವಲ್ಪನೂ ಸೆನ್ಸ್ ಅನ್ನೋದೇ ಇಲ್ಲವೇ...! ಇದನ್ನು ನೋಡಿದರೆ ನೀವು ಎಷ್ಟು ಚೆನ್ನಾಗಿ ಕೆಲಸ ಮಾಡ್ತಿದ್ದೀರಿ ಅಂತ ಗೊತ್ತಾಗುತ್ತೆ. ಇದೆಲ್ಲಾ ನೋಡಿದರೆ ನಾಚಿಕೆಯಾಗುತ್ತೆ ಎಂದು ಗರಂ ಆಗಿ ಹೇಳಿದರು. ನಿಮ್ಮ ಅಗತ್ಯತೆ ಸಭೆಗೆ ಏನೂ ಇಲ್ಲ. ಇವರಿಗೆ ನೋಟಿಸ್ ನೀಡಿ ಹೊರಗೆ ಕಳುಹಿಸಿ ಎಂದು ಕೋಪದಿಂದ ನುಡಿದು ಸುಮ್ಮನಾದರು. ಆ ವೇಳೆ ಸಿಇಒ ಸನ್ನೆ ಮಾಡಿ ಹಿಂದೆ ಹೋಗಿ ಕೂರುವಂತೆ ಮೂವರಿಗೂ ಸೂಚಿಸಿದರು.ಮ್ಯಾನೇಜ್‌ಮೆಂಟ್ ಸುಪ್ರೀಂ ಅಂತ ಯಾರು ಹೇಳಿದ್ದು?
ಮಂಡ್ಯ:ಈ ಬಾರಿಯ ಎಸ್ಸೆಸ್ಸೆಲ್ಸಿ ಫಲಿತಾಂಶದಲ್ಲಿ ಅನುದಾನಿತ ಶಾಲೆಗಳಲ್ಲೂ ಅತಿ ಹೆಚ್ಚು ಮಕ್ಕಳು ಅನುತ್ತೀರ್ಣರಾಗಿದ್ದು, ಏನು ಕ್ರಮ ಕೈಗೊಂಡಿದ್ದೀರಿ ಎಂದು ಡಯಟ್ ಪ್ರಾಂಶುಪಾಲರನ್ನು ಪ್ರಶ್ನಿಸಿದಾಗ, ಆ ಶಾಲೆಯ ಆಡಳಿತ ಮಂಡಳಿ ಸುಪ್ರೀಂ ಆಗಿರುವುದರಿಂದ ಕ್ರಮ ಜರುಗಿಸಲಾಗದು ಎಂಬ ಉತ್ತರ ಬಂತು. ಆಗ ಜಿಲ್ಲಾಧಿಕಾರಿ ಡಾ.ಕುಮಾರ, ಆಡಳಿತ ಮಂಡಳಿ ಸುಪ್ರೀಂ ಅಂತ ಎಲ್ಲಿದೆ, ಯಾರು ಹೇಳಿದ್ದು ನಿಮಗೆ. ಸುಮ್ಮನೆ ಏನೇನೋ ಹೇಳಬೇಡ್ರಿ. ಅಲ್ಲಿರುವ ಶಿಕ್ಷಕರಿಗೆ ಸಂಬಳ ಕೊಡ್ತಿಲ್ವಾ. ಆಡಳಿತ ಮಂಡಳಿ ವಿರುದ್ಧವೂ ಕ್ರಮ ಜರುಗಿಸುವ ಅಧಿಕಾರ ನಮಗಿದೆ. ಅದನ್ನು ನೀವು ಮಾಡಬೇಕು ಎಂದು ನಿಷ್ಠುರವಾಗಿ ಹೇಳಿದರು.ಶಿಕ್ಷಣ ಇಲಾಖೆ ಅಧಿಕಾರಿಗಳಿಗೆ
ಜಿಲ್ಲಾಧಿಕಾರಿ ನೀಡಿದ ಸೂಚನೆಗಳುಮೇ ೧೭ ರಿಂದ ಜೂ.೫ರವರೆಗೆ ಫೇಲಾಗಿರುವ ಮಕ್ಕಳಿಗೆ ಪರಿಹಾರ ಬೋಧನೆ ಮಾಡುವುದು.
ಎಲ್ಲಾ ಮಕ್ಕಳ ಫಾರಂ ಭರ್ತಿ ಮಾಡಿಸಬೇಕು. ಇದಕ್ಕೆ ಯಾವುದೇ ನೆಪ ಹೇಳುವಂತಿಲ್ಲ.ಭಾಷಾ ಶಿಕ್ಷಕರೊಂದಿಗೆ ಆತ್ಮಾವಲೋಕನ ಸಭೆ ನಡೆಸಿದ ಫೋಟೋ-ವರದಿಯನ್ನು ಕಳುಹಿಸುವುದು.
ನೋಡಲ್ ಅಧಿಕಾರಿಗಳು ಶಾಲೆಗಳಿಗೆ ಭೇಟಿ ನೀಡಿ ವಿದ್ಯಾರ್ಥಿಗಳೊಂದಿಗೆ ಸಂವಾದ ನಡೆಸುವುದು.ಹಳೇ ಪ್ರಶ್ನೆ ಪತ್ರಿಕೆಗಳ ಪುನರಾವಲೋಕನ, ಮಾದರಿ ಪ್ರಶ್ನೆ ಪತ್ರಿಕೆ ಸಿದ್ಧಪಡಿಸಿ ಬರೆಸುವುದು.
ತಂದೆ-ತಾಯಿಗಳಿಗೆ ಕೌನ್ಸಿಲಿಂಗ್ ನಡೆಸುವುದು, ಮಕ್ಕಳ ಓದಿಗೆ ಅಡ್ಡಿಯಾಗಿರುವ ಕಾರಣಗಳನ್ನು ತಿಳಿದುಕೊಳ್ಳುವುದು.ಮಕ್ಕಳ ಮನಸ್ಸಿನಲ್ಲಿರುವ ನಕಾರಾತ್ಮಕ ಅಂಶಗಳನ್ನು ದೂರವಿಟ್ಟು ಮಾನಸಿಕ ಸ್ಥೈರ್ಯ ತುಂಬಿ ಪರೀಕ್ಷೆಗೆ ಸಜ್ಜುಗೊಳಿಸಬೇಕು.
ಮಕ್ಕಳಿಗೆ ಬಿಸಿಯೂಟ ವ್ಯವಸ್ಥೆ ಮಾಡಬೇಕು