ಸಾಗರದ 15 ಕಡೆ ನಂದಿನಿ ಮಿಲ್ಕ್‌ ಪಾರ್ಲರ್‌ಗಳು ಸ್ಥಾಪನೆ: ವಿದ್ಯಾಧರ

| Published : Oct 06 2024, 01:19 AM IST

ಸಾರಾಂಶ

ಸಾಗರ ಪಟ್ಟಣದ ಹದಿನೈದು ಕಡೆ ನಂದಿನಿ ಮಿಲ್ಕ್ ಪಾರ್ಲರ್ ಸ್ಥಾಪಿಸುವ ಉದ್ದೇಶವಿದ್ದು, ಅರ್ಧ ಕಿ.ಮೀ.ಗೊಂದು ಪಾರ್ಲರ್ ಪ್ರಾರಂಭಿಸಿ ಉದ್ಯೋಗ ಸೃಷ್ಟಿಸುವ ಕೆಲಸ ಮಾಡಲಾಗುತ್ತದೆ ಎಂದು ಶಿಮುಲ್ ಅಧ್ಯಕ್ಷ ವಿದ್ಯಾಧರ ಹೇಳಿದರು.

ಕನ್ನಡಪ್ರಭ ವಾರ್ತೆ ಸಾಗರ

ಪಟ್ಟಣದ ಪ್ರಮುಖ ಸ್ಥಳದಲ್ಲಿ ನಂದಿನಿ ಸ್ಕೂಪ್ ಪಾರ್ಲರ್ ಸ್ಥಾಪಿಸುವ ಮೂಲಕ ನಂದಿನಿ ಉತ್ಪನ್ನಗಳ ಬೇಡಿಕೆ ಹೆಚ್ಚಿಸುವ ಯೋಜನೆ ರೂಪಿಸಲಾಗಿದೆ ಎಂದು ಶಿಮುಲ್ ಅಧ್ಯಕ್ಷ ವಿದ್ಯಾಧರ ಹೇಳಿದರು.

ಪಟ್ಟಣದ ಶೃಂಗೇರಿ ಶಂಕರಮಠದಲ್ಲಿ ಶನಿವಾರ ನವರಾತ್ರಿ ಅಂಗವಾಗಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಅಭಿನಂದನೆ ಸ್ವೀಕರಿಸಿ ಮಾತನಾಡಿದ ಅವರು, ನಂದಿನಿ ಹಾಲು, ಮೊಸರು, ಐಸ್ಕ್ರೀಂ, ಸಿಹಿ ಖಾದ್ಯ ಸೇರಿದಂತೆ ಎಲ್ಲಾ ನಂದಿನಿ ಉತ್ಪನ್ನಗಳು ಒಂದೆ ಕಡೆ ಸಿಗುವ ವ್ಯವಸ್ಥೆ ಮಾಡಲಾಗುತ್ತಿದೆ ಎಂದರು.

ಸಾಗರ ಪಟ್ಟಣದ ಹದಿನೈದು ಕಡೆ ನಂದಿನಿ ಮಿಲ್ಕ್ ಪಾರ್ಲರ್ ಸ್ಥಾಪಿಸುವ ಉದ್ದೇಶವಿದ್ದು, ಅರ್ಧ ಕಿ.ಮೀ.ಗೊಂದು ಪಾರ್ಲರ್ ಪ್ರಾರಂಭಿಸಿ ಉದ್ಯೋಗ ಸೃಷ್ಟಿಸುವ ಕೆಲಸ ಮಾಡಲಾಗುತ್ತದೆ. ಸ್ವಂತ ಜಾಗ ಹೊಂದಿದವರು ಮಿಲ್ಕ್ ಪಾರ್ಲರ್ ಮಾಡಲು ಶಿಮುಲ್‌ನ್ನು ಭೇಟಿ ಮಾಡಬಹುದು. ಶಿವಮೊಗ್ಗ ಹಾಲು ಒಕ್ಕೂಟ ರೈತರ ಸಂಸ್ಥೆಯಾಗಿದ್ದು, ಹಾಲು ಮಾರಾಟ ಹೆಚ್ಚಿಸುವ ಜೊತೆಗೆ ಹೈನುಗಾರಿಕೆಯನ್ನು ಪ್ರೋತ್ಸಾಹಿಸಿಕೊಂಡು ಬರುತ್ತಿದೆ ಎಂದು ಹೇಳಿದರು.

ಅಧ್ಯಕ್ಷತೆ ವಹಿಸಿ ಮಾತನಾಡಿದ ಶಂಕರ ಮಠದ ಧರ್ಮದರ್ಶಿ ಅಶ್ವಿನಿ ಕುಮಾರ್, ಸಮಾಜದ ವಿವಿಧ ಸ್ಥರದಲ್ಲಿ ಕೆಲಸ ಮಾಡಿದವರಿಗೆ ಇಂತಹ ಸನ್ಮಾನಗಳು ಕೆಲಸಕ್ಕೆ ಇನ್ನಷ್ಟು ಉತ್ತೇಜನ ನೀಡುತ್ತದೆ ಎಂದ ಅವರು, ಬೆಳ್ಳಿಹಬ್ಬದ ಅಂಗವಾಗಿ ಶ್ರೀಮಠಕ್ಕೆ ಸಂಪರ್ಕಿಸುವ ವೃತ್ತಗಳಲ್ಲಿ ಬೃಹತ್ ಮಹಾದ್ವಾರ, ಅರ್ಚಕರಿಗೆ ವಸತಿ ಗೃಹ, ಬಯಲು ರಂಗಮಂದಿರ ಇನ್ನಿತರೆ ಅಭಿವೃದ್ಧಿ ಕೆಲಸ ಮಾಡಲು ಚಿಂತನೆ ನಡೆಸಲಾಗಿದೆ ಎಂದು ಹೇಳಿದರು.

ಶಶಿಕಲಾ ಮೂರ್ತಿ ಬೆಂಗಳೂರು, ಕೆ.ವಿ.ಜಯರಾಮ್ ಸಾಗರ ಅವರಿಗೆ ಶಾರದಾ ಪ್ರಸಾದ ಪುರಸ್ಕಾರ ನೀಡಿ ಸನ್ಮಾನಿಸಲಾಯಿತು. ಮ.ಸ.ನಂಜುಂಡಸ್ವಾಮಿ ಸ್ವಾಗತಿಸಿದರು. ಪ್ರೊ.ಕೆ.ಆರ್.ಕೃಷ್ಣಯ್ಯ ಅಭಿನಂದನಾ ಭಾಷಣ ಮಾಡಿದರು. ಸವಿತಾ ಶ್ರೀಕಾಂತ್ ನಿರೂಪಿಸಿದರು.