ಸಂವಿಧಾನ ಶಿಲ್ಪಿ ಹಾಗೂ ಶೋಷಿತರ ಆಶಾಕಿರಣ ಡಾ. ಬಿ.ಆರ್. ಅಂಬೇಡ್ಕರ್ ಅವರ 135ನೇ ಜಯಂತಿಯನ್ನು ಗಣಿ ಜಿಲ್ಲೆ ಬಳ್ಳಾರಿಯಲ್ಲಿ ಅತ್ಯಂತ ಸಡಗರ-ಸಂಭ್ರಮದಿಂದ ಆಚರಿಸಲಾಯಿತು.
ಬಳ್ಳಾರಿ: ಸಂವಿಧಾನ ಶಿಲ್ಪಿ ಹಾಗೂ ಶೋಷಿತರ ಆಶಾಕಿರಣ ಡಾ. ಬಿ.ಆರ್. ಅಂಬೇಡ್ಕರ್ ಅವರ 135ನೇ ಜಯಂತಿಯನ್ನು ಗಣಿ ಜಿಲ್ಲೆ ಬಳ್ಳಾರಿಯಲ್ಲಿ ಅತ್ಯಂತ ಸಡಗರ-ಸಂಭ್ರಮದಿಂದ ಆಚರಿಸಲಾಯಿತು.
ನಗರದ ವಿವಿಧ ಸಂಘ ಸಂಸ್ಥೆಗಳು, ರಾಜಕೀಯ ಪಕ್ಷಗಳ ಕಚೇರಿಗಳು, ಕಾಲೇಜುಗಳು, ವಿಶ್ವವಿದ್ಯಾಲಯ ಸೇರಿದಂತೆ ಅನೇಕ ಕಡೆ ದಲಿತರ ಧ್ವನಿ ಅಂಬೇಡ್ಕರ್ ಅವರ ಜಯಂತಿ ಆಚರಣೆಗಳು ನಡೆದವು. ಗ್ರಾಮೀಣ ಪ್ರದೇಶದಲ್ಲೂ ಸ್ವಾಭಿಮಾನದ ಪ್ರತಿರೂಪ ಅಂಬೇಡ್ಕರ್ ಅವರ ಜಯಂತಿ ಸಮಾರಂಭಗಳು ಜರುಗಿದವು.ನಗರದ ಸರ್ಕಾರಿ ಮುನ್ಸಿಪಲ್ ಕಾಲೇಜು ಮೈದಾನದಲ್ಲಿ ಜಿಲ್ಲಾಡಳಿತದಿಂದ ಆಯೋಜಿಸಿದ್ದ ಡಾ. ಬಿ.ಆರ್. ಅಂಬೇಡ್ಕರ್ ಅವರ ಜಯಂತಿಯಲ್ಲಿ ದಲಿತ ಸಂಘಟನೆಗಳ ಕಾರ್ಯಕರ್ತರು, ಜಿಲ್ಲಾಡಳಿತದ ಹಿರಿಯ ಅಧಿಕಾರಿಗಳು, ಸರ್ಕಾರಿ ನೌಕರರು ಹಾಗೂ ನೂರಾರು ಸಂಖ್ಯೆಯಲ್ಲಿ ಸಾರ್ವಜನಿಕರು ಭಾಗವಹಿಸಿದ್ದರು.
ಕಾರ್ಯಕ್ರಮಕ್ಕೆ ಚಾಲನೆ ನೀಡಿದ ನಗರ ಶಾಸಕ ನಾರಾ ಭರತ್ ರೆಡ್ಡಿ ಅವರು ಬಳ್ಳಾರಿ ನಗರದಲ್ಲಿ ಅಂಬೇಡ್ಕರ್ ಅವರ ಹೆಸರಿನಲ್ಲಿ ₹10 ಕೋಟಿ ವೆಚ್ಚದಲ್ಲಿ ಸುಸಜ್ಜಿತ ಗ್ರಂಥಾಲಯ ನಿರ್ಮಿಸಲು ನಿರ್ಧರಿಸಲಾಗಿದೆ ಎಂದು ಪ್ರಕಟಿಸಿದರು.ಅಂಬೇಡ್ಕರ್ ಅವರ ಆಶಯಗಳನ್ನು ಉಳಿಸಲು ಪ್ರತಿಯೊಂದು ಮನೆಯಲ್ಲೂ ಐಎಎಸ್, ಐಪಿಎಸ್, ಎಂಜಿನಿಯರ್, ಡಾಕ್ಟರ್ ಸೇರಿದಂತೆ ಉನ್ನತ ವ್ಯಾಸಂಗ ಪಡೆದ ವಿದ್ಯಾವಂತರು ಇರಬೇಕು. ಇದೇ ಉದ್ದೇಶದಿಂದ ಸುಸಜ್ಜಿತ ಗ್ರಂಥಾಲಯ ನಿರ್ಮಿಸುವ ನಿರ್ಧಾರ ಕೈಗೊಳ್ಳಲಾಗಿದೆ. ಈ ಯೋಜನೆಯ ಕುರಿತು ಜಿಲ್ಲಾಧಿಕಾರಿ ಜತೆ ಈಗಾಗಲೇ ಮೌಖಿಕವಾಗಿ ಚರ್ಚಿಸಲಾಗಿದೆ ಎಂದು ಹೇಳಿದರು.
ಅಂಬೇಡ್ಕರ್ ಅವರು ಮೀಸಲಾತಿ ನೀಡಿದ್ದು ಕೇವಲ ಮೀಸಲು ಕ್ಷೇತ್ರಗಳಿಗೆ ಸೀಮಿತವಾಗಲು ಅಲ್ಲ; ಬದಲಾಗಿ ದಲಿತರು ಸಾಮಾನ್ಯ ಕ್ಷೇತ್ರಗಳಲ್ಲೂ ಸ್ಪರ್ಧಿಸಿ ಮುಂಚೂಣಿಗೆ ಬರಬೇಕು ಎಂಬುದು ಅವರ ಆಶಯವಾಗಿತ್ತು. ಅಂಬೇಡ್ಕರ್ ಅವರು ನೀಡಿದ ಸಂವಿಧಾನವೇ ನಮಗೆ ದೊಡ್ಡ ಆಯುಧವಾಗಿದ್ದು, ಅದನ್ನು ಗೌರವಿಸಿ ದೇಶವನ್ನು ಅಭಿವೃದ್ಧಿಯತ್ತ ಕೊಂಡೊಯ್ಯೋಣ. ದಲಿತರಿಗೆ ಮೀಸಲಾತಿ ಎಂಬುದು ಸಂವಿಧಾನಬದ್ಧ ಹಕ್ಕಾಗಿದ್ದು, ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಸರ್ಕಾರ ದಲಿತರಿಗೆ ಎಂದಿಗೂ ಅನ್ಯಾಯ ಮಾಡುವುದಿಲ್ಲ ಎಂದು ಖಚಿತಪಡಿಸಿದರು.ಡಾ. ಬಾಬು ಜಗಜೀವನರಾಮ್ ಚರ್ಮ ಕೈಗಾರಿಕಾ ಅಭಿವೃದ್ಧಿ ನಿಗಮ ನಿಯಮಿತದ ಅಧ್ಯಕ್ಷ ಮುಂಡರಗಿ ನಾಗರಾಜ ಮಾತನಾಡಿ, ಭಾರತೀಯರೆಲ್ಲರೂ ಒಂದೇ ಸೂರಿನಡಿ ಸಾಗಲು ‘ಸಂವಿಧಾನ''''''''ವೇ ಪರಮ ಶ್ರೇಷ್ಠ ಗ್ರಂಥವಾಗಿದೆ. ಅಂಬೇಡ್ಕರ್ ಅವರು ಎಲ್ಲ ಜಾತಿ, ಧರ್ಮದ 18 ವರ್ಷ ತುಂಬಿದ ಪ್ರತಿಯೊಬ್ಬರಿಗೂ ಸಮಾನ ಮತದಾನದ ಹಕ್ಕನ್ನು ತಂದುಕೊಟ್ಟವರು. ಅಂಬೇಡ್ಕರ್ ಅವರ ಆರ್ಥಿಕ ಚಿಂತನೆಗಳ ಫಲವಾಗಿಯೇ ಇಂದು ಬ್ಯಾಂಕುಗಳು ಸಾಮಾನ್ಯ ಜನರ ಮನೆಬಾಗಿಲಿಗೆ ತಲುಪಿವೆ ಮತ್ತು ರಾಷ್ಟ್ರೀಕರಣಗೊಂಡಿವೆ ಎಂದು ಹೇಳಿದರು.
ಮಹಾನಗರ ಪಾಲಿಕೆಯ ಮಹಾಪೌರ ಪಿ. ಗಾದೆಪ್ಪ, ಶೋಷಿತರ ಧ್ವನಿ ಅಂಬೇಡ್ಕರ್ ಅವರ ಹೋರಾಟದ ಬದುಕನ್ನು ಸ್ಮರಿಸಿಕೊಂಡರು.ಅಂಬೇಡ್ಕರ್ ಅವರು ತತ್ವಜ್ಞಾನಿ, ಪತ್ರಕರ್ತ, ಸಾಮಾಜಿಕ ಪರಿವರ್ತನಕಾರ, ರಾಜಕೀಯ ಧುರೀಣ, ಅರ್ಥಶಾಸ್ತ್ರಜ್ಞರೂ ಆಗಿದ್ದರು. ಸರ್ಕಾರ ಜಾರಿಗೆ ತರುವ ಯೋಜನೆಗಳನ್ನು ಅಧಿಕಾರಿಗಳು ಪರಿಣಾಮಕಾರಿಯಾಗಿ ಜಾರಿಗೊಳಿಸಿದಾಗ ಮಾತ್ರ ಅಂಬೇಡ್ಕರ್ ಅವರ ಕನಸು ನನಸಾಗಲು ಸಾಧ್ಯ ಎಂದು ಜಿಲ್ಲಾಧಿಕಾರಿ ಕೆ. ನಾಗೇಂದ್ರ ಪ್ರಸಾದ್ ಅಭಿಪ್ರಾಯಪಟ್ಟರು. ಎಸ್ಪಿ ಡಾ. ಸುಮನ್ ಡಿ. ಪನ್ನೇಕರ್ ಮಾತನಾಡಿದರು.
ಹಂಪಿ ಕನ್ನಡ ವಿವಿಯ ಹಿರಿಯ ಪ್ರಾಧ್ಯಾಪಕ ಪ್ರೊ. ಎನ್. ಚಿನ್ನಸ್ವಾಮಿ ಸೋಸಲೆ ಅವರು ಡಾ. ಬಿ.ಆರ್. ಅಂಬೇಡ್ಕರ್ ಅವರ ಜೀವನಗಾಥೆ, ವಿಚಾರಧಾರೆ ಕುರಿತು ವಿಶೇಷ ಉಪನ್ಯಾಸ ನೀಡಿದರು.ಜಿಲ್ಲಾ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಪ್ರಾಧಿಕಾರದ ಅಧ್ಯಕ್ಷ ಕೆ.ಇ. ಚಿದಾನಂದಪ್ಪ, ಕೇಂದ್ರ ಪರಿಹಾರ ಸಮಿತಿಯ ಮಾಜಿ ಅಧ್ಯಕ್ಷ ಎ. ಮಾನಯ್ಯ, ದಲಿತ ಸಮಾಜದ ಹಿರಿಯ ಮುಖಂಡ ಎಲ್. ಮಾರೆಣ್ಣ, ಎಚ್. ಸಿದ್ದೇಶ್, ಜಿಲ್ಲಾ ಡಾ. ಬಿ.ಆರ್. ಅಂಬೇಡ್ಕರ್ ಸಂಘದ ಅಧ್ಯಕ್ಷ ಎಚ್. ತಿಪ್ಪೇಸ್ವಾಮಿ, ಜಿಪಂ ಸಿಇಒ ಮಹಮ್ಮದ್ ಹಾರೀಸ್ ಸುಮೇರ್, ಉಪ ಅರಣ್ಯ ಸಂರಕ್ಷಣಾಧಿಕಾರಿ ಡಾ. ಕೆ.ಎನ್. ಬಸವರಾಜ, ಎಡಿಸಿ ಮಹಮ್ಮದ್ ಝುಬೇರ್, ಪಾಲಿಕೆ ಆಯುಕ್ತ ಪಿ.ಎಸ್. ಮಂಜುನಾಥ, ಜಿಲ್ಲಾ ಸಮಾಜ ಕಲ್ಯಾಣ ಇಲಾಖೆಯ ಉಪನಿರ್ದೇಶಕ ಚಿದಾನಂದಪ್ಪ ಉಪಸ್ಥಿತರಿದ್ದರು.
ಜಿಲ್ಲಾಧಿಕಾರಿ ನಾಗೇಂದ್ರ ಪ್ರಸಾದ್ ಅವರು ಸಂವಿಧಾನ ಪೀಠಿಕೆ ವಾಚನ ಮಾಡಿಸಿದರು. ಬಳಿಕ ಅಂಬೇಡ್ಕರ್ ಜಯಂತಿ ಅಂಗವಾಗಿ ಏರ್ಪಡಿಸಿದ್ದ ಪ್ರಬಂಧ, ಭಾಷಣ ಸ್ಪರ್ಧೆಗಳಲ್ಲಿ ವಿಜೇತರಾದ ವಿದ್ಯಾರ್ಥಿಗಳನ್ನು ಸನ್ಮಾನಿಸಲಾಯಿತು.ಕಾರ್ಯಕ್ರಮ ಆರಂಭಕ್ಕೂ ಮುನ್ನ ಚರ್ಮಕಾರರ ಆಧುನಿಕ ಪಾದುಕೆ ಕುಟೀರಗಳನ್ನು ಗಣ್ಯರು ಉದ್ಘಾಟಿಸಿದರು.
ಜಯಂತಿ ಹಿನ್ನಲೆಯಲ್ಲಿ ಮೆರವಣಿಗೆ ನಡೆಯಿತು. ವಿವಿಧ ಸಾಂಸ್ಕೃತಿಕ ಕಲಾ ತಂಡಗಳು ಭಾಗವಹಿಸಿ ಮೆರವಣಿಗೆಗೆ ಮೆರಗು ನೀಡಿದವು.